ಪ್ರತಿ 10 ಶಾಲಾ ಮಕ್ಕಳಲ್ಲಿ ನಾಲ್ವರು ಖಾಸಗಿ ಶಾಲೆಗೆ ಸೇರುತ್ತಾರೆ: ಇದಕ್ಕಿರುವ ಕಾರಣವೇನು?
► ವಿಜಯ್ ಜಾಧವ್ & IndiaSpend - newslaundry. com ವರದಿ
ಸಾಂದರ್ಭಿಕ ಚಿತ್ರ | Photo Credit : magnific
ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ (UDISE+) ಡೇಟಾ ಪ್ರಕಾರ, 2025-26ರಲ್ಲಿ ಭಾರತದ ಶೇಕಡಾ 40ರಷ್ಟು (ಪ್ರತಿ 10ರಲ್ಲಿ 4) ಶಾಲಾ ಮಕ್ಕಳು ಅನುದಾನರಹಿತ ಖಾಸಗಿ ಶಾಲೆಗಳಿಗೆ ದಾಖಲಾಗಿದ್ದಾರೆ. 2018-19ರಲ್ಲಿ ಈ ಪ್ರಮಾಣ ಶೇಕಡಾ 35.4ರಷ್ಟಿತ್ತು.
ಕಳೆದ ಒಂದು ವರ್ಷದಲ್ಲಿ ಖಾಸಗಿ ಶಾಲೆಗಳ ದಾಖಲಾತಿ ಸುಮಾರು 30 ಲಕ್ಷದಷ್ಟು ಹೆಚ್ಚಾಗಿದೆ. ಶೇಕಡಾ 48ರಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 27 ಲಕ್ಷದಷ್ಟು ಕಡಿಮೆಯಾಗಿದೆ.
12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಬಿಹಾರ, ಗೋವಾ ಮತ್ತು ಜಾರ್ಖಂಡ್ನಲ್ಲಿ ಖಾಸಗಿ ಶಾಲೆಗಳ ದಾಖಲಾತಿ ಶೇಕಡಾ 20ಕ್ಕಿಂತ ಕಡಿಮೆಯಿದ್ದರೆ, ಪಶ್ಚಿಮ ಬಂಗಾಳದಲ್ಲಿ ಶೇಕಡಾ 10ಕ್ಕಿಂತ ಕಡಿಮೆಯಿದೆ.
ಪೋಷಕರು ಆರಂಭಿಕ ಹಂತದಲ್ಲೇ ಖಾಸಗಿ ಶಾಲೆಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪೂರ್ವ ಪ್ರಾಥಮಿಕ ಅಥವಾ ಕೆಜಿಯಲ್ಲಿ ಶೇಕಡಾ 71ರಷ್ಟು ಹಾಗೂ ಪ್ರಾಥಮಿಕ ಹಂತದಲ್ಲಿ (1ರಿಂದ 5ನೇ ತರಗತಿ) ಶೇಕಡಾ 40ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿದ್ದಾರೆ. ಇದಕ್ಕೆ ವಿರುದ್ಧವಾಗಿ, ಪ್ರಾಥಮಿಕ ಹಂತದಲ್ಲಿ ಕೇವಲ ಶೇಕಡಾ 10ರಷ್ಟು ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳಲ್ಲಿದ್ದಾರೆ.
ಕಲಿಕೆಯ ಮಟ್ಟ, ಕೈಗೆಟುಕುವ ವೆಚ್ಚ, ಶಾಲೆಯ ಸಾಧನೆ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಲಭ್ಯತೆಯ ಕುರಿತಾದ ಗ್ರಹಿಕೆಗಳು ಪೋಷಕರ ಆಯ್ಕೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ಸಂಶೋಧನಾ ಅಧ್ಯಯನಗಳು ಮತ್ತು ತಜ್ಞರು ಹೇಳುತ್ತಾರೆ.
