ಕೊಲೆಗಡುಕ ಪೋಷಕರು | ಕೌಟುಂಬಿಕ ಕಲಹಕ್ಕೆ ಬಲಿಯಾಗುತ್ತಿದ್ದಾರೆಯೇ ಕಂದಮ್ಮಗಳು?

ಅಭಿಷೇಕ್‌ ಡೇ - inidiatoday. in ವರದಿ

Update: 2026-08-18 22:30 IST

ಸಾಂದರ್ಭಿಕ ಚಿತ್ರ (AI)

2024ರ ಜನವರಿ 7ರಂದು ನಡೆದ ಭೀಕರ ಕೊಲೆಯೊಂದು ಗೋವಾದ ಶಾಂತ ವಾತಾವರಣವನ್ನು ಬೆಚ್ಚಿಬೀಳಿಸಿತ್ತು. ಎಐ ಸ್ಟಾರ್ಟ್ಅಪ್ ಒಂದರ CEO, ರೆಸಾರ್ಟ್ ಒಂದರಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೆಮ್ಮಿನ ಸಿರಪ್ ನೀಡಿ ಉಸಿರುಗಟ್ಟಿಸಿ ಕೊಂದಿದ್ದರು. ಕೆಲವು ಗಂಟೆಗಳ ನಂತರ, ಮಗನ ಶವವನ್ನು ಬ್ಯಾಗ್ ನಲ್ಲಿ ತುಂಬಿಕೊಂಡು ಹೋಗುತ್ತಿದ್ದ ಅವರನ್ನು ನೆರೆಯ ಕರ್ನಾಟಕದಲ್ಲಿ ಬಂಧಿಸಲಾಯಿತು. ಈ ಕೃತ್ಯಕ್ಕೆ ಕಾರಣವೇನು ಗೊತ್ತಾ? ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿದ್ದು, ಮಗ ತನ್ನ ತಂದೆಯನ್ನು ಭೇಟಿಯಾಗುವುದು ಆಕೆಗೆ ಇಷ್ಟವಿರಲಿಲ್ಲ. ಸುಚನಾ ಸೇಥ್ ಅವರ ಈ ಪ್ರಕರಣ ಮಾಧ್ಯಮಗಳಲ್ಲಿ ಭಾರಿ ಸುದ್ದಿ ಮಾಡಿತ್ತು. ಪೋಷಕರೇ ತಮ್ಮ ಮಕ್ಕಳನ್ನು ಕೊಲ್ಲುತ್ತಿರುವ, ಹಲವು ಬಾರಿ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ಸಾಲು ಸಾಲಾಗಿ ವರದಿಯಾಗುತ್ತಿವೆ.

ಈ ಘಟನೆಗಳ ಹಿಂದೆ ಮುರಿದುಬಿದ್ದ ದಾಂಪತ್ಯ, ಆರ್ಥಿಕ ಸಂಕಷ್ಟ, ಅನೈತಿಕ ಸಂಬಂಧದ ಆರೋಪಗಳು ಮತ್ತು ಕೌಟುಂಬಿಕ ಕಲಹಗಳ ಕಥೆಗಳಿದ್ದವು. ಕಳೆದ ಕೆಲವು ತಿಂಗಳುಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ಹರಿಯಾಣಗಳಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿದ್ದು, ಪೋಷಕರ ನಡುವಿನ ಜಗಳಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ‘ಫಿಲಿಸೈಡ್-ಸೂಸೈಡ್’ (ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಳ್ಳುವುದು) ಎಂದು ಕರೆಯಲಾಗುವ ಈ ಘಟನೆಗಳು ಗಂಭೀರ ಪ್ರಶ್ನೆಯೊಂದನ್ನು ಹುಟ್ಟುಹಾಕಿವೆ.

►ಇದೇನು ಕಳವಳಕಾರಿ ಪ್ರವೃತ್ತಿ?

ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಳ್ಳುವ (ಫಿಲಿಸೈಡ್-ಸೂಸೈಡ್) ಪ್ರಕರಣಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರತ್ಯೇಕವಾಗಿ ದಾಖಲಿಸುವುದಿಲ್ಲ. ಹೀಗಾಗಿ, ಈ ಬಗ್ಗೆ ಖಚಿತ ತೀರ್ಮಾನಕ್ಕೆ ಬರಲು ಭಾರತದಲ್ಲಿ ವಿವರವಾದ ಅಂಕಿ-ಅಂಶಗಳಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಆತ್ಮಹತ್ಯೆ ದತ್ತಾಂಶವು ಕೆಲವು ಮುಖ್ಯ ಸಂಗತಿಗಳನ್ನು ಹೊರಹಾಕುತ್ತದೆ. ಭಾರತದಲ್ಲಿ ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆಗಳೇ ಪ್ರಮುಖ ಕಾರಣವಾಗಿವೆ. ಇದು ಹೆತ್ತವರೇ ಮಕ್ಕಳನ್ನು ಕೊಲ್ಲುವ ಪ್ರಕರಣಗಳು ವ್ಯಾಪಕವಾಗುತ್ತಿವೆಯೇ ಎಂಬುದನ್ನು ಸ್ಪಷ್ಟವಾಗಿ ಹೇಳದಿದ್ದರೂ, ಇಂತಹ ತೀವ್ರ ಸ್ವರೂಪದ ಕೃತ್ಯಗಳು ನಡೆಯುವ ಹಿನ್ನೆಲೆಯನ್ನು ಎತ್ತಿ ತೋರಿಸುತ್ತದೆ.

NCRBಯ 2024ರ ಇತ್ತೀಚಿನ ಡೇಟಾ ಪ್ರಕಾರ, ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇಕಡಾ 34ಕ್ಕೂ ಹೆಚ್ಚು ಪ್ರಕರಣಗಳಿಗೆ ಕೌಟುಂಬಿಕ ಸಮಸ್ಯೆಗಳೇ ಕಾರಣವಾಗಿವೆ. ಇದು ದಾಖಲಾದ ಕಾರಣಗಳಲ್ಲಿ ಅತಿ ದೊಡ್ಡದಾಗಿದ್ದು, ಒಟ್ಟು ಆತ್ಮಹತ್ಯೆಗಳ ಮೂರನೇ ಒಂದಕ್ಕಿಂತ ಹೆಚ್ಚಾಗಿದೆ. 2023ರ ಡೇಟಾ ಕೂಡ ಇದೇ ರೀತಿಯ ಚಿತ್ರಣವನ್ನು ನೀಡಿತ್ತು. ಆಗ ಕೌಟುಂಬಿಕ ಸಮಸ್ಯೆಗಳಿಂದಾಗಿ ಶೇಕಡಾ 31.9ರಷ್ಟು ಆತ್ಮಹತ್ಯೆಗಳು ನಡೆದಿದ್ದವು.

“ಸಾಮಾನ್ಯವಾಗಿ ಆತ್ಮಹತ್ಯೆಯ ಅಪಾಯ ಹೆಚ್ಚಾಗುತ್ತಿದೆ. ಇದರ ಭಾಗವಾಗಿಯೇ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯವೂ ರೂಪುಗೊಳ್ಳುತ್ತದೆ” ಎಂದು ಅಶೋಕ ವಿಶ್ವವಿದ್ಯಾಲಯದ ಪಿಎಚ್ಡಿ ಸಂಶೋಧಕಿ ಹಾಗೂ ಬೋಧಕಿ ಮೈತ್ರೇಯಿ ಸೇನ್ ಹೇಳಿರುವುದಾಗಿ India Today ವರದಿ ಉಲ್ಲೇಖಿಸಿದೆ.

ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವುದು ‘ವಾಸ್ತವ ಸಂಗತಿ’ಯಾಗಿದ್ದರೂ, ಲಭ್ಯವಿರುವ ವರದಿಗಳನ್ನು ಮಾತ್ರವೇ ಇಟ್ಟುಕೊಂಡು ಇದನ್ನು ಒಂದು ನಿರ್ದಿಷ್ಟ ಪ್ರವೃತ್ತಿ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಸೇನ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳ ಘಟನೆಗಳನ್ನು ಗಮನಿಸಿದರೆ, ಇವುಗಳನ್ನು ಕೇವಲ ಬಿಡಿ ಘಟನೆಗಳೆಂದು ತಳ್ಳಿಹಾಕುವುದು ತಪ್ಪಾಗುತ್ತದೆ.

