ಭಾರತದ ಫಿಫಾ U-15 ವಿಶ್ವಕಪ್‌ ತಂಡದಿಂದ ಹೊರನಡೆದ ರಂಜಿತ್ ಬಜಾಜ್; ಏನಿದು ವಿವಾದ?

Update: 2026-08-07 18:12 IST

ರಂಜಿತ್ ಬಜಾಜ್ | Photo Credit ; Instagram

ಭಾರತದ U-15 ತಂಡದ ವ್ಯವಸ್ಥಾಪಕರಾಗಿ ರಂಜಿತ್ ಬಜಾಜ್ ಅವರನ್ನು ಫೆಡರೇಶನ್ ನೇಮಿಸಿದ ಕೆಲವೇ ಗಂಟೆಗಳಲ್ಲಿ ಮಿನರ್ವಾ ಅಕಾಡೆಮಿ ಮಾಲೀಕರು ಪಾತ್ರವನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ.

ಅಝರ್ಬೈಜಾನ್ನಲ್ಲಿ ನಡೆಯಲಿರುವ ಫಿಫಾ U-15 ವಿಶ್ವಕಪ್‌ಗಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಭಾರತದ U-15 ತಂಡವನ್ನು ಘೋಷಿಸಿರುವ ನಡೆ ಸಮಸ್ಯೆಗೆ ಸಿಲುಕಿದೆ. ಭಾರತದ U-15 ತಂಡದ ವ್ಯವಸ್ಥಾಪಕರಾಗಿ ರಂಜಿತ್ ಬಜಾಜ್ ಅವರನ್ನು ಫೆಡರೇಶನ್ ನೇಮಿಸಿದ ಕೆಲವೇ ಗಂಟೆಗಳಲ್ಲಿ ಮಿನರ್ವಾ ಅಕಾಡೆಮಿ ಮಾಲಕರು ಪಾತ್ರವನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ.

ಭಾರತದ ಯುವ ಫುಟ್ಬಾಲ್ ವ್ಯವಸ್ಥೆಯ ಬಗ್ಗೆ ವಾರಗಳ ಕಾಲ ಚರ್ಚೆ ನಡೆದ ನಂತರ ನೇಮಕಾತಿ ನಡೆದಿತ್ತು. ಬಿಬಿಯಾನೊ ಫೆರ್ನಾಂಡಿಸ್ ಮುಖ್ಯ ತರಬೇತುದಾರ ಹುದ್ದೆಯನ್ನು ಉಳಿಸಿಕೊಂಡಿದ್ದರೂ, AIFF ತನ್ನ ಅಸ್ತಿತ್ವದಲ್ಲಿರುವ ಯುವ ತಂಡಕ್ಕೆ ವ್ಯವಸ್ಥಾಪಕರಾಗಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ರಂಜಿತ್ ಬಜಾಜ್ ಅವರನ್ನು ನೇಮಿಸಿಕೊಂಡಿತ್ತು. ಆದರೆ ನೇಮಕಾತಿಯ ಬಗ್ಗೆ ಸಾರ್ವಜನಿಕವಾಗಿ ಪ್ರಕಟಿಸುವ ಮೊದಲು ತನಗೆ ತಿಳಿಸಲಾಗಿಲ್ಲ ಎಂದು ರಂಜಿತ್ ಬಜಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ನನಗೆ ಯಾವುದೇ ಕಲ್ಪನೆ ಇರಲಿಲ್ಲ. ನನ್ನನ್ನು ನೇಮಕ ಮಾಡಲಾಗಿದೆಯೇ ಎಂದು ಕೇಳುವ ಕರೆಗಳು ಬರಲು ಪ್ರಾರಂಭಿಸಿದ ನಂತರವೇ ನನಗೆ ವಿಷಯ ತಿಳಿಸಿದೆ. ಘೋಷಣೆಗೆ ಮೊದಲು AIFF ನಿಂದ ಯಾರೂ ನನ್ನೊಂದಿಗೆ ಚರ್ಚಿಸಿಲ್ಲ” ಎಂದು ಅವರು ಹೇಳಿದ್ದಾರೆ. ಫೆಡರೇಶನ್ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ ಬಜಾಜ್ ಅವರ ಪ್ರತಿಕ್ರಿಯೆ ಕೋರಿ ಪತ್ರಕರ್ತರಿಂದ ಕರೆಗಳು ಬಂದಿದ್ದವು.

