ಬ್ಲೂಕ್ರಾಫ್ಟ್: ಬ್ರಾಂಡ್ ಮೋದಿ ನಿರೂಪಣೆಯ ಹಿಂದಿರುವ ಕಾರ್ಖಾನೆ
► ಒಂದೇ ಸಂಸ್ಥೆ, ಹಲವು ಮುಖವಾಡಗಳು
ಪ್ರಧಾನಿ ನರೇಂದ್ರ ಮೋದಿ (PTI)
2025 ಸೆಪ್ಟೆಂಬರ್ 24ರಂದು, ಲಡಾಖ್‌ಗೆ ರಾಜ್ಯದ ಸ್ಥಾನಮಾನ, ಉದ್ಯೋಗಾವಕಾಶಗಳು ಮತ್ತು ಸೂಕ್ಷ್ಮ ಪರಿಸರಕ್ಕೆ ಸಾಂವಿಧಾನಿಕ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಸಾವಿರಾರು ಜನರು ಲೇಹ್‌ನ ಬೀದಿಗಿಳಿದಿದ್ದರು. ಆದರೆ ಮುಂದಿನ 72 ಗಂಟೆಗಳಲ್ಲಿ, ಈ ಮೂಲ ವಿಷಯವೇ ಮಾಯವಾಗಿ ಹೋಯಿತು.
'ನ್ಯೂ ಇಂಡಿಯಾ ಜಂಕ್ಷನ್' ಎಂಬ ವೇದಿಕೆಯಲ್ಲಿ ರಿಚಾ ದ್ವಿವೇದಿ ಎಂಬ ನಿರೂಪಕಿ ಕಾಣಿಸಿಕೊಂಡು, ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಅರಬ್ ಸ್ಪ್ರಿಂಗ್ ಮತ್ತು ನೇಪಾಳದ 'ಜೆನ್ ಝೀ' ಪ್ರತಿಭಟನೆಗಳನ್ನು ಉಲ್ಲೇಖಿಸಿ ಜನರನ್ನು ಎತ್ತಿಕಟ್ಟಿದ್ದಾರೆ. ಇದರಿಂದಾಗಿ ಜನಸಮೂಹ ಹಿಂಸಾಚಾರಕ್ಕೆ ತಿರುಗಿದೆ. ಕಾಂಗ್ರೆಸ್ ಕೌನ್ಸಿಲರ್‌ಗಳು ಪ್ರತಿಭಟನಾಕಾರರನ್ನು ಕಲ್ಲು ತೂರಾಟಕ್ಕೆ ಮತ್ತು ಬಂದ್‌ಗೆ ಪ್ರಚೋದಿಸುತ್ತಿರುವುದು "ಕ್ಯಾಮೆರಾದಲ್ಲಿ ಸೆರೆಯಾಗಿದೆ" ಎಂದು ವಾದಿಸಿದರು. ಅದೇ ಸಮಯದಲ್ಲಿ ಓಜಸ್ ಭಂಡಾರಿ ಎಂಬ ಮತ್ತೊಬ್ಬ ನಿರೂಪಕ ವಾಂಗ್ಚುಕ್ ಅವರನ್ನು "ದೇಶದ್ರೋಹಿ" ಎಂದು ಕರೆದು, ಪಹಲ್ಗಾಮ್ ದಾಳಿಗೆ ಕೆಲ ಸಮಯದ ಮುನ್ನ ಅವರು ಇಸ್ಲಾಮಾಬಾದ್‌ನಲ್ಲಿದ್ದರು ಎಂದು ಹೇಳುವ ವಿಡಿಯೊಗಳನ್ನು ಹಂಚಿಕೊಂಡರು. ಶೀಘ್ರದಲ್ಲೇ "ಸೋನಮ್ ವಾಂಗ್ಚುಕ್ ವಿದೇಶಿ ಏಜೆಂಟೇ?" ಎಂಬ ಪ್ರಶ್ನೆ ಟ್ರೆಂಡಿಂಗ್ ವಿಷಯವಾಯಿತು.
ನಂತರ ಈ ವರ್ಷ ಜುಲೈ 20 ರಂದು 'ಚಲೋ ಸಂಸದ್' ಮೆರವಣಿಗೆಯ ದಿನದಂದು, ಗರಿಮಾ ಉಪ್ರೇತಿ ಎಂಬ ಮತ್ತೊಬ್ಬ ಕಂಟೆಂಟ್ ಕ್ರಿಯೇಟರ್ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯಲ್ಲಾದ ಹಿಂಸಾಚಾರವನ್ನು ಪ್ರಶ್ನಿಸಿ, ವಾಂಗ್ಚುಕ್ ಅವರನ್ನು ಟ್ಯಾಗ್ ಮಾಡಿ "ನಿಮ್ಮ ಗೂಂಡಾಗಳನ್ನು ನೋಡಿ. ಇದು ದೇಶದ ರಾಜಧಾನಿಯೋ ಅಥವಾ ಕಾಶ್ಮೀರವೋ?" ಎಂದು ಪೋಸ್ಟ್ ಮಾಡಿದರು.
ಈ ಖಾತೆಗಳನ್ನು ಬೆನ್ನತ್ತಿದರೆ, ಆ ಹಾದಿ ಮತ್ತೆ ಮತ್ತೆ ಬಂದು ತಲುಪುವುದು ಒಂದೇ ಸಂಸ್ಥೆಗೆ. ಅಚ್ಚರಿಯೆಂದರೆ ಈ ಸಂಸ್ಥೆಯು 'ಮಾನವ ಆರೋಗ್ಯ ಮತ್ತು ಸಾಮಾಜಿಕ ಸೇವೆಯ ಸಂಸ್ಥೆ' ಎಂದು ನೋಂದಾಯಿಸಿಕೊಂಡಿದೆ. ಇದರ ಅರ್ಧದಷ್ಟು ಮಾಲೀಕತ್ವ ಹೊಂದಿರುವ ಟೆಕ್ ಮಿಲಿಯನೇರ್ ಒಬ್ಬರು ತಮಗೆ ಇದರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಆದರೆ ಈ ಸಂಸ್ಥೆಯ ಎಕ್ಸ್ ಖಾತೆಯನ್ನು ಸ್ವತಃ ಭಾರತದ ಪ್ರಧಾನಿಯವರೇ ಫಾಲೋ ಮಾಡುತ್ತಿದ್ದಾರೆ.
ಅದರ ಹೆಸರು ‘ಬ್ಲೂಕ್ರಾಫ್ಟ್’ (BlueKraft). ಈ ಎಲ್ಲ ಪ್ರಚಾರದ ಹಿಂದೆ ಹಣ ಹೂಡುತ್ತಿರುವವರು ಯಾರು ಎಂಬ ಸರಳ ಪ್ರಶ್ನೆಗೆ ಈ ಸಂಸ್ಥೆ ಇದುವರೆಗೆ ಉತ್ತರ ನೀಡಿಯೇ ಇಲ್ಲ.
►ಒಂದೇ ಸಂಸ್ಥೆ, ಹಲವು ಮುಖವಾಡಗಳು
ಬ್ಲೂಕ್ರಾಫ್ಟ್ ಸಂಸ್ಥೆಯು ಹೊರನೋಟಕ್ಕೆ ಯಾವುದೇ ಹೈಪ್ ಇಲ್ಲದೆ ಕಾಣಿಸುತ್ತದೆ, ಆದರೆ ಅದರ ಅಸಲಿ ತಂತ್ರವೇ ಅದು. ಇದು New India Junction, The True Picture, Know The Nation, ಮತ್ತು ‘ Modi Story’ಯಂತಹ ಸ್ವತಂತ್ರ ಹಾಗೂ ತಟಸ್ಥ ಮಾಧ್ಯಮಗಳಂತೆ ತೋರುವ ಹೆಸರುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಬ್ಲೂಕ್ರಾಫ್ಟ್ ತನ್ನ ಸ್ವಂತ ಹೆಸರನ್ನು ಎಲ್ಲೂ ಬಳಸುವುದಿಲ್ಲ. ಕಾರ್ಪೊರೇಟ್ ದಾಖಲೆಗಳು ಹಾಗೂ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳನ್ನು ‘newslaundry.com’ ಪರಿಶೀಲಿಸಿದಾಗ, ಈ ಎಲ್ಲ ವೇದಿಕೆಗಳು ಒಂದೇ ಕಚೇರಿ, ಸಿಬ್ಬಂದಿ ಹಾಗೂ ಮಾಲಕತ್ವವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ದ್ವಿವೇದಿ, ಭಂಡಾರಿ ಮತ್ತು ಗರಿಮಾ ಉಪ್ರೇತಿ ಅವರಂತಹ ನಿರೂಪಕರು ಇದೇ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದಾರೆ.
ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಘಟನೆಗಳನ್ನು ಹತ್ತಿರದಿಂದ ಗಮನಿಸಿದಾಗ ಈ ಸಂಸ್ಥೆಯ ಕೈವಾಡ ಇರುವುದು ಸ್ಪಷ್ಟವಾಗುತ್ತದೆ.
2026 ಫೆಬ್ರವರಿಯಲ್ಲಿ, #CompromisedCongress ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ನೆಹರೂ-ಗಾಂಧಿ ಕುಟುಂಬದ ನಾಲ್ಕು ತಲೆಮಾರುಗಳನ್ನು ಗೇಲಿ ಮಾಡುವ ಎಐ ನಿರ್ಮಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದವು. ಬಿಜೆಪಿ ನಾಯಕರು ಹಾಗೂ ರಾಜ್ಯ ಘಟಕಗಳು ಇದನ್ನು ಪ್ರಚಲಿತಗೊಳಿಸಿದವು. ದ್ವಿವೇದಿ ಹಾಗೂ ಉಪ್ರೇತಿ ಅವರು ನೆಹರೂ ಅವರನ್ನು 'compromised' ಎಂದು ಬಿಂಬಿಸುವ ವಿಡಿಯೊಗಳನ್ನು ಬಿಡುಗಡೆ ಮಾಡಿದರು. ಈ ಇಡೀ ಅಭಿಯಾನವನ್ನು ಬ್ಲೂಕ್ರಾಫ್ಟ್ ರೂಪಿಸಿತ್ತು.
ಇದಕ್ಕೂ ಮುನ್ನ, 2018 ಎಪ್ರಿಲ್ ನಲ್ಲಿ, ಪಿಯೂಷ್ ಗೋಯಲ್, ಕಿರಣ್ ರಿಜಿಜು, ಸ್ಮೃತಿ ಇರಾನಿ, ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಕನಿಷ್ಠ 13 ಕೇಂದ್ರ ಸಚಿವರು 'ದಿ ಟ್ರೂ ಪಿಕ್ಚರ್' ಎಂಬ ವೆಬ್‌ಸೈಟ್ ಅನ್ನು ಫ್ಯಾಕ್ಟ್-ಚೆಕಿಂಗ್ ಸೈಟ್ ಎಂದು ಪ್ರಚಾರ ಮಾಡಿದ್ದರು. ಗುಜರಾತ್‌ನಲ್ಲಿ ದಲಿತ ಯುವಕನ ಹತ್ಯೆ ಮತ್ತು ದಲೈ ಲಾಮಾ ಕಾರ್ಯಕ್ರಮದಿಂದ ಅಧಿಕಾರಿಗಳು ದೂರವಿರಲು ನೀಡಿದ ಸೂಚನೆ ಕುರಿತು 'ಇಂಡಿಯನ್ ಎಕ್ಸ್‌ಪ್ರೆಸ್' ನೀಡಿದ್ದ ವರದಿಗಳನ್ನು ಈ ಸೈಟ್ ಸುಳ್ಳು ಎಂದು ಅಲ್ಲಗೆಳೆದಿತ್ತು. ಆದರೆ, 'ದಿ ಟ್ರೂ ಪಿಕ್ಚರ್' ಪ್ರಸ್ತುತ ಸಕ್ರಿಯವಾಗಿಲ್ಲ, 2022 ಎಪ್ರಿಲ್ ನಲ್ಲಿ ಇದು ಕೊನೆಯ ಪೋಸ್ಟ್ ಮಾಡಿತ್ತು.
ಒಂದೇ ಮುಖಕ್ಕೆ ಹಲವು ಮುಖವಾಡಗಳಿದ್ದಂತೆ ಈ ಎಲ್ಲ ಕಾರ್ಯಗಳು ನಡೆದಿವೆ. ಪ್ರತಿಭಟನೆಯ ದಿಕ್ಕು ತಪ್ಪಿಸುವುದು, ವಿರೋಧ ಪಕ್ಷದ ಕುಟುಂಬವನ್ನು ಗೇಲಿ ಮಾಡುವುದು ಮತ್ತು ಒಂದೇ ಕಡೆ ವಾಲಿ ಅಥವಾ ಏಕ ಮುಖವಾಗಿ ಫ್ಯಾಕ್ಟ್-ಚೆಕಿಂಗ್ ಮಾಡುವ ಕಾರ್ಯಗಳು ನಡೆದಿವೆ. ಈ ಜಾಲದೊಂದಿಗೆ ಗುರುತಿಸಿಕೊಂಡಿರುವ ರಿಚಾ ದ್ವಿವೇದಿ, ವಸುಧಾ ಮಾಧೋಗರಿಯಾ ಮತ್ತು ಶಿವ ಮುದ್ಗಿಲ್ ಅವರ ಎಕ್ಸ್ ಖಾತೆಗಳನ್ನು ಸ್ವತಃ ನರೇಂದ್ರ ಮೋದಿ ಅವರೇ ಫಾಲೋ ಮಾಡುತ್ತಿದ್ದಾರೆ.