►ವಿವಿಧ ಕುಟುಂಬಗಳು, ಒಂದೇ ರೀತಿಯ ದುರಂತ ಅಂತ್ಯ

ಆಗಸ್ಟ್ 11ರಂದು ನಡೆದ ಘಟನೆ ಅತ್ಯಂತ ಭೀಕರವಾಗಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿ ತಮ್ಮ ಮೂವರು ಮಕ್ಕಳೊಂದಿಗೆ ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದರು. ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ 49 ವರ್ಷದ ಗಣಿ ಕಾರ್ಮಿಕ ಶೀವಲಾಲ್ ರಾಠೋಡ್, ಆ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಿಸಿದ್ದ.

ನೆರೆಹೊರೆಯ ಮನೆಗಳಿಗೂ ಹಾನಿ ಉಂಟುಮಾಡುವಷ್ಟು ತೀವ್ರವಾಗಿದ್ದ ಈ ಸ್ಫೋಟದಲ್ಲಿ ರಾಠೋಡ್ ಮತ್ತು ಆತನ 15 ವರ್ಷದ ಮಗಳು ಸಾವನ್ನಪ್ಪಿದರು. ಇತರ ಐವರು ಗಾಯಗೊಂಡರು. ತಮ್ಮ ಮೂವರೂ ಮಕ್ಕಳು ಮನೆಯ ಒಳಗಿದ್ದಾರೆ ಎಂದು ತಿಳಿದಿದ್ದರೂ ರಾಠೋಡ್ ಈ ಕೃತ್ಯ ಎಸಗಿದ್ದನು.

ಇದಕ್ಕೂ ಒಂದು ದಿನ ಮೊದಲು ಬೆಂಗಳೂರಿನಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆಯಿತು. ಕ್ಯಾಬ್ ಕಂಪೆನಿಯ 40 ವರ್ಷದ ಮ್ಯಾನೇಜರ್ ಎಸ್. ಜಿ. ಇಮ್ರಾನ್, ವಿಮಾನ ನಿಲ್ದಾಣದ ಬಳಿಯ ಪಂಚತಾರಾ ಹೋಟೆಲ್ ಗೆ ತಮ್ಮ 5 ಮತ್ತು 10 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಂದಿದ್ದನು. ಕೆಲವು ಗಂಟೆಗಳ ನಂತರ ಆತ ಇಬ್ಬರೂ ಮಕ್ಕಳನ್ನು ಕತ್ತು ಹಿಸುಕಿ ಕೊಂದು, ತಾನೂ ಕತ್ತು ಕೊಯ್ದುಕೊಂಡಿದ್ದ. ಹೋಟೆಲ್ ಭದ್ರತಾ ಸಿಬ್ಬಂದಿ ಆತನನ್ನು ಸಮಯಕ್ಕೆ ಸರಿಯಾಗಿ ರಕ್ಷಿಸಿದರು. ಆತ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ದಾಂಪತ್ಯದಲ್ಲಿದ್ದ ಬಿಕ್ಕಟ್ಟು, ತಿಂಗಳುಗಟ್ಟಲೆ ನಡೆದ ಜಗಳ ಮತ್ತು ಅನೈತಿಕ ಸಂಬಂಧದ ಶಂಕೆ ಬಗ್ಗೆ ಬರೆಯಲಾಗಿತ್ತು.

ಇಂತಹ ಘಟನೆಗಳು ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನ ಘಟನೆಗೆ ನಾಲ್ಕು ದಿನಗಳ ಮೊದಲು ಹರಿಯಾಣದ ಫತೇಹಾಬಾದ್ ನಲ್ಲಿ ಒಂದೇ ಕುಟುಂಬದ ಮೂವರ ಸಾವು ಭಾರಿ ಸಂಚಲನ ಮೂಡಿಸಿತ್ತು.

ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಮ್ಮ ಒಂಭತ್ತು ವರ್ಷದ ಮಗಳು ಮತ್ತು ಎಂಟು ವರ್ಷದ ಮಗನಿಗೆ ವಿಷ ಉಣಿಸಿ, ನಂತರ ಫಾರ್ಮ್ಹೌಸ್ ನ 10 ಅಡಿ ಆಳದ ನೀರಿನ ಟ್ಯಾಂಕ್ ಗೆ ತಳ್ಳಿ ಕೊಂದಿದ್ದರು. ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡರು. ಅವರ ಫೋನ್ ನಲ್ಲಿ ಸಿಕ್ಕ ವೀಡಿಯೊದಲ್ಲಿ, ಗಂಡನ ವರ್ಷಗಳ ಕಿರುಕುಳ ಮತ್ತು ಮಾದಕ ವ್ಯಸನವೇ ಈ ಕೃತ್ಯಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು.

