"ಸಾಲ ಮರುಪಾವತಿ ಹೆಸರಲ್ಲಿ ಗ್ರಾಹಕರಿಗೆ ಕಿರುಕುಳ ನೀಡುವಂತಿಲ್ಲ": RBI ಕಟ್ಟುನಿಟ್ಟಿನ ನಿಯಮ
ಅನಾಮಧೇಯ ಕರೆಗಳಿಗೆ ತಡೆ; RBI ಪ್ರಕಾರ ವಸೂಲಾತಿ ಏಜೆಂಟರು ಏನು ಮಾಡಬಾರದು?
Photo Credit : PTI
ಸಾಲ ವಸೂಲಾತಿಗೆ ಸಂಬಂಧಿಸಿ ಏಜೆಂಟ್ ಗಳ ನಡವಳಿಕೆಯನ್ನು ನಿಯಂತ್ರಿಸಲು RBI ನಿರ್ದೇಶನಗಳನ್ನು ಹೊರಡಿಸಿದೆ
ಕೆಲ ದಿನಗಳಲ್ಲಿ ನೀವು EMI ಕಟ್ಟದೆ ಬಾಕಿ ಉಳಿಸಿದಾಕ್ಷಣ ಕರೆಗಳು ಬರಲು ಆರಂಭಿಸುತ್ತವೆ. ಮನೆ ಮುಂದೆ ಬರುವುದು, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಫೋನ್ ಕರೆ ಮಾಡುವುದು ನಡೆಯುತ್ತದೆ. ನೀವು ಡಿಫಾಲ್ಟರ್ ಎಂದು ಹೇಳುವುದಾಗಿ ಬೆದರಿಕೆ ಹಾಕಲಾಗುತ್ತದೆ. ವರ್ಷಗಳಿಂದ ಅನೇಕ ಭಾರತೀಯರ ಸಾಲಗಾರರಿಗೆ ಸಾಲ ವಸೂಲಾತಿಯ ನೇರ ಅನುಭವ ಇದಾಗಿದೆ. ಇದೀಗ ಸಾಲ ವಸೂಲಾತಿಗೆ ಸಂಬಂಧಿಸಿ ಏಜೆಂಟ್ ಗಳ ನಡವಳಿಕೆಯನ್ನು ನಿಯಂತ್ರಿಸಲು RBI ನಿರ್ದೇಶನಗಳನ್ನು ಹೊರಡಿಸಿದೆ. ಇವು ಸಮಗ್ರ ಪರಿಷ್ಕರಣೆಯ ನಿರ್ದೇಶನಗಳಾಗಿವೆ.
ಸಾಲಗಾರರನ್ನು ಯಾವಾಗ ಸಂಪರ್ಕಿಸಬಹುದು ಎಂಬುದರಿಂದ ಹಿಡಿದು ವಸೂಲಾತಿ ಏಜೆಂಟ್ ಗಳು ಏನು ಹೇಳಬಹುದು, ಬ್ಯಾಂಕ್ ಗಳು ಅವರನ್ನು ಹೇಗೆ ಮೇಲ್ವಿಚಾರಣೆ ಮಾಡಬೇಕು ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ಸಾಲಗಾರರು ಯಾವ ಪರಿಹಾರ ಪಡೆಯಬಹುದು ಎಂಬ ಕುರಿತು ವಿವರವಾದ ನಿಯಮಗಳನ್ನು ನಿರ್ದೇಶಿಸಿದೆ.
ಹೊಸ ನಿರ್ದೇಶನಗಳು 2027 ಜನವರಿ 1ರಿಂದ ಜಾರಿಗೆ ಬರಲಿವೆ. ಅಂತಿಮ ತಿದ್ದುಪಡಿ ನಿರ್ದೇಶನಗಳನ್ನು ನೀಡುವ ಮೊದಲು ಈ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾದ ಕರಡು ನಿರ್ದೇಶನಗಳ ಕುರಿತು ಸಂಬಂಧಿತರ ಪ್ರತಿಕ್ರಿಯೆ ಪರಿಶೀಲಿಸುತ್ತಿರುವುದಾಗಿ RBI ಹೇಳಿದೆ.
RBI ಸಾಲಗಳನ್ನು ವಸೂಲಿ ಮಾಡುವಾಗ ಘನತೆ, ಗೌಪ್ಯತೆ ಅಥವಾ ನ್ಯಾಯವನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
RBI ಏಕೆ ಹೊಸ ಕ್ರಮ ಕೈಗೊಂಡಿದೆ?