“ಜನರು ನನ್ನನ್ನು ಅಭಿನಂದಿಸಲು ಪ್ರಾರಂಭಿಸಿದರು ಮತ್ತು ವರದಿಗಾರರು ಕರೆ ಮಾಡಿದರು. AIFF ನಿಂದ ನನಗೆ ಯಾರೂ ಮಾಹಿತಿ ನೀಡದ ಕಾರಣ ನಿಖರವಾಗಿ ಏನಾಗಿದೆ ಎಂದು ಅಚ್ಚರಿಯಾಗಿತ್ತು. ನಿಜ ಸ್ಥಿತಿ ನನಗೆ ಮಾತ್ರ ತಿಳಿದಿತ್ತು. ಈ ಬಗ್ಗೆ AIFF ಅನ್ನು ಕೇಳಿದರೆ ಸ್ವಲ್ಪ ಸಮಯದ ನಂತರ ನಿಮಗೆ ಪತ್ರ ಕಳುಹಿಸುತ್ತೇವೆ” ಎಂದು ಹೇಳಿದರು.

ಬಜಾಜ್ ಅವರಿಗೆ ನಿರಾಶೆ ತಂದಿರುವುದು ನೇಮಕಾತಿಯಾಗಿರಲಿಲ್ಲ, ಬದಲಾಗಿ ಅದನ್ನು ನಿರ್ವಹಿಸಿದ ರೀತಿ. “ವೃತ್ತಿಪರ ಫೆಡರೇಶನ್ ಹೀಗೆ ಕಾರ್ಯನಿರ್ವಹಿಸುವುದಿಲ್ಲ. ಇವು ಭಾರತೀಯ ಫುಟ್ಬಾಲ್ಗೆ ಧಕ್ಕೆ ತರುತ್ತಿರುವ ಸಂಗತಿಗಳು” ಎಂದು ಅವರು ಹೇಳಿದ್ದಾರೆ.

“ವ್ಯವಸ್ಥಾಪಕರಾಗಿ ಹುದ್ದೆ ಸ್ವೀಕರಿಸದೆ ಇರುವುದಕ್ಕೆ ಬಿಬಿಯಾನೊ ಫೆರ್ನಾಂಡಿಸ್ ಜೊತೆಗಿನ ವೈಯಕ್ತಿಕ ಸಮಸ್ಯೆ ಕಾರಣವಲ್ಲ” ಎಂದು ಹೇಳಿದ ಬಜಾಜ್, ಬಿಬಿಯಾನೊ ಭಾರತೀಯ ಯುವ ತಂಡಗಳಿಗೆ ತುಂಬಿದ ಹುಮ್ಮಸ್ಸನ್ನು ಪ್ರಶಂಸಿಸಿದರು. ಆದರೆ ಹಿಂದೆಂದೂ ಜೊತೆಗೆ ಕೆಲಸ ಮಾಡದ ಕೋಚಿಂಗ್ ಸಿಬ್ಬಂದಿ ಜೊತೆಗೆ ಕೆಲಸ ಮಾಡುವ ಅಗತ್ಯವನ್ನು AIFF ಏಕೆ ಸೃಷ್ಟಿಸಿದೆ” ಎಂದು ಅವರು ಪ್ರಶ್ನಿಸಿದರು.