►ತಜ್ಞರು ಏನು ಹೇಳುತ್ತಾರೆ?

ಪೋಷಕರು ತಮ್ಮ ಸ್ವಂತ ಮಕ್ಕಳ ಪ್ರಾಣ ತೆಗೆಯಲು ಕಾರಣವೇನು ಎಂಬ ಪ್ರಶ್ನೆಗೆ ಮನೋಚಿಕಿತ್ಸಕಿ ಹಾಗೂ ಸಂಬಂಧಗಳ ತಜ್ಞೆ ನಮ್ರತಾ ಜೈನ್ ಈ ರೀತಿ ಉತ್ತರಿಸುತ್ತಾರೆ.

ತೀವ್ರ ಖಿನ್ನತೆ ಅಥವಾ ಮಾನಸಿಕ ಒತ್ತಡದ ಸ್ಥಿತಿಯಲ್ಲಿ ಪೋಷಕರ ಆಲೋಚನಾ ಶಕ್ತಿ ಸಂಪೂರ್ಣವಾಗಿ ಕುಸಿಯುತ್ತದೆ. ಇದು ಮುಖ್ಯವಾಗಿ ಎರಡು ಮಾನಸಿಕ ಸ್ಥಿತಿಗಳಿಂದ ಉಂಟಾಗುತ್ತದೆ. ಒಂದು ‘ಆಲ್ಟ್ರೂಯಿಸ್ಟಿಕ್ ಫಿಲಿಸೈಡ್’ (ತೀವ್ರ ನಿರಾಶೆಯಲ್ಲಿರುವ ಪೋಷಕರು ತಮ್ಮ ಮಕ್ಕಳನ್ನು ಕೊಲ್ಲುವ ಮೂಲಕ ಈ ಕ್ರೂರ ಜಗತ್ತಿನಿಂದ ಅವರನ್ನು ರಕ್ಷಿಸುತ್ತಿದ್ದೇವೆ ಎಂದು ತಪ್ಪಾಗಿ ಭಾವಿಸುವುದು), ಇನ್ನೊಂದು ‘ವಿಸ್ತೃತ ಸ್ವ-ಪರಿಕಲ್ಪನೆ’ (ಪೋಷಕರು ಮಕ್ಕಳನ್ನು ಸ್ವತಂತ್ರ ವ್ಯಕ್ತಿಗಳೆಂದು ನೋಡದೆ ತಮ್ಮದೇ ಒಂದು ಭಾಗವೆಂದು ಭಾವಿಸಿ, ಇಡೀ ಕುಟುಂಬ ಒಟ್ಟಿಗೇ ಅಂತ್ಯಗೊಳ್ಳಬೇಕು ಎಂದು ಕೊಳ್ಳುವುದು). ಬುರಾರಿ ಸಾವುಗಳ ಪ್ರಕರಣದಲ್ಲೂ ಇದೇ ಆಗಿತ್ತು.

2018ರ ಜುಲೈ 1ರಂದು ದಿಲ್ಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 10 ಜನರು ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದ ಭೀಕರ ಘಟನೆ ಬೆಳಕಿಗೆ ಬಂದಿತ್ತು. ಅವರಲ್ಲಿ ಮೂವರು ಅಪ್ರಾಪ್ತರಾಗಿದ್ದರು. ಆರಂಭದಲ್ಲಿ ಪೊಲೀಸರು ಇದನ್ನು ಕೊಲೆ ಅಥವಾ ಸಾಮೂಹಿಕ ಆತ್ಮಹತ್ಯೆ ಎಂದು ಭಾವಿಸಿದ್ದರಾದರೂ, ನಂತರ ಅಂಧಶ್ರದ್ಧೆಯ ಆಚರಣೆ ವಿಕೋಪಕ್ಕೆ ಹೋಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಿದರು.

ಬುರಾರಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಏನು ನಡೆಯಿತು ಎಂಬುದು ಯಾರಿಗೂ ತಿಳಿಯದಿರಬಹುದು, ಏಕೆಂದರೆ ಅದನ್ನು ವಿವರಿಸಲು ಅಲ್ಲಿ ಯಾರೂ ಜೀವಂತವಾಗಿ ಉಳಿದಿಲ್ಲ.

ಇತ್ತೀಚೆಗೆ ಆಂಧ್ರಪ್ರದೇಶದ ಚಿತ್ತೂರು ಮತ್ತು ಕೇರಳದ ಎರ್ನಾಕುಲಂನಲ್ಲೂ ಬುರಾರಿ ಮಾದರಿಯ ಘಟನೆಗಳು ನಡೆದಿವೆ. ಆಂಧ್ರಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ (6 ಮತ್ತು 8 ವರ್ಷ) ವಿಷ ನೀಡಿ, ನಂತರ ತಾನೂ ನೇಣು ಬಿಗಿದುಕೊಂಡಿದ್ದನು. ಆತನ ಹೆಂಡತಿಯ ಸುದೀರ್ಘ ಕಾಯಿಲೆಯೇ ಇದಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಕೇರಳದಲ್ಲಿ ಜೂನ್ ತಿಂಗಳಿನಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಮೂವಾಟ್ಟುಪುಳ ಹೊಳೆಯಲ್ಲಿ ತೇಲುತ್ತಿರುವುದು ಪತ್ತೆಯಾಗಿತ್ತು. ಈ ಸಾಮೂಹಿಕ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟವೇ ಕಾರಣ ಎಂದು ಶಂಕಿಸಲಾಗಿದೆ.

ಈ ಘಟನೆಗಳು ನೂರಾರು ಕಿಲೋಮೀಟರ್ ಗಳ ಅಂತರದಲ್ಲಿ ನಡೆದಿರಬಹುದು, ಆದರೆ ಇವುಗಳ ಹಿಂದೆ ಒಂದು ಕಳವಳಕಾರಿ ಅಂಶವಿದೆ. ಅದೇನೇಂದರೆ, ಮಕ್ಕಳು ತಮಗೆ ತಿಳಿಯದಂತೆಯೇ ಈ ಬಿಕ್ಕಟ್ಟಿನ ಭಾಗವಾಗುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಮಕ್ಕಳು ಜಗಳಕ್ಕೆ ನೇರ ಕಾರಣವಾಗಿರುವುದಿಲ್ಲ, ಆದರೂ ಕುಟುಂಬ ತೀವ್ರ ಬಿಕ್ಕಟ್ಟು ಎದುರಿಸಿದಾಗ ಅವರೇ ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಗುತ್ತಾರೆ.

►ವ್ಯವಸ್ಥೆಯಲ್ಲಿನ ಲೋಪ

ಕೌಟುಂಬಿಕ ದೌರ್ಜನ್ಯವು ಪ್ರಮುಖ ಕಾರಣವಾಗಿದ್ದರೂ, ‘ಸಂಗಾತಿಯ ಮೇಲಿನ ಸೇಡು’ ಅಂದರೆ ಮಗುವನ್ನು ಕೊಂದು ಸಂಗಾತಿಗೆ ತೀವ್ರ ನೋವು ಉಂಟುಮಾಡುವುದು ಮತ್ತು ವಿಚ್ಛೇದನದ ಸಂದರ್ಭದಲ್ಲಿ ಮಗುವಿನ ಹಕ್ಕಿನ ಹೋರಾಟವನ್ನು ತಪ್ಪಿಸುವುದು ಇಂತಹ ಕೃತ್ಯಗಳ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಅಶೋಕ ವಿಶ್ವವಿದ್ಯಾಲಯದ ಸೇನ್ ಅಭಿಪ್ರಾಯಪಟ್ಟಿದ್ದಾರೆ. ಮೇಲೆ ಉಲ್ಲೇಖಿಸಲಾದ ಬೆಂಗಳೂರು ಹೋಟೆಲ್ ಪ್ರಕರಣವು ‘ಸಂಗಾತಿಯ ಮೇಲಿನ ಸೇಡಿಗೆ’ ಉದಾಹರಣೆಯಾಗಿದೆ.

“ಮಕ್ಕಳನ್ನು ಕೊಲ್ಲುವುದನ್ನು ಕಷ್ಟ ಮತ್ತು ಮಾನಹಾನಿಯಿಂದ ಅವರನ್ನು ರಕ್ಷಿಸುವ ಮಾರ್ಗ ಎಂದು ಭಾವಿಸಲಾಗುತ್ತದೆ. ಇದರ ಬೆನ್ನಲ್ಲೇ ಪೋಷಕರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಕೃತ್ಯವು ಅವರ ಆಯ್ಕೆಯಾಗಿರದೆ, ಅವರ ಮುಂದಿರುವ ಏಕೈಕ ದಾರಿಯಂತೆ ಅವರಿಗೆ ಭಾಸವಾಗುತ್ತದೆ” ಅಂತಾರೆ ಸೇನ್.

ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ನಡೆದ ಮತ್ತೊಂದು ಘಟನೆ ಆತಂಕ ಮೂಡಿಸಿತ್ತು.

40 ವರ್ಷದ ದೇವಸ್ಥಾನದ ಅರ್ಚಕರೊಬ್ಬರು ತಮ್ಮ ಇಬ್ಬರು ಗಂಡುಮಕ್ಕಳನ್ನು (6 ಮತ್ತು 11 ವರ್ಷ) ಉಸಿರುಗಟ್ಟಿಸಿ ಕೊಂದು, ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನದಿಂದ ಅವರು ನೊಂದಿದ್ದರು. ವಿಶೇಷವೆಂದರೆ, ಈ ದಂಪತಿಗೆ ಪೊಲೀಸ್ ಮತ್ತು ಸ್ಥಳೀಯ ಪ್ರಮುಖರ ಸಮ್ಮುಖದಲ್ಲಿ ಆಪ್ತಸಮಾಲೋಚನೆ ನಡೆಸಲಾಗಿತ್ತು.

ಆಪ್ತಸಮಾಲೋಚನೆ ನಡೆದಿದ್ದರೂ ಈ ದುರಂತವನ್ನು ತಡೆಯಲು ಸಾಧ್ಯವಾಗಲಿಲ್ಲ.

ಮಾನಸಿಕ ಆರೋಗ್ಯದ ಜಾಗೃತಿ ಮತ್ತು ಸೂಕ್ತ ಮಾನಸಿಕ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವುದರ ನಡುವೆ ಭಾರತದಲ್ಲಿ ಇಂದಿಗೂ ದೊಡ್ಡ ಅಂತರವಿದೆ ಎಂದು ಮನೋಚಿಕಿತ್ಸಕಿ ಜೈನ್ ಉಲ್ಲೇಖಿಸಿದ್ದಾರೆ.

ಭಾರತೀಯ ಕುಟುಂಬಗಳು ಇಂತಹ ಕೌಟುಂಬಿಕ ಸಮಸ್ಯೆಗಳನ್ನು ಮನೆಯ ಒಳಗೇ ಬಗೆಹರಿಸಿಕೊಳ್ಳಲು ಯತ್ನಿಸುತ್ತವೆ ಎಂಬುದೇ ಮೂಲ ಸಮಸ್ಯೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಗಂಡ-ಹೆಂಡತಿ ‘ಸಂಧಾನ ಮಾಡಿಕೊಳ್ಳಬೇಕು’ ಎಂದು ನಿರೀಕ್ಷಿಸಲಾಗುತ್ತದೆ. “ಆದರೆ, ಹೊರಗಿನವರ ಮಧ್ಯಸ್ಥಿಕೆ ಅಥವಾ ಕೌನ್ಸೆಲಿಂಗ್ ನಡೆಯುವ ವೇಳೆಗೆ ಬಿಕ್ಕಟ್ಟು ವಿಕೋಪಕ್ಕೆ ಹೋಗಿರುತ್ತದೆ” ಎಂದು ಜೈನ್ ವಾದಿಸುತ್ತಾರೆ.

ಸೇನ್ ಅವರ ಅಭಿಪ್ರಾಯ ಮಾತ್ರ ಭಿನ್ನವಾಗಿದೆ. ದಾಂಪತ್ಯದ ಜಗಳವನ್ನೇ ಮುಖ್ಯ ಕಾರಣ ಎಂದು ಪರಿಗಣಿಸಿದರೆ ನಿಜವಾದ ಅಪಾಯವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. “ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿ ಪೋಷಕರ ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿರುತ್ತದೆ” ಎಂದು ಅವರು ಹೇಳಿದ್ದಾರೆ.

ಸಾಮೂಹಿಕ ಕೌಟುಂಬಿಕ ಹತ್ಯೆ ಪ್ರಕರಣಗಳಲ್ಲಿ ಶೇಕಡಾ 30ರಿಂದ 50ರಷ್ಟು ಪೋಷಕರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಇವುಗಳಲ್ಲಿ ಖಿನ್ನತೆಯು ಅತ್ಯಂತ ಸಾಮಾನ್ಯವಾಗಿದ್ದು (ಶೇಕಡಾ 36), ಸೈಕೋಸಿಸ್ ಅಂದರೆ ವಾಸ್ತವದಿಂದ ದೂರವಾಗುವ ಮಾನಸಿಕ ಸ್ಥಿತಿಯು ಶೇಕಡಾ 27ರಷ್ಟು ಪ್ರಕರಣಗಳಲ್ಲಿ ಕಂಡುಬಂದಿದೆ.

ಸೇನ್ ಅವರ ಪ್ರಕಾರ, ಇಂತಹ ಕೃತ್ಯ ಎಸಗುವ ಎಲ್ಲರೂ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದಿಲ್ಲ. ಇದು ಮುನ್ನೆಚ್ಚರಿಕೆಯ ಲಕ್ಷಣಗಳನ್ನು ಗುರುತಿಸುವುದನ್ನು ಸವಾಲಾಗಿಸುತ್ತದೆ.

“ಆರ್ಥಿಕ ಸಂಕಷ್ಟ ಅಥವಾ ಮುರಿದುಬಿದ್ದ ಸಂಬಂಧದಂತಹ ತೀವ್ರ ಒತ್ತಡದ ಪರಿಸ್ಥಿತಿಯನ್ನು ಎದುರಿಸಿದಾಗ ಹಲವರು ಈ ರೀತಿ ವರ್ತಿಸುತ್ತಾರೆ. ತೀವ್ರ ಮಾನಸಿಕ ಕಾಯಿಲೆಯ ಸ್ಪಷ್ಟ ಲಕ್ಷಣಗಳು ಇಲ್ಲದಿದ್ದರೂ, ನಿರಾಶೆ, ನಿಯಂತ್ರಿಸುವ ಮನೋಭಾವ ಅಥವಾ ಅತಿಯಾದ ಮಾಲೀಕತ್ವದ ಭಾವನೆಯು ಇಂತಹ ಹಿಂಸಾಚಾರಕ್ಕೆ ಪ್ರೇರೇಪಿಸಬಹುದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

►ಇಂಥ ಘಟನೆಗಳನ್ನು ತಡೆಯುವುದು ಹೇಗೆ?

ಈ ದುರಂತಗಳನ್ನು ತಡೆಯುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮನೋವೈದ್ಯರು ಅಥವಾ ಆತ್ಮಹತ್ಯೆ ತಡೆ ಹೆಲ್ಪ್ ಲೈನ್ ಗಳ ಮೇಲಷ್ಟೇ ಬಿಡಲು ಸಾಧ್ಯವಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಸ್ಥಳೀಯ ಮಟ್ಟದಲ್ಲೇ ನೆರವು ಲಭ್ಯವಾಗುವಂತಿರಬೇಕು.

ಭಾರತದ ಪ್ರಮುಖ ಮಾನಸಿಕ ಆರೋಗ್ಯ ಸಂಸ್ಥೆಯಾದ ನಿಮ್ಹಾನ್ಸ್ (NIMHANS), ಈಗಾಗಲೇ ಸಮುದಾಯ ಆಧಾರಿತ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದೆ. ಸರ್ಕಾರದ ‘ಸ್ಮಾರ್ಟ್ ಮೆಂಟಲ್ ಹೆಲ್ತ್’ ಕಾರ್ಯಕ್ರಮದ ಅಡಿಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಿಗೆ ಒತ್ತಡ, ಖಿನ್ನತೆ ಮತ್ತು ಆತ್ಮಹತ್ಯೆಯ ಅಪಾಯವನ್ನು ಗುರುತಿಸಿ ನಿರ್ವಹಿಸುವ ತರಬೇತಿ ನೀಡಲಾಗುತ್ತಿದೆ.

ಆದರೆ, ಪರಿಸ್ಥಿತಿ ಅಂದುಕೊಂಡಷ್ಟು ಸುಲಭವಾಗಿಲ್ಲ.

ಭಾರತದಲ್ಲಿ ಮಾನಸಿಕ ಆರೋಗ್ಯ ವ್ಯವಸ್ಥೆಯು ಭಾರಿ ಕೊರತೆಯನ್ನು ಎದುರಿಸುತ್ತಿದೆ. ಸೇನ್ ಪ್ರಕಾರ, ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಶೇಕಡಾ 83ರಿಂದ 85ರಷ್ಟು ಜನರಿಗೆ ಯಾವುದೇ ಚಿಕಿತ್ಸೆ ಸಿಗುತ್ತಿಲ್ಲ ಎಂದು ಅಧ್ಯಯನಗಳು ತೋರಿಸಿವೆ. ಪ್ರತಿ 1 ಲಕ್ಷ ಜನರಿಗೆ ಕನಿಷ್ಠ ಒಬ್ಬ ಮನೋವೈದ್ಯರಿರಬೇಕು ಎಂಬ ನಿಯಮವಿದ್ದರೂ, ಭಾರತದಲ್ಲಿ ಪ್ರಸ್ತುತ 0.75 ಮನೋವೈದ್ಯರು ಮಾತ್ರ ಲಭ್ಯವಿದ್ದಾರೆ. ಬಜೆಟ್ ನಲ್ಲಿಯೂ ಕೇಂದ್ರ ಆರೋಗ್ಯ ಅನುದಾನದ ಕೇವಲ ಶೇಕಡಾ 1ರಷ್ಟು ಭಾಗ ಮಾತ್ರ ಮಾನಸಿಕ ಆರೋಗ್ಯಕ್ಕೆ ಸಿಗುತ್ತಿದೆ.

ಈ ಸವಾಲನ್ನು ಪರಿಹರಿಸದಿದ್ದರೆ, ಚಿತ್ತೂರು ಅಥವಾ ಬೆಂಗಳೂರಿನಂತಹ ಮತ್ತೊಂದು ಘಟನೆ ನಡೆದಾಗ, ನಾವು ಸುದೀರ್ಘ ಕಥೆಯೊಂದರ ಅಂತಿಮ ಅಧ್ಯಾಯವನ್ನು ಮಾತ್ರ ನೋಡಬೇಕಾಗುತ್ತದೆ.

ಇಲ್ಲಿ ಉಲ್ಲೇಖಿಸಿದ ಪ್ರತಿಯೊಂದು ಪ್ರಕರಣದಲ್ಲೂ ಮಕ್ಕಳನ್ನು ಕೊಂದವರು ಆರ್ಥಿಕ ಸಂಕಷ್ಟ ಅಥವಾ ಸಂಗಾತಿಯ ನಂಬಿಕೆದ್ರೋಹದಂತಹ ತೀವ್ರ ಕೌಟುಂಬಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಪೋಷಕರೇ ಆಗಿದ್ದಾರೆ. ಪ್ರಸ್ತುತ ನಮ್ಮಲ್ಲಿ ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆಗೆ ಯತ್ನಿಸುವ (ಫಿಲಿಸೈಡ್-ಸೂಸೈಡ್) ಕೃತ್ಯಗಳನ್ನು ಪ್ರತ್ಯೇಕವಾಗಿ ಪತ್ತೆಹಚ್ಚುವ ಯಾವುದೇ ರಾಷ್ಟ್ರೀಯ ಡೇಟಾ ಇಲ್ಲ. ಈ ಘಟನೆಗಳನ್ನು ಒಂದು ಕಳವಳಕಾರಿ ಪ್ರವೃತ್ತಿ ಎಂದು ಕರೆಯಲು ಪೂರಕ ಸಾಕ್ಷ್ಯಾಧಾರಗಳು ಇಲ್ಲದಿರಬಹುದು, ಆದರೆ ಇದು ಅಪಾಯದ ಎಚ್ಚರಿಕೆಯ ಗಂಟೆಯಂತೂ ಹೌದು.

ಸೌಜನ್ಯ: inidiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News