ನ್ಯೂಸ್‌ಲಾಂಡ್ರಿಯ ವಿಶ್ಲೇಷಣೆಯ ಪ್ರಕಾರ, ಬ್ಲೂಕ್ರಾಫ್ಟ್ ಬರಿ ಪ್ರಧಾನಿಯವರ ಹೊಗಳಿಕೆಯನ್ನು ಪ್ರಚಾರ ಮಾಡುತ್ತಿಲ್ಲ. ಬದಲಾಗಿ, ಈ ಹೊಗಳಿಕೆಯು ಸ್ವಯಂಪ್ರೇರಿತವಾಗಿ ಬಂದದ್ದು ಅಂದರೆ ಸಾರ್ವಜನಿಕರು, ಪತ್ರಕರ್ತರು, ಚಿತ್ರನಿರ್ಮಾಪಕರು, ಕ್ರೀಡಾಪಟುಗಳು ಮತ್ತು ಸಾಮಾನ್ಯ ನಾಗರಿಕರು ಸ್ವತಃ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ಭಾವನೆಯನ್ನು ಸೃಷ್ಟಿಸುತ್ತಿದೆ. ಈ ತಂತ್ರವೇ ಸಂಸ್ಥೆಯ ಮುಖ್ಯ ಬಂಡವಾಳ.
►ಸಂಸ್ಥೆ ಸ್ಥಾಪಿಸಿ ಅಲ್ಲಿಂದ ಹೊರನಡೆದ ವ್ಯಕ್ತಿ
ಈ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು, ಇದನ್ನು ರೂಪಿಸಿ ನಂತರ ಇದರಿಂದ ಹೊರನಡೆದ ಇಂಜಿನಿಯರ್‌ನಿಂದಲೇ ಪ್ರಾರಂಭಿಸಬೇಕು.
ರಾಜೇಶ್ ಜೈನ್ ಭಾರತದ ಇಂಟರ್ನೆಟ್ ಕ್ರಾಂತಿಯ ಆರಂಭಿಕ ಪೀಳಿಗೆಗೆ ಸೇರಿದವರು. ಐಐಟಿ ಬಾಂಬೆ ಪದವೀಧರ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರಾದ ಇವರು, ಭಾರತದ ಮೊದಲ ವೆಬ್ ಪೋರ್ಟಲ್‌ಗಳಲ್ಲಿ ಒಂದಾದ 'ಇಂಡಿಯಾವರ್ಲ್ಡ್' ಅನ್ನು ನಿರ್ಮಿಸಿ, 1999 ರಲ್ಲಿ ಸತ್ಯಂ ಇನ್ಫೋವೇಗೆ ಸುಮಾರು 115 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡಿದ್ದರು. ಅವರ ಸಾಫ್ಟ್‌ವೇರ್ ಸಂಸ್ಥೆ 'ನೆಟ್‌ಕೋರ್', 2008 ರ ಸುಮಾರಿಗೆ ಬಿಜೆಯ ಜೊತೆ ಸಂಪರ್ಕ ತಂದಿತು. ಆಗ ಪಿಯೂಷ್ ಗೋಯಲ್ ಅವರು ಪಕ್ಷದ ಎಸ್‌ಎಂಎಸ್ ಪ್ರಚಾರಕ್ಕಾಗಿ ಇವರನ್ನು ನೇಮಿಸಿಕೊಂಡಿದ್ದರು. ಆದರೆ ಜೈನ್ ಕೇವಲ ಸಾಫ್ಟ್‌ವೇರ್ ಪೂರೈಸುವುದಕ್ಕೆ ಸೀಮಿತವಾಗಲು ಬಯಸಲಿಲ್ಲ. 2009 ಜನವರಿಯಲ್ಲಿ, ಗೋಯಲ್ ಅವರ ಬೆಂಬಲದೊಂದಿಗೆ, ಆ ವರ್ಷದ ಚುನಾವಣೆಗೆ ಮಧ್ಯಮ ವರ್ಗದವರನ್ನು ಒಗ್ಗೂಡಿಸಲು ವೃತ್ತಿಪರರು ಮತ್ತು ಸ್ವಯಂಸೇವಕರ ನೆಟ್‌ವರ್ಕ್ ಆದ “Friends of BJP” ಅನ್ನು ಪ್ರಾರಂಭಿಸಿದರು.
ಇದು ಸಣ್ಣ ವಿಷಯದಂತೆ ಕಂಡರೂ, ಅತ್ಯಂತ ಪ್ರಮುಖವಾದದ್ದು. ಆ ಆರಂಭಿಕ ಪ್ರಯೋಗದ ಭಾಗವಾಗಿದ್ದ ಜನರೇ ಮುಂದೆ ಬಿಜೆಪಿಯ ಇಡೀ ಡಿಜಿಟಲ್ ವ್ಯವಸ್ಥೆಯನ್ನು ನಿರ್ಮಿಸಿದರು. ಅವರ ಬ್ಲೂಕ್ರಾಫ್ಟ್ ಸಂಸ್ಥೆಯ ಸಹ-ಸಂಸ್ಥಾಪಕ ಹಿತೇಶ್ ಜೈನ್ ಅಲ್ಲಿದ್ದರು. ಪ್ರಸ್ತುತ ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾಗಿರುವ ಅಮಿತ್ ಮಾಳವೀಯ ಕೂಡ ಅದರ ಭಾಗವಾಗಿದ್ದರು.
ಅಮೆರಿಕದ ಚುನಾವಣಾ ತಂತ್ರಜ್ಞಾನ ಅಂದರೆ 2008 ರಲ್ಲಿ ಬರಾಕ್ ಒಬಾಮ ಅವರ ಗೆಲುವಿನ ಹಿಂದಿದ್ದ ಡೇಟಾ ಮತ್ತು ಟಾರ್ಗೆಟಿಂಗ್ ತಂತ್ರಗಳು ಜೈನ್ ಅವರ ಆಸಕ್ತಿಯಾಗಿದ್ದವು. 2009 ನವೆಂಬರ್ ನಲ್ಲಿ ಅವರು ಒಬಾಮ ಪ್ರಚಾರ ತಂಡದ ಪ್ರಮುಖರಾಗಿದ್ದ ಪೀಟ್ ಡಾಗರ್ ಅವರನ್ನು ದಿಲ್ಲಿಯಲ್ಲಿ ನಡೆದ ಆಂತರಿಕ ಸಭೆಗೆ ಆಹ್ವಾನಿಸಿದ್ದರು. 2010 ರ ಆರಂಭದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಮತ್ತು ಮುಂದಿನ ವರ್ಷ ಅವರೊಂದಿಗೆ ಚೀನಾ ಪ್ರವಾಸ ಕೈಗೊಂಡ ನಂತರ, ತಾವು ಬಯಸಿದ ನಾಯಕ ಸಿಕ್ಕಿದರೆಂದು ಜೈನ್ ನಿರ್ಧರಿಸಿದರು. ಮೋದಿಯವರನ್ನು ಪ್ರಧಾನಿ ಮಾಡುವುದಾಗಿ ಮತ್ತು ಅದಕ್ಕಾಗಿ ಪಕ್ಷದ ಹಣ ಬಳಸದೆ ತಮ್ಮದೇ ಸ್ವಂತ ಹಣ ವಿನಿಯೋಗಿಸುವುದಾಗಿ ಅವರು ಹೇಳಿದರು.
2014 ರ ವೇಳೆಗೆ ಅವರು ಆ ವ್ಯವಸ್ಥೆಯನ್ನು ಸಿದ್ಧಪಡಿಸಿದ್ದರು. 'ನೀತಿ' (NITI – Network of Ideas for Transforming India) ಎಂಬ ವೇದಿಕೆಯಡಿ ಜೈನ್ ಹಲವು ಡಿಜಿಟಲ್ ಮೂಲಸೌಕರ್ಯಗಳನ್ನು ರೂಪಿಸಿದರು: ಮಾಧ್ಯಮಗಳ ಟೀಕೆಯನ್ನು ಎದುರಿಸಲು 'ನೀತಿ ಸೆಂಟ್ರಲ್' ವೆಬ್‌ಸೈಟ್, ಚುನಾವಣಾ ಆಯೋಗದ ಮಾಹಿತಿಯನ್ನು ವಿಶ್ಲೇಷಿಸಿ ಬಿಜೆಪಿ ಗೆಲ್ಲಬಹುದಾದ ಕ್ಷೇತ್ರಗಳನ್ನು ಗುರುತಿಸಲು 'ಇಂಡಿಯಾ ವೋಟ್ಸ್', ಮತ್ತು ಬೆಂಬಲಿಗರು ಪಕ್ಷಕ್ಕೆ ಸೇರದೆ ಮೋದಿ ಪರ ಕೆಲಸ ಮಾಡಲು 'India272.com ' (ಸಂಸತ್ತಿನಲ್ಲಿ ಬಹುಮತಕ್ಕೆ ಬೇಕಾದ 272 ಸ್ಥಾನಗಳ ಸಂಕೇತ) ಅನ್ನು ರೂಪಿಸಿದರು. 2013 ಜುಲೈ ತಿಂಗಳಲ್ಲಿ ದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಯೂಷ್ ಗೋಯಲ್ ಇದನ್ನು “Mission 272+” ಎಂದು ಬಹಿರಂಗವಾಗಿ ಘೋಷಿಸಿದರು. ಮೋದಿಯವರ ಡಿಜಿಟಲ್ ಸಹಾಯಕ ಹಿರೇನ್ ಜೋಶಿ ಗುಜರಾತ್ CMO ದಿಂದ ಇದರ ತಂತ್ರಗಳನ್ನು ಸಂಯೋಜಿಸುತ್ತಿದ್ದರು. ಅಂತಿಮವಾಗಿ, ಇದು ಭಾರತದಲ್ಲೇ ನಿರ್ಮಾಣಗೊಂಡ ಅತ್ಯಂತ ಸುಧಾರಿತ ರಾಜಕೀಯ ತಂತ್ರಜ್ಞಾನ ವ್ಯವಸ್ಥೆಯಾಗಿ ಹೊರಹೊಮ್ಮಿತು.
ಆದರೆ, ಈ ವ್ಯವಸ್ಥೆಯ ಶಿಲ್ಪಿ ಶೀಘ್ರದಲ್ಲೇ ಇದರ ಮೇಲಿನ ನಂಬಿಕೆ ಕಳೆದುಕೊಂಡರು. 2014 ರ ಗೆಲುವಿನ ಕೆಲವೇ ತಿಂಗಳುಗಳಲ್ಲಿ ಜೈನ್ ಅವರಿಗೆ ನಿರಾಶೆಯಾಯಿತು. ಸರ್ಕಾರವು ಸುಧಾರಣೆಗಳ ಉತ್ತಮ ಅವಕಾಶವನ್ನು ವ್ಯರ್ಥ ಮಾಡಿದೆ, ಸಾಮಾನ್ಯ ಜನರ ಜೀವನೋಪಾಯಕ್ಕಾಗಿ ಏನನ್ನೂ ಮಾಡುತ್ತಿಲ್ಲ ಎಂದು ಅವರು ಭಾವಿಸಿದರು. 2016 ರ ನೋಟು ಅಮಾನ್ಯೀಕರಣದ ನಿರ್ಧಾರವು ನಿರಾಶೆಯನ್ನು ಮತ್ತಷ್ಟು ತೀವ್ರ ಮಾಡಿತ್ತು. 2017 ರಲ್ಲಿ ಅವರು ಗೆಲುವಿನ ನಂತರ ತಮಗೆ ಸಿಕ್ಕಿದ್ದ ಸಾರ್ವಜನಿಕ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಎನ್‌ಟಿಪಿಸಿ (NTPC) ಮಂಡಳಿ ಸದಸ್ಯತ್ವ ಮತ್ತು ಆಧಾರ್ ನಿರ್ವಹಿಸುವ ಯುಐಡಿಎಐ (UIDAI) ಸದಸ್ಯತ್ವವನ್ನು ತೊರೆದರು. 2018 ರಲ್ಲಿ, 2016 ಜುಲೈನಲ್ಲಿ ಹಿತೇಶ್ ಜೈನ್ ಅವರೊಂದಿಗೆ ಸೇರಿ ಸ್ಥಾಪಿಸಿದ್ದ ‘ಬ್ಲೂಕ್ರಾಫ್ಟ್’ ಸಂಸ್ಥೆಯ ನಿರ್ದೇಶಕ ಹುದ್ದೆಯಿಂದ ಕೆಳಗಿಳಿದರು.
ಆದರೆ, ಅವರು ಈ ಸಂಸ್ಥೆಯ ಮಾಲಕತ್ವವನ್ನು ಸಂಪೂರ್ಣವಾಗಿ ಬಿಟ್ಟುಕೊಡಲಿಲ್ಲ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (MCA) ದಾಖಲೆಗಳ ಪ್ರಕಾರ, ತಾವು ತೊರೆದಿದ್ದೇನೆ ಎಂದು ಹೇಳಿಕೊಳ್ಳುವ ಸಂಸ್ಥೆಯಲ್ಲಿ ರಾಜೇಶ್ ಜೈನ್ ಇಂದಿಗೂ ಶೇಕಡಾ 50 ರಷ್ಟು ಪಾಲುದಾರಿಕೆಯನ್ನು ಹೊಂದಿದ್ದಾರೆ.
