ಭಾರತದ UPI ಶುಲ್ಕ ನಿರ್ಧಾರ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಖುಷಿ ತರಬಹುದೇ?

ಯುಪಿಐ ಸಕ್ರಿಯವಾಗಿರಲು ಎಂಡಿಆರ್ ಅಗತ್ಯವೇ?; ಇಲ್ಲಿದೆ ಮಾಹಿತಿ...

Update: 2026-08-08 17:24 IST

 ಡೊನಾಲ್ಡ್ ಟ್ರಂಪ್ | Photo Credit : AP 

ವರ್ಷಗಳಿಂದ ಭಾರತದ ಯುಪಿಐ ಕ್ರಾಂತಿಯು "ಡಿಜಿಟಲ್ ಆಗಿ ಪಾವತಿಸಿ, ತಕ್ಷಣವೇ ಪಾವತಿಸಿ, ಹೆಚ್ಚುವರಿ ಶುಲ್ಕವಿಲ್ಲ" ಎಂಬ ತತ್ವದ ಮೇಲೆ ಸಾಗಿದೆ. ಆದರೆ, ಸರ್ಕಾರವು ಯುಪಿಐ ವಹಿವಾಟುಗಳ ಮೇಲೆ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಅಥವಾ ವ್ಯಾಪಾರಿ ಶುಲ್ಕವನ್ನು ಮರಳಿ ತರಲು ಚಿಂತಿಸುತ್ತಿದೆ. ಇದು ಯುಪಿಐ ವ್ಯವಸ್ಥೆಯನ್ನು ಆರ್ಥಿಕವಾಗಿ ಬಲಪಡಿಸಲು ಕೈಗೊಂಡ ನಿರ್ಧಾರವೇ ಅಥವಾ ಇದರ ಹಿಂದೆ ಅಂತರರಾಷ್ಟ್ರೀಯ ರಾಜಕೀಯದ ಹಸ್ತವಿದೆಯೇ ಎಂಬ ಪ್ರಶ್ನೆ ಮೂಡಿದೆ.

ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಬಗ್ಗೆ ಅಮೆರಿಕಕ್ಕೆ ಮೊದಲಿನಿಂದಲೂ ಸಣ್ಣ ಮಟ್ಟದ ಅಸಮಾಧಾನವಿತ್ತು. ಮುಖ್ಯವಾಗಿ zero-MDR ಮಾದರಿಯಿಂದಾಗಿ ವೀಸಾ (Visa) ಮತ್ತು ಮಾಸ್ಟರ್‌ಕಾರ್ಡ್ (Mastercard) ನಂತಹ ಅಮೆರಿಕನ್ ಕಂಪನಿಗಳಿಗೆ ಭಾರತದಲ್ಲಿ ಕಠಿಣ ಸ್ಪರ್ಧೆ ಎದುರಾಗಿತ್ತು. ಈಗ ಅಮೆರಿಕ-ಭಾರತದ ನಡುವೆ ಡಿಜಿಟಲ್ ವ್ಯಾಪಾರ ಮತ್ತು ಮಾರುಕಟ್ಟೆ ಪ್ರವೇಶದ ಕುರಿತು ಚರ್ಚೆಗಳು ನಡೆಯುತ್ತಿದ್ದು, ಯುಪಿಐ ಮೇಲೆ ಮತ್ತೆ ಶುಲ್ಕ ಹೇರಿದರೆ ಅಮೆರಿಕನ್ ಪಾವತಿ ಸಂಸ್ಥೆಗಳಿಗೆ ಹಾಗೂ ಟ್ರಂಪ್ ಆಡಳಿತಕ್ಕೆ ಲಾಭವಾಗಲಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರತಿ ತಿಂಗಳು ಕೋಟ್ಯಂತರ ವಹಿವಾಟುಗಳನ್ನು ನಿರ್ವಹಿಸುವ ಯುಪಿಐ ವ್ಯವಸ್ಥೆಯನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿಡಲು ಈ ಶುಲ್ಕ ಅಗತ್ಯ ಎಂದು ಭಾರತ ಹೇಳುತ್ತಿದೆ. ಆದರೆ, ‘ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್’ (GTRI) ನಂತಹ ವ್ಯಾಪಾರ ನೀತಿ ತಜ್ಞರು, ಅಮೆರಿಕದ ಒತ್ತಡಕ್ಕೆ ಮಣಿದು ಭಾರತ ತನ್ನ ಯುಪಿಐ ನೀತಿಗಳನ್ನು ಬದಲಾಯಿಸಬಾರದು ಎಂದು ಎಚ್ಚರಿಸಿದ್ದಾರೆ.

