ಹಾರುವ ಕಾರನ್ನು ಯಶಸ್ವಿಯಾಗಿ ಪರೀಕ್ಷಿಸಿದ ಅಲ್ಮೋರಾದ ಇಂಜಿನಿಯರ್
Photo Credit : X
ವಿಮಾನ ಇಂಧನ ಅಥವಾ ಎಥೆನಾಲ್ ಆಧಾರಿತ ಪ್ರೊಪಲ್ಷನ್ ಅನ್ನು ಅವಲಂಬಿಸಿರುವ ಸಾಮಾನ್ಯ ಹಾರಾಟದ ಯಂತ್ರಗಳಿಗೆ ಭಿನ್ನವಾಗಿ, HAPIDA SKYNeX ಅನ್ನು ಸಂಪೂರ್ಣ ಇಲೆಕ್ಟ್ರಿಕಲ್ ಹಾರಾಟ ವಾಹನವಾಗಿ ವಿನ್ಯಾಸಗೊಳಿಸಲಾಗಿದೆ.
ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಯುವ ಇಂಜಿನಿಯರ್ ಒಬ್ಬರು ಇಲೆಕ್ಟ್ರಿಕ್ ಫ್ಲೈಯಿಂಗ್ ವೆಹಿಕಲ್ ನ ಮೂಲ ಮಾದರಿಯನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ವೈಯಕ್ತಿಕ ಚಲನಶೀಲತೆಯ ಭವಿಷ್ಯದತ್ತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ವಿದ್ಯುತ್ ಚಾಲಿತ ಸಾಂಪ್ರದಾಯಿಕ ಸಾರಿಗೆಗೆ ಸ್ವದೇಶಿ ಪರ್ಯಾಯವನ್ನು ಪ್ರದರ್ಶಿಸಿದ್ದಾರೆ.
ಪ್ರಸಿದ್ಧ ಜಾಗೇಶ್ವರ ಧಾಮ್ ಬಳಿಯ ಕಫ್ಲಿಖಾನ್ ಗ್ರಾಮದ ರವಿ ತಮ್ತಾ ತಮ್ಮ ಸ್ಟಾರ್ಟಪ್ ಹ್ಯಾಪಿಡಾ ಸ್ಕೈ ಪ್ರೈವೇಟ್ ಲಿಮಿಟೆಡ್ ಮೂಲಕ HAPIDA SKYNeX ಎಂಬ ವೈಯಕ್ತಿಕ ಇಲೆಕ್ಟ್ರಿಕಲ್ ಹಾರುವ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದೀಗ ಯಶಸ್ವಿಯಾಗಿ ಹಾರಾಟ ನಡೆಸುವ ಮೂಲಕ ಅವರ ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಆ ಮೂಲಕ ವೈಯಕ್ತಿಕ ಏರ್ ಮೊಬಿಲಿಟಿಯ (ವಾಯು ಚಲನಶೀಲತೆ) ಕನಸನ್ನು ನನಸಾಗಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ವಿಮಾನ ಇಂಧನ ಅಥವಾ ಎಥೆನಾಲ್ ಆಧಾರಿತ ಪ್ರೊಪಲ್ಷನ್ ಅನ್ನು ಅವಲಂಬಿಸಿರುವ ಸಾಮಾನ್ಯ ಹಾರಾಟದ ಯಂತ್ರಗಳಿಗೆ ಭಿನ್ನವಾಗಿ, HAPIDA SKYNeX ಅನ್ನು ಸಂಪೂರ್ಣ ಇಲೆಕ್ಟ್ರಿಕಲ್ ಹಾರಾಟ ವಾಹನವಾಗಿ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಇದು ಶೂನ್ಯ ಟೈಲ್ಪೈಪ್ ಹೊರಸೂಸುವಿಕೆಯೊಂದಿಗೆ ಪರಿಸರ ಸ್ನೇಹಿ ಪರ್ಯಾಯವಾಗಿದೆ.
ಇಂಜಿನಿಯರ್ ಹೇಳಿರುವ ಪ್ರಕಾರ, ಈ ಯೋಜನೆಯು ಭಾರತದಲ್ಲಿ ಸುರಕ್ಷಿತ, ಕೈಗೆಟುಕುವ ಮತ್ತು ಸುಸ್ಥಿರ ವೈಯಕ್ತಿಕ ವಾಯು ಸಾರಿಗೆಯನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಗುರಿ ಹೊಂದಿದೆ. ಯಶಸ್ವೀ ಪ್ರದರ್ಶನವು ಸುಧಾರಿತ ಚಲನಶೀಲತಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಭಾರತದ ಸ್ಟಾರ್ಟಪ್ ಗಳ ಬೆಳೆಯುತ್ತಿರುವ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಈ ಸಾಧನೆಯು ಉತ್ತರಾಖಂಡದ ಉದಯೋನ್ಮುಖ ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಮೇಲೂ ಬೆಳಕು ಚೆಲ್ಲಿದೆ.
