×
Ad

1947 ರಿಂದ ಜಾಗತಿಕ ಸಂಘರ್ಷಗಳ ಬಗ್ಗೆ ಭಾರತದ ನಿಲುವು ಹೇಗಿತ್ತು? ಹೇಗಿದೆ?

Update: 2026-01-05 23:44 IST

Photo:x

ಜನವರಿ 3ರಂದು ವೆನೆಝುವೆಲಾದ ಮೇಲೆ ಅಮೆರಿಕ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ತೆಗೆದುಕೊಂಡಿತ್ತು. ವೆನೆಝುವೆಲಾದ ಪರಿಸ್ಥಿತಿ ಬಗ್ಗೆ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ಬೆಂಬಲ ನೀಡುವುದಾಗಿ ಹೇಳಿದೆ. ವೆನೆಝುವೆಲಾದ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮಾತುಕತೆಯ ಮೂಲಕ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಎಲ್ಲರಿಗೆ ಕರೆ ನೀಡಿದೆ. ಕರಾಕಸ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಸಾಧ್ಯವಿರುವ ಎಲ್ಲ ನೆರವುಗಳನ್ನು ಒದಗಿಸಲಾಗಿದೆ ಎಂದು ಎಂಇಎ ಹೇಳಿದೆ.

ಈ ನಡುವೆ ಕಾಂಗ್ರೆಸ್ ಮತ್ತು ಸಿಪಿಎಂ, ವೆನೆಝುವೆಲಾದಲ್ಲಿನ ಬೆಳವಣಿಗೆಗಳಿಗೆ ನರೇಂದ್ರ ಮೋದಿ ಸರ್ಕಾರ ನೀಡಿರುವ ಪ್ರತಿಕ್ರಿಯೆಯನ್ನು ಟೀಕಿಸಿದ್ದು, ಸರ್ಕಾರದ ಹೇಳಿಕೆಯಲ್ಲಿ ಅಮೆರಿಕದ ಹೆಸರನ್ನು ಏಕೆ ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿವೆ.

1947ರಲ್ಲಿ ದೇಶವು ಸ್ವಾತಂತ್ರ್ಯ ಪಡೆದಾಗಿನಿಂದ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಯುದ್ಧಗಳು ಮತ್ತು ಸಂಘರ್ಷಗಳ ಕುರಿತು ಭಾರತದ ನಿಲುವು ಏನಿತ್ತು ಎಂಬುದನ್ನು ಅರಿಯಲು, ಹಿಂದಿನ ಯುದ್ಧಗಳ ಸಮಯದಲ್ಲಿ ಭಾರತ ಹೇಗೆ ಪ್ರತಿಕ್ರಿಯಿಸಿತ್ತು ಎಂಬುದನ್ನು ಗಮನಿಸಬೇಕಾಗುತ್ತದೆ.

►1950ರ ದಶಕ

1950ರಲ್ಲಿ ಕೊರಿಯನ್ ಯುದ್ಧ ಆರಂಭವಾದಾಗ, ಭಾರತವು ಉತ್ತರ ಕೊರಿಯಾದ ಆಕ್ರಮಣವನ್ನು ಖಂಡಿಸಿತು ಮತ್ತು ಸುಮಾರು 2 ಲಕ್ಷ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ತಂಡವನ್ನು ನಿಯೋಜಿಸಿತು. ಕೊರಿಯನ್ ಯುದ್ಧಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತದ ಪಾತ್ರ ಗಮನಾರ್ಹವಾಗಿತ್ತು.

1956ರ ಸೂಯೆಜ್ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತವು ಇಸ್ರೇಲ್, ಯುಕೆ ಮತ್ತು ಫ್ರಾನ್ಸ್ ವಿರುದ್ಧ ಈಜಿಪ್ಟ್ ಅನ್ನು ಬೆಂಬಲಿಸಿ, ವಿದೇಶಿ ಪಡೆಗಳು ಹಿಂತೆಗೆದುಕೊಳ್ಳಬೇಕೆಂದು ಪ್ರತಿಪಾದಿಸಿತು. ಅದೇ ವರ್ಷ, ಸೋವಿಯತ್ ಪಡೆಗಳು ಹಂಗೇರಿಯನ್ನು ತೊರೆಯಬೇಕೆಂದು ಕರೆ ನೀಡಿತು. ಈ ಸಂದರ್ಭದಲ್ಲಿ ಭಾರತ ಮಾನವೀಯ ನೆರವನ್ನೂ ಒದಗಿಸಿತು.

►1960–1970ರ ದಶಕ

1967ರ ಆರು ದಿನಗಳ ಯುದ್ಧ ಮತ್ತು 1973ರ ಯೋಮ್ ಕಿಪ್ಪೂರ್ ಯುದ್ಧದಲ್ಲಿ ಭಾರತವು ಅರಬ್ ರಾಷ್ಟ್ರಗಳನ್ನು ದೃಢವಾಗಿ ಬೆಂಬಲಿಸಿತು. ಇದು ಅದರ ಅಲಿಪ್ತ ಚಳವಳಿ (NAM) ಒಗ್ಗಟ್ಟು ಹಾಗೂ ವಸಾಹತುಶಾಹಿ ವಿರೋಧಿ ನಿಲುವನ್ನು ಪ್ರತಿಬಿಂಬಿಸುತ್ತದೆ.