► ಏನಿದು ಎಂಡಿಆರ್?

ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ವ್ಯಾಪಾರಿಗಳು ಪಾವತಿಸುವ ಶುಲ್ಕವೇ ಎಂಡಿಆರ್. ಕಾರ್ಡ್ ಪಾವತಿಗಳಲ್ಲಿ ಈ ಶುಲ್ಕವನ್ನು ಬ್ಯಾಂಕ್‌ಗಳು ಮತ್ತು ಪಾವತಿ ಜಾಲಗಳು ಹಂಚಿಕೊಳ್ಳುತ್ತವೆ.

ಆದರೆ 2020 ಜನವರಿಯಿಂದ ಬ್ಯಾಂಕ್ ಖಾತೆ ಆಧಾರಿತ ಯುಪಿಐ ಪಾವತಿಗಳಿಗೆ 'ಶೂನ್ಯ ಎಂಡಿಆರ್' ನಿಯಮ ಜಾರಿಯಲ್ಲಿದೆ. ಸರ್ಕಾರವೇ ಈ ವ್ಯವಸ್ಥೆಗೆ ಪ್ರೋತ್ಸಾಹಧನ ನೀಡುತ್ತಾ ಬಂದಿದೆ. ಇದರಿಂದಾಗಿ ಯುಪಿಐ, ಗ್ರಾಹಕರು ಮತ್ತು ವ್ಯಾಪಾರಿಗಳ ನೆಚ್ಚಿನ ಆಯ್ಕೆಯಾಗಿ ಬೆಳೆಯಿತು.

ಇದರ ಪ್ರಮಾಣವೂ ಬೃಹತ್ ಮಟ್ಟದಲ್ಲಿದೆ. ಎನ್‌ಪಿಸಿಐ (NPCI) ನೀಡಿದ ಮಾಹಿತಿ ಪ್ರಕಾರ, 2026 ಮೇ ತಿಂಗಳಲ್ಲಿ ಮಾತ್ರ 720 ಬ್ಯಾಂಕ್‌ಗಳ ಮೂಲಕ ಯುಪಿಐ ಸುಮಾರು 29.9 ಲಕ್ಷ ಕೋಟಿ ರೂಪಾಯಿ ಮೌಲ್ಯದ 23.2 ಶತಕೋಟಿ ವಹಿವಾಟುಗಳನ್ನು ನಿರ್ವಹಿಸಿದೆ.

► ಇಲ್ಲಿ ಟ್ರಂಪ್ ಪಾತ್ರವೇನು?

ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಕೆಲವು ನಿಯಮಗಳ ಬಗ್ಗೆ ಅಮೆರಿಕ ಈ ಹಿಂದೆ ಅಪಸ್ವರ ಎತ್ತಿತ್ತು. ವಿಶೇಷವಾಗಿ ಭಾರತದ ನಿಯಮಗಳು ತಮ್ಮ ಕಂಪನಿಗಳಿಗೆ ಸಮಾನ ಅವಕಾಶ ನೀಡುತ್ತಿಲ್ಲ ಎಂಬುದು ಅಮೆರಿಕನ್ ಪಾವತಿ ಜಾಲಗಳ ದೂರಾಗಿತ್ತು.

ಭಾರತದ ಬೃಹತ್ ಡಿಜಿಟಲ್ ಪಾವತಿ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವ 'ವೀಸಾ' ಮತ್ತು 'ಮಾಸ್ಟರ್‌ಕಾರ್ಡ್' ನಂತಹ ಅಮೆರಿಕನ್ ಕಂಪನಿಗಳು ಭಾರತದ ಯುಪಿಐ ವ್ಯವಸ್ಥೆಯನ್ನು ಈ ಹಿಂದೆ ಟೀಕಿಸಿದ್ದವು.

