Photo Credit : indianexpress

ಆಫ್ರಿಕಾ ರಾಷ್ಟ್ರವಾದ ಕೀನ್ಯಾದಲ್ಲಿ ಟಾಟಾ ಕೆಮಿಕಲ್ಸ್ ನ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಅಧ್ಯಕ್ಷ ವಿಲಿಯಂ ರುಟೊ ಆದೇಶಿಸಿದ್ದಾರೆ. ಇದರಿಂದಾಗಿ ಟಾಟಾ ಗ್ರೂಪ್ ಸಂಸ್ಥೆಯು ಸಂಕಷ್ಟಕ್ಕೆ ಸಿಲುಕಿದ್ದು, ‘ಮಾತುಕತೆ ಮೂಲಕ’ ಈ ವಿವಾದವನ್ನು ಬಗೆಹರಿಸಿಕೊಳ್ಳಲು ಬದ್ಧವಾಗಿರುವುದಾಗಿ ಶುಕ್ರವಾರ (ಸೆಪ್ಟೆಂಬರ್ 4) ತಿಳಿಸಿದೆ.

ನೈರೋಬಿ ವಿಮಾನ ನಿಲ್ದಾಣದ ಅದಾನಿ ಸಮೂಹದ ಯೋಜನೆಯನ್ನು ರದ್ದುಗೊಳಿಸಿದ ಬಳಿಕ, ಕೀನ್ಯಾ ಮತ್ತು ಭಾರತೀಯ ಸಂಸ್ಥೆಯೊಂದರ ನಡುವೆ ಉದ್ಭವಿಸಿರುವ ಎರಡನೇ ಪ್ರಮುಖ ವಿವಾದ ಇದಾಗಿದೆ.

ಕೀನ್ಯಾದ ಕಾಜಿಯಾಡೊ ಕೌಂಟಿಯ ಮಗಾಡಿಯಲ್ಲಿ ಸೋಡಾ ಬೂದಿ ಉತ್ಪಾದನಾ ಘಟಕವನ್ನು ಹೊಂದಿರುವ ‘ಟಾಟಾ ಕೆಮಿಕಲ್ಸ್ ಮಗಾಡಿ ಲಿಮಿಟೆಡ್’ (TCML) ವಿಷಯದಲ್ಲಿ ಈ ವಿವಾದ ನಡೆಯುತ್ತಿದೆ. ಗ್ಲಾಸ್ ಉತ್ಪಾದನೆ ಸೇರಿದಂತೆ ಹಲವು ಉದ್ಯಮಗಳಲ್ಲಿ ಬಳಕೆಯಾಗುವ ನೈಸರ್ಗಿಕ ಸೋಡಾ ಬೂದಿ ಉತ್ಪಾದನೆಯಲ್ಲಿ TCML ಆಫ್ರಿಕಾದಲ್ಲೇ ಅತಿ ದೊಡ್ಡ ಸಂಸ್ಥೆಯಾಗಿದೆ. ಹಲವು ದಶಕಗಳಿಂದ ಈ ಘಟಕವನ್ನು ನಡೆಸಿಕೊಂಡು ಬರುತ್ತಿರುವ ಸಂಸ್ಥೆಯು, ತಾನು ಸರ್ಕಾರದ ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿರುವುದಾಗಿ ಹೇಳಿದೆ.

ಕೀನ್ಯಾ ಅಧ್ಯಕ್ಷರ ಆರೋಪವೇನು?

ಮಗಾಡಿ ಘಟಕವಿರುವ ಕಾಜಿಯಾಡೊ ಪ್ರದೇಶದಲ್ಲಿ ಅಭಿವೃದ್ಧಿ ಹಾಗೂ ಹೂಡಿಕೆ ಮಾಡಿಲ್ಲ ಎಂದು ಟಾಟಾ ಕೆಮಿಕಲ್ಸ್ ವಿರುದ್ಧ ರುಟೊ ವಾಗ್ದಾಳಿ ನಡೆಸಿದ್ದಾರೆ. “ಆ ಟಾಟಾ ಕಂಪೆನಿಯು 100 ವರ್ಷಗಳ ಒಪ್ಪಂದವನ್ನು ಹೊಂದಿತ್ತು. ಆದರೆ ಅವರು ಕಾಜಿಯಾಡೊದಲ್ಲಿ ಯಾವುದೇ ಕಟ್ಟಡವಾಗಲಿ ಅಥವಾ ಕಾರ್ಖಾನೆಯನ್ನಾಗಲಿ ನಿರ್ಮಿಸಿಲ್ಲ” ಎಂದು ರುಟೊ ಹೇಳಿದ್ದಾರೆ.