ಖಾಸಗಿ ಶಾಲೆಯನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚಿನ ವೆಚ್ಚಕ್ಕೆ ಕಾರಣವಾಗುತ್ತದೆ. ಐಸಿಗ್ನಲ್ (ISignal) ಏಪ್ರಿಲ್ 2026ರಲ್ಲಿ ವರದಿ ಮಾಡಿದಂತೆ, ಸರ್ಕಾರಿ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಯ ಸರಾಸರಿ ವಾರ್ಷಿಕ ಶಿಕ್ಷಣ ವೆಚ್ಚ 2,863 ರೂಪಾಯಿಯಾಗಿದ್ದರೆ, ಖಾಸಗಿ ಶಾಲೆಗಳಲ್ಲಿ ಅದು 28,693 ರೂಪಾಯಿಯಷ್ಟಿದೆ.
►ಕೊರೊನಾ ನಂತರ ಚೇತರಿಸಿಕೊಂಡ ಖಾಸಗಿ ಶಾಲೆಗಳ ದಾಖಲಾತಿ
ಖಾಸಗಿ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ 2018-19ರಲ್ಲಿ 9.22 ಕೋಟಿಯಷ್ಟಿತ್ತು. ಇದು 2025-26ರ ವೇಳೆಗೆ 9.89 ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ 13.11 ಕೋಟಿಯಿಂದ 11.89 ಕೋಟಿಗೆ ಕುಸಿದಿದೆ. ಕೊರೊನಾ ಸಾಂಕ್ರಾಮಿಕವು ಈ ಪ್ರವೃತ್ತಿಗೆ ಅಡ್ಡಿಪಡಿಸಿತ್ತು. ಅದಾದ ನಂತರದ ವರ್ಷಗಳಲ್ಲಿ ಸರ್ಕಾರಿ ಶಾಲಾ ದಾಖಲಾತಿ ಪ್ರತಿವರ್ಷ ಕಡಿಮೆಯಾಗುತ್ತಾ ಬಂದಿದ್ದರೆ, ಖಾಸಗಿ ಶಾಲಾ ದಾಖಲಾತಿ ಮತ್ತೆ ಚೇತರಿಸಿಕೊಂಡಿದೆ.
UDISE+ ಡೇಟಾ ಪ್ರಕಾರ, ಇದೇ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆಯೂ 78,500ರಷ್ಟು ಕಡಿಮೆಯಾಗಿದ್ದು, 2025-26ರಲ್ಲಿ 10.1 ಲಕ್ಷಕ್ಕೆ ತಲುಪಿದೆ. ಇದರಲ್ಲಿ ಅತಿ ದೊಡ್ಡ ಕುಸಿತ (51,000ಕ್ಕೂ ಹೆಚ್ಚು) 2019-20ರಲ್ಲಿ ಕಂಡುಬಂದಿದೆ. ಇದಕ್ಕೆ ವಿರುದ್ಧವಾಗಿ, ಖಾಸಗಿ ಕ್ಷೇತ್ರದಲ್ಲಿ ಸುಮಾರು 15,000 ಶಾಲೆಗಳು ಹೆಚ್ಚಾಗಿದ್ದು, 2025-26ರ ವೇಳೆಗೆ ಒಟ್ಟು ಶಾಲೆಗಳ ಸಂಖ್ಯೆ ಸುಮಾರು 3.42 ಲಕ್ಷಕ್ಕೆ ಏರಿಕೆಯಾಗಿದೆ.
ಭಾರತದಲ್ಲಿನ ಖಾಸಗಿ ಶಿಕ್ಷಣದ ಕುರಿತು 2019ರಲ್ಲಿ ನಡೆದ ಪರಿಶೀಲನೆಯು, ಈ ಬೆಳವಣಿಗೆಯು ಪೋಷಕರ ಬೇಡಿಕೆಗೆ ಸಂಬಂಧಿಸಿದೆ ಹಾಗೂ ಕಡಿಮೆ ಶುಲ್ಕದ ಖಾಸಗಿ ಶಾಲೆಗಳು ಈ ಕ್ಷೇತ್ರದ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡಿವೆ ಎಂದು ಉಲ್ಲೇಖಿಸಿದೆ.