►ಅಲ್ಲೇ ಉಳಿದ ವ್ಯಕ್ತಿ
ಸಂಸ್ಥಾಪಕರಲ್ಲಿ ಒಬ್ಬರು ಹೊರನಡೆದರೆ, ಮತ್ತೊಬ್ಬರು ವ್ಯವಸ್ಥೆಯ ಕೇಂದ್ರಬಿಂದುವಾಗಿ ಬೆಳೆದರು ಮತ್ತು ತಮ್ಮೊಂದಿಗೆ ಮತ್ತೊಬ್ಬ ಆಪರೇಟರ್ ಅನ್ನು ಕರೆತಂದರು.
ವಕೀಲರಾದ ಹಿತೇಶ್ ಜೈನ್ ಬ್ಲೂಕ್ರಾಫ್ಟ್‌ನ ಪ್ರಮುಖ ಅಧಿಕಾರಿಯಾಗಿ ಹೊರಹೊಮ್ಮಿದರು, ಅವರೊಂದಿಗೆ ಸಿಇಒ ಅಖಿಲೇಶ್ ಮಿಶ್ರಾ ಕೈಜೋಡಿಸಿದರು. ಮಿಶ್ರಾ ಅವರ ವೃತ್ತಿಜೀವನವು ವಿಶಿಷ್ಟ ಹಾದಿಯನ್ನು ಹೊಂದಿತ್ತು. ಪಕ್ಷದ ವಾರ್ ರೂಮ್‌ನಿಂದ ಸರ್ಕಾರಿ ವೇದಿಕೆಗೆ, ಅಲ್ಲಿಂದ ಸರ್ಕಾರವನ್ನು ಪ್ರಚಾರ ಮಾಡುವ ಖಾಸಗಿ ಸಂಸ್ಥೆಯವರೆಗೆ ಅವರ ಪಯಣ ಸಾಗಿತ್ತು.
ಐಐಟಿ-ಧನ್‌ಬಾದ್‌ನಿಂದ ಇಂಜಿನಿಯರಿಂಗ್ ಮುಗಿಸಿ ಕಾರ್ಪೊರೇಟ್ ಸೇಲ್ಸ್ ಕ್ಷೇತ್ರದಲ್ಲಿ (ಅಟ್ಲಾಸ್ ಕೊಪ್ಕೊ, ಕ್ಯಾಸ್ಟ್ರೋಲ್, ಟಾಟಾ ಹಿಟಾಚಿ, ವ್ಯಾಲ್ವೋಲೈನ್) ವೃತ್ತಿಜೀವನ ಆರಂಭಿಸಿದ್ದ ಮಿಶ್ರಾ, 2012 ರಲ್ಲಿ ಮೋದಿ ಅವರ ಪರ ಕೆಲಸ ಮಾಡಲು ಆ ಉದ್ಯೋಗ ತೊರೆದರು. ನಂತರ ಬಿಜೆಪಿಯ 'ರಾಷ್ಟ್ರೀಯ ಡಿಜಿಟಲ್ ಕಾರ್ಯಾಚರಣೆ ಕೇಂದ್ರ'ದ (NDOC) ಕಂಟೆಂಟ್ ಡಿವಿಷನ್ ಮುಖ್ಯಸ್ಥರಾದರು. ರಾಜೇಶ್ ಜೈನ್ ಕಲ್ಪಿಸಿದ್ದ “ಮಿಷನ್ 272+” ಗುರಿಯನ್ನು ತಲುಪಲು ಈ ಡಿಜಿಟಲ್ ವಾರ್ ರೂಮ್ ಸ್ಥಾಪಿಸಲಾಗಿತ್ತು. 2012 ರಿಂದ 2015 ರವರೆಗೆ ಸಕ್ರಿಯವಾಗಿದ್ದ ಎನ್‌ಡಿಒಸಿ, ಸುದ್ದಿಗಳ ನೈಜ ಸಮಯದ ಮೇಲ್ವಿಚಾರಣೆ, ಮತದಾರರ ದತ್ತಾಂಶ ವಿಶ್ಲೇಷಣೆ ಮತ್ತು ಪ್ರಚಾರ ತಂತ್ರಗಳನ್ನು ಸಂಯೋಜಿಸುತ್ತಿತ್ತು. ಅಲ್ಲಿಂದ ಮಿಶ್ರಾ ಸರ್ಕಾರದ MyGov ವೇದಿಕೆಗೆ ತೆರಳಿ, ಸುಮಾರು 22 ತಿಂಗಳು ಕಂಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು. ನಂತರ ನವೆಂಬರ್ 2016 ರಲ್ಲಿ ಬ್ಲೂಕ್ರಾಫ್ಟ್ ಸಿಇಒ ಆಗಿ ಸೇರ್ಪಡೆಗೊಂಡರು. ಇಂದಿಗೂ ಅದೇ ಹುದ್ದೆಯಲ್ಲಿರುವ ಅವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಡಿಜಿಟಲ್ ಟ್ರಾನ್ಸ್ಫಾರ್ಮೇಷನ್ ಅವಾರ್ಡ್ ಲಭಿಸಿದೆ.
ಮಿಶ್ರಾ ಬಂದಂತಹ ಆ ವಾರ್ ರೂಮ್‌ನ ಹಿನ್ನೆಲೆ ವಿವಾದಾತ್ಮಕವಾಗಿದೆ. ಮೋದಿ ಮತ್ತು ಬಿಜೆಪಿಯ ಟೀಕಾಕಾರರ ವಿರುದ್ಧ, ವಿಶೇಷವಾಗಿ ಆಮಿರ್ ಖಾನ್ ಮತ್ತು ಶಾರುಖ್ ಖಾನ್ ಅವರಂತಹ ಚಲನಚಿತ್ರ ನಟರನ್ನು ಗುರಿಯಾಗಿಸಿಕೊಂಡು ಪ್ರಚಾರ ಅಭಿಯಾನಗಳನ್ನು ನಡೆಸಿತ್ತು ಅಥವಾ ಉತ್ತೇಜಿಸಿತ್ತು ಎಂಬ ಆರೋಪಗಳು ಎನ್‌ಡಿಒಸಿ ಮೇಲಿವೆ. (ಆದರೆ ಇದನ್ನು ಸ್ವತಂತ್ರವಾಗಿ ಪರಿಶೀಲಿಸಲು 'ನ್ಯೂಸ್‌ಲಾಂಡ್ರಿ'ಗೆ ಸಾಧ್ಯವಾಗಿಲ್ಲ). 2015 ರ “ಅಸಹಿಷ್ಣುತೆ” ವಿವಾದ ಇದಕ್ಕೆ ಮುಖ್ಯ ಉದಾಹರಣೆಯಾಗಿದೆ. ಆಗ ಆಮಿರ್ ಖಾನ್ ತಮ್ಮ ಅಂದಿನ ಪತ್ನಿ ದೇಶ ತೊರೆಯುವ ಬಗ್ಗೆ ಮಾತನಾಡಿದ್ದನ್ನು ಉಲ್ಲೇಖಿಸಿದಾಗ, ಅವರನ್ನು 'Snapdeal ' ರಾಯಭಾರಿ ಹುದ್ದೆಯಿಂದ ತೆಗೆದುಹಾಕುವಂತೆ ದೊಡ್ಡ ಮಟ್ಟದ ಪ್ರಚಾರ ಅಭಿಯಾನ ನಡೆಯಿತು . ಅಂತಿಮವಾಗಿ ಕಂಪನಿ ಅವರನ್ನು ತೆಗೆದುಹಾಕಿತು. ಈ ಒತ್ತಡದ ಹಿಂದೆ ಎನ್‌ಡಿಒಸಿ ಇತ್ತು ಎಂಬುದು ಆರೋಪವಾಗಿಯೇ ಉಳಿದಿದೆ. ಆದರೆ ಈ ಘಟನೆಯು ಮುಂದೆ ಬರಲಿದ್ದ ದೊಡ್ಡ ಮಟ್ಟದ ಕಾರ್ಯಾಚರಣೆಗೆ ಮಾದರಿಯಾಯಿತು: ಹಿನ್ನೆಲೆಯಲ್ಲಿದ್ದುಕೊಂಡು ದಾಳಿ ಮಾಡುವ ವಾರ್ ರೂಮ್‌ಗಿಂತ, ಹತ್ತಾರು ಸೌಹಾರ್ದಯುತ ಹೆಸರುಗಳ ಅಡಿಯಲ್ಲಿ ಬಹಿರಂಗವಾಗಿ ಪ್ರಶಂಸಿಸುವ ಸಂಸ್ಥೆಯಾಗಿ ಇದು ರೂಪುಗೊಂಡಿತು.
ಇಂದು ಮಿಶ್ರಾ ಮತ್ತು ಹಿತೇಶ್ ಜೈನ್ ಬ್ಲೂಕ್ರಾಫ್ಟ್‌ನ ಪ್ರಮುಖ ಮುಖಗಳಾಗಿದ್ದಾರೆ. ಪುಸ್ತಕ ಬಿಡುಗಡೆಗಳು, ಯುವ ರ‍್ಯಾಲಿಗಳು ಮತ್ತು ಪ್ರಧಾನಿಯವರ ಕುರಿತಾದ ಸಂಗೀತ ಕಾರ್ಯಕ್ರಮಗಳಲ್ಲಿ ಇವರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮಿಶ್ರಾ ಅವರು ಸರ್ಕಾರದ ನೀತಿಗಳನ್ನು ಸಮರ್ಥಿಸಿ ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆಯುತ್ತಾರೆ.
ಬ್ಲೂಕ್ರಾಫ್ಟ್‌ನ ಮಾಲಕತ್ವ ಮತ್ತು ನಿಯಂತ್ರಣ, ಆದಾಯದ ಮೂಲಗಳು, ಬಿಜೆಪಿ ಹಾಗೂ ಸರ್ಕಾರದೊಂದಿಗಿನ ಸಂಬಂಧ (ಒಂದೊಮ್ಮೆ ಇದ್ದರೆ) ಮತ್ತು 'ನ್ಯೂ ಇಂಡಿಯಾ ಜಂಕ್ಷನ್', 'ನೋ ದಿ ನೇಷನ್', 'ಮೋದಿ ಸ್ಟೋರಿ' ಹಾಗೂ 'ದಿ ಟ್ರೂ ಪಿಕ್ಚರ್' ವೇದಿಕೆಗಳ ಕಾರ್ಯಾಚರಣೆಯ ಕುರಿತು ಹಿತೇಶ್ ಜೈನ್ ಮತ್ತು ಅಖಿಲೇಶ್ ಮಿಶ್ರಾ ಅವರಿಗೆ ವಿವರವಾದ ಪ್ರಶ್ನಾವಳಿಯನ್ನು ಕಳುಹಿಸಲಾಗಿದೆ. ಅವರಿಂದ ‘ನ್ಯೂಸ್‌ಲಾಂಡ್ರಿ’ ಗೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
►ಒಬ್ಬ ವ್ಯಕ್ತಿಗಾಗಿ ರೂಪುಗೊಂಡ 'ಮಾನವ ಆರೋಗ್ಯ ಮತ್ತು ಸಾಮಾಜಿಕ ಸೇವಾ' ಸಂಸ್ಥೆ
ದಾಖಲೆಗಳ ಪ್ರಕಾರ, ಬ್ಲೂಕ್ರಾಫ್ಟ್ ಫೌಂಡೇಶನ್ (ಹಿಂದೆ 'ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್' ಎಂದು ಕರೆಯಲ್ಪಡುತ್ತಿತ್ತು) ನಾಗರಿಕ ಸಹಭಾಗಿತ್ವ, ಸಂಶೋಧನೆ ಮತ್ತು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸಲು ಅಸ್ತಿತ್ವದಲ್ಲಿದೆ. ಆದರೆ ಅಚ್ಚರಿಯೆಂದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (MCA) ದಾಖಲೆಗಳಲ್ಲಿ ಇದನ್ನು "ಮಾನವ ಆರೋಗ್ಯ ಮತ್ತು ಸಾಮಾಜಿಕ ಸೇವೆಗಳು" ಎಂದು ನಮೂದಿಸಲಾಗಿದೆ. ಪ್ರಾಯೋಗಿಕವಾಗಿ, ನ್ಯೂಸ್‌ಲಾಂಡ್ರಿ ಪರಿಶೀಲಿಸಿದ ಇದರ ಕಾರ್ಯಾಚರಣೆಗಳು ಕೇವಲ ಒಬ್ಬ ವ್ಯಕ್ತಿಯನ್ನೇ (ನರೇಂದ್ರ ಮೋದಿ) ಕೇಂದ್ರವಾಗಿಸಿಕೊಂಡು ರೂಪುಗೊಂಡಿರುವುದು ಕಂಡುಬಂದಿದೆ.
ಅದೇ ಕುಟುಂಬದ ಹೆಸರುಗಳು, ಅದೇ ಸಣ್ಣ ಬಳಗವೇ ಇಲ್ಲಿ ಪದೇ ಪದೇ ಮುನ್ನೆಲೆಗೆ ಬರುತ್ತದೆ.
ಸಂಸ್ಥೆಯ ಒಟ್ಟು ಮೂರು ಲಕ್ಷ ಷೇರುಗಳಲ್ಲಿ ಇಬ್ಬರು ಸಂಸ್ಥಾಪಕರು ತಲಾ 1.5 ಲಕ್ಷ ಷೇರುಗಳನ್ನು ಹೊಂದಿದ್ದರು. 2018 ರಲ್ಲಿ ರಾಜೇಶ್ ಜೈನ್ ಹೊರನಡೆದ ನಂತರ, ನಿರ್ದೇಶಕ ಹುದ್ದೆಯು ಮೊದಲು ಯಕ್ಷಾ ಛೇಡಾ (ಎಎಲ್‌ಎಮ್‌ಟಿ ಲೀಗಲ್‌ನಲ್ಲಿ ಹಿತೇಶ್ ಜೈನ್ ಅವರೊಂದಿಗೆ ಕೆಲಸ ಮಾಡಿದ್ದ ವಕೀಲರು) ಅವರಿಗೆ, ತದನಂತರ 2021 ರಲ್ಲಿ ಪಂಕಜ್ ಜೈನ್ ಅವರಿಗೆ ಹಸ್ತಾಂತರಿಸಲ್ಪಟ್ಟಿತು. ದಾಖಲೆಗಳ ಪ್ರಕಾರ ಪಂಕಜ್ ಜೈನ್ ಅವರು ಹಿತೇಶ್ ಜೈನ್ ಅವರ ಸಹೋದರ.
ಈ ಫೌಂಡೇಶನ್ ಮೊದಲು ಲೋವರ್ ಪರೇಲ್‌ನಲ್ಲಿರುವ ರಾಜೇಶ್ ಜೈನ್ ಅವರ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟಿತ್ತು. 2018 ರಲ್ಲಿ ಇದು ಹತ್ತಿರದ ಲೋಧಾ ಸುಪ್ರೀಮಸ್‌ಗೆ ಸ್ಥಳಾಂತರಗೊಂಡಿತು. ನ್ಯೂಸ್‌ಲಾಂಡ್ರಿ ಪರಿಶೀಲಿಸಿದ ದಾಖಲೆಗಳ ಪ್ರಕಾರ, ಈ ಕಟ್ಟಡವು ಹಿತೇಶ್ ಜೈನ್ ಅವರ ಸಹೋದರ ಸುಜಿತ್ ಜೈನ್ ಅವರಿಗೆ ಸೇರಿದ 'ನೆಟ್‌ಸರ್ಫ್ ಕಮ್ಯುನಿಕೇಷನ್ಸ್' ಸಂಸ್ಥೆಯ ಒಡೆತನದಲ್ಲಿದೆ. ಸುಜಿತ್ ಜೈನ್ ಅವರು 'ಮಹಾವೀರ್ ಜೈನ್ ಫಿಲ್ಮ್ಸ್' ಸಂಸ್ಥೆಯಲ್ಲಿ ಮಹಾವೀರ್ ಜೈನ್ ಅವರ ನಂತರದ ಎರಡನೇ ಅತಿ ದೊಡ್ಡ ಷೇರುದಾರರಾಗಿದ್ದಾರೆ. ಇನ್ನು ಬ್ಲೂಕ್ರಾಫ್ಟ್‌ನ ಬಹುತೇಕ ಸಿಬ್ಬಂದಿ ದಿಲ್ಲಿಯ ಕನ್ನಾಟ್ ಪ್ಲೇಸ್‌ನ ಹನುಮಾನ್ ರಸ್ತೆಯಲ್ಲಿರುವ ಎರಡನೇ ಕಚೇರಿಯಿಂದ ಕಾರ್ಯನಿರ್ವಹಿಸುತ್ತಾರೆ.
ಸಂಸ್ಥೆಯ ಆದಾಯವೂ ನಿರಂತರವಾಗಿ ಏರುತ್ತಿದೆ. ಎಮ್‌ಸಿಎ (MCA) ಸಲ್ಲಿಕೆಗಳ ಪ್ರಕಾರ, ಸಂಸ್ಥೆಯ ಆದಾಯವು 2017-18 ರಲ್ಲಿ ಸುಮಾರು 11.5 ಕೋಟಿ ರೂಪಾಯಿ, 2018-19 ರಲ್ಲಿ 8.33 ಕೋಟಿ ರೂಪಾಯಿ, 2019-20 ರಲ್ಲಿ 2.84 ಕೋಟಿ ರೂಪಾಯಿ, 2020-21 ರಲ್ಲಿ 7 ಕೋಟಿ ರೂಪಾಯಿ, 2021-22 ರಲ್ಲಿ 10.95 ಕೋಟಿ ರೂಪಾಯಿ, 2022-23 ರಲ್ಲಿ 10 ಕೋಟಿ ರೂಪಾಯಿ, 2023-24 ರಲ್ಲಿ 17.5 ಕೋಟಿ ರೂಪಾಯಿ ಮತ್ತು 2024-25 ರಲ್ಲಿ 22.03 ಕೋಟಿ ರೂಪಾಯಿಗೆ ತಲುಪಿದೆ. ಇದಲ್ಲದೆ 2018-19 ರಲ್ಲಿ 5.75 ಕೋಟಿ ರೂಪಾಯಿ ಹಾಗೂ ಮರುವರ್ಷ 2.5 ಕೋಟಿ ರೂಪಾಯಿ ಪ್ರತ್ಯೇಕ ದೇಣಿಗೆಯೂ ಹರಿದುಬಂದಿದೆ.
ಪ್ರಚಾರದ ಕಾರ್ಯಗಳು ತೀವ್ರಗೊಂಡ ವರ್ಷಗಳಲ್ಲೇ ಸಂಸ್ಥೆಯ ಆದಾಯವೂ ಏರಿಕೆ ಕಂಡಿದೆ. ಆದರೆ, ಈ ಭಾರೀ ಮೊತ್ತದ ಹಣ ಎಲ್ಲಿಂದ ಹರಿದುಬರುತ್ತಿದೆ ಎಂಬುದನ್ನು ಈ ದಾಖಲೆಗಳು ಬಹಿರಂಗಪಡಿಸುವುದಿಲ್ಲ. ಮೋದಿಯವರನ್ನು ಪ್ರಶಂಸಿಸುವ ಹತ್ತಾರು ಪುಸ್ತಕಗಳನ್ನು ಮತ್ತು 'ಬ್ರ್ಯಾಂಡ್ ಮೋದಿ'ಯ ಪ್ರಚಾರದ ವಿಷಯಗಳನ್ನು ನಿರಂತರವಾಗಿ ಉತ್ಪಾದಿಸುವ ಈ ಫೌಂಡೇಶನ್‌ಗೆ ಹಣಕಾಸಿನ ನೆರವು ನೀಡುತ್ತಿರುವವರು ಯಾರು ಎಂಬುದೇ ಬ್ಲೂಕ್ರಾಫ್ಟ್‌ನ ಅತಿದೊಡ್ಡ ರಹಸ್ಯವಾಗಿದೆ. ಡಿಸೆಂಬರ್ 2025 ರಲ್ಲಿ ಈ ಸಂಸ್ಥೆಯು ತನ್ನ ಹೆಸರನ್ನು 'ಬ್ಲೂಕ್ರಾಫ್ಟ್ ಫೌಂಡೇಶನ್' ಎಂದು ಸದ್ದಿಲ್ಲದೆ ಬದಲಾಯಿಸಿಕೊಂಡಿತಾದರೂ, ಜೈನ್ ಸಹೋದರರಿಬ್ಬರೂ ಇಂದಿಗೂ ಷೇರುದಾರರಾಗಿ ಮುಂದುವರಿದಿದ್ದಾರೆ.
►ಹಾಗಾದರೆ, ಈ ಹಣದಿಂದ ಏನು ಸಿಗುತ್ತದೆ?
ಸ್ವಯಂಸೇವಕರ ಸೃಷ್ಟಿ
ಮೊದಲನೆಯದಾಗಿ, ಇದು ಜನಸಾಮಾನ್ಯರ ಬೆಂಬಲವಿದೆ ಎಂಬಂತೆ ತೋರುವ ಸುಳ್ಳು ಕಲ್ಪನೆಯನ್ನು ನಿರ್ಮಿಸುತ್ತದೆ.
'ಮೋದಿ ಸ್ಟೋರಿ' ಎಂಬ ವೇದಿಕೆಯು, ನರೇಂದ್ರ ಮೋದಿ ಅವರೊಂದಿಗೆ ಒಡನಾಟ ಹೊಂದಿದ ಜನರಿಂದ ಸಂದರ್ಶನಗಳನ್ನು ಸಂಗ್ರಹಿಸುವ ಒಂದು ಸ್ವಯಂಸೇವಾ ಪ್ರಯತ್ನದಂತೆ ತನ್ನನ್ನು ಬಿಂಬಿಸಿಕೊಳ್ಳುತ್ತದೆ. “ನವ ಭಾರತದ ನಿರ್ಮಾಣ ಎಂದರೆ ಸಾಮಾನ್ಯ ಭಾರತೀಯರು ಒಂದಾಗುವ ಕಥೆ. ಒಬ್ಬ ಮೋದಿಯೇ ದೇಶಕ್ಕೆ ಹೊಸ ವೇಗ ನೀಡಬಲ್ಲರು ಎಂದಾದರೆ, ಅಂತಹ ಸಾವಿರಾರು ಪ್ರೇರಿತ ವ್ಯಕ್ತಿಗಳಿರುವ ದೇಶ ಹೇಗಿರಬಹುದು ಎಂದು ಕಲ್ಪಿಸಿಕೊಳ್ಳಿ” ಎಂದು ಅದರ ವೆಬ್‌ಸೈಟ್ ಘೋಷಿಸುತ್ತದೆ. ಆದರೆ, 'ಮೋದಿ ಸ್ಟೋರಿ' ಯಾವುದೇ ಸ್ವಯಂಪ್ರೇರಿತ ಸಾರ್ವಜನಿಕ ಯೋಜನೆಯಲ್ಲ ಎಂದು ನ್ಯೂಸ್‌ಲಾಂಡ್ರಿ ಪತ್ತೆ ಮಾಡಿದೆ. ಇದು ದಿಲ್ಲಿಯಲ್ಲಿರುವ ಬ್ಲೂಕ್ರಾಫ್ಟ್ ಕಚೇರಿಯಿಂದಲೇ ಕಾರ್ಯನಿರ್ವಹಿಸುತ್ತದೆ, ಅದರ ಸಿಬ್ಬಂದಿಯನ್ನೇ ಹಂಚಿಕೊಳ್ಳುತ್ತದೆ, 'ಇಂಟಿಗ್ರೇಟ್ ಎಮ್ ಪವರ್' ಎಂಬ ಸಂಸ್ಥೆಯ ಅಡಿಯಲ್ಲಿ ನಡೆಯುತ್ತದೆ ಮತ್ತು ಬ್ಲೂಕ್ರಾಫ್ಟ್‌ನ ಸ್ವಂತ ಕಾರ್ಪೊರೇಟ್ ದಾಖಲೆಗಳಲ್ಲಿ ಬಿಜೆಪಿ ನಾಯಕ ಅನೂಪ್ ಆಂಟನಿ ಜೋಸೆಫ್ ಅವರೊಂದಿಗಿನ ವಹಿವಾಟಿಗೆ ಸಂಬಂಧಿಸಿದೆ. ಅಂದರೆ, ಇಲ್ಲಿನ 'ಸ್ವಯಂಸೇವಕರು' ಒಂದು ಸುಸಂಘಟಿತ ಜಾಲದ ಭಾಗವಾಗಿದ್ದಾರೆ.
ಅವರು ಪ್ರಧಾನಿ ಮೋದಿಯವರನ್ನು ಮುಕ್ತಕಂಠದಿಂದ ಪ್ರಶಂಸಿಸುವ ಕಿರು ವಿಡಿಯೊಗಳನ್ನು ಸತತವಾಗಿ ಕ್ರಿಯೇಟ್ ಮಾಡುತ್ತಾರೆ. ಪ್ರತಿಯೊಂದು ವಿಡಿಯೊ ಅತ್ಯಂತ ವೈಯಕ್ತಿಕ ಮತ್ತು ನೈಜವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ – 'ಪರೀಕ್ಷಾ ಪೇ ಚರ್ಚಾ' ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಿದೆ, ಮೋದಿಯವರ ಒಂದು ಸಲಹೆಯು ಅಸ್ಸಾಂನ ಪ್ರವಾಸೋದ್ಯಮವನ್ನು ಹೆಚ್ಚಿಸಿತು, ಉಜ್ವಲ ಯೋಜನೆಯು ಲಕ್ಷಾಂತರ ಮಹಿಳೆಯರನ್ನು ಸಬಲೀಕರಣಗೊಳಿಸಿತು ಮತ್ತು ಅವರು ವೈಯಕ್ತಿಕ ಮಟ್ಟದಲ್ಲಿ ಸಂಪರ್ಕ ಸಾಧಿಸುವ ನಾಯಕ ಎಂಬ ನಿರೂಪಣೆಗಳನ್ನು ಪ್ರಸಾರ ಮಾಡಲಾಗುತ್ತದೆ.
ಈ ವಿಡಿಯೋಗಳಲ್ಲಿ ಭಾರತದ ಹೆಸರಾಂತ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಒಲಿಂಪಿಕ್ಸ್ ಮತ್ತು ಕ್ರೀಡಾಪಟುಗಳಾದ ನೀರಜ್ ಚೋಪ್ರಾ, ಅಭಿನವ್ ಬಿಂದ್ರಾ, ಪಿ.ವಿ. ಸಿಂಧು, ಮನು ಭಾಕರ್, ಮಿಥಾಲಿ ರಾಜ್ ಮತ್ತು ರವೀಂದ್ರ ಜಡೇಜಾ; ಉದ್ಯಮಿಗಳಾದ ಬಾಬಾ ಕಲ್ಯಾಣಿ ಮತ್ತು ಅಪೋಲೋ ಟೈರ್ಸ್‌ನ ಓಂಕಾರ್ ಕನ್ವರ್,ಸಿನಿಮಾರಂಗದ ಜಾಕಿ ಶ್ರಾಫ್, ಆರ್. ಮಾಧವನ್, ನಾಗಾರ್ಜುನ, ಬೋನಿ ಕಪೂರ್, ಮಧುರ್ ಭಂಡಾರ್ಕರ್, ಗಾಯಕ ಕೈಲಾಶ್ ಖೇರ್ ಮತ್ತು ಸಂಗೀತ ನಿರ್ದೇಶಕ ಅನು ಮಲಿಕ್. ಪ್ರತಿಯೊಂದು ವಿಡಿಯೊವನ್ನು ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳು ಮತ್ತು ಆಯಾ ವ್ಯಕ್ತಿಗಳು ಹಂಚಿಕೊಳ್ಳುವ ಮೂಲಕ ಪ್ರಚಾರ ಮಾಡಲಾಗುತ್ತದೆ.
