ನೆಡುತೋಪುಗಳು ಕಲಿಸಿದ ಪಾಠಗಳು ಮತ್ತು ಭವಿಷ್ಯದ ಕಾಡು
ಮರಗಳನ್ನು ನೆಡುವುದು ಎಂದರೆ ಅರಣ್ಯವನ್ನು ಪುನಃಸ್ಥಾಪಿಸುವುದು ಎಂದರ್ಥವಲ್ಲ. ಮರಗಳು ವಿರಳವಾಗಿರುವ ಪರಿಸರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವುದು ಸಹ ಮುಖ್ಯವಾಗಿದೆ.
ಅರಣ್ಯಗಳು ಸಹಜ ಬಗೆಯಲ್ಲಿಯೇ ಮರಳಿ ಬೆಳೆಯುವ ಪ್ರಕ್ರಿಯೆ, ವಾತಾವರಣದಲ್ಲಿನ ಶಾಖೋತ್ಪಾದಕ ಇಂಗಾಲದ ಮಟ್ಟ ತಗ್ಗುವುದಕ್ಕೆ ನೆರವಾಗುತ್ತದೆ. ಜೊತೆಗೇ, ಜೀವವೈವಿಧ್ಯತೆ, ಪರಿಸರ ವ್ಯವಸ್ಥೆಗಳಿಂದ ಸಿಗುವ ಪ್ರಯೋಜನಗಳು ಮತ್ತು ಜೀವನೋಪಾಯಗಳ ಸಾಧ್ಯತೆ ಹೆಚ್ಚುವುದಕ್ಕೆ ಕೂಡ ಅದು ಪೂರಕ.
ಆದರೆ ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡಲು ಜಾಗತಿಕವಾಗಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ ರೂಢಿಗೆ ಬಂದಿರುವುದು ವೇಗವಾಗಿ ಬೆಳೆಯುವ ಮರಗಳ ನೆಡುತೋಪುಗಳನ್ನು ನಿರ್ಮಿಸುವ ಕ್ರಮ. ಇದಕ್ಕೆ ಕಾರಣಗಳು ಸ್ಪಷ್ಟ. ಮರಗಳನ್ನು ನೆಡುವುದರಿಂದ ನೈಸರ್ಗಿಕ ರೀತಿಯ ಅರಣ್ಯ ಮರು ನಿರ್ಮಾಣಕ್ಕಿಂತ ಹೆಚ್ಚು ವೇಗವಾಗಿ ಫಲಿತಾಂಶ ಸಿಗುತ್ತದೆ ಎಂಬುದು ಒಂದು. ಸಾಕಷ್ಟು ಮರಗಳನ್ನು ತ್ವರಿತವಾಗಿ ಉತ್ಪಾದಿಸುತ್ತಿದ್ದರೆ, ಇಂಗಾಲದ ಮಾಲಿನ್ಯವನ್ನು ಸರಿದೂಗಿಸಬಹುದೆಂಬುದು ಇದರ ಮತ್ತೊಂದು ಉದ್ದೇಶ.
ಜಮೀನುಗಳು ಮತ್ತು ಬಂಜರು ಭೂಮಿಯಲ್ಲಿನ ತೋಪುಗಳು ಉರುವಲು ಮತ್ತು ಕಟ್ಟಿಗೆಗಳನ್ನು ಒದಗಿಸಬಹುದು, ನೈಸರ್ಗಿಕ ಕಾಡುಗಳ ಮೇಲಿನ ಒತ್ತಡವನ್ನು ಈ ಮೂಲಕ ತಪ್ಪಿಸಬಹುದು ಮತ್ತು ಅದರಿಂದ ಅವುಗಳ ಪುನರುತ್ಪಾದನೆಗೂ ನೆರವಾಗುತ್ತದೆ. ಆದರೆ ತಪ್ಪುತಪ್ಪಾಗಿ ಯಾವುದೋ ಅಸಮರ್ಪಕವಾದ ಮರಗಳ ತೋಪುಗಳನ್ನು ಬೆಳೆಸುವುದು ಅಪಾಯಕಾರಿಯಾಗಿಯೂ ಪರಿಣಮಿಸಬಹುದು. ಅದು, ಉತ್ತಮ ಪ್ರಭೇದದ ಮರಗಳನ್ನೇ ಆ ಪರಿಸರದಿಂದ ಇಲ್ಲವಾಗಿಸಬಹುದು.