ವಿಯೆಟ್ನಾಂ ಯುದ್ಧದ ಸಮಯದಲ್ಲಿ (1955–1975) ಭಾರತ ತನ್ನ ಟೀಕೆಯನ್ನು ಅಮೆರಿಕದವರೆಗೆ ವಿಸ್ತರಿಸಿತು. 1975ರಲ್ಲಿ ಏಕೀಕೃತ ವಿಯೆಟ್ನಾಂ ರೂಪುಗೊಂಡಿತು. 1979ರಲ್ಲಿ ವಿಯೆಟ್ನಾಂ ಮೇಲೆ ಚೀನಾದ ಆಕ್ರಮಣ ನಡೆದಾಗ, ಆಗಿನ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ ಅವರ ಬೀಜಿಂಗ್ ಭೇಟಿಯನ್ನು ಮೊಟಕುಗೊಳಿಸಲಾಯಿತು.

ಆದರೆ 1979ರ ಸೋವಿಯತ್ ಅಫ್ಘಾನಿಸ್ತಾನ ಆಕ್ರಮಣದ ಕುರಿತು ಭಾರತದ ಪ್ರತಿಕ್ರಿಯೆ ತೀವ್ರವಾಗಿರಲಿಲ್ಲ. ಯುಎಸ್–ಪಾಕಿಸ್ತಾನ ನಡುವೆ ಹೆಚ್ಚು ಹೊಂದಾಣಿಕೆ ಉಂಟಾಗಿದ್ದ ಕಾಲಘಟ್ಟದಲ್ಲಿ ಮಾಸ್ಕೋ ವಿರುದ್ಧ ಭಾರತ ನೇರ ಖಂಡನೆ ವ್ಯಕ್ತಪಡಿಸಲಿಲ್ಲ. 1971ರ ಬಾಂಗ್ಲಾದೇಶ ಯುದ್ಧದಲ್ಲಿ ಭಾರತವನ್ನು ಬೆಂಬಲಿಸುವಲ್ಲಿ ಸೋವಿಯತ್ ಒಕ್ಕೂಟ ಪ್ರಮುಖ ಪಾತ್ರ ವಹಿಸಿದ್ದುದೂ ಇದಕ್ಕೆ ಕಾರಣವಾಗಿತ್ತು.

ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಚೀನಾದ ಖಂಡನೆಯಿಂದ ಭಿನ್ನವಾಗಿ, ಕಾಂಬೋಡಿಯಾದಲ್ಲಿ ಖಮೇರ್ ರೂಜ್ ಆಳ್ವಿಕೆಯನ್ನು ಕೊನೆಗೊಳಿಸಲು ವಿಯೆಟ್ನಾಂ ನಡೆಸಿದ ಆಕ್ರಮಣವನ್ನು (1979–1989) ಭಾರತ ಬೆಂಬಲಿಸಿತು.

►1980–1990ರ ದಶಕ

1980–1988ರ ಇರಾಕ್–ಇರಾನ್ ಯುದ್ಧದಲ್ಲಿ ಭಾರತವು ಎರಡೂ ದೇಶಗಳನ್ನು ಖಂಡಿಸದೆ ಕದನ ವಿರಾಮಕ್ಕೆ ಒತ್ತಾಯಿಸಿತು. 1982ರ ಫಾಕ್ಲ್ಯಾಂಡ್ಸ್ ಯುದ್ಧದ ವೇಳೆ ಅರ್ಜೆಂಟೀನಾ ಮತ್ತು ಯುಕೆ ನಡುವೆ ಶಾಂತಿಯುತ ಮಾತುಕತೆ ನಡೆಸುವಂತೆ ಕರೆ ನೀಡಿತು.

1982ರಲ್ಲಿ ಇಸ್ರೇಲ್ ನಡೆಸಿದ ಲೆಬನಾನ್ ಆಕ್ರಮಣ ಹಾಗೂ ಗ್ರೆನಡಾ (1983) ಮತ್ತು ಪನಾಮಾ (1989)ಗಳಲ್ಲಿ ಅಮೆರಿಕ ನಡೆಸಿದ ಹಸ್ತಕ್ಷೇಪಗಳನ್ನು ಭಾರತ ತೀವ್ರವಾಗಿ ಟೀಕಿಸಿತು. ಇದು ಅಲಿಪ್ತ ಚಳವಳಿ ತತ್ವಗಳಿಗೆ ಅನುಗುಣವಾಗಿತ್ತು.