ಉತ್ತರಾಖಂಡ ರಾಜ್ಯದ ಸವಾಲೊಡ್ಡುವ ಹಿಮಾಲಯದ ಭೂಪ್ರದೇಶವು ರಸ್ತೆ ಸಂಪರ್ಕದ ಮಿತಿಗಳನ್ನು ನಿವಾರಿಸಬಲ್ಲ ಮುಂದಿನ ಪೀಳಿಗೆಯ ವೈಮಾನಿಕ ಸಾರಿಗೆ ಪರಿಹಾರಗಳಿಗೆ ಸೂಕ್ತ ಪರೀಕ್ಷಾ ಮೈದಾನವಾಗಿದೆ ಎಂದು ತಜ್ಞರು ನಂಬಿದ್ದಾರೆ.
ಇನ್ನಷ್ಟು ಅಭಿವೃದ್ಧಿಪಡಿಸಿದರೆ, ವಿದ್ಯುತ್ ವೈಯಕ್ತಿಕ ಹಾರುವ ವಾಹನಗಳನ್ನು ನಗರ ಸಾರಿಗೆಯನ್ನು ಮೀರಿ ಗುಡ್ಡಗಾಡು ಪ್ರದೇಶಗಳಲ್ಲೂ ಬಳಕೆಗೆ ಉತ್ತಮ ವಾಹನವಾಗಿ ಬೆಳೆಸಬಹುದು. ದೂರದ ಹಿಮಾಲಯದ ಹಳ್ಳಿಗಳಿಗೆ ಸಂಪರ್ಕವನ್ನು ಸುಧಾರಿಸಬಹುದು. ಭೂಕುಸಿತ ಮತ್ತು ಪ್ರವಾಹದ ಸಂದರ್ಭಗಳಲ್ಲಿ ವಿಪತ್ತು ಪರಿಹಾರ ಹಾಗೂ ತುರ್ತು ಪ್ರತಿಕ್ರಿಯೆಗೆ ಬೆಂಬಲ ನೀಡಬಹುದು. ರಸ್ತೆ ಮೂಲಸೌಕರ್ಯ ಸೀಮಿತವಾಗಿರುವ ಪ್ರತ್ಯೇಕ ಪ್ರದೇಶಗಳಿಗೆ ವೇಗವಾಗಿ ತಲುಪಲು ನೆರವಾಗಬಹುದು. ಈ ತಂತ್ರಜ್ಞಾನವು ರಾಜ್ಯದ ಪರ್ವತ ಪ್ರದೇಶಗಳಲ್ಲಿ ಹೊಸ ಪ್ರಯಾಣ ವಿಧಾನಗಳನ್ನು ಒದಗಿಸುವ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಬಹುದು.
ರವಿ ತಮ್ತಾ ಮತ್ತು ಅವರ ತಂಡದ ವರ್ಷಗಳ ಪ್ರಯತ್ನ ಹಾಗೂ ಸಂಶೋಧನೆಯ ಫಲವಾಗಿ ಈ ಯಶಸ್ಸು ದೊರೆತಿದೆ. ಆದರೂ ಈ ಸಂಶೋಧನೆಯು ಇನ್ನೂ ಪ್ರೊಟೋಟೈಪ್ ಹಂತದಲ್ಲಿದೆ. ವಾಣಿಜ್ಯ ಬಳಕೆಗೆ ಮುನ್ನ ಹೆಚ್ಚಿನ ಪರೀಕ್ಷೆಗಳು ಮತ್ತು ನಿಯಂತ್ರಕ ಅನುಮೋದನೆಗಳ ಅಗತ್ಯವಿರುತ್ತದೆ. ಆದರೆ ಈಗಿನ ಸಾಧನೆಯು ಸುಧಾರಿತ ವಾಯು ಸಾರಿಗೆಯ ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಗಳನ್ನು ಸೂಚಿಸುತ್ತದೆ.
ಮಾಹಿತಿ ಕೃಪೆ: India Today