ಟಾಟಾ ಕೆಮಿಕಲ್ಸ್ ನ ಕಾರ್ಯಾಚರಣೆಯನ್ನು ವಹಿಸಿಕೊಳ್ಳಲು ಸರ್ಕಾರವು ಎರಡು ಹೊಸ ಕಂಪೆನಿಗಳನ್ನು ಕರೆತರಲಿದೆ ಎಂದು ಅವರು ತಿಳಿಸಿದ್ದಾರೆ.

ಕೀನ್ಯಾದ ಖನಿಜ ಸಂಪನ್ಮೂಲಗಳನ್ನು ಬಳಸಿಕೊಂಡಿರುವ ಟಾಟಾ ಸಂಸ್ಥೆಯು ಸ್ಥಳೀಯ ಪ್ರದೇಶಕ್ಕಾಗಲಿ ಅಥವಾ ದೇಶಕ್ಕಾಗಲಿ ಸೂಕ್ತ ಆರ್ಥಿಕ ಸೌಲಭ್ಯಗಳನ್ನು ನೀಡಿಲ್ಲ ಎಂಬುದು ರುಟೊ ಅವರ ಮುಖ್ಯ ಆರೋಪವಾಗಿದೆ. ದೀರ್ಘಾವಧಿಯ ಒಪ್ಪಂದದಡಿ ಕಾರ್ಯನಿರ್ವಹಿಸುತ್ತಿದ್ದರೂ ಟಾಟಾ ಸಂಸ್ಥೆಯು ಕೀನ್ಯಾದಲ್ಲಿ ಸ್ಥಳೀಯ ಕೈಗಾರಿಕಾ ಸೌಲಭ್ಯಗಳನ್ನು ನಿರ್ಮಿಸಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಸ್ಥಳೀಯವಾಗಿ ಹೆಚ್ಚಿನ ಮೌಲ್ಯವರ್ಧಿತ ಉತ್ಪಾದನೆ ಮಾಡುವ ಬದಲು ಸೋಡಾ ಬೂದಿಯನ್ನು ರಫ್ತು ಮಾಡುವುದಕ್ಕಷ್ಟೇ ಆದ್ಯತೆ ನೀಡಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಹೂಡಿಕೆ ಮತ್ತು ಕೈಗಾರಿಕಾ ಅಭಿವೃದ್ಧಿ ಮಾಡಿಲ್ಲ ಹಾಗೂ ಸ್ಥಳೀಯ ಸಮುದಾಯಕ್ಕೆ ನೀಡಬೇಕಾದ ಕೊಡುಗೆಯನ್ನು ಸರಿಯಾಗಿ ನೀಡಿಲ್ಲ ಎಂಬುದು ಕೀನ್ಯಾ ಸರ್ಕಾರದ ನಿಲುವಾಗಿದೆ.

ಇನ್ನೊಂದೆಡೆ, 2005ರಲ್ಲಿ ಮಗಾಡಿ ಘಟಕವನ್ನು ವಶಕ್ಕೆ ಪಡೆದಾಗಿನಿಂದಲೂ ತನ್ನ ಕಾರ್ಯಾಚರಣೆಯು ಕೀನ್ಯಾದ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಟಾಟಾ ಕೆಮಿಕಲ್ಸ್ ಹೇಳಿದೆ.

► ಏನಿದು ವಿವಾದ?

TCML ಸಂಸ್ಥೆ ಮತ್ತು ಕೀನ್ಯಾದ ಗಣಿ, ನೀಲಿ ಆರ್ಥಿಕತೆ ಹಾಗೂ ಸಾಗರ ವ್ಯವಹಾರಗಳ ಸಚಿವಾಲಯದ ನಡುವೆ ಸಂಸ್ಥೆಯ ಕಾರ್ಯಾಚರಣೆ ಮತ್ತು ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಿದೆ. 2026ರ ಜುಲೈ 28ರಂದು ಸಚಿವಾಲಯ ನೀಡಿದ್ದ ಅಧಿಕೃತ ಸೂಚನೆಗೆ ಸ್ಪಂದಿಸಿರುವ ಸಂಸ್ಥೆಯು, ಸರ್ಕಾರ ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ವಿವರವಾದ ಉತ್ತರ ಸಲ್ಲಿಸಿರುವುದಾಗಿ ತಿಳಿಸಿದೆ.