ಅವುಗಳ ಆಕ್ಷೇಪ ಇದ್ದದ್ದು ಯುಪಿಐ ವ್ಯಾಪಾರಿಗಳಿಗೆ ಉಚಿತವಾಗಿ ಸಿಗುತ್ತದೆ, ಆದರೆ ಕಾರ್ಡ್ ಸಂಸ್ಥೆಗಳು ವ್ಯಾಪಾರಿಗಳಿಂದ ಶುಲ್ಕ ಪಡೆದು ಆದಾಯ ಗಳಿಸುತ್ತವೆ. ಇದರಿಂದಾಗಿ ದೈನಂದಿನ ವಹಿವಾಟುಗಳಲ್ಲಿ ಯುಪಿಐಗೆ ಹೆಚ್ಚಿನ ಸ್ಪರ್ಧಾತ್ಮಕ ಅನುಕೂಲ ಸಿಗುತ್ತಿದೆ ಎಂಬುದು.

ಹೀಗಾಗಿ, ಯುಪಿಐ ಮೇಲೂ ವ್ಯಾಪಾರಿ ಶುಲ್ಕ ಹೇರಿದರೆ, ಅದು ಜಾಗತಿಕ ಮಟ್ಟದಲ್ಲಿ ತಾವು ವ್ಯವಹರಿಸುವ ವಾಣಿಜ್ಯ ಪಾವತಿ ಮಾರುಕಟ್ಟೆಯಂತೆ ಆಗಲಿದೆ ಎಂಬುದು ಅಮೆರಿಕನ್ ಸಂಸ್ಥೆಗಳ ನಿರೀಕ್ಷೆಯಾಗಿದೆ.

► ಅಮೆರಿಕದ ಒತ್ತಡಕ್ಕೆ ಮಣಿದು ಭಾರತ ಯುಪಿಐ ನೀತಿ ಬದಲಾಯಿಸಿತೇ?

ವೇಗವಾಗಿ ಬೆಳೆಯುತ್ತಿರುವ ಭಾರತದ ಪಾವತಿ ವ್ಯವಸ್ಥೆಯನ್ನು ಆರ್ಥಿಕವಾಗಿ ಸ್ವಾವಲಂಬಿಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುವ ವೆಚ್ಚವನ್ನು ಯಾರಾದರೊಬ್ಬರು ಭರಿಸಲೇಬೇಕು ಎಂದು ನೇರವಾಗಿ ಹೇಳಿದ್ದಾರೆ.

ಆದರೆ, ಭಾರತ ಮತ್ತು ಅಮೆರಿಕದ ನಡುವೆ ಡಿಜಿಟಲ್ ವ್ಯಾಪಾರ ಹಾಗೂ ಮಾರುಕಟ್ಟೆ ಪ್ರವೇಶದ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ಈ ನಿರ್ಧಾರ ಹೊರಬಿದ್ದಿರುವುದರಿಂದ ಈ ಕುರಿತು ಸಂಶಯಗಳು ವ್ಯಕ್ತವಾಗುತ್ತಿವೆ.

► ಜಿಟಿಆರ್‌ಐ (GTRI) ಇದನ್ನು ಏಕೆ ವಿರೋಧಿಸುತ್ತಿದೆ?

ಅಮೆರಿಕದ ಒತ್ತಡಕ್ಕೆ ಮಣಿದು ಭಾರತ ತನ್ನ ಯುಪಿಐ ನೀತಿಗಳನ್ನು ಬದಲಾಯಿಸಬಾರದು ಎಂದು ‘ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್’ (GTRI) ಎಚ್ಚರಿಸಿದೆ.

ಯುಪಿಐ ಎನ್ನುವುದು ಕೇವಲ ಮತ್ತೊಂದು ವಾಣಿಜ್ಯ ಪಾವತಿ ಉತ್ಪನ್ನವಲ್ಲ, ಅದು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಆಯಕಟ್ಟಿನ ಭಾಗವಾಗಿದೆ ಎಂಬುದು ಈ ಸಂಸ್ಥೆಯ ಪ್ರತಿಪಾದನೆ. ವಿದೇಶಿ ಪಾವತಿ ಸಂಸ್ಥೆಗಳಿಗಾಗಿ ಯುಪಿಐ ನಿಯಮಗಳನ್ನು ಬದಲಾಯಿಸಿದರೆ, ಅದು ಭಾರತದ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಬಲಹೀನಗೊಳಿಸಬಹುದು.

ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳ ವಿಚಾರದಲ್ಲಿ ಜಿಟಿಆರ್‌ಐ ಇದೇ ನಿಲುವನ್ನು ಹೊಂದಿದೆ. ಅಮೆರಿಕದ ಒತ್ತಡಕ್ಕೆ ಮಣಿಯದೆ, ದೇಶದ ಆರ್ಥಿಕ ಲಾಭ-ನಷ್ಟಗಳನ್ನು ಆಧರಿಸಿ ಭಾರತ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆ ನಡೆಸುವಾಗ ಭಾರತ ತನ್ನ ಆಯಕಟ್ಟಿನ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬೇಕು ಎಂದು ಜಿಟಿಆರ್‌ಐ ಪ್ರತಿಪಾದಿಸಿದೆ.

► ಯುಪಿಐ ಸಕ್ರಿಯವಾಗಿರಲು ಎಂಡಿಆರ್ ಅಗತ್ಯವೇ?

ಇದು ಈ ಚರ್ಚೆಯ ಮತ್ತೊಂದು ಮುಖ. ಯುಪಿಐ ಗ್ರಾಹಕರಿಗೆ ಉಚಿತವಾಗಿ ಸಿಗಬಹುದು, ಆದರೆ ಅದನ್ನು ನಡೆಸಲು ವೆಚ್ಚ ತಗಲುವುದಿಲ್ಲ ಎಂದಲ್ಲ. ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು, ಮೂಲಸೌಕರ್ಯ ನಿರ್ವಹಣೆಗೆ ಮತ್ತು ವಂಚನೆಗಳನ್ನು ತಡೆಯಲು ಬ್ಯಾಂಕ್‌ಗಳು, ಪಾವತಿ ಸೇವಾ ಪೂರೈಕೆದಾರರು, ಎನ್‌ಪಿಸಿಐ ಹಾಗೂ ತಂತ್ರಜ್ಞಾನ ಕಂಪನಿಗಳು ಹಣ ವೆಚ್ಚ ಮಾಡುತ್ತವೆ.

ಎಂಡಿಆರ್ ಸಂಗ್ರಹಿಸದಿದ್ದರೂ ಸಾಮಾನ್ಯ ಯುಪಿಐ ವಹಿವಾಟಿಗೆ ಸಂಸ್ಥೆಗಳು ವೆಚ್ಚ ಭರಿಸುತ್ತಿವೆ ಎಂದು ಆರ್‌ಬಿಐ ಈ ಹಿಂದೆ ಅಂದಾಜಿಸಿತ್ತು.

ಸರ್ಕಾರ ನೀಡುವ ಪ್ರೋತ್ಸಾಹಧನವು ಈ ಸಂಸ್ಥೆಗಳ ನಷ್ಟ ತುಂಬಲು ನೆರವಾಗಿದೆಯಾದರೂ, ಯುಪಿಐ ಬೃಹತ್ ಪ್ರಮಾಣದಲ್ಲಿ ಬೆಳೆದಿರುವುದರಿಂದ ದೀರ್ಘಕಾಲದ ಆರ್ಥಿಕ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಎದ್ದಿದೆ.

► ನೀವು ಯುಪಿಐಗೆ ಹೆಚ್ಚು ಹಣ ನೀಡಬೇಕೇ?

ಸರ್ಕಾರದ ಪ್ರಸ್ತುತ ನಿಲುವಿನ ಪ್ರಕಾರ ಗ್ರಾಹಕರು ನೇರವಾಗಿ ಹಣ ನೀಡಬೇಕಿಲ್ಲ. ಪ್ರಸ್ತಾವಿತ ನಿಯಮವು ಎಂಡಿಆರ್ ವಿಧಿಸಲು ಅವಕಾಶ ನೀಡುತ್ತದೆಯೇ ಹೊರತು, ಪ್ರತಿಯೊಂದು ವಹಿವಾಟಿನ ಮೇಲೆಯೂ ಅದನ್ನು ಕಡ್ಡಾಯವಾಗಿ ಹೇರುವುದಿಲ್ಲ.

ಮುಂದಿನ ದಿನಗಳಲ್ಲಿ ದೊಡ್ಡ ವ್ಯಾಪಾರಿಗಳು ಅಥವಾ ಹೆಚ್ಚಿನ ಮೌಲ್ಯದ ವಹಿವಾಟುಗಳ ಮೇಲೆ ಮಾತ್ರ ಈ ಶುಲ್ಕ ವಿಧಿಸಬಹುದು ಮತ್ತು ಸಣ್ಣ ಮೊತ್ತದ ಪಾವತಿಗಳಿಗೆ ವಿನಾಯಿತಿ ಮುಂದುವರಿಯಬಹುದು ಎಂದು ವರದಿಗಳು ತಿಳಿಸಿವೆ. ಶೇಕಡಾ 95 ಕ್ಕಿಂತ ಹೆಚ್ಚು ಯುಪಿಐ ವಹಿವಾಟುಗಳು 2,000 ರೂಪಾಯಿಗಿಂತ ಕಡಿಮೆ ಮೌಲ್ಯದಾಗಿವೆ ಎಂದು ‘ದಿ ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ಯಾವುದೇ ಎಂಡಿಆರ್ ಶುಲ್ಕವನ್ನು ವ್ಯಾಪಾರಿಗಳ ಮೇಲೆ ವಿಧಿಸಲಾಗುತ್ತದೆಯೇ ಹೊರತು ಗ್ರಾಹಕರ ಮೇಲಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

►ನಿಜವಾದ ಲಾಭ ಯಾರಿಗೆ?

ಅಂತಿಮವಾಗಿ ಇದು ಭಾರತದ ಡಿಜಿಟಲ್ ಪಾವತಿ ಕ್ರಾಂತಿಗೆ ಯಾರು ಹಣಕಾಸು ಒದಗಿಸಬೇಕು ಎಂಬ ವಿಷಯಕ್ಕೆ ಸಂಬಂಧಿಸಿದ ಚರ್ಚೆಯಾಗಿದೆ.

ಸಾರ್ವಜನಿಕರ ತೆರಿಗೆ ಹಣದಿಂದ ಇಡೀ ವ್ಯವಸ್ಥೆಯನ್ನು ನಡೆಸುವ ಬದಲು ವ್ಯಾಪಾರಿಗಳು ಮತ್ತು ಪಾವತಿ ಕಂಪನಿಗಳು ಈ ವೆಚ್ಚದ ಒಂದಷ್ಟು ಭಾಗವನ್ನು ಭರಿಸಬೇಕು ಎಂಬುದು ಒಂದು ವಾದ. ಆದರೆ, ಶೂನ್ಯ-ಶುಲ್ಕ ಮಾದರಿಯೇ ಯುಪಿಐ ಅನ್ನು ಜನಪ್ರಿಯವಾಗಿಸಿದೆ.ಈಗ ಶುಲ್ಕ ಹೇರಿದರೆ ನಗದು ವ್ಯವಹಾರಕ್ಕೆ ಹೋಲಿಸಿದರೆ ಯುಪಿಐ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳಬಹುದು ಎಂಬುದು ಇನ್ನೊಂದು ವಾದ.

ವಿದೇಶಿ ಪಾವತಿ ಸಂಸ್ಥೆಗಳಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕೆ ಭಾರತ ತನ್ನದೇ ದೇಶೀಯ ಪಾವತಿ ವ್ಯವಸ್ಥೆಯ ನಿಯಮಗಳನ್ನು ಬದಲಾಯಿಸಬೇಕೇ? ಎಂಬ ಪ್ರಶ್ನೆಯೂ ಎದುರಾಗಿದೆ.

ಇದೇ ಕಾರಣಕ್ಕೆ ಯುಪಿಐ ಎಂಡಿಆರ್ ಚರ್ಚೆಯು ಕೇವಲ ಕೆಲವು ಪೈಸೆಗಳ ಶುಲ್ಕಕ್ಕೆ ಸೀಮಿತವಾಗಿ ಉಳಿದಿಲ್ಲ. ಇದು ಯುಪಿಐ ಆರ್ಥಿಕತೆ, ಭಾರತದ ಡಿಜಿಟಲ್ ಸಾರ್ವಭೌಮತ್ವ ಮತ್ತು ದೇಶದ ಡಿಜಿಟಲ್ ನೀತಿಗಳ ಮೇಲೆ ಅಮೆರಿಕದ ಪ್ರಭಾವ ಎಷ್ಟಿರಬೇಕು ಎಂಬ ಪ್ರಮುಖ ಪ್ರಶ್ನೆಯಾಗಿ ಮಾರ್ಪಟ್ಟಿದೆ.

ಕೃಪೆ: news18.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News