ಐಸಿಗ್ನಲ್ ಆಗಸ್ಟ್ 2025ರಲ್ಲಿ ವರದಿ ಮಾಡಿದಂತೆ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಖಾಸಗಿ ಶಾಲಾ ವಿದ್ಯಾರ್ಥಿಗಳು ಓದುವುದು ಮತ್ತು ಗಣಿತದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆದರೆ ಈ ಇಬ್ಬರ ನಡುವಿನ ಅಂತರವು ಕಡಿಮೆಯಾಗುತ್ತಿದೆ.
ವಿಶೇಷವಾಗಿ ಮಹಾನಗರ ಪಾಲಿಕೆ, ನಗರಸಭೆ ಮತ್ತು ಜಿಲ್ಲಾ ಪಂಚಾಯತ್ ಶಾಲೆಗಳ ಬಗ್ಗೆ ಪೋಷಕರಲ್ಲಿ ಅಸಮಾಧಾನವಿದೆ. ಖಾಸಗಿ ಶಾಲೆಗಳ ದಾಖಲಾತಿ ಹೆಚ್ಚಳವು ಆ ಅಸಮಾಧಾನದ ಪ್ರತಿಫಲನ" ಎಂದು ಮಹಾರಾಷ್ಟ್ರದ ನಿವೃತ್ತ ಪ್ರಾಂಶುಪಾಲರು, ಶಿಕ್ಷಣತಜ್ಞರು ಮತ್ತು ಸಾಮಾಜಿಕ ಹೋರಾಟಗಾರರಾದ ಹೇರಂಬ ಕುಲಕರ್ಣಿ ಹೇಳಿದ್ದು, ಈ ಆಯ್ಕೆಯನ್ನು "ಒಂದು ರೀತಿಯ ನಕಾರಾತ್ಮಕ ಮತದಾನ" ಎಂದು ಕರೆದಿದ್ದಾರೆ.
"ಖಾಸಗಿ ಶಾಲೆಗಳು ಉತ್ತಮ ಗುಣಮಟ್ಟ ಹೊಂದಿವೆ ಎಂದೇನೂ ಇಲ್ಲ. ಅವುಗಳನ್ನು ಮೇಲ್ವಿಚಾರಣೆ ಮಾಡಲು ಸೂಕ್ತ ವ್ಯವಸ್ಥೆಯೂ ಇಲ್ಲ. ಅಲ್ಲೂ ಮಕ್ಕಳು ಸರಿಯಾಗಿ ಬರೆಯುವುದನ್ನು ಕಲಿಯದಿರಬಹುದು ಹಾಗೂ ಶಿಕ್ಷಕರಿಗೆ ಸೂಕ್ತ ತರಬೇತಿ ಇರದೇ ಇರಬಹುದು" ಎಂದಿದ್ದಾರೆ ಕುಲಕರ್ಣಿ.
►ರಾಜ್ಯವಾರು ಚಿತ್ರಣ
ದೊಡ್ಡ ರಾಜ್ಯಗಳ ಪೈಕಿ, ತೆಲಂಗಾಣವು 2025-26ರಲ್ಲಿ ಶೇಕಡಾ 64.5ರಷ್ಟು ಖಾಸಗಿ ಶಾಲಾ ದಾಖಲಾತಿಯೊಂದಿಗೆ ಅತ್ಯಧಿಕ ಪ್ರಮಾಣವನ್ನು ದಾಖಲಿಸಿದೆ. ಹರ್ಯಾಣ ಮತ್ತು ಉತ್ತರಾಖಂಡ ಶೇಕಡಾ 62ರಷ್ಟರೊಂದಿಗೆ ನಂತರದ ಸ್ಥಾನಗಳಲ್ಲಿವೆ.