200 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ನೆಡುತೋಪುಗಳ ದೊಡ್ಡ ಪ್ರಯೋಗವೇ ನಡೆದಿದೆ. ಮತ್ತದು ಕಾಡುಗಳನ್ನು ಮರುಸ್ಥಾಪಿಸುವ ವಿವಿಧ ವಿಧಾನಗಳು ಹೇಗೆಲ್ಲ ಸ್ಥಳೀಯ ಸಮುದಾಯಗಳು ಮತ್ತು ವಿಶಾಲ ಪರಿಸರದ ಮೇಲೆ ಪರಿಣಾಮ ಬೀರಬಲ್ಲವು ಎಂಬುದರ ಬಗ್ಗೆ ಪಾಠವಾಗಿಯೂ ನಮ್ಮೆದುರು ಇದೆ. ಹಿಂದಿನ ತಪ್ಪುಗಳು ಪುನರಾವರ್ತನೆಯಾಗದಂತೆ ತಡೆಯಲು ಈ ಅಪರೂಪದ ದೀರ್ಘಾವಧಿಯ ದೃಷ್ಟಿಕೋನವನ್ನು ಇಂದು ಅರಣ್ಯಾಧಿಕಾರಿಗಳು ಗಮನಿಸಬೇಕಿದೆ.
ಬ್ರಿಟಿಷರ ಹಿಡಿತದಲ್ಲಿ ದೇಶವಿದ್ದಾಗ, ಅವರು ಇಲ್ಲಿನ ಕಾಡುಗಳನ್ನು ಹೇಗೆ ತಮಗಾಗಿ ಬಳಸಿಕೊಂಡರು ಎಂಬುದನ್ನು ನೋಡಬೇಕು. ಬ್ರಿಟನ್‌ಗೆ ರೈಲ್ವೆ ಸ್ಲೀಪರ್‌ಗಳನ್ನು ಹಾಕಲು ಮತ್ತು ಭಾರತದಿಂದ ಹತ್ತಿ, ರಬ್ಬರ್ ಮತ್ತು ಚಹಾವನ್ನು ಸಾಗಿಸುವುದಕ್ಕಾಗಿ ಹಡಗುಗಳನ್ನು ನಿರ್ಮಿಸಲು ಹೆಚ್ಚಿನ ಪ್ರಮಾಣದ ಮರದ ಅಗತ್ಯವಿತ್ತು. 1865ರ ಭಾರತೀಯ ಅರಣ್ಯ ಕಾಯ್ದೆಯ ಮೂಲಕ, ತೇಗ, ಸಾಲ್ ಮತ್ತು ದೇವದಾರುಗಳಂತಹ ಮರಗಳನ್ನು ಹೊಂದಿರುವ ಕಾಡುಗಳನ್ನು ಅವರು ಸರಕಾರದ ವ್ಯಾಪ್ತಿಗೆ ತೆಗೆದುಕೊಂಡರು.
ಈ ಕಾಡುಗಳು ಬ್ರಿಟಿಷ್ ವಸಾಹತುಶಾಹಿ ವಶಕ್ಕೆ ಹೋಗುತ್ತಿದ್ದಂತೆ, ಅಧಿಕಾರಿಗಳು ಹುಲ್ಲು ಮತ್ತು ಬಿದಿರನ್ನು ಬಳಸಿಕೊಳ್ಳುತ್ತಿದ್ದ ಸ್ಥಳೀಯ ಜನರ ಹಕ್ಕುಗಳನ್ನು ಕೂಡ ಕಸಿದುಕೊಂಡರು. ದನ ಮೇಯಿಸುವುದನ್ನೂ ನಿರ್ಬಂಧಿಸಲಾಯಿತು. ಇದು ಕಾಡನ್ನೇ ನಂಬಿದ್ದ ಸ್ಥಳೀಯ ಸಮುದಾಯಗಳನ್ನು ದಿಕ್ಕುಗೆಡಿಸಿತು.