ಇದು ಮೂಲತಃ ಒಂದು ಯೋಜಿತ ಕಂಟೆಂಟ್ ವ್ಯವಸ್ಥೆಯಾಗಿದೆ. ಸಾವಿರಾರು ಜನರು ಸ್ವತಂತ್ರವಾಗಿ ಬಂದು ಮಾತನಾಡುತ್ತಿರುವಂತೆ ಇದು ಹೊರಪ್ರಪಂಚಕ್ಕೆ ಕಾಣಿಸುತ್ತದೆ. (ಇದೇ ರೀತಿಯ ಮತ್ತೊಂದು ವೇದಿಕೆಯಾದ 'ಮೋದಿ ಆರ್ಕೈವ್', ಮೋದಿಯವರ ರಾಜಕೀಯ ಜೀವನದ ಹಳೆಯ ಛಾಯಾಚಿತ್ರಗಳು, ಆಡಿಯೊ ಮತ್ತು ವಿಡಿಯೊಗಳನ್ನು ಸಂಗ್ರಹಿಸಿ ಪ್ರಚಾರ ಮಾಡುವ ಕೆಲಸವನ್ನು ಮಾಡುತ್ತದೆ.)
ಈ ಕಾರ್ಯಾಚರಣೆಗೆ ಸಂಪರ್ಕ ಹೊಂದಿರುವ ಬಿಜೆಪಿ ನಾಯಕ ಅನೂಪ್ ಆಂಟನಿ ಜೋಸೆಫ್ ಅವರು ಈ ಜಾಲದ ಮುಖ್ಯ ಕೊಂಡಿಯಾಗಿದ್ದಾರೆ. 2024 ರಲ್ಲಿ, ಅವರು ದಿಲ್ಲಿಯಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು, ಇದರಲ್ಲಿ ಮೋದಿ ಅವರು ಕೇರಳದ ಕ್ರಿಶ್ಚಿಯನ್ ಧಾರ್ಮಿಕ ನಾಯಕರನ್ನು ಭೇಟಿಯಾಗಿದ್ದರು. ಇದು ಜನಸಂಪರ್ಕ ಮತ್ತು ಪ್ರತಿಷ್ಠೆ ಒಂದಕ್ಕೊಂದು ಬೆಸೆದುಕೊಂಡಿರುವುದಕ್ಕೆ ಉದಾಹರಣೆಯಾಗಿದೆ.
ಬ್ಲೂಕ್ರಾಫ್ಟ್ ಜೊತೆಗಿನ ನಂಟು, ಸ್ವಯಂಸೇವಾ ವೇದಿಕೆ ಎಂಬ ಹೇಳಿಕೆ ಮತ್ತು ದಾಖಲಾದ ವಹಿವಾಟಿನ ಕುರಿತು 'ಮೋದಿ ಸ್ಟೋರಿ', 'ಇಂಟಿಗ್ರೇಟ್ ಎಮ್ ಪವರ್' ಮತ್ತು ಅನೂಪ್ ಆಂಟನಿ ಜೋಸೆಫ್ ಅವರಿಗೆ ‘ನ್ಯೂಸ್‌ಲಾಂಡ್ರಿ’ ಪ್ರಶ್ನಾವಳಿ ಕಳಿಸಿದ್ದು, ಇಲ್ಲಿವರೆಗೆ ಉತ್ತರ ಬಂದಿಲ್ಲ.
►ಕಾರ್ಯಕ್ರಮಗಳ ಪ್ರದರ್ಶನ
ಇದು ಬಹುತೇಕ ಸರ್ಕಾರಿ ಸಮಾರಂಭದ ರೀತಿಯಲ್ಲೇ ತೋರುವ ಭವ್ಯತೆಯನ್ನು ಸೃಷ್ಟಿಸುತ್ತದೆ.
ಬ್ಲೂಕ್ರಾಫ್ಟ್ ಸಂಸ್ಥೆಯು ಮೋದಿ ಪರವಾದ ಹಲವು ಪುಸ್ತಕಗಳ ಪ್ರಮುಖ ಪ್ರಕಾಶಕ ಸಂಸ್ಥೆಯಾಗಿ ಹೊರಹೊಮ್ಮಿದೆ. 'ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ', 'ದಿ ಎಮರ್ಜೆನ್ಸಿ ಡೈರೀಸ್', 'ಎಕ್ಸಾಮ್ ವಾರಿಯರ್ಸ್' (ಸ್ವತಃ ಮೋದಿ ಬರೆದಿರುವುದು), 'ಮನ್ ಕಿ ಬಾತ್@100', '370: ಅಂಡೂಯಿಂಗ್ ದಿ ಅನ್‌ಜಸ್ಟ್', 'ಅಂಬೇಡ್ಕರ್ ಆಂಡ್ ಮೋದಿ' ಇತ್ಯಾದಿ ಪುಸ್ತಕಗಳನ್ನು ಇದು ಪ್ರಕಟಿಸಿದೆ. ಆದರೆ ಇಲ್ಲಿ ಪುಸ್ತಕಗಳಿಗಿಂತ ಹೆಚ್ಚಾಗಿ ಅವುಗಳ ಬಿಡುಗಡೆ ಸಮಾರಂಭಗಳು ಪ್ರಮುಖವೆನಿಸುತ್ತವೆ. ಏಕೆಂದರೆ ಈ ಕಾರ್ಯಕ್ರಮಗಳನ್ನು ಭವ್ಯ ಸರ್ಕಾರಿ ಸಮಾರಂಭಗಳಂತೆ ರೂಪಿಸಲಾಗುತ್ತದೆ.
ಬ್ಲೂಕ್ರಾಫ್ಟ್ ಮತ್ತು ರೂಪಾ ಪಬ್ಲಿಕೇಷನ್ಸ್ ಜಂಟಿಯಾಗಿ ಪ್ರಕಟಿಸಿದ 'ಮೋದಿ@20' ಪುಸ್ತಕವನ್ನು ದಿಲ್ಲಿಯ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿಗಳು ಬಿಡುಗಡೆ ಮಾಡಿದ್ದರು. ಈ ವೇಳೆ ಅಮಿತ್ ಶಾ, ಎಸ್. ಜೈಶಂಕರ್ ಮತ್ತು ಅನುರಾಗ್ ಠಾಕೂರ್ ಉಪಸ್ಥಿತರಿದ್ದರು. ಕರಣ್ ಜೋಹರ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸಭಿಕರ ಸಾಲಲ್ಲಿದ್ದರೆ, ಪಿ.ವಿ. ಸಿಂಧು ಮತ್ತು ಮೇರಿ ಕೋಮ್ ಭಾಗವಹಿಸಿದ್ದರು. ಈ ಸಂಪೂರ್ಣ ಕಾರ್ಯಕ್ರಮವನ್ನು ‘ಸಂಸದ್ ಟಿವಿ’ಯಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಪ್ರಭಾವಿ ವ್ಯಕ್ತಿಗಳನ್ನು ತಲುಪುವ ಉದ್ದೇಶದಿಂದ ಈ ಪುಸ್ತಕದಲ್ಲಿ ಲೇಖನ ಬರೆದ 22 ಲೇಖಕರನ್ನು ಆಯ್ಕೆ ಮಾಡಲಾಗಿತ್ತು . ಅಮಿತ್ ಶಾ ಮತ್ತು ಅಜಿತ್ ದೋವಲ್ ಅವರ ಜೊತೆಗೆ ಸುಧಾ ಮೂರ್ತಿ, ಸದ್ಗುರು, ಉದಯ ಕೋಟಕ್, ನಂದನ್ ನಿಲೇಕಣಿ ಮತ್ತು ದೇವಿ ಶೆಟ್ಟಿ ಇದರಲ್ಲಿ ಸೇರಿದ್ದರು.
'ಮನ್ ಕಿ ಬಾತ್@100' ಪುಸ್ತಕವನ್ನು ಹಿತೇಶ್ ಜೈನ್ ಮತ್ತು ಮಿಶ್ರಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಸ್ತಾಂತರಿಸಿದರು. 'ಮೋದಿ@20' ಮತ್ತು 'ಮನ್ ಕಿ ಬಾತ್@100' ಪುಸ್ತಕಗಳ ಪ್ರತಿಗಳನ್ನು ಪೋಪ್ ಫ್ರಾನ್ಸಿಸ್ ಅವರಿಗೆ ನೀಡಲಾಯಿತು. ಈ ಮೂಲಕ ಖಾಸಗಿ ಫೌಂಡೇಶನ್‌ನ ಉತ್ಪನ್ನವೊಂದಕ್ಕೆ ದೇಶದ ಗಣ್ಯರು ಹಾಗೂ ರಾಜತಾಂತ್ರಿಕ ಮಟ್ಟದ ಅಧಿಕೃತ ಗೌರವ ಸಿಗುವಂತೆ ಮಾಡಲಾಯಿತು.
RSS ನ 'ಆರ್ಗನೈಸರ್' ಪತ್ರಿಕೆಯ ಸಹಾಯಕ ಸಂಪಾದಕರೊಬ್ಬರು ಜಂಟಿಯಾಗಿ ಸಂಪಾದಿಸಿದ 'ಡಬ್ಲಿಂಗ್ ಡ್ರೀಮ್ಸ್: ಟ್ರಾನ್ಸ್‌ಫಾರ್ಮಿಂಗ್ ಅಗ್ರಿಕಲ್ಚರ್ ಇನ್ ಮೋದಿಸ್ ನ್ಯೂ ಇಂಡಿಯಾ' ಪುಸ್ತಕವನ್ನು ಬ್ಲೂಕ್ರಾಫ್ಟ್ ಜಂಟಿಯಾಗಿ ಪ್ರಕಟಿಸಿತು. ಮೋದಿ ಆಡಳಿತದಲ್ಲಿ ರೈತರ ಆದಾಯ ದುಪ್ಪಟ್ಟಾಗಿದೆ ಎಂದು ಈ ಪುಸ್ತಕ ಪ್ರತಿಪಾದಿಸುತ್ತದೆ . ಆದರೆ ಈ ವಾದಕ್ಕೆ ಸೂಕ್ತ ಆಧಾರಗಳಿಲ್ಲ ಎಂದು ಹಲವು ವರದಿಗಳು ತಿಳಿಸಿವೆ. ಇನ್ನೊಂದೆಡೆ, 'ಅಂಬೇಡ್ಕರ್ ಆಂಡ್ ಮೋದಿ' ಪುಸ್ತಕಕ್ಕೆ ಮುನ್ನುಡಿ ಬರೆದಿದ್ದ ಸಂಗೀತ ನಿರ್ದೇಶಕ ಇಳಯರಾಜ ಅವರು, ಬಿ.ಆರ್. ಅಂಬೇಡ್ಕರ್ ಮತ್ತು ಪ್ರಧಾನಿಯವರ ನಡುವೆ ಸಾಮ್ಯತೆಗಳಿವೆ ಎಂದು ಹೇಳಿದ್ದು ರಾಜಕೀಯ ವಾಗ್ದಾಳಿಗೆ ಕಾರಣವಾಗಿತ್ತು.
ಕೆಲವೊಮ್ಮೆ ಈ ವ್ಯವಸ್ಥೆಯ ಲೋಪಗಳು ಕಾಣಿಸಿಕೊಂಡಿವೆ. 2018 ರಲ್ಲಿ 'ಮನ್ ಕಿ ಬಾತ್: ಎ ಸೋಷಿಯಲ್ ರೆವಲ್ಯೂಷನ್ ಆನ್ ರೇಡಿಯೋ' ಪುಸ್ತಕದ ಲೇಖಕ ರಾಜೇಶ್ ಜೈನ್ ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಪತ್ರಿಕಾ ಪ್ರಕಟಣೆ ನೀಡಿತ್ತು. ಆದರೆ ಮಾಜಿ ಬಿಜೆಪಿ ನಾಯಕ ಅರುಣ್ ಶೌರಿ, "ತಾನು ಈ ಪುಸ್ತಕ ಬರೆದಿಲ್ಲ, ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ಓದಿದ್ದಾಗಿ ಜೈನ್ ನನಗೆ ಖಾಸಗಿಯಾಗಿ ಹೇಳಿದ್ದರು" ಎಂದಾಗ ಜೈನ್ ಕೂಡ ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು.
ಬ್ಲೂಕ್ರಾಫ್ಟ್ ಪ್ರಕಟಿಸಿದ ಪುಸ್ತಕಗಳು ಮುಂದೆ ಐಐಎಂ ಅಹಮದಾಬಾದ್, ಐಐಟಿ ಗಾಂಧಿನಗರ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು ಐಎಲ್‌ಎಸ್ ಲಾ ಕಾಲೇಜಿನ ಗ್ರಂಥಾಲಯಗಳನ್ನು ತಲುಪಿದವು. ಜೊತೆಗೆ ನೀತಿ ಆಯೋಗ ಹಾಗೂ 'ಇನ್‌ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆಂಡ್ ಅನಾಲಿಸಿಸ್' ಸಂಸ್ಥೆಗಳಿಗೂ ಸೇರಿದವು. ಅಷ್ಟೇ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯ ಭಾಗವಾಗಿ, ಇಂಟೆಲಿಜೆನ್ಸ್ ಬ್ಯೂರೋ ಮಾದರಿ ಪರೀಕ್ಷೆಯೊಂದರಲ್ಲಿ 'ಅಂಬೇಡ್ಕರ್ ಆಂಡ್ ಮೋದಿ' ಪುಸ್ತಕದ ಪ್ರಕಾಶಕರು ಯಾರು (ಉತ್ತರ: ಬ್ಲೂಕ್ರಾಫ್ಟ್) ಎಂಬ ಪ್ರಶ್ನೆಯನ್ನೂ ಕೇಳಲಾಗಿತ್ತು.
ಯುವಜನರು, ಗಣ್ಯರು ಮತ್ತು ಸಾಕ್ಷ್ಯಚಿತ್ರಗಳ ಸೃಷ್ಟಿ
ಇದು ಹೊಸ ಪೀಳಿಗೆಯ ಆಯ್ಕೆ, ತಾರೆಯರ ಬೆಂಬಲ ಮತ್ತು ಪತ್ರಕರ್ತರ ತನಿಖೆಯಂತೆ ತೋರುವ ವಾತಾವರಣವನ್ನು ನಿರ್ಮಿಸುತ್ತದೆ. ಆದರೆ ಇವೆಲ್ಲವೂ ಒಂದೇ ಕಚೇರಿಯಿಂದ ನಿಯಂತ್ರಿಸಲ್ಪಡುತ್ತಿರುವಂತೆ ಕಂಡುಬರುತ್ತವೆ.
2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಬ್ಲೂಕ್ರಾಫ್ಟ್ ಸಂಸ್ಥೆಯು ಸುಮಾರು 10 ‘ವಿಕಸಿತ್ ಭಾರತ್ ಅಂಬಾಸಿಡರ್’ ಕಾರ್ಯಕ್ರಮಗಳನ್ನು ನಡೆಸಿತು. ಮತದಾನಕ್ಕೆ ಕೆಲವೇ ದಿನಗಳಿರುವಾಗ ಮುಂಬೈ, ದೆಹಲಿ, ವಾರಣಾಸಿ, ಬೆಂಗಳೂರು, ಕೊಯಮತ್ತೂರು ಮತ್ತು ಕೋಲ್ಕತ್ತಾಗಳಲ್ಲಿ ಸುಮಾರು 20 ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. "2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ" ಎಂಬ ವಿಷಯದಡಿ ಪಕ್ಷಾತೀತ ಯುವ ಉತ್ಸವಗಳಂತೆ ಇವುಗಳನ್ನು ಆಯೋಜಿಸಲಾಗಿತ್ತು. ಆದರೆ ಲೋಕಸಭಾ ಚುನಾವಣೆಯ ನಡುವೆಯೇ ನಡೆದ ಈ ಕಾರ್ಯಕ್ರಮಗಳು, ಸಿನಿಮಾತಾರೆಯರು ಸಾವಿರಾರು ಚೊಚ್ಚಲ ಮತದಾರರನ್ನು ಮತಗಟ್ಟೆಗೆ ಬರುವಂತೆ ಪ್ರಚೋದಿಸುವುದರೊಂದಿಗೆ ಕೊನೆಗೊಂಡವು.
ಮೇ 3 ರಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನಡೆದ 'ಯುವ ಸಂವಾದ'ದಲ್ಲಿ ವಿಕ್ರಾಂತ್ ಮಾಸ್ಸೆ ಮತ್ತು ಶ್ರೀ ಶ್ರೀ ರವಿಶಂಕರ್ ಅವರು ಸುಮಾರು 4,000 ಚೊಚ್ಚಲ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಹಿತೇಶ್ ಜೈನ್ ಮತ್ತು ಮಹಾವೀರ್ ಜೈನ್ ಅವರ ಪತ್ನಿ ನೀತು ಜೈನ್ ಅವರು ಅವರೊಂದಿಗೆ ಗಂಗಾ ಆರತಿ ನೆರವೇರಿಸುವುದು ಕಂಡುಬಂದಿತು. ಐದು ದಿನಗಳ ನಂತರ, ದಿಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆದ “ರನ್ ಫಾರ್ ವಿಕಸಿತ್ ಭಾರತ್” ಕಾರ್ಯಕ್ರಮದಲ್ಲಿ ನಟ ರಾಜ್‌ಕುಮಾರ್ ರಾವ್ ಮತ್ತು ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ಸುಮಾರು 80 ಕಾಲೇಜುಗಳ 8,000 ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. “ನಮ್ಮ ದೇಶವನ್ನು ಮುನ್ನಡೆಸಲು ಸಾಧ್ಯವಿರುವ ಎಲ್ಲವನ್ನೂ ನಾವು ಮಾಡುತ್ತೇವೆ, ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕೆಂದು ನಾನು ವೈಯಕ್ತಿಕವಾಗಿ ವಿನಂತಿಸುತ್ತೇನೆ” ಎಂದು ರಾವ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಂಬೈನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವಹಿಸಿದ್ದರು, ಇದರಲ್ಲಿ ಏಕ್ತಾ ಕಪೂರ್, ಸುಭಾಷ್ ಘಾಯ್ ಮತ್ತು ಶೇಖರ್ ಸುಮನ್ ಭಾಗವಹಿಸಿದ್ದರು.
ಎಂಟು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿದ್ದ ರವಿಶಂಕರ್ ಅವರು ವಾರಣಾಸಿಯಲ್ಲಿ ಮಾತನಾಡಿ, “ಯಾವುದೇ ದೇಶದ ಒಬ್ಬೇ ಒಬ್ಬ ರಾಜಕಾರಣಿಯೂ ಇಷ್ಟೊಂದು ಕೆಲಸ ಮಾಡಿಲ್ಲ. ಕೇವಲ 10 ವರ್ಷಗಳಲ್ಲಿ ಭಾರತ ಸಾಧಿಸಿದ ಪ್ರಗತಿ ಕಲ್ಪನೆಗೂ ಮೀರಿದ್ದು” ಎಂದರು. ಬೆಂಗಳೂರಿನಲ್ಲಿ ಬಿಜೆಪಿಯ ರಾಜಕೀಯದ ಕೇಂದ್ರಬಿಂದುವಾಗಿರುವ ದೇವಾಲಯದ ಕುರಿತು ಮಾತನಾಡಿ, “ಹಲವು ವರ್ಷಗಳಿಂದ ರಾಮಮಂದಿರ ವಿಷಯವನ್ನು ಮುಖ್ಯವಾಗಿ ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ನಮ್ಮ ಪ್ರಧಾನಿಯವರು ದೃಢ ನಿರ್ಧಾರ ತೆಗೆದುಕೊಂಡು ಇಷ್ಟೊಂದು ಕಡಿಮೆ ಸಮಯದಲ್ಲಿ ಭವ್ಯ ಮಂದಿರವನ್ನು ನಿರ್ಮಿಸಿದರು” ಎಂದರು. ಈ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಹಿತೇಶ್ ಜೈನ್ ಮತ್ತು ಮಹಾವೀರ್ ಜೈನ್ ಪದೇ ಪದೇ ಕಾಣಿಸಿಕೊಂಡರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿತೇಶ್ ಜೈನ್, ಮೋದಿ ಆಡಳಿತದಲ್ಲಿ “ನಾವು ಮಂದಗತಿಯಿಂದ ಕ್ರಿಯಾಶೀಲರಾಗಿದ್ದೇವೆ. ಜಗತ್ತಿನ ಪ್ರಮುಖ ಐದು ಆರ್ಥಿಕತೆಗಳಲ್ಲಿ ಒಂದಾಗಿದ್ದೇವೆ” ಎಂದು ನೆರೆದಿದ್ದ ಜನರಿಗೆ ಹೇಳಿದರು.
ಸೆಲೆಬ್ರಿಟಿಗಳ ಉತ್ಸಾಹದ ರೂಪದಲ್ಲಿ ಪ್ರಕಟವಾದ ಬೆಂಬಲವನ್ನು ಗಮನಿಸಿ. 'Know The Nation ' ಎಂಬ ಯುಟ್ಯೂಬ್ ಚಾನೆಲ್ ಅನ್ನು ಬ್ಲೂಕ್ರಾಫ್ಟ್ ಸಂಸ್ಥೆಯೇ ನಡೆಸುತ್ತಿದೆ ಎಂದು 'ನ್ಯೂಸ್‌ಲಾಂಡ್ರಿ' ಪತ್ತೆ ಮಾಡಿದೆ (ಆದರೆ ಈ ಚಾನೆಲ್ ಅದನ್ನು ಎಲ್ಲೂ ಬಹಿರಂಗಪಡಿಸುವುದಿಲ್ಲ). 'ಮನ್ ಕಿ ಬಾತ್'ನ 100 ನೇ ಸಂಚಿಕೆಯ ಸಂದರ್ಭದಲ್ಲಿ, ಈ ಫೌಂಡೇಶನ್ ಪ್ರಧಾನಿಯವರನ್ನು ಪ್ರಶಂಸಿಸಲು ಚಲನಚಿತ್ರ ರಂಗದ ಗಣ್ಯರನ್ನು ಒಂದೆಡೆ ಸೇರಿಸಿತ್ತು.
ಆಮಿರ್ ಖಾನ್: “ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೂಲಕ ಪ್ರಧಾನಿಯವರು ಐತಿಹಾಸಿಕ ಕೆಲಸ ಮಾಡಿದ್ದಾರೆ.”
ನಿರ್ಮಾಪಕ ದಿನೇಶ್ ವಿಜನ್: “ಭಾರತವನ್ನು ಒಂದಾಗಿ ಬೆಸೆಯುವ ಅತ್ಯುತ್ತಮ ಪ್ರಧಾನಿ ನಮಗಿದ್ದಾರೆ.”
ವಯಾಕಾಮ್18 ಮಾಜಿ ಮುಖ್ಯಸ್ಥೆ ಮತ್ತು ರಿಲಯನ್ಸ್‌ನ ಪ್ರಸ್ತುತ ಹಿರಿಯ ಅಧಿಕಾರಿಯಾದ ಜ್ಯೋತಿ ದೇಶಪಾಂಡೆ: “ನಮ್ಮ ಪ್ರಧಾನಿಯವರಂತೆ ದೂರದೃಷ್ಟಿಯ ಆಲೋಚನೆಗಳನ್ನು ಹೊಂದಿರುವುದು ಒಂದಾದರೆ, ಅದನ್ನು ಜಾರಿಗೆ ತರುವುದು ಎರಡನೆಯದು.”
ರೋಹಿತ್ ಶೆಟ್ಟಿ: “ಎಲ್ಲರೂ ಆಲಿಸುವಂತಹ ನಾಯಕ ನಮಗೆ ಸಿಕ್ಕಿರುವುದು ನಮ್ಮ ಅದೃಷ್ಟ.”
ಶಾಹಿದ್ ಕಪೂರ್: “ಅದು ಒಬ್ಬ ಮಹಾನ್ ನಾಯಕನ ಲಕ್ಷಣ.”
ಏಕ್ತಾ ಕಪೂರ್: “ಇದು ಅತ್ಯಂತ ಸುಂದರವಾದದ್ದು, ಇದು ನನ್ನ ನೆಚ್ಚಿನ ಕಾರ್ಯಕ್ರಮ.” ಈ ಎಲ್ಲ ವಿಡಿಯೊಗಳನ್ನು ನಂತರ ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳು ಪ್ರಚಾರ ಮಾಡಿದವು.
ನ್ಯೂಸ್‌ಲಾಂಡ್ರಿಯ ವಿಶ್ಲೇಷಣೆಯ ಪ್ರಕಾರ, ಇದೇ ಚಾನೆಲ್‌ನ ಇನ್ನೊಂದು ಭಾಗವು ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತದೆ. “ಒಸಿಸಿಆರ್‌ಪಿ ಮತ್ತು ಸೊರೊಸ್ ಜೊತೆ ಕಾಂಗ್ರೆಸ್ ನಂಟು”, “ಹಿಂಡನ್‌ಬರ್ಗ್ ವರದಿ ಕಾಂಗ್ರೆಸ್ ಟೂಲ್‌ಕಿಟ್ ಹೌದೇ?” ಮತ್ತು “ಇತಿಹಾಸದಲ್ಲಿ ಹೂತುಹೋದ ನೆಹರೂ ಸತ್ಯ” ಎಂಬ ಶೀರ್ಷಿಕೆಗಳು ಅದರ ಸಂಪಾದಕೀಯ ನಿಲುವನ್ನು ಸ್ಪಷ್ಟಪಡಿಸುತ್ತವೆ. ವಿರೋಧ ಪಕ್ಷವೊಂದರ ಬೆಂಬಲಿಗರು ಹೆಚ್ಚಾಗಿ ಪಾಕಿಸ್ತಾನದಲ್ಲಿದ್ದಾರೆ ಎಂಬ ಇತ್ತೀಚಿನ ವಾದವೂ ಸೇರಿದಂತೆ ಕೆಲವು ವಿಷಯಗಳು ಯಾವುದೇ ಆಧಾರವಿಲ್ಲದ ಹೇಳಿಕೆಗಳನ್ನು ಪ್ರಸಾರ ಮಾಡುತ್ತವೆ.
ವಿಮರ್ಶಕರು 'ಪ್ರೊಪಗಂಡಾ' ಎಂದು ಕರೆದ ಕೆಲವು ಚಲನಚಿತ್ರಗಳ ಬಿಡುಗಡೆಯ ಸಮಯದಲ್ಲಿ ಈ ಚಾನೆಲ್ ಸೂಕ್ತ ಸಂದರ್ಶನಗಳನ್ನು ಪ್ರಸಾರ ಮಾಡಿದೆ. 'ಬೆಂಗಾಲ್ ಫೈಲ್ಸ್'ಗಾಗಿ ವಿವೇಕ್ ಅಗ್ನಿಹೋತ್ರಿ, 'ಹಖ್'ಗಾಗಿ ಯಾಮಿ ಗೌತಮ್ ಮತ್ತು 'ಕೇಸರಿ ಚಾಪ್ಟರ್ 2'ಗಾಗಿ ಅಕ್ಷಯ್ ಕುಮಾರ್ ಅವರ ಸಂದರ್ಶನಗಳು ಇದರಲ್ಲಿ ಸೇರಿವೆ.
ಇದೇ ರೀತಿಯ ಲಕ್ಷಣಗಳನ್ನು ಹೊಂದಿರುವ 'ನ್ಯೂ ಇಂಡಿಯಾ ಜಂಕ್ಷನ್' ಎಂಬ ಮತ್ತೊಂದು ವೇದಿಕೆಯು, ಪ್ರಿಯಾಂಕಾ ದೇವ್ ಮತ್ತು ರಿಚಾ ಅನಿರುದ್ಧ್ ಅವರಂತಹ ನಿರೂಪಕರು ನಡೆಸಿಕೊಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. “ಪ್ರಧಾನಿ ಮೋದಿಯವರ ಜನ್ಮದಿನದ ವಿಶೇಷ: ಅವರನ್ನು ಯುಗಪುರುಷನನ್ನಾಗಿ ಮಾಡುವ 10 ವಿಷಯಗಳು” ಮತ್ತು “ದೆಹಲಿ ಬಾಂಬ್ ಸ್ಪೋಟ ವಿವಾದ: ಭಾರತದ ಕುರಿತು ಕಾಂಗ್ರೆಸ್ ಮತ್ತು ಪಾಕಿಸ್ತಾನದ ವಾದಗಳಲ್ಲಿರುವ ಸಾಮ್ಯತೆಗಳು” ಎಂಬ ಶೀರ್ಷಿಕೆಗಳ ಅಡಿಯಲ್ಲಿ ಈ ಕಾರ್ಯಕ್ರಮಗಳು ಮೂಡಿಬಂದಿವೆ.
ಅಂತಿಮವಾಗಿ, ಸ್ವತಂತ್ರ ಮಾಧ್ಯಮ ರೂಪವೆಂದು ಹೇಳಿಕೊಳ್ಳುವ ಸಾಕ್ಷ್ಯಚಿತ್ರಗಳನ್ನು ಗಮನಿಸಿ. ಮೋದಿಯವರ ಕುರಿತಾದ ಪ್ರತಿಯೊಂದು ಸಾಕ್ಷ್ಯಚಿತ್ರವನ್ನೂ ಬ್ಲೂಕ್ರಾಫ್ಟ್‌ಗೆ ಲಿಂಕ್ ಮಾಡಲು ಸಾಧ್ಯವಿಲ್ಲ. ಆದರೆ ಅವುಗಳಲ್ಲಿ ಹಲವು ಬ್ಲೂಕ್ರಾಫ್ಟ್‌ನ ಪ್ರಭಾವವನ್ನು ಹೊಂದಿವೆ. ಅದರ ಪುಸ್ತಕಗಳಿಂದ ಆಯ್ದುಕೊಂಡ ವಿಷಯಗಳು, ಅದರ ವೇದಿಕೆಗಳಿಂದ ಬಂದ ನಿರೂಪಕರು, ಅದರ ಸಿಇಒ ನೀಡಿದ ಪ್ರಚಾರ ಅಥವಾ ಬಾಲಿವುಡ್ ಜಾಲದ ಸಂಪರ್ಕಗಳು ಇವುಗಳಲ್ಲಿ ಕಂಡುಬರುತ್ತವೆ.
ಮೋದಿಯವರ ಬಾಲ್ಯದಿಂದ ಹಿಡಿದು ಅವರ ಬೆಳವಣಿಗೆಯನ್ನು ಬಿಂಬಿಸುವ 'ಹಿಸ್ಟರಿ ಟಿವಿ18'ನ ಐದು ಕಂತುಗಳ 'ಮೋದಿ: ದಿ ಅನ್‌ಟೋಲ್ಡ್ ಸ್ಟೋರಿ' (2023) ಸರಣಿಯು ಬ್ಲೂಕ್ರಾಫ್ಟ್ ಪ್ರಕಟಣೆಗಳ ವಿಷಯಗಳನ್ನೇ ಹೋಲುತ್ತದೆ.
ಅಕ್ಷಯ್ ಕುಮಾರ್ ನಡೆಸಿಕೊಟ್ಟ 'ಸ್ಟ್ಯಾಚ್ಯೂ ಆಫ್ ಯೂನಿಟಿ: ಏಕತಾ ಕಾ ಪ್ರತೀಕ್' ಸಾಕ್ಷ್ಯಚಿತ್ರವನ್ನು ಆನಂದ್ ಎಲ್. ರಾಯ್ ನಿರ್ದೇಶಿಸಿದ್ದರು. ಇವರು ಪ್ರಪೋಸರ್ ಮಹಾವೀರ್ ಜೈನ್ ಅವರೊಂದಿಗೆ ಸೇರಿ ಮೋದಿಯವರ ಬಾಲ್ಯದ ಕುರಿತಾದ 'ಚಲೋ ಜೀತೆ ಹೈ' ಚಿತ್ರವನ್ನು ನಿರ್ಮಿಸಿದ್ದರು.
ಬ್ಲೂಕ್ರಾಫ್ಟ್ ಪ್ರಕಟಿಸಿದ ಪುಸ್ತಕಗಳು ಮತ್ತು ಪ್ರಚಾರ ಅಭಿಯಾನಗಳನ್ನೇ ಆಧರಿಸಿ ನಿರ್ಮಿಸಲಾದ 'ಮನ್ ಕಿ ಬಾತ್: ಭಾರತ್ ಕಿ ಬಾತ್' ಕಾರ್ಯಕ್ರಮವನ್ನು ಮನೋಜ್ ಮುಂತಶಿರ್ ಶುಕ್ಲಾ ನಡೆಸಿಕೊಟ್ಟಿದ್ದರು. ಇವರು ಬ್ಲೂಕ್ರಾಫ್ಟ್ ಬೆಂಬಲಿತ 'ಮೇರಾ ದೇಶ್ ಪೆಹ್ಲೆ' ಸಂಗೀತ ಕಾರ್ಯಕ್ರಮದ ಗೀತರಚನೆಕಾರರಾಗಿದ್ದಾರೆ.
ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಿದ ಕಾರ್ಯಾಚರಣೆಯ ಕುರಿತ 'ದಿ ಎವಾಕ್ಯುಯೇಷನ್: ಆಪರೇಷನ್ ಗಂಗಾ' ಸಾಕ್ಷ್ಯಚಿತ್ರವನ್ನು ಅಖಿಲೇಶ್ ಮಿಶ್ರಾ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದರು. 'ಜಲ್ ಧಾರಾ: ಹರ್ ಘರ್ ಜಲ್' ಕಾರ್ಯಕ್ರಮವನ್ನು ನ್ಯೂ ಇಂಡಿಯಾ ಜಂಕ್ಷನ್‌ನ ನಿರೂಪಕಿ ರಿಚಾ ಅನಿರುದ್ಧ್ ನಡೆಸಿಕೊಟ್ಟಿದ್ದರು. ಅದೇ ರೀತಿ ದೂರದರ್ಶನದ 'ಧರೋಹರ್ ಭಾರತ್ ಕಿ' ಕಾರ್ಯಕ್ರಮಕ್ಕೂ ಮಿಶ್ರಾ ಪ್ರಚಾರ ನೀಡಿದ್ದರು.
'ಧರೋಹರ್ ಭಾರತ್ ಕಿ' ಕಾರ್ಯಕ್ರಮವು ಸರ್ಕಾರಿ ವಾಹಿನಿ ದೂರದರ್ಶನದಲ್ಲಿ ಪ್ರಸಾರವಾದರೆ, ಇತರ ಸಾಕ್ಷ್ಯಚಿತ್ರಗಳು 'ಹಿಸ್ಟರಿ ಟಿವಿ18'ನಲ್ಲಿ ಪ್ರಸಾರವಾದವು.
ಇವುಗಳಲ್ಲಿ ಕನಿಷ್ಠ ಎರಡು ಸಾಕ್ಷ್ಯಚಿತ್ರಗಳನ್ನು ಪ್ರಧಾನಿಯವರು ತಮ್ಮ ಅಧಿಕೃತ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ: 'ಸ್ಟ್ಯಾಚ್ಯೂ ಆಫ್ ಯೂನಿಟಿ' ಮತ್ತು 'ದಿ ಎವಾಕ್ಯುಯೇಷನ್: ಆಪರೇಷನ್ ಗಂಗಾ'. ಈ ಆರರಲ್ಲಿ ಕನಿಷ್ಠ ನಾಲ್ಕು ಸಾಕ್ಷ್ಯಚಿತ್ರಗಳನ್ನು ಬಿಜೆಪಿಯ ಅಧಿಕೃತ ಖಾತೆಗಳು ಹಾಗೂ ಅಮಿತ್ ಶಾ ಮತ್ತು ಪಿಯೂಷ್ ಗೋಯಲ್ ಅವರಂತಹ ಹಿರಿಯ ನಾಯಕರು ಪ್ರಚಾರ ಮಾಡಿದ್ದಾರೆ. ಇನ್ನು ಕನಿಷ್ಠ ಮೂರು ಕಾರ್ಯಕ್ರಮಗಳನ್ನು ಅಖಿಲೇಶ್ ಮಿಶ್ರಾ ಆನ್‌ಲೈನ್‌ನಲ್ಲಿ ಪ್ರಚಾರ ಮಾಡಿದ್ದಾರೆ.
ಇವುಗಳಲ್ಲಿ ಕೆಲವು ಕಾರ್ಯಕ್ರಮಗಳಿಗೆ ಪಿಐಬಿ ಮತ್ತು ಆಲ್ ಇಂಡಿಯಾ ರೇಡಿಯೋನಂತಹ ಸರ್ಕಾರಿ ಸಂಸ್ಥೆಗಳು ಮತ್ತಷ್ಟು ಪ್ರಚಾರ ನೀಡಿವೆ.
ಈ ಸಾಕ್ಷ್ಯಚಿತ್ರಗಳ ಮಂಜೂರಾತಿ ಮತ್ತು ಧನಸಹಾಯದ ವಿವರಗಳನ್ನು ಕೋರಿ 'ನ್ಯೂಸ್‌ಲಾಂಡ್ರಿ' ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಪ್ರಸಾರ ಭಾರತಿಗೆ ಅರ್ಜಿ ಸಲ್ಲಿಸಿತ್ತು. ಆದರೆ ಎರಡೂ ಸಂಸ್ಥೆಗಳು ಮಾಹಿತಿ ನೀಡಲು ನಿರಾಕರಿಸಿವೆ.
ಕಂಪನಿ ವ್ಯವಹಾರಗಳ ಸಚಿವಾಲಯದ ದಾಖಲೆಗಳ ಪ್ರಕಾರ, ನೆಟ್‌ವರ್ಕ್18 ನ ಅಂಗಸಂಸ್ಥೆಯಾದ ಕೊಲೊಸಿಯಮ್ ಮೀಡಿಯಾ, 2023-24ರಲ್ಲಿ ಈ ನಾಲ್ಕು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿತ್ತು. ಹಲವು ವರ್ಷಗಳ ಕಾಲ 'ರೋಡೀಸ್' ಮತ್ತು 'ಸ್ಪ್ಲಿಟ್ಸ್‌ವಿಲ್ಲಾ' ನಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಈ ಸಂಸ್ಥೆಯು, ಅದೇ ವರ್ಷ 71.80 ಕೋಟಿ ರೂಪಾಯಿಗಳ ಸಾರ್ವಕಾಲಿಕ ಗರಿಷ್ಠ ಆದಾಯವನ್ನು ಗಳಿಸಿತು. ಆದರೆ ಈ ಸಮಯದ ಹೊಂದಾಣಿಕೆಯು ಆದಾಯ ಹೆಚ್ಚಳಕ್ಕೆ ಇದೇ ಕಾರಣ ಎಂದು ಖಚಿತಪಡಿಸುವುದಿಲ್ಲ.
ಬ್ಲೂಕ್ರಾಫ್ಟ್‌ನೊಂದಿಗೆ ಯಾವುದೇ ನೇರ ಸಂಪರ್ಕವಿಲ್ಲದ ಅನುಪಮ್ ಖೇರ್ ಸ್ಟುಡಿಯೋಗೂ ಇದು ಅನ್ವಯಿಸುತ್ತದೆ. 2018-19 ಅಥವಾ 2019-20ರಲ್ಲಿ ಯಾವುದೇ ಆದಾಯವನ್ನು ವರದಿ ಮಾಡದಿದ್ದ ಈ ಸಂಸ್ಥೆಯು, 2022-23ರ ವೇಳೆಗೆ 8 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಗಳಿಸಿತು. ಅದೇ ವರ್ಷದಲ್ಲಿ ಈ ಸಂಸ್ಥೆಯು 'ಲಾಲ್ ಕಿಲೇ ಸೇ ಗೂಂಜ್ — ನೆಹರೂ ಸೇ ಮೋದಿ ತಕ್' ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿತ್ತು. ಇದು ಮೋದಿ ಅವರ ಬಗ್ಗೆ ಪ್ರಶಂಸನೀಯ ಹಾಗೂ ನೆಹರೂ ಮತ್ತು ಇಂದಿರಾ ಗಾಂಧಿಯವರ ಕುರಿತು ಟೀಕಿಸುವ ನಿಲುವನ್ನು ಹೊಂದಿತ್ತು.
ಈ ಸಾಕ್ಷ್ಯಚಿತ್ರಗಳ ಮಂಜೂರಾತಿ, ಧನಸಹಾಯ, ಸಂಪಾದಕೀಯ ನಿಯಂತ್ರಣ ಮತ್ತು ಬ್ಲೂಕ್ರಾಫ್ಟ್‌ನ ಪಾತ್ರದ ಕುರಿತು ಕೊಲೊಸಿಯಮ್ ಮೀಡಿಯಾ, ನೆಟ್‌ವರ್ಕ್18, ಅನುಪಮ್ ಖೇರ್ ಸ್ಟುಡಿಯೋ ಹಾಗೂ ಸಂಬಂಧಿತ ನಿರ್ಮಾಪಕರಿಗೆ ಪ್ರಶ್ನೆಗಳನ್ನು ಕಳುಹಿಸಲಾಗಿತ್ತು. ಅನುಪಮ್ ಖೇರ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
►ಬಾಲಿವುಡ್‌ಗೆ ಸಂಪರ್ಕ ಕೊಂಡಿ
ಈ ಎಲ್ಲ ಬೆಳವಣಿಗೆಗಳು ಚಲನಚಿತ್ರ ರಂಗದಲ್ಲಿ ಒಂದಾಗುತ್ತವೆ ಮತ್ತು ಈ ಪ್ರಕ್ರಿಯೆಯ ಹಿಂದೆ ನಿರಂತರವಾಗಿ ಒಬ್ಬರೇ ನಿರೂಪಕರು ಕಾಣಿಸಿಕೊಳ್ಳುತ್ತಾರೆ.
ಉದಾಹರಣೆಗೆ, ಅಕ್ಟೋಬರ್ 2019 ರಲ್ಲಿ ಶಾರುಖ್ ಖಾನ್, ಆಮಿರ್ ಖಾನ್, ರಾಜ್‌ಕುಮಾರ್ ಹಿರಾನಿ, ಬೋನಿ ಕಪೂರ್, ಕಂಗನಾ ರಣಾವತ್, ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಹಲವು ಗಣ್ಯರು ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಸಭೆ ಸೇರಿದ್ದರು. ಈ ವೇಳೆ ತಾರೆಯರ ಅಭಿಪ್ರಾಯಗಳನ್ನು ಚಿತ್ರೀಕರಿಸಲು ಬ್ಲೂಕ್ರಾಫ್ಟ್‌ನ 'ನ್ಯೂ ಇಂಡಿಯಾ ಜಂಕ್ಷನ್'ಗೆ ಪ್ರವೇಶ ನೀಡಲಾಗಿತ್ತು. ನಿರೂಪಕಿ ಪ್ರಿಯಾಂಕಾ ದೇವ್ ಕಾರ್ಯಕ್ರಮ ನಡೆಸಿಕೊಟ್ಟರೆ, ಹಿತೇಶ್ ಜೈನ್ ಮತ್ತು ನಿರ್ಮಾಪಕ ಮಹಾವೀರ್ ಜೈನ್ ಅವರು ಮೋದಿ ಅವರ ವಿಶೇಷ ಕರ್ತವ್ಯಾಧಿಕಾರಿ (OSD) ಹಿರೇನ್ ಜೋಶಿ ಅವರೊಂದಿಗೆ ಉಪಸ್ಥಿತರಿದ್ದರು. ನಂತರ ನ್ಯೂ ಇಂಡಿಯಾ ಜಂಕ್ಷನ್ ಪ್ರಸಾರ ಮಾಡಿದ ಜಾಕ್ವೆಲಿನ್ ಫರ್ನಾಂಡಿಸ್, ರಾಜ್‌ಕುಮಾರ್ ಹಿರಾನಿ, ಅನುರಾಗ್ ಬಸು, ಆನಂದ್ ಎಲ್. ರಾಯ್ ಮುಂತಾದವರ ಸಂದರ್ಶನಗಳು ನಿರೀಕ್ಷೆಯಂತೆಯೇ ಪ್ರಶಂಸಾಪೂರ್ವಕವಾಗಿದ್ದವು.
2025 ರಲ್ಲಿ 'ಮೇರಾ ದೇಶ್ ಪೆಹ್ಲೆ – ದಿ ಅನ್‌ಟೋಲ್ಡ್ ಸ್ಟೋರಿ ಆಫ್ ನರೇಂದ್ರ ಮೋದಿ' ಎಂಬ ಸಂಗೀತ ರೂಪಕ ಪ್ರದರ್ಶನಗೊಂಡಿತು. ಗೀತರಚನೆಕಾರ ಮನೋಜ್ ಮುಂತಶಿರ್ ಶುಕ್ಲಾ ಅವರಿಗೆ ಸೇರಿದ್ದ ಈ ಕಾರ್ಯಕ್ರಮವು ಮುಂಬೈ, ದೆಹಲಿ, ಹೈದರಾಬಾದ್, ಗಾಂಧಿನಗರ ಮತ್ತು ಪಾಟ್ನಾಗಳಲ್ಲಿ ನಡೆಯಿತು. ಮೋದಿ ಅವರ ಬಾಲ್ಯ, ವಡನಗರದ ವಿದ್ಯಾರ್ಥಿ ಜೀವನ, ಸೋಮನಾಥ-ಅಯೋಧ್ಯೆ ರಥಯಾತ್ರೆ, ಕಾಶ್ಮೀರದ ಏಕತಾ ಯಾತ್ರೆ, ತುರ್ತು ಪರಿಸ್ಥಿತಿ ಮತ್ತು ರಾಮಮಂದಿರ ನಿರ್ಮಾಣದಂತಹ ಘಟನೆಗಳನ್ನು ಇಲ್ಲಿ ಮರುಸೃಷ್ಟಿಸಲಾಯಿತು. ಮುಖ್ಯಮಂತ್ರಿಗಳು, ಕೇಂದ್ರ ಸಚಿವರ ಜೊತೆಗೆ ಅಕ್ಷಯ್ ಕುಮಾರ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಜಾನ್ವಿ ಕಪೂರ್, ಟೈಗರ್ ಶ್ರಾಫ್, ರವೀನಾ ಟಂಡನ್, ಅರ್ಜುನ್ ಕಪೂರ್ ಹಾಗೂ ಮುಕೇಶ್ ಮತ್ತು ಅನಂತ್ ಅಂಬಾನಿ ಮುಂಭಾಗದ ಸಾಲಿನಲ್ಲಿ ಉಪಸ್ಥಿತರಿದ್ದರು. ಈ ವೇಳೆ ತಾರೆಯರು ನೀಡಿದ ಹೇಳಿಕೆಗಳನ್ನು ಬಿಜೆಪಿಯ ಅಧಿಕೃತ ಖಾತೆಗಳು ಹಂಚಿಕೊಂಡವು.
ರವೀನಾ ಟಂಡನ್: “ಪ್ರಪಂಚವು ಇಂತಹ ನಾಯಕನನ್ನು ನೋಡಿಲ್ಲ.”
ಶಫಾಲಿ ಶಾ: “ಪ್ರಧಾನಿ ಮೋದಿ ಬಗ್ಗೆ ಹೇಳಲು ಪದಗಳು ಸಾಲವು. ಅವರ ಪಾರದರ್ಶಕತೆಯೇ ಅವರ ದೊಡ್ಡ ಗುಣ.”
ಜಾಕಿ ಭಗ್ನಾನಿ: “ಅವರು ನಮ್ಮ ಪ್ರಧಾನಿಯಾಗಿರುವುದಕ್ಕೆ ನಾನು ಭಾರತೀಯನಾಗಿ ಧನ್ಯ.”
ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್: “ಇಂತಹ ಪ್ರಭಾವಿ ನಾಯಕನನ್ನು ಹೊಂದಲು ಕೆಲವು ದೇಶಗಳು ಮಾತ್ರ ಅದೃಷ್ಟ ಮಾಡಿರುತ್ತವೆ.”
ಜೆ.ಪಿ. ನಡ್ಡಾ, ಜಿ. ಕಿಶನ್ ರೆಡ್ಡಿ ಮತ್ತು ಅಮಿತ್ ಮಾಳವೀಯ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಈ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಪ್ರಚಾರ ಮಾಡಿದರು.
ಈ ಕಾರ್ಯಕ್ರಮದ ಶ್ರೇಯಸ್ಸು ಬಹಿರಂಗವಾಗಿ ಶುಕ್ಲಾ ಅವರಿಗೆ ಸಲ್ಲಿಕೆಯಾಗಿದ್ದರೂ, ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ದೀಪ ಬೆಳಗಿಸುವುದರಿಂದ ಹಿಡಿದು, ಹೈದರಾಬಾದ್‌ನಲ್ಲಿ ವೆಂಕಯ್ಯ ನಾಯ್ಡು ಮತ್ತು ಜಿ. ಕಿಶನ್ ರೆಡ್ಡಿ ಅವರೊಂದಿಗೆ, ಪಾಟ್ನಾದಲ್ಲಿ ಉಪಮುಖ್ಯಮಂತ್ರಿಗಳಾದ ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಅವರೊಂದಿಗೆ, ದೆಹಲಿಯಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಪಕ್ಕದ ಸಾಲಿನಲ್ಲಿ ಹಾಗೂ ಗಾಂಧಿನಗರದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಹಿತೇಶ್ ಜೈನ್ ಪ್ರತಿಯೊಂದು ವೇದಿಕೆಯಲ್ಲೂ ಕಾಣಿಸಿಕೊಂಡರು. ಪ್ರತಿಯೊಂದು ಸ್ಥಳದಲ್ಲೂ ಅವರ ಉಪಸ್ಥಿತಿ ಮತ್ತು ವಡನಗರದಿಂದ ಪಿಎಂಒವರೆಗಿನ ಕಥಾಹಂದರವು ಬ್ಲೂಕ್ರಾಫ್ಟ್‌ನ ಪುಸ್ತಕಗಳನ್ನು ನಿಕಟವಾಗಿ ಹೋಲುತ್ತದೆ. ಇದನ್ನು ಗಮನಿಸಿದರೆ, ಇದು ಸ್ವತಂತ್ರ ನಿರ್ಮಾಣಕ್ಕಿಂತ ಹೆಚ್ಚಾಗಿ ಸಂಸ್ಥೆಯ ಪ್ರಚಾರದ ಭಾಗವಾಗಿದೆ ಎಂದು 'ನ್ಯೂಸ್‌ಲಾಂಡ್ರಿ' ವಿಶ್ಲೇಷಿಸಿದೆ.
ಸ್ವಯಂಸೇವಕರಂತೆ ನಟಿಸುವ ಉದ್ಯೋಗಿಗಳು, ಉತ್ಪಾದನಾ ಬಿಡುಗಡೆಯಂತೆ ಕಾಣುವ ಸರ್ಕಾರಿ ಸಮಾರಂಭಗಳು, ಚುನಾವಣಾ ಸಮಯದಲ್ಲಿ ನಡೆಯುವ ಯುವ ಉತ್ಸವಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಬದಿಗೊತ್ತಿ ನೋಡಿದಾಗಲೂ, ಈ ಪ್ರಕರಣದ ಮುಖ್ಯ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಈ ಎಲ್ಲಾ ಪ್ರಚಾರ ಯಂತ್ರದ ಹಿಂದಿರುವ ವ್ಯಕ್ತಿ ಯಾರು ಎಂಬುದು ತಿಳಿಯುತ್ತದೆಯಾದರೂ, ಇದಕ್ಕೆ ಧನಸಹಾಯ ನೀಡುತ್ತಿರುವವರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನ್ಯೂಸ್‌ಲಾಂಡ್ರಿ ಸಂಸ್ಥೆಯು ಬ್ಲೂಕ್ರಾಫ್ಟ್ ಫೌಂಡೇಶನ್, ಹಿತೇಶ್ ಜೈನ್, ರಾಜೇಶ್ ಜೈನ್ ಮತ್ತು ಅಖಿಲೇಶ್ ಮಿಶ್ರಾ ಅವರಿಗೆ ಸುದೀರ್ಘ ಪ್ರಶ್ನಾವಳಿಯನ್ನು ಕಳುಹಿಸಿದೆ. ಜೊತೆಗೆ ಈ ವರದಿಯಲ್ಲಿ ಹೆಸರಿಸಲಾದ ಇತರ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದಲೂ ಪ್ರತಿಕ್ರಿಯೆ ಕೋರಿದೆ. ಆದರೆ ವರದಿ ಪ್ರಕಟವಾಗುವವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಸರಣಿಯ ಮೊದಲನೇ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ. ಎರಡನೇ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ
ಕೃಪೆ: newslaundry.com