ಮತ್ತೊಂದೆಡೆ, ಬಿಹಾರದ ಖಾಸಗಿ ಶಾಲಾ ದಾಖಲಾತಿ ಪಾಲು 2018-19ರಲ್ಲಿ ಶೇಕಡಾ 10.2ರಷ್ಟಿದ್ದುದು 2025-26ರಲ್ಲಿ ಶೇಕಡಾ 14.8ಕ್ಕೆ ಏರಿಕೆಯಾಗಿದೆ. ಪಶ್ಚಿಮ ಬಂಗಾಳದ ಪಾಲು ಶೇಕಡಾ 11.4ರಿಂದ ಶೇಕಡಾ 6.3ಕ್ಕೆ ಕುಸಿದಿದೆ.
"ಹಿಂದೆ ಬಿಹಾರದ ಜನರು ಖಾಸಗಿ ಶಾಲೆಗಳತ್ತ ಗಮನ ಹರಿಸುತ್ತಿರಲಿಲ್ಲ. ಆದರೆ ಶಿಕ್ಷಣ ಹಕ್ಕು ಕಾಯ್ದೆ ಬಂದ ನಂತರ, ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಅಗತ್ಯ ಎಂಬ ಅರಿವು ಜನರಲ್ಲಿ ಕ್ರಮೇಣ ಬೆಳೆಯುತ್ತಿದೆ" ಎಂದು ಆರ್ಟಿಇ ಫೋರಂ ಬಿಹಾರದ ಸಂಚಾಲಕ ಅನಿಲ್ ಕುಮಾರ್ ರಾಯ್ ತಿಳಿಸಿದ್ದಾರೆ.
2023ರಲ್ಲಿ ಬಿಹಾರದ ಸರ್ಕಾರಿ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ, ಪರಿಶೀಲಿಸಿದ ಪ್ರಾಥಮಿಕ ಶಾಲೆಗಳಲ್ಲಿ ಮೂರನೇ ಎರಡರಷ್ಟು ಹಾಗೂ ಬಹುತೇಕ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತವು 30ಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ. ಹಾಜರಾತಿಯು ಪ್ರಾಥಮಿಕ ಶಾಲೆಗಳಲ್ಲಿ ಶೇಕಡಾ 23 ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶೇಕಡಾ 20ರಷ್ಟಿತ್ತು. ಶೇಕಡಾ 90ರಷ್ಟು ಪ್ರಾಥಮಿಕ ಶಾಲೆಗಳಲ್ಲಿ ಸೂಕ್ತ ಆವರಣ ಗೋಡೆ, ಆಟದ ಮೈದಾನ ಅಥವಾ ಗ್ರಂಥಾಲಯದ ಸೌಲಭ್ಯವಿರಲಿಲ್ಲ.
ಬಿಹಾರದಲ್ಲಿ ಖಾಸಗಿ ಶಾಲಾ ದಾಖಲಾತಿ ತುಲನಾತ್ಮಕವಾಗಿ ಕಡಿಮೆಯಿರಲು ಜನರ ಆರ್ಥಿಕ ಶಕ್ತಿಯೇ ಮುಖ್ಯ ಕಾರಣ ಇರಬಹುದು ಎಂದು ರಾಯ್ ಹೇಳಿದ್ದಾರೆ. "ಬಿಹಾರವು ಅತ್ಯಂತ ಬಡ ರಾಜ್ಯವಾಗಿದೆ. ಕುಟುಂಬವೊಂದರ ತಿಂಗಳ ಆದಾಯ 6,000 ರೂಪಾಯಿಯಾಗಿದ್ದರೆ, ಆ ಕುಟುಂಬ ಹೇಗೆ ಜೀವನ ನಡೆಸಲು ಸಾಧ್ಯ? ಇಂತಹ ಕುಟುಂಬಗಳಿಗೆ ಸರ್ಕಾರಿ ಶಾಲೆಗಳೇ ಏಕೈಕ ಆಯ್ಕೆಯಾಗಿ ಉಳಿಯುತ್ತವೆ" ಎಂದು ರಾಯ್ ವಿವರಿಸಿದ್ದಾರೆ.
ವಿಷಯಾಧಾರಿತ ಶಿಕ್ಷಕರ ಕೊರತೆಯು ಕೆಲವು ಕುಟುಂಬಗಳನ್ನು ಹೊರಹೋಗುವಂತೆ ಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿಯುಳ್ಳ ಪೋಷಕರು, ಇಲ್ಲಿ ಸರಿಯಾಗಿ ಪಾಠ ನಡೆಯುತ್ತಿಲ್ಲ ಎಂದು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ, ಎಲ್ಲಿ ಸೂಕ್ತ ಬೋಧನೆ ಸಿಗುತ್ತದೆ ಎಂದು ಭಾವಿಸುತ್ತಾರೋ ಅಲ್ಲಿಗೆ ಸೇರಿಸುತ್ತಿದ್ದಾರೆ."
ಬಿಹಾರ ಮತ್ತು ಪಶ್ಚಿಮ ಬಂಗಾಳ ಎರಡೂ ರಾಜ್ಯಗಳಲ್ಲಿ ಖಾಸಗಿ ಟ್ಯೂಷನ್ಗಳ ಮೇಲಿನ ಅವಲಂಬನೆ ಹೆಚ್ಚಿರುವುದು ಕಂಡುಬರುತ್ತದೆ. ಎಎಸ್ಇಆರ್ (ASER) 2022ರ ಡೇಟಾ ಪ್ರಕಾರ, ಗ್ರಾಮೀಣ ಬಿಹಾರದಲ್ಲಿ 1ರಿಂದ 8ನೇ ತರಗತಿಯ ಶೇಕಡಾ 71.5ರಷ್ಟು ಮಕ್ಕಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇಕಡಾ 73.9ರಷ್ಟು ಮಕ್ಕಳು ಹಣ ನೀಡಿ ಟ್ಯೂಷನ್ ತರಗತಿಗಳಿಗೆ ಹೋಗುತ್ತಿದ್ದಾರೆ. ದೇಶದಲ್ಲೇ ಇದು ಅತ್ಯಧಿಕ ಪ್ರಮಾಣಗಳಲ್ಲಿ ಒಂದಾಗಿದೆ.
►ತರಗತಿವಾರು ಬದಲಾವಣೆಗಳು
2025-26ರಲ್ಲಿ ಶೇಕಡಾ 10.4ರಷ್ಟು ಪ್ರಾಥಮಿಕ ಮತ್ತು ಶೇಕಡಾ 23.9ರಷ್ಟು ಪ್ರೌಢಶಾಲೆಗಳಿಗೆ ಹೋಲಿಸಿದರೆ, ಶೇಕಡಾ 64.5ರಷ್ಟು ಹೈಯರ್ ಸೆಕೆಂಡರಿ ಶಾಲೆಗಳು ಖಾಸಗಿ ವಲಯದಲ್ಲಿದ್ದವು. ಪ್ರಾಥಮಿಕ ಹಂತದಲ್ಲಿ ಖಾಸಗಿ ಶಾಲಾ ದಾಖಲಾತಿಯು 2021-22ರಲ್ಲಿ ಶೇಕಡಾ 32ರಷ್ಟಿದ್ದುದು 2025-26ರಲ್ಲಿ ಶೇಕಡಾ 39.9ಕ್ಕೆ ಏರಿಕೆಯಾಗಿದೆ. ಪ್ರೌಢಶಾಲಾ ಹಂತದಲ್ಲಿ ಇದು ಶೇಕಡಾ 33.3ರಿಂದ ಶೇಕಡಾ 35.9ಕ್ಕೆ ಹೆಚ್ಚಾಗಿದೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ದಾಖಲಾತಿಯು ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿದೆ. 2024-25ರಲ್ಲಿ ಸರ್ಕಾರಿ ಶಾಲಾ ದಾಖಲಾತಿಯಲ್ಲಿ ಪರಿಶಿಷ್ಟ ಜಾತಿಯ (SC) ವಿದ್ಯಾರ್ಥಿಗಳು ಶೇಕಡಾ 22.8ರಷ್ಟಿದ್ದರೆ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇಕಡಾ 13.9ರಷ್ಟಿದ್ದರು. ಇದಕ್ಕೆ ಹೋಲಿಸಿದರೆ ಖಾಸಗಿ ಶಾಲೆಗಳಲ್ಲಿ ಇವರ ಪಾಲು ಅರ್ಧದಷ್ಟಿದೆ. ಎಸ್ಸಿ ಸಮುದಾಯದವರು ಶೇಕಡಾ 12.1 ಮತ್ತು ಎಸ್ಟಿ ಸಮುದಾಯದವರು ಶೇಕಡಾ 4.9ರಷ್ಟಿದ್ದಾರೆ.
ಇದಕ್ಕೆ ವಿರುದ್ಧವಾಗಿ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಶೇಕಡಾ 36.4ರಷ್ಟಿದ್ದು, ಸರ್ಕಾರಿ ಶಾಲೆಗಳಲ್ಲಿನ ತಮ್ಮ ಪಾಲಿಗಿಂತ (ಶೇಕಡಾ 20.1) ಸುಮಾರು ದುಪ್ಪಟ್ಟು ಪ್ರಮಾಣದಲ್ಲಿದ್ದಾರೆ.
ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು 2024-25ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೇಕಡಾ 43.2ರಷ್ಟು ಮತ್ತು ಖಾಸಗಿ ಶಾಲೆಗಳಲ್ಲಿ ಶೇಕಡಾ 46.6ರಷ್ಟು ದಾಖಲಾತಿ ಹೊಂದಿದ್ದಾರೆ.
►ಪೋಷಕರ ಮನಸ್ಥಿತಿ ಮತ್ತು ಆಯ್ಕೆ
ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಸಂಸ್ಥೆಗಳ ಪಾಲು 2019-20ರಲ್ಲಿ ಶೇಕಡಾ 38.2ರಷ್ಟಿದ್ದದ್ದು 2024-25ರಲ್ಲಿ ಶೇಕಡಾ 43.9ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿ ಪಾಲು ಶೇಕಡಾ 51ರಿಂದ ಶೇಕಡಾ 60.7ಕ್ಕೆ ಹೆಚ್ಚಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಸಂಸ್ಥೆಗಳ ಪ್ರಮಾಣ 2024-25ರಲ್ಲಿ ಶೇಕಡಾ 6.4ರಷ್ಟಿದ್ದರೆ, ವಿದ್ಯಾರ್ಥಿಗಳ ದಾಖಲಾತಿ ಶೇಕಡಾ 8.3ರಷ್ಟಿತ್ತು.
ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯ ಕುರಿತ ನೀತಿ ಆಯೋಗದ ವರದಿಯು, ಖಾಸಗಿ ಶಾಲೆಗಳತ್ತ ಜನರ ಒಲವು ಹೆಚ್ಚುತ್ತಿರುವುದು ಮಕ್ಕಳ ಭವಿಷ್ಯದ ಕುರಿತ ಪೋಷಕರ ಆಕಾಂಕ್ಷೆಗಳನ್ನು ಪ್ರತಿಫಲಿಸುತ್ತದೆ ಎಂದು ಹೇಳಿದೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣ, ಶಿಸ್ತು ಮತ್ತು ಉದ್ಯೋಗಾವಕಾಶಗಳ ಕುರಿತಾದ ನಂಬಿಕೆಗಳೇ ಈ ಬೇಡಿಕೆಗೆ ಮುಖ್ಯ ಕಾರಣವಾಗಿವೆ. ಖಾಸಗಿ ಕ್ಷೇತ್ರದಲ್ಲಿನ ಶಿಕ್ಷಣದ ಗುಣಮಟ್ಟ, ಸಮಾನತೆ ಮತ್ತು ನಿಯಂತ್ರಣದ ಕುರಿತಾಗಿಯೂ ವರದಿ ಕಳವಳ ವ್ಯಕ್ತಪಡಿಸಿದೆ.
"ತಮ್ಮ ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕಾದರೆ ಆ ಕೋರ್ಸ್ ಗಳು ಇಂಗ್ಲಿಷ್ನಲ್ಲಿರುತ್ತವೆ ಎಂದು ಜನರು ಭಾವಿಸುತ್ತಾರೆ. ಹೀಗಾಗಿ ಮಕ್ಕಳಿಗೆ ಉತ್ತಮ ಅವಕಾಶಗಳು ಸಿಗಬೇಕಾದರೆ ಅವರನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೇ ಕಳುಹಿಸಬೇಕು ಎಂದು ಪೋಷಕರು ಅಂದುಕೊಳ್ಳುತ್ತಾರೆ. ಪೋಷಕರಲ್ಲಿರುವ ಈ ಗ್ರಹಿಕೆಯನ್ನು ಹೇಗೆ ಬದಲಾಯಿಸುವುದು ಎಂಬುದೇ ಈಗಿರುವ ಸವಾಲಾಗಿದೆ" ಎಂದು ಕುಲಕರ್ಣಿ ಹೇಳಿದ್ದಾರೆ.
ಖಾಸಗಿ ಶಾಲೆಗಳ ಬಗ್ಗೆ ಪೋಷಕರ ಒಲವಿಗೆ ಉತ್ತಮ ಕಲಿಕಾ ಮಟ್ಟದ ಕುರಿತಾದ ನಂಬಿಕೆಗಳೂ ಕಾರಣವಾಗಿರಬಹುದು. ಐಸಿಗ್ನಲ್ ಆಗಸ್ಟ್ 2025ರಲ್ಲಿ ವರದಿ ಮಾಡಿದಂತೆ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಖಾಸಗಿ ಶಾಲಾ ವಿದ್ಯಾರ್ಥಿಗಳು ಓದುವುದು ಮತ್ತು ಗಣಿತದಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉತ್ತಮ ಪ್ರಗತಿ ಕಾಣುತ್ತಿರುವುದರಿಂದ ಈ ಇಬ್ಬರ ನಡುವಿನ ಅಂತರವು ಕಡಿಮೆಯಾಗುತ್ತಿದೆ.
ಖಾಸಗಿ ಶಾಲಾ ಶಿಕ್ಷಣವು ಸಾಮಾಜಿಕ ಅಂತಸ್ತಿನೊಂದಿಗೂ ಬೆಸೆದುಕೊಂಡಿದೆ. ಕೆಳವರ್ಗದ ಜನರು ಮೇಲ್ವರ್ಗದವರನ್ನು ಅನುಕರಿಸುವ ಪ್ರವೃತ್ತಿ ಇಲ್ಲಿದೆ. ಶ್ರೀಮಂತರು ತಮ್ಮ ಮಕ್ಕಳನ್ನು ಇಂಟರ್ನ್ಯಾಷನಲ್ ಅಥವಾ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಪ್ರಾರಂಭಿಸಿದರು. ನಂತರ ಸರ್ಕಾರಿ ನೌಕರರು ಅವರನ್ನು ಅನುಕರಿಸಲು ಶುರು ಮಾಡಿದರು. ಕೊನೆಗೆ ಪಾತ್ರೆ ಮಾರಾಟ ಮಾಡುವ ವ್ಯಕ್ತಿಯೂ ತನ್ನ ಮಗು ಇಂತಹ ಶಾಲೆಗೆ ಹೋದರೆ ಮಗುವಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಭಾವಿಸಲು ತೊಡಗಿದನು" ಎಂದಿದ್ದಾರೆ ಕುಲಕರ್ಣಿ.
►ನಿಯಂತ್ರಣ ಮತ್ತು ಜವಾಬ್ದಾರಿ
ರಾಷ್ಟ್ರೀಯ ಶಿಕ್ಷಣ ನೀತಿ 2020 (NEP 2020) ಖಾಸಗಿ ಮತ್ತು ದಾನಿ ಸಂಸ್ಥೆಗಳ ಪಾತ್ರವನ್ನು ಗುರುತಿಸಿದೆ. ಕೆಲವು ಲಾಭಕೋರ ಖಾಸಗಿ ಶಾಲೆಗಳು ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸುತ್ತಿರುವುದು ಮತ್ತು ಪೋಷಕರನ್ನು ಆರ್ಥಿಕವಾಗಿ ಶೋಷಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ನೀತಿ ಆಯೋಗದ ವರದಿಯೂ ಖಾಸಗಿ ಕ್ಷೇತ್ರದಲ್ಲಿನ ಗುಣಮಟ್ಟ, ಸಮಾನತೆ ಮತ್ತು ನಿಯಂತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನಿಗದಿತ ಅವಧಿಯ ಮಾನ್ಯತೆ, ಶಾಲಾ ಸಾಧನೆಯ ಮೌಲ್ಯಮಾಪನ ಮತ್ತು ಮಕ್ಕಳ ಕಲಿಕಾ ಮಟ್ಟವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ರಾಷ್ಟ್ರೀಯ ವ್ಯವಸ್ಥೆಯ ಕೊರತೆಯನ್ನು ವರದಿ ತೋರಿಸಿದೆ.
"ಜವಾಬ್ದಾರಿಯು ಅತ್ಯಂತ ಪ್ರಮುಖ ವಿಚಾರವಾಗಿದೆ. ಶಿಕ್ಷಕರು ಉತ್ತಮ ವೇತನ ಪಡೆಯುತ್ತಿದ್ದಾರೆ, ಆದರೆ ಅವರ ಕೆಲಸದ ನಿರಂತರ ಮೇಲ್ವಿಚಾರಣೆ ನಡೆಯುತ್ತಿದೆಯೇ? ಸರಿಯಾಗಿ ಕೆಲಸ ಮಾಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಅರಿವು ಶಿಕ್ಷಕರಿಗೆ ಇರಬೇಕು. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿ ತಮ್ಮ ಕೆಲಸಕ್ಕೆ ಧಕ್ಕೆ ಬರುತ್ತದೆ ಎಂಬ ಭಯವಿಲ್ಲ. ಮಕ್ಕಳಿಗೆ ಪಾಠ ಮಾಡುವುದರಲ್ಲಿ ಜವಾಬ್ದಾರಿ ಅಗತ್ಯ. ನಿಮ್ಮ ವೇತನವು ನಿಮ್ಮ ಕಾರ್ಯಕ್ಷಮತೆಗೆ ಲಿಂಕ್ ಆಗಿದೆಯೇ? ಖಂಡಿತ ಇಲ್ಲ" ಎಂದು ಹೇಳಿದ್ದಾರೆ ಕುಲಕರ್ಣಿ.
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲೆಗಳ ಉದಾಹರಣೆಗಳನ್ನೂ ರಾಯ್ ಎತ್ತಿ ತೋರಿಸಿದ್ದಾರೆ. "ಉತ್ತಮ ಸರ್ಕಾರಿ ಶಾಲೆಗಳಿಗೆ ಉದಾಹರಣೆಗಳಿವೆ. ರಾಜ್ಯದ ಒಂದು ಶಾಲೆಯನ್ನು ನಾನು ಬಲ್ಲೆ, ಅದು ಎಷ್ಟು ಚೆನ್ನಾಗಿದೆ ಎಂದರೆ ಬೇಸಿಗೆ ರಜೆಯಲ್ಲೂ ಮಕ್ಕಳು ಅಲ್ಲೇ ಉಳಿದು ಓದುತ್ತಾರೆ. ಇಂತಹ ಉದಾಹರಣೆಗಳನ್ನು ಪ್ರೋತ್ಸಾಹಿಸಬೇಕು ಮತ್ತು ಶ್ಲಾಘಿಸಬೇಕು" ಎಂದು ರಾಯ್ ಹೇಳಿದ್ದಾರೆ.
ಸೌಜನ್ಯ: newslaundry.com