ಸಂಸ್ಥೆಯ ಪ್ರಕಾರ, ಆಗಸ್ಟ್ 11ರಂದು ಅಗತ್ಯವಿದ್ದ ಎಲ್ಲಾ ಮಾಹಿತಿ, ವರದಿಗಳು ಮತ್ತು ದಾಖಲೆಗಳನ್ನು ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ. “TCML ನಿಯಮಾವಳಿಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಕಂಪೆನಿಯು ಶುಕ್ರವಾರ ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ ಸ್ಪಷ್ಟಪಡಿಸಿದೆ. ಪ್ರಸ್ತುತ ಸಂಸ್ಥೆಯು ಸಚಿವಾಲಯದ ಪರಿಶೀಲನೆ ಮತ್ತು ಮುಂದಿನ ಆದೇಶಕ್ಕಾಗಿ ಕಾಯುತ್ತಿದೆ.

► ಮಗಾಡಿಯಲ್ಲಿ ಟಾಟಾ

ಟಾಟಾ ಕೆಮಿಕಲ್ಸ್ ತನ್ನ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ರುಟೊ ಬಹಿರಂಗವಾಗಿ ಆದೇಶಿಸಿ, ಅದರ ಜಾಗಕ್ಕೆ ಎರಡು ಹೊಸ ಕಂಪೆನಿಗಳನ್ನು ಕರೆತರಲಾಗುವುದು ಎಂದು ಪ್ರಕಟಿಸಿದ ಬಳಿಕ ಈ ವಿವಾದ ತೀವ್ರಗೊಂಡಿದೆ. ಆ ಪ್ರದೇಶದಲ್ಲಿರುವ ಇತರ ಖನಿಜ ಸಂಪನ್ಮೂಲಗಳನ್ನು ತನ್ನ ವಶಕ್ಕೆ ಪಡೆಯುವುದೇ ಸರ್ಕಾರದ ಮೂಲ ಉದ್ದೇಶ ಎಂದು ರುಟೊ ಅವರ ವಿರೋಧಿಗಳು ಆರೋಪಿಸಿದ್ದಾರೆ.

ಮಗಾಡಿ ಪ್ರದೇಶವು ಕಾಜಿಯಾಡೊ ಕೌಂಟಿಯಲ್ಲಿದ್ದು, ಇಲ್ಲಿನ ಜಮೀನು, ಖನಿಜ ಸಂಪತ್ತು, ಉದ್ಯೋಗ ಮತ್ತು ಸ್ಥಳೀಯ ಸಮುದಾಯದ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳು ರಾಜಕೀಯವಾಗಿ ತೀವ್ರ ಸೂಕ್ಷ್ಮವಾಗಿವೆ. 1928ರಲ್ಲಿ ಕೀನ್ಯಾ ಸರ್ಕಾರ ನೀಡಿದ್ದ ಗುತ್ತಿಗೆ ಹಕ್ಕನ್ನು 2004ರಲ್ಲಿ ವಿಸ್ತರಿಸಲಾಗಿದ್ದರಿಂದ, ಟಾಟಾ ಸಂಸ್ಥೆಯ ಕಾನೂನಾತ್ಮಕ ಸ್ಥಾನಮಾನ ಬಲವಾಗಿದೆ. ಈ ಒಪ್ಪಂದದ ಪ್ರಕಾರ ಮಗಾಡಿಯ ಖನಿಜ ನಿಕ್ಷೇಪಗಳ ಮೇಲೆ ಟಾಟಾಗೆ 2053ರವರೆಗೆ ವ್ಯಾಪಕ ಹಕ್ಕಿದೆ. ಕಾನೂನಾತ್ಮಕವಾಗಿ ಹಲವು ಬದಲಾವಣೆಗಳಾಗಿದ್ದರೂ, ಟಾಟಾ ಸಂಸ್ಥೆಯು “100 ವರ್ಷಗಳಿಂದ” ನಿಯಂತ್ರಣ ಹೊಂದಿದೆ ಎಂದು ರುಟೊ ಪ್ರತಿಪಾದಿಸಲು ಈ ಒಪ್ಪಂದವೇ ಮುಖ್ಯ ಕಾರಣ ಎಂದು ಕೀನ್ಯಾದ ಮಾಧ್ಯಮಗಳು ವರದಿ ಮಾಡಿವೆ.