ಬಹಳ ಹಿಂದಿನಿಂದಲೂ ವಸೂಲಾತಿ ಏಜೆಂಟ್ ಗಳ ಆಕ್ರಮಣಕಾರಿ ವಸೂಲಾತಿ ತಂತ್ರಗಳ ಬಗ್ಗೆ ಸಾಲಗಾರರು ದೂರು ನೀಡುತ್ತಲೇ ಬಂದಿದ್ದರು. ಪುನರಾವರ್ತಿತ ಫೋನ್ ಕರೆಗಳು, ಬೆದರಿಕೆಯ ಭೇಟಿಗಳಿಂದ ತೊಡಗಿ ಸಂಬಂಧಿಕರು ಮತ್ತು ಸಹೋದ್ಯೋಗಿಗಳನ್ನು ಸಂಪರ್ಕಿಸುವುದು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಸಾಲಗಾರರನ್ನು ಸಾರ್ವಜನಿಕವಾಗಿ ಅವಮಾನಿವುದು ಮೊದಲಾದ ಕಾಳಜಿಗಳನ್ನು RBIನ ಹೊಸ ಚೌಕಟ್ಟು ಪರಿಹರಿಸಿದೆ.
ಸಾಲ ವಸೂಲಾತಿ ಏಜೆಂಟ್ ಗಳು ಬ್ಯಾಂಕ್ ನ ಸಿಬ್ಬಂದಿಗಳು ಅಥವಾ ಹೊರಗುತ್ತಿಗೆ ಪಡೆದವರೇ ಆಗಿದ್ದರೂ ನಿರ್ದೇಶನಗಳನ್ನು ಅನುಸರಿಸಬೇಕು ಎಂದು RBI ಹೇಳಿದೆ.
RBI ಪ್ರಕಾರ ವಸೂಲಾತಿ ಏಜೆಂಟರು ಏನು ಮಾಡಬಾರದು?
RBI ಮುಂದಿಟ್ಟಿರುವ ಚೌಕಟ್ಟಿನ ಬಲವಾದ ಭಾಗವೆಂದರೆ ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸುವ ವಸೂಲಾತಿ ಅಭ್ಯಾಸಗಳ ವಿವರವಾದ ಪಟ್ಟಿ. ಸಾಲ ಬಾಕಿಗಳನ್ನು ಸಂಗ್ರಹಿಸುವಾಗ ಅಥವಾ ವಸೂಲಿ ಮಾಡುವಾಗ ಏಜೆಂಟರು ಅಥವಾ ಬ್ಯಾಂಕ್ ಉದ್ಯೋಗಿಗಳು ಕಠಿಣ ವಿಧಾನ ಅನುಸರಿಸಬಾರದು ಎಂದು RBI ಹೇಳಿದೆ. ‘ಕಠಿಣ ವಿಧಾನ’ ಎನ್ನುವುದನ್ನು RBI ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ.
RBI ಪ್ರಕಾರ ವಸೂಲಾತಿ ಏಜೆಂಟರು ಇದನ್ನು ಮಾಡಬಾರದು:
* ಬೆದರಿಕೆ ಹಾಕುವುದು, ಬೆದರಿಕೆ ಅಥವಾ ನಿಂದನೀಯ ಭಾಷೆ ಬಳಸುವಂತಿಲ್ಲ.
* ಸಾಲಗಾರರ ವೀಡಿಯೋಗಳು, ಆಡಿಯೋ ರೆಕಾರ್ಡಿಂಗ್ಗಳು ಅಥವಾ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವಂತಿಲ್ಲ.
* ಮೊಬೈಲ್ ಫೋನ್ ಗಳು ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಅನುಚಿತ ಸಂದೇಶ ಕಳುಹಿಸುವಂತಿಲ್ಲ.
* ಸಾಲಗಾರರಿಗೆ ಪದೇಪದೆ ಕರೆ ಮಾಡುವುದು ಅಥವಾ ಸಂದೇಶ ಕಳುಹಿಸುವುದು ಅಥವಾ ನಿಗದಿತ ಸಮಯದ ಹೊರಗೆ ಅವರನ್ನು ಸಂಪರ್ಕಿಸುವುದು.
* ಅನಾಮಧೇಯವಾಗಿ ಅಥವಾ ಬೆದರಿಕೆಯ ಫೋನ್ ಕರೆಗಳನ್ನು ಮಾಡುವುದು.