1991ರ ಕೊಲ್ಲಿ ಯುದ್ಧದ ಸಂದರ್ಭದಲ್ಲಿ, ಭಾರತವು ಇರಾಕ್ ಕುವೈತ್‌ ನಿಂದ ಹಿಂದೆ ಸರಿಯಬೇಕೆಂದು ಕರೆ ನೀಡಿ, ತನ್ನ ಪ್ರಜೆಗಳ ಸ್ಥಳಾಂತರದ ಮೇಲೆ ಹೆಚ್ಚಿನ ಗಮನ ಹರಿಸಿತು.

►2000ರ ದಶಕ

2000ರ ನಂತರ ಭಾರತ ತನ್ನ ವಿದೇಶಾಂಗ ನಿಲುವಿನಲ್ಲಿ ಹೊಸ ಚಲನಶೀಲತೆಯನ್ನು ಅಳವಡಿಸಿಕೊಂಡಿತು. 2001ರಲ್ಲಿ 9/11 ದಾಳಿಯ ನಂತರ ಅಫ್ಘಾನಿಸ್ತಾನ ಆಕ್ರಮಣದ ಸಂದರ್ಭದಲ್ಲಿ ಭಾರತ ಅಮೆರಿಕವನ್ನು ಬೆಂಬಲಿಸಿತು. ಆದರೆ 2003ರ ಇರಾಕ್ ಆಕ್ರಮಣಕ್ಕೆ ಸೈನ್ಯ ಕಳುಹಿಸುವುದನ್ನು ನಿರಾಕರಿಸಿತು. ಈ ಸಂದರ್ಭದಲ್ಲಿ ಭಾರತವು ರಾಷ್ಟ್ರದ ಸಾರ್ವಭೌಮತ್ವ ಮತ್ತು ವಿಶ್ವಸಂಸ್ಥೆಯ ಆದೇಶಗಳ ಮಹತ್ವವನ್ನು ಒತ್ತಿಹೇಳಿತು.

2008ರ ರಷ್ಯಾ–ಜಾರ್ಜಿಯಾ ಸಂಘರ್ಷ ಹಾಗೂ 2014–2022ರ ರಷ್ಯಾ–ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಭಾರತ ಮಾಸ್ಕೋವನ್ನು ಟೀಕಿಸುವುದನ್ನು ತಪ್ಪಿಸಿತು. 2022ರ ನಂತರ ರಷ್ಯಾ–ಉಕ್ರೇನ್ ನಡುವೆ ಸಂಪೂರ್ಣ ಯುದ್ಧ ಆರಂಭವಾದಾಗ, ಭಾರತ “ಸಂವಾದ ಮತ್ತು ರಾಜತಾಂತ್ರಿಕತೆ”ಗೆ ಒತ್ತು ನೀಡಿತು ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಅನೇಕ ಯುಎನ್ ನಿರ್ಣಯಗಳಿಂದ ದೂರ ಉಳಿಯಿತು. ಇದೇ ವೇಳೆ ರಷ್ಯಾದಿಂದ ಇಂಧನ ಆಮದು ಹೆಚ್ಚಿಸಿತು. ಇದರಿಂದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಸುಂಕಗಳ ವಿಚಾರ ಎದ್ದಿತು.

ಅಝೆರ್ಬೈಝಾನ್‌ ಮತ್ತು ಅರ್ಮೇನಿಯಾ ನಡುವೆ 2020–2023ರಲ್ಲಿ ನಡೆದ ನಾಗೋರ್ನೊ–ಕರಾಬಖ್ ಯುದ್ಧದ ಸಂದರ್ಭದಲ್ಲಿ, ಭಾರತ ಸೈನ್ಯ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು. ಭಾರತ ಅರ್ಮೇನಿಯಾಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡಿತು. ಪಾಕಿಸ್ತಾನಕ್ಕೆ ಅಝೆರ್ಬೈಝಾನ್‌ ನೀಡಿದ ಸಂಪೂರ್ಣ ಬೆಂಬಲವು ಬಾಕು–ದೆಹಲಿ ಸಂಬಂಧಗಳು ಹದಗೆಡುವಂತೆ ಮಾಡಿತು.

2023ರಲ್ಲಿ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯನ್ನು ಭಾರತ ಬಲವಾಗಿ ಖಂಡಿಸಿತು. ಆದರೆ ಗಾಝಾದಲ್ಲಿ ಇಸ್ರೇಲ್ ನಡೆಸಿದ ಸೈನಿಕ ಕಾರ್ಯಾಚರಣೆಗಳಿಂದ ಮಾನವೀಯ ಬಿಕ್ಕಟ್ಟು ಹೆಚ್ಚಾದಂತೆ, ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸುವಂತೆ ಭಾರತ ಕರೆ ನೀಡಿತು. ಸಂಘರ್ಷ ಉಲ್ಬಣಗೊಳ್ಳುತ್ತಿದ್ದ ಸಂದರ್ಭದಲ್ಲಿ ಶಾಂತಿಗೆ ಕಾರ್ಯಸಾಧ್ಯವಾದ ಮಾರ್ಗವಾಗಿ ಎರಡು-ರಾಜ್ಯ ಪರಿಹಾರವನ್ನು ಭಾರತ ಬೆಂಬಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News