ಈ ಹಿಂದೆ ಜಮೀನು ತೆರಿಗೆ ಮತ್ತು ರಾಯಲ್ಟಿ ಪಾವತಿಗೆ ಸಂಬಂಧಿಸಿದಂತೆ ಟಾಟಾ ಮತ್ತು ಕಾಜಿಯಾಡೊ ಕೌಂಟಿ ನಡುವೆ ತೀವ್ರ ವಿವಾದ ಉಂಟಾಗಿತ್ತು. ಕೌಂಟಿ ಆಡಳಿತವು ಕೋಟ್ಯಂತರ ಶಿಲಿಂಗ್ಗಳ ಬಾಕಿಗೆ ಬೇಡಿಕೆಯಿಟ್ಟಿತ್ತು. ಆದರೆ, ಖನಿಜ ಹಕ್ಕುಗಳು ಮತ್ತು ಪಾವತಿಗಳು ಕೌಂಟಿಗಿಂತ ಹೆಚ್ಚಾಗಿ ರಾಷ್ಟ್ರೀಯ ಸರ್ಕಾರದೊಂದಿಗಿನ ಒಪ್ಪಂದಕ್ಕೆ ಒಳಪಟ್ಟಿರುತ್ತವೆ ಎಂದು ಟಾಟಾ ವಾದಿಸಿತ್ತು. ಅಕ್ಟೋಬರ್ 2025ರಲ್ಲಿ ಕೀನ್ಯಾದ ಮೇಲ್ಮನವಿ ನ್ಯಾಯಾಲಯವು ಟಾಟಾ ಪರವಾಗಿ ತೀರ್ಪು ನೀಡಿತ್ತು.

ಕೀನ್ಯಾದ ಕಾನೂನು ವರದಿಗಳ ಪ್ರಕಾರ, ಕೌಂಟಿ ಕೇಳಿದ್ದ ಸುಮಾರು 1,745 ಕೋಟಿ ಕೀನ್ಯಾ ಶಿಲಿಂಗ್ ಪಾವತಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಜೊತೆಗೆ ಟಾಟಾ ಸಂಸ್ಥೆಯ ಕಾರ್ಯಾಚರಣೆಯನ್ನು ಕೌಂಟಿ ಆಡಳಿತ ಬಂದ್ ಮಾಡಿದ್ದು ಟಾಟಾದ ಗುತ್ತಿಗೆ ಹಕ್ಕು ಮತ್ತು ಸಾಂವಿಧಾನಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿತ್ತು.

► ಟಾಟಾ ಕೆಮಿಕಲ್ಸ್ ಮಗಾಡಿ ಘಟಕವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದು ಯಾವಾಗ?

ಟಾಟಾ ಕೆಮಿಕಲ್ಸ್ ಸಂಸ್ಥೆಯು 2005ರಲ್ಲಿ ಮಗಾಡಿ ಘಟಕವನ್ನು ಖರೀದಿಸುವುದರೊಂದಿಗೆ ಕೀನ್ಯಾದ ಸೋಡಾ ಬೂದಿ ಉದ್ಯಮದೊಂದಿಗೆ ತನ್ನ ಸಂಬಂಧವನ್ನು ಆರಂಭಿಸಿತು. ಅಂದಿನಿಂದ ಸಂಸ್ಥೆಯು TCML ಮೂಲಕ ಈ ಉದ್ಯಮವನ್ನು ನಡೆಸಿಕೊಂಡು ಬರುತ್ತಿದೆ.

ಈ ಉದ್ಯಮದ ಇತಿಹಾಸ ಇನ್ನೂ ಹಳೆಯದಾಗಿದೆ. 1873ರಲ್ಲಿ ಯುಕೆಯಲ್ಲಿ ಸ್ಥಾಪನೆಯಾಗಿದ್ದ ‘ಬ್ರನ್ನರ್ ಮಂಡ್ ಹೋಲ್ಡಿಂಗ್ಸ್ ಲಿಮಿಟೆಡ್’, 1991ರಲ್ಲಿ ICI ಸಂಸ್ಥೆಯಲ್ಲಿದ್ದ ಕೀನ್ಯಾದ ಸೋಡಾ ಬೂದಿ ಘಟಕವನ್ನು ತನ್ನದಾಗಿಸಿಕೊಂಡಿತು. ಬಳಿಕ ಬ್ರನ್ನರ್ ಮಂಡ್ ಸಂಸ್ಥೆಯ ಸಂಪೂರ್ಣ ಷೇರುಗಳನ್ನು ಟಾಟಾ ಕೆಮಿಕಲ್ಸ್ ಖರೀದಿಸಿತು. ಪರಿಣಾಮವಾಗಿ ‘ಮಗಾಡಿ ಸೋಡಾ’ ಸಂಸ್ಥೆಯು ‘ಟಾಟಾ ಕೆಮಿಕಲ್ಸ್ ಮಗಾಡಿ ಲಿಮಿಟೆಡ್’ ಎಂದು ಮರುನಾಮಕರಣಗೊಂಡಿತು. ಹೀಗಾಗಿ ಮಗಾಡಿ ಕಾರ್ಯಾಚರಣೆಯು ಟಾಟಾ ಸಮೂಹಕ್ಕೆ ಹೊಸ ಹೂಡಿಕೆಯೇನಲ್ಲ, ಇದು ಕೀನ್ಯಾದ ಸೋಡಾ ಬೂದಿ ಉದ್ಯಮದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ವ್ಯವಹಾರವಾಗಿದೆ.

TCML ಸಂಸ್ಥೆಯು ಮಗಾಡಿ ಸೋಡಾ ಬೂದಿ ಉದ್ಯಮವನ್ನು ನಿರ್ವಹಿಸುತ್ತಿದ್ದು, ಆಫ್ರಿಕಾದಲ್ಲೇ ನೈಸರ್ಗಿಕ ಸೋಡಾ ಬೂದಿಯ ಅತಿದೊಡ್ಡ ಉತ್ಪಾದಕ ಸಂಸ್ಥೆಯಾಗಿದೆ. ಸೋಡಾ ಬೂದಿ ಅಥವಾ ಸೋಡಿಯಂ ಕಾರ್ಬೋನೇಟ್ ಎಂಬುದು ವಿವಿಧ ಉತ್ಪನ್ನಗಳು ಮತ್ತು ಕೈಗಾರಿಕೆಗಳಲ್ಲಿ ಬಳಕೆಯಾಗುವ ಪ್ರಮುಖ ರಾಸಾಯನಿಕ ವಸ್ತುವಾಗಿದೆ.

► ಟಾಟಾ ಕೆಮಿಕಲ್ಸ್ ಮುಂದೆ ಏನು ಮಾಡಲು ಯೋಚಿಸಿದೆ?

ಸದ್ಯಕ್ಕೆ ಟಾಟಾ ಕೆಮಿಕಲ್ಸ್ ಸಂಸ್ಥೆಯು ಚಾಲ್ತಿಯಲ್ಲಿರುವ ಕಾನೂನು ಮತ್ತು ನಿಯಮಾವಳಿಗಳ ವ್ಯಾಪ್ತಿಯಲ್ಲೇ ಕೀನ್ಯಾದ ಅಧಿಕಾರಿಗಳೊಂದಿಗೆ ಚರ್ಚೆ ಮುಂದುವರಿಸುವುದಾಗಿ ತಿಳಿಸಿದೆ. ಕಾಯ್ದೆಗಳಿಗೆ ಬದ್ಧವಾಗಿರುವುದಕ್ಕೆ ಸಂಬಂಧಿಸಿದ ಮಾಹಿತಿ ಸೇರಿದಂತೆ, ಸಚಿವಾಲಯ ಎತ್ತಿರುವ ಪ್ರತಿಯೊಂದು ವಿಷಯಕ್ಕೂ ಈಗಾಗಲೇ ವಿವರವಾದ ಉತ್ತರ ನೀಡಲಾಗಿದೆ ಎಂದು ಕಂಪೆನಿ ಹೇಳಿದೆ.

ಈಗ ಸಂಸ್ಥೆಯು ಸಚಿವಾಲಯದ ಪರಿಶೀಲನೆ ಮತ್ತು ಮುಂದಿನ ಮಾರ್ಗದರ್ಶನಕ್ಕಾಗಿ ಕಾಯುತ್ತಿದೆ. “ನಾವು ಕೀನ್ಯಾ ಸರ್ಕಾರದ ಅಧಿಕಾರವನ್ನು ಗೌರವಿಸುತ್ತೇವೆ. ಬಾಕಿ ಇರುವ ವಿಷಯಗಳನ್ನು ಇತ್ಯರ್ಥಪಡಿಸಲು ಸೂಕ್ತ ಕಾನೂನು ಮತ್ತು ನಿಯಮಾವಳಿಗಳ ಚೌಕಟ್ಟಿನಲ್ಲೇ ಸಕಾರಾತ್ಮಕವಾಗಿ ವ್ಯವಹರಿಸಲು ಬದ್ಧರಾಗಿದ್ದೇವೆ” ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.

ತನ್ನ ಉದ್ಯೋಗಿಗಳು, ಮಗಾಡಿ ಪ್ರದೇಶದ ಜನತೆ, ಇತರ ಪಾಲುದಾರರ ಹಿತರಕ್ಷಣೆ ಮತ್ತು ಕೀನ್ಯಾದ ಆರ್ಥಿಕ ಅಭಿವೃದ್ಧಿಗೆ ಬೆಂಬಲ ನೀಡುವುದು ತಮ್ಮ ಆದ್ಯತೆಯಾಗಿದೆ ಎಂದು ಸಂಸ್ಥೆ ಪುನರುಚ್ಚರಿಸಿದೆ.

ಮಗಾಡಿ ಘಟಕದಲ್ಲಿ ಇತ್ತೀಚೆಗೆ ಮಾಡಿರುವ ಹೂಡಿಕೆಗಳನ್ನು, ವಿಶೇಷವಾಗಿ ಹೆಚ್ಚು ಪರಿಣಾಮಕಾರಿ ಮತ್ತು ಮಾಲಿನ್ಯರಹಿತ ಉತ್ಪಾದನಾ ತಂತ್ರಜ್ಞಾನವನ್ನು ಟಾಟಾ ಕೆಮಿಕಲ್ಸ್ ಉಲ್ಲೇಖಿಸಿದೆ. 2025ರ ಜುಲೈನಲ್ಲಿ, TCML ಗಂಟೆಗೆ 10 ಟನ್ ಸಾಮರ್ಥ್ಯದ ನವೀನ ಎಲೆಕ್ಟ್ರಿಕ್ ಕ್ಯಾಲ್ಸಿನರ್ ಅನ್ನು ಕಾರ್ಯಾಚರಣೆಗೆ ತಂದಿತ್ತು. ಇದು ಜಾಗತಿಕ ಸೋಡಾ ಬೂದಿ ಉದ್ಯಮದಲ್ಲೇ ಮೊದಲನೆಯದು ಎಂದು ಕಂಪೆನಿ ಬಣ್ಣಿಸಿತ್ತು. ಜೊತೆಗೆ, ಅದೇ ಆವರಣದಲ್ಲಿ 5 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ಚಾಲನೆಗೆ ತಂದಿತ್ತು.

ಭಾರೀ ಕುಲುಮೆ ಎಣ್ಣೆ (Heavy Furnace Oil - HFO) ಆಧಾರಿತ ಉತ್ಪಾದನೆಯಿಂದ ಪರಿಸರ ಸ್ನೇಹಿ ಮತ್ತು ಕಡಿಮೆ ಇಂಗಾಲ ಹೊರಸೂಸುವ ತಂತ್ರಜ್ಞಾನಕ್ಕೆ ಬದಲಾಗುವುದು ಈ ಹೂಡಿಕೆಗಳ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಗಳು TCML ನ ವಿಸ್ತರಣಾ ಕಾರ್ಯಕ್ರಮದ ಭಾಗವಾಗಿದ್ದು, ಸುಸ್ಥಿರ ಕೈಗಾರಿಕಾ ಚಟುವಟಿಕೆಯನ್ನು ಬಲಪಡಿಸಲಿವೆ ಎಂದು ಟಾಟಾ ಕೆಮಿಕಲ್ಸ್ ತಿಳಿಸಿದೆ. ಅಲ್ಲದೆ, 2045ರ ವೇಳೆಗೆ ಶೂನ್ಯ ಇಂಗಾಲದ ಗುರಿ ತಲುಪುವ ಟಾಟಾ ಸಮೂಹದ ಯೋಜನೆಗೆ ಇದು ಪೂರಕವಾಗಿದೆ ಎಂದು ಹೇಳಿದೆ.

► ಅದಾನಿ ನೈರೋಬಿ ವಿಮಾನ ನಿಲ್ದಾಣ ಯೋಜನೆ ರದ್ದಾಗಿದ್ದೇಕೆ?

ಈ ಹಿಂದೆ, ಅದಾನಿ ಸಮೂಹವು ನೈರೋಬಿಯ ಜೋಮೋ ಕೆನ್ಯಾಟ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (JKIA) ಸುದೀರ್ಘ ನಿರ್ವಹಣೆಗಾಗಿ ಸುಮಾರು 2.5 ಶತಕೋಟಿ ಡಾಲರ್ ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದರ ಪ್ರಕಾರ, ಅದಾನಿ ಸಂಸ್ಥೆಯು ವಿಮಾನ ನಿಲ್ದಾಣದ ಪ್ರಮುಖ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಹಣಕಾಸು ಒದಗಿಸಿ, ಸುದೀರ್ಘ ಅವಧಿಗೆ ಅದನ್ನು ನಿರ್ವಹಿಸಬೇಕಿತ್ತು. ಆದರೆ, ಪಾರದರ್ಶಕತೆ ಮತ್ತು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂಬ ಕಾರಣಕ್ಕೆ ಈ ಒಪ್ಪಂದವು ತಕ್ಷಣವೇ ವಿವಾದಕ್ಕೀಡಾಯಿತು.

ಸಲಹೆಗಾರರು ಶಿಫಾರಸು ಮಾಡಿದ ಮುಕ್ತ ಟೆಂಡರ್ ಪ್ರಕ್ರಿಯೆಯ ಬದಲಾಗಿ, ಈ ಪ್ರಸ್ತಾವನೆಯನ್ನು ಖಾಸಗಿಯಾಗಿ ಆರಂಭಿಸಲಾಗಿತ್ತು. ಜೊತೆಗೆ ಸಾರ್ವಜನಿಕರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿಲ್ಲ ಎಂದು ವಿಮರ್ಶಕರು ವಾದಿಸಿದ್ದರು.

ಈ ಪ್ರಸ್ತಾವನೆಯು ಕೀನ್ಯಾದಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ವಿಮಾನ ನಿಲ್ದಾಣದ ಸಾರ್ವಭೌಮತ್ವ, ಬಳಕೆದಾರರ ಶುಲ್ಕ, ಉದ್ಯೋಗಾವಕಾಶಗಳು ಮತ್ತು ಸರ್ಕಾರವು ಅದಾನಿ ಸಂಸ್ಥೆಗೆ ಅತಿಯಾದ ಅನುಕೂಲ ಮಾಡಿಕೊಡುತ್ತಿದೆ ಎಂಬ ಆತಂಕಗಳು ವ್ಯಕ್ತವಾಗಿದ್ದವು. 2024ರಲ್ಲಿ ಅಮೆರಿಕದಲ್ಲಿ ಗೌತಮ್ ಅದಾನಿ ಮತ್ತು ಇತರರ ವಿರುದ್ಧ ಬಂದ ಲಂಚದ ಆರೋಪಗಳ ಬಳಿಕ ಈ ವಿವಾದ ಮತ್ತಷ್ಟು ತೀವ್ರಗೊಂಡಿತು (ಆದರೆ ಅದಾನಿ ಈ ಆರೋಪಗಳನ್ನು ನಿರಾಕರಿಸಿದ್ದರು).

ಇದರ ಬೆನ್ನಲ್ಲೇ ಅಧ್ಯಕ್ಷ ವಿಲಿಯಂ ರುಟೊ ಅವರು ವಿಮಾನ ನಿಲ್ದಾಣದ ಒಪ್ಪಂದವನ್ನು ರದ್ದುಗೊಳಿಸಿದರು. 2026ರ ಫೆಬ್ರುವರಿಯಲ್ಲಿ ಕೀನ್ಯಾ ಏರ್ಪೋರ್ಟ್ಸ್ ಅಥಾರಿಟಿ ಈ ರದ್ದತಿಯನ್ನು ನ್ಯಾಯಾಲಯದಲ್ಲಿ ಅಧಿಕೃತವಾಗಿ ದೃಢಪಡಿಸಿತು.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಜಾರ್ಜ್ ಮ್ಯಾಥ್ಯು

contributor