* ಸಾಲಗಾರರು ಅಥವಾ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಅಥವಾ ಸಹೋದ್ಯೋಗಿಗಳಿಗೆ ಕಿರುಕುಳ ನೀಡುವುದು ಅಥವಾ ಬೆದರಿಸುವುದು.
* ಸಾಲಗಾರರನ್ನು ಸಾರ್ವಜನಿಕವಾಗಿ ಅವಮಾನಿಸುವುದು ಅಥವಾ ಅವರ ಗೌಪ್ಯತೆಗೆ ಧಕ್ಕೆ ತರುವುದು.
* ಸಾಲಗಾರರ ಕುಟುಂಬ, ಆಸ್ತಿಗಳು ಅಥವಾ ಖ್ಯಾತಿಗೆ ಹಿಂಸೆ ಅಥವಾ ಹಾನಿ ಉಂಟುಮಾಡುವ ಬೆದರಿಕೆ ಹಾಕುವುದು.
* ಸಾಲಗಾರರ ಸಾಲ ಅಥವಾ ಅದನ್ನು ಮರುಪಾತಿಸುವ ಪರಿಣಾಮಗಳ ಬಗ್ಗೆ ಸುಳ್ಳು ಅಥವಾ ದಾರಿತಪ್ಪಿಸುವ ಹಕ್ಕುಗಳನ್ನು ನೀಡುವಂತಿಲ್ಲ.
ನಿಗದಿತ ಅವಧಿಯಲ್ಲಿ ಮಾತ್ರ ಸಂಪರ್ಕಿಸಬಹುದು:
ರಿಕವರಿ ಏಜೆಂಟರು ಮತ್ತು ಬ್ಯಾಂಕ್ ಉದ್ಯೋಗಿಗಳು ಸಾಲಗಾರರನ್ನು ಸಂಪರ್ಕಿಸಬಹುದಾದ ಕಟ್ಟುನಿಟ್ಟಾದ ಸಮಯವನ್ನು RBI ವಿಧಿಸಿದೆ. ಹೊಸ ನಿಯಮಗಳ ಅಡಿಯಲ್ಲಿ ಸಾಲಗಾರರನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜರ 7 ಗಂಟೆಯವರೆಗೆ ಮಾತ್ರ ಸಂಪರ್ಕಿಸಬಹುದು ಅಥವಾ ಭೇಟಿ ಮಾಡಬಹುದು.
ಈ ಸಮಯದ ಹೊರಗೆ ಕರೆಗಳು ಅಥವಾ ಭೇಟಿಗಳನ್ನು ಸಾಲಗಾರನು ಸ್ಪಷ್ಟವಾಗಿ ವಿನಂತಿಸಿದ್ದರೆ ಅಥವಾ ಅಧಿಕಾರ ನೀಡಿದ್ದರೆ ಮಾತ್ರ ಮಾಡಬಹುದಾಗಿದೆ. ಅದೇ ರೀತಿ ಸಾಲಗಾರನು ವಸೂಲಾತಿ ಏಜೆಂಟರನ್ನು ನಿರ್ದಿಷ್ಟ ಸಮಯದಲ್ಲಿ ಕರೆ ಮಾಡಬಾರದು ಅಥವಾ ಭೇಟಿ ಮಾಡಬಾರದು ಎಂದು ಕೇಳಿದರೆ ವಿನಂತಿಯನ್ನು ಗೌರವಿಸಬೇಕು.
ಕುಟುಂಬದಲ್ಲಿ ದುಃಖ, ವೈದ್ಯಕೀಯ ತುರ್ತು ಸ್ಥಿತಿ, ವಿವಾಹ ಕಾರ್ಯ ಅಥವಾ ಇತರ ವಿಪತ್ತು ಸಂದರ್ಭದಲ್ಲಿ ಸಾಲಗಾರರನ್ನು ಸಂಪರ್ಕಿಸುವುದನ್ನು ತಪ್ಪಿಸಲು ವಸೂಲಾತಿ ಏಜೆಂಟರಿಗೆ ನಿರ್ದೇಶಿಸಲಾಗಿದೆ.