ಈ ನಡುವೆ, ತೇಗದ ತೋಪುಗಳು ಭಾರತದ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ ಮತ್ತು ಬಾಳಿಕೆ ಬರುವ ಮತ್ತು ಆಕರ್ಷಕ ಮರದ ಮೂಲವಾಗಿದೆ ಎಂಬ ಕಾರಣಕ್ಕೆ ಅವುಗಳ ತೋಪು ಗಳನ್ನು ಆಕ್ರಮಣಕಾರಿ ರೀತಿಯಲ್ಲಿ ಬೆಳೆಸಲಾಯಿತು. ಹುಲ್ಲುಗಾವಲುಗಳು ಮತ್ತು ತೆರೆದ ಕುರುಚಲು ಕಾಡುಗಳ ನೆಲೆಯಾಗಿದ್ದ ಸ್ಥಳಗಳನ್ನೆಲ್ಲ ತೇಗದ ಏಕ ಪ್ರಭೇದದ ತೋಪುಗಳೇ ಆಕ್ರಮಿಸಿಬಿಟ್ಟವು.
ಭಾರತದ ಪರಿಸರದವಲ್ಲದ ಯೂಕಲಿಪ್ಟಸ್ ಮತ್ತಿತರ ವಿಲಕ್ಷಣ ಮರಗಳನ್ನು ಸುಮಾರು 1790ರಿಂದ ಇಲ್ಲಿ ಬೆಳೆಸುವುದು ಶುರುವಾಯಿತು. ಹಿಮಾಲಯ ಪ್ರದೇಶದಲ್ಲಿ ವ್ಯಾಪಕವಾದ ತೋಟಗಳಲ್ಲಿ ರಾಳದ ಮೂಲವಾಗಿ ಯುರೋಪ್ ಮತ್ತು ಉತ್ತರ ಅಮೆರಿಕದ ಪೈನ್‌ಗಳನ್ನು, ಆಸ್ಟ್ರೇಲಿಯದ ಅಕೇಶಿಯ ಮರಗಳನ್ನು ಬ್ರಿಟಿಷರು ನೆಟ್ಟರು. ಅಕೇಶಿಯ ಜಾತಿಗಳಲ್ಲಿ ಒಂದಾದ ವಾಟಲ್(ಅಕೇಶಿಯ ಮೆರ್ನ್ಸಿ)ನ ಲಕ್ಷಾಂತರ ಸಸಿಗಳನ್ನು ಮೊದಲು 1861ರಲ್ಲಿ ಪಶ್ಚಿಮ ಘಟ್ಟಗಳ ನೀಲಗಿರಿ ಜಿಲ್ಲೆಯಲ್ಲಿ ನೆಡಲಾಯಿತು.
ಈ ಪ್ರದೇಶವನ್ನು ವಿಜ್ಞಾನಿಗಳು ಜೈವಿಕ ವೈವಿಧ್ಯತೆಯ ಹಾಟ್‌ಸ್ಪಾಟ್ ಎಂದು ಕರೆಯುತ್ತಾರೆ. ಜಾಗತಿಕವಾಗಿ ಅಪರೂಪದ ಇಂಥ ಪರಿಸರ ವ್ಯವಸ್ಥೆ ವಿವಿಧ ಜಾತಿಗಳಿಂದ ತುಂಬಿರುತ್ತದೆ. ವಾಟಲ್ ಆಗಿನಿಂದ ಆಕ್ರಮಣಕಾರಿಯಾಗಿದೆ ಮತ್ತು ಪ್ರದೇಶದ ಹೆಚ್ಚಿನ ಪರ್ವತ ಹುಲ್ಲುಗಾವಲುಗಳನ್ನು ಆಕ್ರಮಿಸಿಕೊಂಡಿದೆ.
ಅದೇ ರೀತಿ, ಪೈನ್ ಹಿಮಾಲಯದ ಹೆಚ್ಚಿನ ಭಾಗಗಳಲ್ಲಿ ಹರಡಿದೆ ಮತ್ತು ಸ್ಥಳೀಯ ಓಕ್ ಮರಗಳನ್ನು ಇಲ್ಲವಾಗಿಸಿದೆ. ಮಧ್ಯ ಭಾರತದಲ್ಲಿ ಸ್ಥಳೀಯ ಗಟ್ಟಿಮರ ಸಾಲ್ ಬದಲಿಗೆ ತೇಗ ಬಂದಿದೆ. ಓಕ್ ಮತ್ತು ಸಾಲ್ ಎರಡೂ ಇಂಧನ, ಮೇವು, ರಸಗೊಬ್ಬರ, ಔಷಧ ಮತ್ತು ತೈಲಕ್ಕಾಗಿ ಮೌಲ್ಯಯುತ ವಾಗಿದ್ದವು. ಅವು ಇಲ್ಲವಾದ ಪರಿಣಾಮ ಮತ್ತು ಹುಲ್ಲುಗಾವಲು ಜಾಗ ಅತಿಕ್ರಮಗೊಂಡದ್ದರ ಪರಿ ಣಾಮ ಸ್ಥಳೀಯರನ್ನು ಸಂಕಷ್ಟಕ್ಕೆ, ಬಡತನಕ್ಕೆ ತಳ್ಳಿತು.
ಈಗ 2030ರ ವೇಳೆಗೆ ಸುಮಾರು 21 ಮಿಲಿಯನ್ ಹೆಕ್ಟೇರ್ ಅರಣ್ಯವನ್ನು ಪುನಃಸ್ಥಾಪಿಸಲು ಭಾರತ ಭರವಸೆ ನೀಡಿದೆ. 2018ರಲ್ಲಿ ಭಾರತ ಸರಕಾರ ಮತ್ತು ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಬಿಡುಗಡೆ ಮಾಡಿದ ಪ್ರಗತಿ ವರದಿಯ ಪ್ರಕಾರ, ಸುಮಾರು 10 ಮಿಲಿಯನ್ ಹೆಕ್ಟೇರ್ ಮರುಸ್ಥಾಪನೆ ಹಂತದಲ್ಲಿದೆ.
ಮರಗಳಿಂದ ಆವೃತವಾಗಿರುವ ಭೂಮಿಯ ವಿಸ್ತೀರ್ಣವನ್ನು ಹೆಚ್ಚಿಸುವ ಈ ಕ್ರಮ, ದೇಶದ ಶೇ.33ರಷ್ಟು ಪ್ರದೇಶದಲ್ಲಿ ಮರಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ನೀತಿಯ ಅಡಿಯಲ್ಲಿನ ಯೋಜನೆಗಳು ನೀಲಗಿರಿ ಅಥವಾ ಬಿದಿರಿನಂತಹ ಒಂದೇ ಜಾತಿಯನ್ನು ಒಳಗೊಂಡಿರುವ ನೆಡುತೋಪು ಗಳನ್ನು ಒಳಗೊಂಡಿರುತ್ತವೆ. ಅವು ವೇಗವಾಗಿ ಬೆಳೆಯುತ್ತವೆ. ಆದರೆ ಮೇಲ್ನೋಟಕ್ಕೆ ಹಸಿರಿನ ವಿಸ್ತರಣೆಯಾದಂತೆ ಕಾಣುವ ಇಂಥ ಕಾಡುಗಳ ಅಪಾಯವೇನು?
ಕೆಲವೊಮ್ಮೆ ಈ ಮರಗಳನ್ನು ಹುಲ್ಲುಗಾವಲುಗಳು ಮತ್ತು ಇತರ ಪರಿಸರ ವ್ಯವಸ್ಥೆಗಳಲ್ಲಿ ಬೆಳೆಸಲಾಗುತ್ತದೆ, ಇಂಥ ಅರಣ್ಯೀಕರಣ, ಮೇಯಿಸಲು ಮತ್ತು ಉತ್ಪಾದನೆಗಾಗಿ ಈ ಪರಿಸರ ವ್ಯವಸ್ಥೆಗಳನ್ನು ಅವಲಂಬಿಸಿರುವ ಗ್ರಾಮೀಣ ಮತ್ತು ಸ್ಥಳೀಯ ಜನರಿಗೆ ಮಾರಕವಾಗಿ ಪರಿಣಮಿಸುತ್ತದೆ. ವಿಲಕ್ಷಣ ಮರಗಳನ್ನು ನಿರಂತರವಾಗಿ ಬೆಳೆಸುವುದು 200 ವರ್ಷಗಳ ಹಿಂದೆ ವಾಟಲ್‌ನಂತೆಯೇ ಅಪಾಯವನ್ನುಂಟುಮಾಡುತ್ತದೆ.
ಧನಾತ್ಮಕ ಪ್ರಕರಣಗಳ ಕುರಿತ ಅಧ್ಯಯನಗಳೂ ಇವೆ. 2006ರ ಅರಣ್ಯ ಹಕ್ಕುಗಳ ಕಾಯ್ದೆ ಒಂದು ಕಾಲದಲ್ಲಿ ಸಾಂಪ್ರದಾಯಿಕ ಬಳಕೆಯಲ್ಲಿದ್ದ ಅರಣ್ಯ ಪ್ರದೇಶಗಳನ್ನು ನಿರ್ವಹಿಸಲು ಗ್ರಾಮಸಭೆಗಳಿಗೆ ಅಧಿಕಾರ ನೀಡಿತು. ಮಧ್ಯ ಭಾರತದ ಗಡ್ಚಿರೋಲಿ ಜಿಲ್ಲೆಯಲ್ಲಿ ಹಲವಾರು ಗ್ರಾಮ ಸಭೆಗಳು ಕ್ಷೀಣಿಸಿದ ಕಾಡುಗಳನ್ನು ಪುನಃಸ್ಥಾಪಿಸಿವೆ ಮತ್ತು ಅವುಗಳನ್ನು ಬೀಡಿ ಕಟ್ಟಲು ಬಳಸಲಾಗುವ ಟೆಂಡು ಎಲೆಗಳ ಸುಸ್ಥಿರ ಮೂಲವಾಗಿ ನಿರ್ವಹಿಸಿವೆ. ಪಶ್ಚಿಮ ಭಾರತದ ಕಛ್ ಹುಲ್ಲುಗಾವಲುಗಳಲ್ಲಿ 19ನೇ ಶತಮಾನದ ಕೊನೆಯಲ್ಲಿ ಬ್ರಿಟಿಷ್ ಅರಣ್ಯಾಧಿಕಾರಿಗಳು ಮೊದಲು ಪರಿಚಯಿಸಿದ ಆಕ್ರಮಣಕಾರಿ ಗಂಡೋ ಬವಾಲ್ ಅನ್ನು ತೆಗೆದುಹಾಕಿ ಹುಲ್ಲುಗಾವಲುಗಳನ್ನು ಪುನಃಸ್ಥಾಪಿಸುವಲ್ಲಿಯೂ ಸ್ಥಳೀಯ ಸಮುದಾಯಗಳು ಯಶಸ್ವಿಯಾದವು.
ಅರಣ್ಯ ಪುನಶ್ಚೇತನ ಪ್ರಯತ್ನಗಳ ಯಶಸ್ಸನ್ನು ಮೇಲೆ ಕಾಣುವ ಮರಗಳ ಹೊದಿಕೆಯಿಂದ ಮಾತ್ರ ಅಳೆಯಲಾಗುವುದಿಲ್ಲ. ಅರಣ್ಯದ ಭಾರತೀಯ ಸರಕಾರದ ವ್ಯಾಖ್ಯಾನ ಇನ್ನೂ ಒಂದೇ ಮರದ ಜಾತಿಯ ತೋಪುಗಳು ಮತ್ತು ಹುಲ್ಲಿನ ಜಾತಿಗೆ ಸೇರಿದ ಬಿದಿರುಗಳನ್ನು ಒಳಗೊಂಡಿದೆ.
ಹೀಗಾಗಿ, ದ್ವೈವಾರ್ಷಿಕ ಅರಣ್ಯ ಸಮೀಕ್ಷೆಗಳು ಎಷ್ಟು ನೈಸರ್ಗಿಕ ಅರಣ್ಯವನ್ನು ಮರುಸ್ಥಾಪಿಸಲಾಗಿದೆ ಎಂಬುದನ್ನು ಲೆಕ್ಕಹಾಕಲು ಸಾಧ್ಯವಿಲ್ಲ ಅಥವಾ ಸ್ಥಳೀಯ ಮರಗಳನ್ನು ಸ್ಪರ್ಧಾತ್ಮಕ ನೆಡುತೋಪು ಪ್ರಭೇದಗಳೊಂದಿಗೆ ಬದಲಿಸುವುದರ ಪರಿಣಾಮ ಗಳನ್ನು ತಿಳಿಸಲು ಅಥವಾ ಈ ವಿಲಕ್ಷಣ ಮರಗಳು ನೈಸರ್ಗಿಕ ಹುಲ್ಲುಗಾವಲುಗಳನ್ನು ಆಕ್ರಮಿಸಿವೆಯೇ ಎಂದು ಗುರುತಿಸಲು ಸಾಧ್ಯವಿಲ್ಲ, ನಂತರ ಅವುಗಳನ್ನು ಮರುಸ್ಥಾಪಿತ ಕಾಡುಗಳೆಂದು ತಪ್ಪಾಗಿ ದಾಖಲಿಸಲಾಗುತ್ತದೆ.
ನೈಸರ್ಗಿಕ ಅರಣ್ಯ ಪುನರುತ್ಪಾದನೆ ಮತ್ತು ಮರ ಮತ್ತು ಇಂಧನಕ್ಕಾಗಿ ನೆಡುತೋಪುಗಳ ಅಗತ್ಯವೇನೋ ಇದೆ. ಆದರೆ ಇತರ ಪರಿಸರ ವ್ಯವಸ್ಥೆಗಳು ಮತ್ತು ಜನರ ಮೇಲೆ ಅದು ಬೀರುವ ಪರಿಣಾಮವೇನು ಎಂಬುದನ್ನು ಗಮನಿಸಬೇಕಾಗುತ್ತದೆ. ಅದು ಆಕ್ರಮಣಕಾರಿಯಾಗುವುದಿಲ್ಲ ಎಂದು ಖಚಿತಪಡಿಸಿ ಕೊಳ್ಳಲು ನೆಡುತೋಪಿನ ಜಾತಿಗಳನ್ನು ಎಚ್ಚರಿಕೆಯಿಂದ ಆರಿಸುವುದು ಅವಶ್ಯವಾಗಿರುತ್ತದೆ.
ಹಸಿರು ಹೊದಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಅರಣ್ಯ ಹಕ್ಕುಗಳು, ಸ್ಥಳೀಯ ಜೀವನೋಪಾಯಗಳು, ಜೀವವೈವಿಧ್ಯತೆ ಮತ್ತು ಇಂಗಾಲದ ಸಂಗ್ರಹಣೆಗೆ ಅದರ ಪರಿಣಾಮಗಳೇನು ಎಂಬ ನೆಲೆಯಲ್ಲಿ ನಿರ್ಣಯಿಸಬೇಕು. ಗಡ್ಚಿರೋಲಿಯಂತಹ ಸಮುದಾಯಗಳ ಮೂಲಕ ನಡೆದ ಪುನಃಸ್ಥಾಪನೆಯಂಥ ಕೆಲವು ಉತ್ತಮ ಉದಾಹರಣೆಗಳನ್ನು ಅಧ್ಯಯನ ಮಾಡಬೇಕು ಮತ್ತು ಆ ತಿಳುವಳಿಕೆಯನ್ನು ಅಳವಡಿಸಿಕೊಳ್ಳಬೇಕು.
ಮರಗಳನ್ನು ನೆಡುವುದು ಎಂದರೆ ಅರಣ್ಯವನ್ನು ಪುನಃಸ್ಥಾಪಿಸುವುದು ಎಂದರ್ಥವಲ್ಲ. ಮರಗಳು ವಿರಳವಾಗಿರುವ ಪರಿಸರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವುದು ಸಹ ಮುಖ್ಯವಾಗಿದೆ. ಮೇಲಿನಿಂದ ಕಾಡಿನ ಮೇಲಾವರಣವನ್ನು ಚಿತ್ರಿಸಿ ಯಶಸ್ಸನ್ನು ತೋರಿಸುವುದಕ್ಕಿಂತಲೂ, ಸ್ಥಳೀಯ ಜನರು ಮತ್ತು ಪರಿಸರಕ್ಕೆ ಅದರ ಪ್ರಯೋಜನ ಆಗುತ್ತದೆಯೇ ಎಂದು ನಿರ್ಧರಿಸುವುದು ಯಶಸ್ಸಿನ ಸರಿಯಾದ ಮಾನದಂಡವಾಗಿದೆ.
(ಕೃಪೆ:theconversation.com)