“ನನ್ನನ್ನು ಮ್ಯಾನೇಜರ್ ಆಗಿ ಮತ್ತು ಬಿಬಿಯಾನೊ ಅವರನ್ನು ತರಬೇತುದಾರರಾಗಿ ಜೊತೆಯಾಗಿ ನೇಮಿಸಿರುವುದರ ಹಿಂದಿನ ತರ್ಕ ನನಗೆ ಕಾಣುತ್ತಿಲ್ಲ. ಮಿನರ್ವಾ ಅಕಾಡೆಮಿಯಲ್ಲಿ ವರ್ಷಗಳಲ್ಲಿ ನಿರ್ಮಿಸಿದ ಬೆಂಬಲ ತಂಡದ ಬದಲಿಗೆ ಬಿಬಿಯಾನೊ ಅವರ ಅಸ್ತಿತ್ವದಲ್ಲಿರುವ ಕೋಚಿಂಗ್ ಸಿಬ್ಬಂದಿ ಜೊತೆಗೆ ಕೆಲಸ ಮಾಡುವ ನಿರೀಕ್ಷೆಯಿತ್ತು. ಬಿಬಿಯಾನೊ ಅಥವಾ ಅವರ ಸಿಬ್ಬಂದಿ ಬಗ್ಗೆ ಅಗೌರವವಿಲ್ಲ. ಅವರ ಪರಿಚಯವೂ ನನಗಿಲ್ಲ. ನನ್ನ ಸುತ್ತಲಿನ ಜನರು ನನಗೆ ತಿಳಿದಿಲ್ಲದಿದ್ದರೆ ಅವರೊಂದಿಗೆ ಜೊತೆಗೂಡಿ ಹೇಗೆ ಕೆಲಸ ಮಾಡಬೇಕು” ಎಂದು ಅವರು ಪ್ರಶ್ನಿಸಿದ್ದಾರೆ.

“ನಮ್ಮ ಶೈಲಿಗಳು, ಆಲೋಚನೆಗಳು ಭಿನ್ನ. ವಿಭಿನ್ನ ಕೆಲಸದ ವಿಧಾನಗಳಿವೆ. ಹೀಗಾಗಿ ತಂಡವಾಗಿ ಕೆಲಸ ಮಾಡುವುದರಲ್ಲಿ ಅರ್ಥವಿಲ್ಲ” ಎಂದು ಬಜಾಜ್ ಹೇಳಿದ್ದಾರೆ. ಅವರು ಮಾಧ್ಯಮಗಳಿಗೆ ಸ್ಪಷ್ಟವಾಗಿ ಹೇಳಿರುವುದೇನೆಂದರೆ, “ಬಿಬಿಯಾನೊ ಅವರ ಕುರಿತಾಗಿ ಸಮಸ್ಯೆಯಿಲ್ಲ. ಬದಲಾಗಿ AIFF ಯೋಜನೆ ಮೇಲೆ ಸಮಸ್ಯೆಯಿದೆ.”

ಕಳೆದ ಕೆಲವು ತಿಂಗಳುಗಳಲ್ಲಿ ಬಜಾಜ್ ಅವರು ಭಾರತೀಯ ಫುಟ್ಬಾಲ್ನ ಪ್ರಮುಖ ಧ್ವನಿಗಳಲ್ಲಿ ಒಬ್ಬರಾಗಿದ್ದಾರೆ. ದೇಶದಲ್ಲಿ ಫುಟ್ಬಾಲ್ ಆಡಳಿತವನ್ನು ನಿಯಮಿತವಾಗಿ ಪ್ರಶ್ನಿಸುವ ಜೊತೆಗೆ ಅನೇಕ AIFF ಯೂತ್ ಲೀಗ್ ಪ್ರಶಸ್ತಿ ಗೆದ್ದಿರುವ ಮಿನರ್ವಾ ಅಕಾಡೆಮಿಯ ಯುವ ತಂಡದ ನೇತೃತ್ವ ವಹಿಸಿದ್ದಾರೆ. ಅವರ ತಂಡವು ಗೋಥಿಯಾ ಕಪ್, ದಿ ಮೆಡಿಟರೇನಿಯನ್ ಇಂಟರ್ನ್ಯಾಷನಲ್ ಕಪ್ ಮತ್ತು ಡಾನಾ ಕಪ್‌ನಂತಹ ಹಲವಾರು ಉನ್ನತ ಮಟ್ಟದ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಯಶಸ್ಸನ್ನು ಕಂಡಿದೆ. ಅಲ್ಲದೆ ಯುವ ಮತ್ತು ಹಿರಿಯರ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅನೇಕ ಆಟಗಾರರನ್ನು ಮಿನರ್ವಾ ಅಕಾಡೆಮಿ ಸೃಷ್ಟಿಸಿದೆ.

ಬಜಾಜ್ ಅವರ ನೆಲಮಟ್ಟದಲ್ಲಿ ಫುಟ್ಬಾಲ್ಗೆ ನೀಡಿದ ಕೊಡುಗೆ ವ್ಯಾಪಕವಾಗಿ ಗುರುತಿಸಲಾಗುತ್ತಿದ್ದರೂ, ಕೆಲವು ತರಬೇತುದಾರರು ಮತ್ತು ವಿಮರ್ಶಕರು ಅವರ ದೊಡ್ಡ ಸಾಮರ್ಥ್ಯ ದೈನಂದಿನ ಯುದ್ಧತಂತ್ರದ ತರಬೇತಿಗಿಂತ ಅಕಾಡೆಮಿಗಳನ್ನು ನಿರ್ಮಿಸುವುದು, ಪ್ರತಿಭೆ ಗುರುತಿಸುವುದು ಮತ್ತು ಫುಟ್ಬಾಲ್ ಯೋಜನೆಗಳನ್ನು ನಿರ್ವಹಿಸುವುದರಲ್ಲಿವೆ ಎಂದು ವಾದಿಸಿದ್ದಾರೆ.

ಆದರೆ ಮೂಲ ಪ್ರಶ್ನೆಯೆಂದರೆ AIFF ನೇಮಕಾತಿಗೆ ಮೊದಲು ಸಂಬಂಧಿತ ವ್ಯಕ್ತಿಗಳ ಜೊತೆಗೆ ಚರ್ಚೆ ಮಾಡದೆ ಇರಲು ಕಾರಣವೇನು? ಭಾರತೀಯ ಫುಟ್ಬಾಲ್ನ ಇಬ್ಬರು ಪ್ರಸಿದ್ಧ ವ್ಯಕ್ತಿಗಳನ್ನು ಜೊತೆಗೂಡಿಸಿರುವುದು ನಿಜವಾದರೂ, ಕಾರ್ಯರೂಪಕ್ಕೆ ತಂದಿರುವ ರೀತಿ ಪ್ರಶ್ನಾರ್ಹವಾಗಿದೆ. AIFFನ ಯೋಜನೆ ಮತ್ತು ಸಂವಹನದ ಶೈಲಿಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಅಕ್ಟೋಬರ್ನಲ್ಲಿ ಫಿಫಾ U-15 ವಿಶ್ವಕಪ್ ನಡೆಯಲಿರುವ ಕಾರಣ ಪ್ರತಿಭೆಗಳನ್ನು ಹುಡುಕುವುದು, ಸಂಯೋಜಿಸುವುದು, ತಂಡ ನಿರ್ಮಿಸಲು ಸಾಕಷ್ಟು ಸಮಯವೂ ಇಲ್ಲ ಎಂದು ಬಜಾಜ್ ಹೇಳಿದ್ದಾರೆ. “ಪಂದ್ಯಾವಳಿಗೆ ಕೆಲವೇ ತಿಂಗಳಿರುವಾಗ ಯಾವ ಯೋಜನೆ ಮಾಡಬಹುದು? ಪಂದ್ಯಾವಳಿಗೆ ಎರಡು ತಿಂಗಳ ಮೊದಲು ವಿಶ್ವಕಪ್ ತಂಡವನ್ನು ನಿರ್ಮಿಸಲು ಪ್ರಾರಂಭಿಸುವುದಿಲ್ಲ” ಎಂದು ಬಜಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News