ಸಾಲದ ಕುರಿತ ಚರ್ಚೆಗೆ ಎಲ್ಲಿ ಭೇಟಿಯಾಗಬೇಕು ಎಂದೂ ಸಾಲಗಾರರು ಆರಿಸಿಕೊಳ್ಳಬಹುದು. ಸಾಲಗಾರರು ಆಯ್ಕೆ ಮಾಡಿದ ಸ್ಥಳದಲ್ಲಿ ಸಾಲಗಾರರನ್ನು ವಸೂಲಾತಿ ಏಜೆಂಟರು ಸಂಪರ್ಕಿಸಬೇಕು. ಆದರೆ ನಿಗದಿತ ಸ್ಥಳದಲ್ಲಿ ಭೇಟಿಯಾಗಲು ವಿಫಲವಾದರೆ ವಸೂಲಾತಿ ಏಜೆಂಟರು ಸಾಲಗಾರರ ನಿವಾಸ ಅಥವಾ ಕಾರ್ಯ ಸ್ಥಳಕ್ಕೆ ಭೇಟಿ ನೀಡಬಹುದು. ಮೈಕ್ರೋಫೈನಾನ್ಸ್ ಸಾಲಗಳಿಗೂ ಪದೇಪದೆ ಹಾಜರಾಗಲು ವಿಫಲರಾದ ಹೊರತಾಗಿ ವಸೂಲಾತಿಗಳು ಸಾಲಗಾರರ ಮನೆಯ ಬದಲಾಗಿ ಪರಸ್ಪರ ಒಪ್ಪಿಗೆಯ ಸ್ಥಳದಲ್ಲಿ ನಡೆಯಬೇಕು ಎನ್ನುವ ತತ್ವವನ್ನು RBI ಉಳಿಸಿಕೊಂಡಿದೆ.
ಪೂರ್ವ ಸೂಚನೆ ಅತಿ ಮುಖ್ಯ:
ಪಾರದರ್ಶಕತೆಯನ್ನು ಸುಧಾರಿಸಲು ಬ್ಯಾಂಕುಗಳು ಪೂರ್ವ ಸೂಚನೆಯಿಲ್ಲದೆ ಸಾಲಗಾರರಿಗೆ ವಸೂಲಾತಿ ಏಜೆಂಟ್ಗಳನ್ನು ಕಳುಹಿಸಲು ಅನುಮತಿಸುವುದಿಲ್ಲ. ವಸೂಲಾತಿ ಏಜೆನ್ಸಿಯ ಮೊದಲ ವೈಯಕ್ತಿಕ ಭೇಟಿಗೆ ಕನಿಷ್ಠ ಒಂದು ದಿನ ಮೊದಲು ಸಾಲಗಾರರಿಗೆ ತಿಳಿಸುವಂತೆ RBI ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ವಸೂಲಾತಿ ಏಜೆನ್ಸಿಯನ್ನು ಬದಲಿಸಿದರೆ ಸಾಲಗಾರರಿಗೆ ತಕ್ಷಣವೇ ತಿಳಿಸಬೇಕು.
ಬ್ಯಾಂಕ್ ಗಳು ತಮ್ಮ ವೆಬ್ಸೈಟ್ನಲ್ಲಿ ಎಲ್ಲಾ ವಸೂಲಾತಿ ಏಜೆನ್ಸಿಗಳ ಪಟ್ಟಿ ಪ್ರಕಟಿಸಬೇಕು ಮತ್ತು ನಿಯಮಿತವಾಗಿ ಅದನ್ನು ನವೀಕರಿಸಬೇಕು ಎಂದು ನಿರ್ದೇಶಿಸಲಾಗಿದೆ. ಪಟ್ಟಿಯಲ್ಲಿ ಏಜೆಂಟರ ಹೆಸರು, ವಿಳಾಸ, ತೊಡಗಿಸಿಕೊಳ್ಳುವಿಕೆ ಉದ್ದೇಶ ಮತ್ತು ನೇಮಕಾತಿ ಅವಧಿ ಸೇರಿರಬೇಕು
ಏಜೆಂಟರ ನಡವಳಿಕೆಗೆ ಬ್ಯಾಂಕುಗಳೇ ಜವಾಬ್ದಾರರು:
ವಸೂಲಾತಿ ಏಜೆಂಟ್ ಗಳು ಹೊರಗುತ್ತಿಗೆ ಪಡೆದಿದ್ದರೂ ಅವರ ನಡವಳಿಕೆಗೆ ಬ್ಯಾಂಕುಗಳೇ ಜವಾಬ್ದಾರರಾಗಿರುತ್ತಾರೆ. ಪ್ರತಿ ವಸೂಲಾತಿ ಕರೆಯನ್ನೂ ದಾಖಲಿಸುವ ಅಗತ್ಯವಿದೆ. ಬ್ಯಾಂಕುಗಳು ಸಾಲಗಾರರು ಅಥವಾ ಗ್ಯಾರಂಟಿ ನೀಡಿದವರಿಗೆ ಮಾಡಿದ ವಸೂಲಾತಿ ಕರೆಗಳ ಸಮಯ ಮತ್ತು ಸಂಖ್ಯೆಯ ದಾಖಲೆ ನಿರ್ವಹಿಸಬೇಕಾಗುತ್ತದೆ. ಸಂಭಾಷಣೆಯ ವಿಷಯಗಳನ್ನೂ ದಾಖಲಿಸಬೇಕು. ಕರೆಯ ದಿನಾಂಕದಿಂದ ಕನಿಷ್ಠ ಆರು ತಿಂಗಳವರೆಗೆ ಈ ರೆಕಾರ್ಡಿಂಗ್ಗಳನ್ನು ಸಂರಕ್ಷಿಸಲು ನಿರ್ದೇಶಿಸಲಾಗಿದೆ.
ಗೌಪ್ಯತೆ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಗುರುತಿಸಿ, ವಸೂಲಾತಿ ಏಜೆಂಟ್ಗಳೊಂದಿಗೆ ಹಂಚಿಕೊಳ್ಳಲಾದ ಗ್ರಾಹಕರ ಮಾಹಿತಿಯು ವಸೂಲಾತಿ ಸಂಬಂಧಿತ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿರುವಷ್ಟು ಮಾತ್ರ ಸೀಮಿತವಾಗಿರಬೇಕು. ಸಾಲಗಾರರ ವೈಯಕ್ತಿಕ ಮಾಹಿತಿಯನ್ನು ಯಾವುದೇ ರೀತಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ದಂಡದ ನಿಬಂಧನೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಬ್ಯಾಂಕುಗಳಿಗೆ ನಿರ್ದೇಶಿಸಲಾಗಿದೆ.
ವಸೂಲಾತಿ ಕ್ರಮಗಳ ಸಂದರ್ಭ ನಿಯಮಗಳನ್ನು ಉಲ್ಲಂಘಿಸಿದಾಗ ಬ್ಯಾಂಕುಗಳನ್ನು ಆರ್ಥಿಕವಾಗಿ ಹೊಣೆಗಾರರನ್ನಾಗಿ ಮಾಡುವ RBI ನಿರ್ಧಾರವು ಅತ್ಯಂತ ಮಹತ್ವದ ಬದಲಾವಣೆಯಾಗಿದೆ. ವಸೂಲಾತಿ ಸಂಬಂಧಿತ ದುಷ್ಕೃತ್ಯಗಳಿಗೆ ನಿಗದಿತ ಪರಿಹಾರ ಮೊತ್ತವನ್ನು RBI ನಿಗದಿಪಡಿಸಿಲ್ಲವಾದರೂ ಬಾಧಿತ ಸಾಲಗಾರರಿಗೆ ಪರಿಹಾರ ನೀಡಲು ಬ್ಯಾಂಕುಗಳು ನೀತಿ ಹೊಂದಿರಬೇಕು ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಏಜೆನ್ಸಿಗಳು RBI ಚೌಕಟ್ಟನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಬ್ಯಾಂಕುಗಳ ಮೇಲಿದೆ.
ದೂರು ಪರಿಹಾರ:
RBI ದೂರು ಪರಿಹಾರ ಪ್ರಕ್ರಿಯೆಯನ್ನು ಬಲಪಡಿಸಿದೆ. ಪ್ರತಿ ಬ್ಯಾಂಕ್ ಇನ್ನು ಮುಂದೆ ವಸೂಲಾತಿ ಪದ್ಧತಿ ಸಂಬಂಧಿಸಿದ ದೂರು ನಿರ್ವಹಿಸಲು ಮೀಸಲಾದ ಕಾರ್ಯವಿಧಾನವನ್ನು ಸ್ಥಾಪಿಸಬೇಕಾಗುತ್ತದೆ. ವಸೂಲಾತಿ ಸಂಬಂಧಿತ ದುಷ್ಕೃತ್ಯಗಳಿಗೆ ನಿಗದಿತ ಪರಿಹಾರ ಮೊತ್ತವನ್ನು RBI ನಿಗದಿಪಡಿಸಿಲ್ಲವಾದರೂ ಬಾಧಿತ ಸಾಲಗಾರರಿಗೆ ಪರಿಹಾರ ನೀಡಲು ಬ್ಯಾಂಕುಗಳು ನೀತಿ ಹೊಂದಿರಬೇಕು ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ತಂತ್ರಜ್ಞಾನ ಆಧರಿತ ಸಾಲ ವಸೂಲಾತಿಗೆ ಪ್ರತ್ಯೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ.