ಅಯೋಧ್ಯೆ ಜಮೀನು ವ್ಯವಹಾರ | ಮೂಲ ಬೆಲೆಗಿಂತ 12 ಪಟ್ಟು ಹೆಚ್ಚಿನ ದರಕ್ಕೆ ಮಾರಾಟ, ರಾಜಕಾರಣಿಗಳ ಸಂಬಂಧಿಕರಿಗೆ ಭಾರೀ ಲಾಭ!
ಆಯುಶ್ ತಿವಾರಿ - scroll. in ವರದಿ
Photo Credit : scroll.in
2021 ಫೆಬ್ರವರಿಯಲ್ಲಿ ಅಯೋಧ್ಯೆಯ ಮೇಯರ್, BJPಯ ಋಷಿಕೇಶ್ ಉಪಾಧ್ಯಾಯ ಅವರ ಸೋದರಸಂಬಂಧಿ ಅದೇ ನಗರದಲ್ಲಿದ್ದ ಭೂಮಿಯೊಂದನ್ನು 20 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಮೂರು ತಿಂಗಳ ನಂತರ, ಅವರು ಆ ಜಮೀನನ್ನು ರಾಮಮಂದಿರ ಟ್ರಸ್ಟ್ಗೆ 2.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಅಂದರೆ ಮೂಲ ಬೆಲೆಗಿಂತ 12 ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿತ್ತು.
ಇದಾದ ಬೆನ್ನಲ್ಲೇ, ರಾಜಕಾರಣಿಗಳು ಮತ್ತು ಅಧಿಕಾರಿಗಳ ಸಂಬಂಧಿಕರು ಅಗ್ಗದ ಬೆಲೆಗೆ ಜಮೀನುಗಳನ್ನು ಖರೀದಿಸಿ, ಕೆಲವೇ ದಿನಗಳಲ್ಲಿ ಅವುಗಳನ್ನು ಅತ್ಯಂತ ಹೆಚ್ಚಿನ ಬೆಲೆಗೆ ರಾಮಮಂದಿರ ಟ್ರಸ್ಟ್ಗೆ ಮಾರಾಟ ಮಾಡಿ ಭಾರೀ ಲಾಭ ಮಾಡಿಕೊಂಡಿರುವ ಇಂತಹುದೇ ಹಲವು ಭೂ ವ್ಯವಹಾರಗಳು ಬೆಳಕಿಗೆ ಬಂದಿದ್ದವು.
ಈ ವರದಿಗಳು ಬಹಿರಂಗಗೊಂಡ ಬೆನ್ನಲ್ಲೇ, ಭೂ ವ್ಯವಹಾರಗಳ ತನಿಖೆಗೆ ಉತ್ತರ ಪ್ರದೇಶದ BJP ಸರಕಾರವು ರಾಜ್ಯ ಕಂದಾಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಏಕಸದಸ್ಯ ಸಮಿತಿಯನ್ನು ರಚಿಸಿತ್ತು. ಆದರೆ, ಈ ಸಮಿತಿಯ ತನಿಖಾ ವರದಿ ಇನ್ನು ಕೂಡ ಸಾರ್ವಜನಿಕವಾಗಿ ಲಭ್ಯವಾಗಿಲ್ಲ.
ಅಯೋಧ್ಯೆಯ ಒಂದು ಗ್ರಾಮದ ಭೂ ದಾಖಲೆಗಳನ್ನು ಪರಿಶೀಲಿಸಿದಾಗ, ಇಂದಿಗೂ ಅದೇ ಶೈಲಿಯ ವ್ಯವಹಾರಗಳು ನಡೆಯುತ್ತಿರುವುದು ಕಂಡುಬಂದಿದೆ. ರಾಜಕೀಯ ಪ್ರಭಾವ ಹೊಂದಿರುವ ವ್ಯಕ್ತಿಗಳು ಹಾಗೂ ಅವರ ನಿಕಟವರ್ತಿಗಳು ಅಗ್ಗದ ಬೆಲೆಗೆ ಜಮೀನುಗಳನ್ನು ಖರೀದಿಸಿ, ಟ್ರಸ್ಟ್ ಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಮುಂದುವರಿದಿದೆ.
ಹೆಚ್ಚಿನ ನಿಗಾ ವಹಿಸಿರುವ ಕಾರಣದಿಂದಾಗಿ, ವ್ಯವಹಾರಗಳ ವೇಗ ಮಾತ್ರ ಕೊಂಚ ಕಡಿಮೆಯಾಗಿದೆ. ಜಮೀನು ಖರೀದಿಸಿದ ಕೆಲವೇ ದಿನಗಳಲ್ಲಿ ಅಥವಾ ತಿಂಗಳುಗಳಲ್ಲಿ ಮರುಮಾರಾಟ ಮಾಡುವ ಬದಲು, ಈಗ ಆ ಅವಧಿ ಕೆಲವು ವರ್ಷಗಳಿಗೆ ವಿಸ್ತರಿಸಿದೆ.
ಈ ಗ್ರಾಮವಾದ ‘ಬಾಗ್ ಬಿಜೈಸಿ’ ರಾಮಮಂದಿರದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ. ಹಬ್ಬಗಳ ಸಮಯದಲ್ಲಿ ಮಂದಿರಕ್ಕೆ ಭೇಟಿ ನೀಡುವ ಭಕ್ತರು ಹಾಗೂ BJP ಮತ್ತು RSS ನಾಯಕರು ತಂಗಲು ‘ತೀರ್ಥಕ್ಷೇತ್ರ ಪುರಂ’ ಎಂಬ ಬೃಹತ್ ಸಂಕೀರ್ಣವನ್ನು ನಿರ್ಮಿಸಲು ಟ್ರಸ್ಟ್ ಇಲ್ಲಿ ಜಮೀನು ಖರೀದಿಸಿತ್ತು.
ರಾಮಮಂದಿರ ಟ್ರಸ್ಟ್ ಜೊತೆಗಿನ ಭೂ ವ್ಯವಹಾರಗಳಿಂದ ಭಾರೀ ಲಾಭ ಮಾಡಿಕೊಂಡವರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಾಯಕ, ಸಮಾಜವಾದಿ ಪಕ್ಷದ ವಾರ್ಡ್ ಅಭ್ಯರ್ಥಿ ಹಾಗೂ ಮಾಜಿ BJP ಮೇಯರ್ ಅವರ ನಿಕಟವರ್ತಿಗಳು ಸೇರಿದ್ದಾರೆ.
►ಸಮಾಜವಾದಿ ಪಕ್ಷದ ನಾಯಕನಿಗೆ 11 ಪಟ್ಟು ಹೆಚ್ಚಿನ ಲಾಭ
ಜನವರಿ 2020ರಲ್ಲಿ, ವಿಶ್ವ ಮೋಹಿನಿ ಚೌಬೆ ಎಂಬುವವರು ಬಾಗ್ ಬಿಜೈಸಿ ಗ್ರಾಮದಲ್ಲಿ 621.66 ಚದರ ಮೀಟರ್ ಜಮೀನನ್ನು 9 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಆ ಸಮಯದಲ್ಲಿ ಅಲ್ಲಿನ ಸರ್ಕಾರಿ ಕನಿಷ್ಠ ದರಕ್ಕಿಂತಲೂ (ಸರ್ಕಲ್ ರೇಟ್ - 29.8 ಲಕ್ಷ ರೂಪಾಯಿ) ಇದು ತೀರಾ ಕಡಿಮೆಯಾಗಿತ್ತು.
ಐದು ವರ್ಷಗಳ ನಂತರ, ಅಂದರೆ 2025ರ ಎಪ್ರಿಲ್ ನಲ್ಲಿ, ಅವರು ಅದೇ ಜಮೀನನ್ನು ರಾಮಮಂದಿರ ಟ್ರಸ್ಟ್ ಗೆ 98.2 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅಂದರೆ ಮೂಲ ಬೆಲೆಗಿಂತ ಸುಮಾರು 11 ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿದೆ.
ವಿಶ್ವ ಮೋಹಿನಿ ಚೌಬೆ ಅವರು 2023ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಯೋಧ್ಯೆಯ ದೇವಕಾಳಿ ವಾರ್ಡ್ನಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದ ಪ್ರದೀಪ್ ಚೌಬೆ ಅವರ ಪತ್ನಿಯಾಗಿದ್ದಾರೆ.
Pradeep Chaubey’s election poster from the 2023 Ayodhya municipal elections and a Samajwadi Party letter confirming his candidature. Photos from Facebook.
Scroll.in ಜತೆ ಫೋನ್ ನಲ್ಲಿ ಮಾತನಾಡಿದ ಪ್ರದೀಪ್ ಚೌಬೆ, ಆರಂಭದಲ್ಲಿ ತಮಗೆ ಸಮಾಜವಾದಿ ಪಕ್ಷದ ಜೊತೆ ಸಂಪರ್ಕವಿರುವುದನ್ನು ಒಪ್ಪಿಕೊಂಡಿದ್ದರು. ಆದರೆ, ಬಾಗ್ ಬಿಜೈಸಿ ಭೂ ವ್ಯವಹಾರದ ಬಗ್ಗೆ ಪ್ರಶ್ನಿಸಿದಾಗ, ತಮಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಆಸ್ತಿ ನೋಂದಣಿ ತೆರಿಗೆ ಉಳಿಸುವ ಉದ್ದೇಶದಿಂದ ತಮ್ಮ ಪತ್ನಿಯ ಹೆಸರಿನಲ್ಲಿ ಜಮೀನು ಖರೀದಿಸಿದ್ದಾಗಿ ಚೌಬೆ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಸ್ಟಾಂಪ್ ಡ್ಯೂಟಿ ಕಡಿಮೆಯಿರುತ್ತದೆ.
"ನನ್ನ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆಯಾಗಿ ಈ ಜಮೀನನ್ನು ಖರೀದಿಸಿದ್ದೆ. ಆದರೆ ರಾಮಮಂದಿರ ಟ್ರಸ್ಟ್ ನನ್ನ ಜಮೀನಿನ ಸುತ್ತಮುತ್ತಲಿನ ಆಸ್ತಿಗಳನ್ನು ಖರೀದಿಸಿದಾಗ, ಶ್ರೀರಾಮನ ಮೇಲಿನ ಭಕ್ತಿಯಿಂದ ನಾನು ಆ ಜಮೀನನ್ನು ಅವರಿಗೆ ಮಾರಾಟ ಮಾಡಲು ನಿರ್ಧರಿಸಿದೆ" ಎಂದು ಚೌಬೆ ಹೇಳಿದ್ದಾರೆ.
►ABVP ನಾಯಕನಿಗೆ ನಾಲ್ಕು ಪಟ್ಟು ಲಾಭ
2021ರ ಡಿಸೆಂಬರ್ ನಲ್ಲಿ, ಮಂತೋಷ್ ಮೌರ್ಯ ಎಂಬುವವರು ಅಯೋಧ್ಯೆಯ ಬಾಗ್ ಬಿಜೈಸಿ ಗ್ರಾಮದಲ್ಲಿ 277 ಚದರ ಮೀಟರ್ ಜಮೀನನ್ನು 13.3 ಲಕ್ಷ ರೂಪಾಯಿಗೆ ಖರೀದಿಸಿದ್ದರು.
ನಾಲ್ಕು ವರ್ಷಗಳ ನಂತರ, ಅಂದರೆ 2025ರ ಜನವರಿಯಲ್ಲಿ, ಮೌರ್ಯ ಆ ಜಮೀನನ್ನು ರಾಮಮಂದಿರ ಟ್ರಸ್ಟ್ಗೆ 50 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದು ಮೂಲ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.
Mantosh Maurya at an ABVP event in a photo shared in January 2026. Photo from Facebook.
ಮೌರ್ಯ ಅವರು ಅಯೋಧ್ಯೆಯಿಂದ 180 ಕಿ.ಮೀ ದೂರದಲ್ಲಿರುವ ದೇವೋರಿಯಾ ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಗರ ಅಧ್ಯಕ್ಷರಾಗಿದ್ದಾರೆ. ABVP, BJPಯ ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿದ್ಯಾರ್ಥಿ ವಿಭಾಗವಾಗಿದೆ.
"ನನ್ನ ಮಕ್ಕಳಿಗಾಗಿ ನಾನು ಆ ಜಮೀನನ್ನು ಖರೀದಿಸಿದ್ದೆ. ಟ್ರಸ್ಟ್ ಆ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿತ್ತು, ಆದರೆ ನನಗೆ ಜಮೀನು ಮಾರಾಟ ಮಾಡಲು ಇಷ್ಟವಿರಲಿಲ್ಲ. ಆದರೆ ಸುತ್ತಮುತ್ತಲಿನ ಜಮೀನುಗಳನ್ನು ಟ್ರಸ್ಟ್ ವಶಪಡಿಸಿಕೊಂಡಿದ್ದರಿಂದ ನನಗೆ ನನ್ನ ಜಮೀನಿಗೆ ಹೋಗಲು ದಾರಿಯೇ ಇಲ್ಲದಂತಾಯಿತು. ಒಂದೂವರೆ ವರ್ಷಗಳ ಹೋರಾಟದ ನಂತರ ಬೇರೆ ದಾರಿಯಿಲ್ಲದೆ ಅವರಿಗೆ ಮಾರಾಟ ಮಾಡಬೇಕಾಯಿತು" ಎಂದು ಮೌರ್ಯ ‘scroll.in’ಗೆ ತಿಳಿಸಿದ್ದಾರೆ.
►ಸಮಾಜವಾದಿ ನಾಯಕನ ಸಂಬಂಧಿಗೆ ಮೂರು ಪಟ್ಟು ಲಾಭ
2021ರ ಡಿಸೆಂಬರ್ನಲ್ಲಿ, ಶಿಖಾ ಗುಪ್ತಾ ಎಂಬುವವರು ಬಾಗ್ ಬಿಜೈಸಿ ಗ್ರಾಮದಲ್ಲಿ 833 ಚದರ ಮೀಟರ್ ಜಮೀನನ್ನು 40 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಎರಡೂವರೆ ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಅಂದರೆ 2023ರ ನವೆಂಬರ್ನಲ್ಲಿ, ಅವರು ಈ ಜಮೀನಿನ ಪೈಕಿ 763.3 ಚದರ ಮೀಟರ್ ಭಾಗವನ್ನು ರಾಮಮಂದಿರ ಟ್ರಸ್ಟ್ಗೆ 1.14 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದು ಅವರು ಖರೀದಿಸಿದ್ದ ಬೆಲೆಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ಶಿಖಾ ಗುಪ್ತಾ ಅವರು ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ವ್ಯಾಪಾರಿ ಘಟಕದ ರಾಜ್ಯ ಕಾರ್ಯದರ್ಶಿ ನಂದಕುಮಾರ್ ಗುಪ್ತಾ ಅವರ ಅಳಿಯ ಅಮಿತ್ ಗುಪ್ತಾ ಅವರ ಪತ್ನಿಯಾಗಿದ್ದಾರೆ.
ನಂದಕುಮಾರ್ ಗುಪ್ತಾ ಅವರಿಗೆ ಕರೆ ಮಾಡಿದಾಗ ಉತ್ತರಿಸಿದ ಅವರ ಪತ್ನಿ ಅಪರ್ಣಾ, ನಂದಕುಮಾರ್ ಅವರು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವುದರಿಂದ ಮಾತನಾಡಲು ಲಭ್ಯವಿಲ್ಲ ಎಂದು ತಿಳಿಸಿದರು.
ನಂದಕುಮಾರ್ ಗುಪ್ತಾ ಅವರೊಂದಿಗಿನ ಸಂಬಂಧವನ್ನು ದೃಢಪಡಿಸಿದ ಅಮಿತ್ ಗುಪ್ತಾ, "ನಾವು ವಾಸದ ಮನೆ ನಿರ್ಮಿಸುವ ಉದ್ದೇಶದಿಂದ ಜಮೀನು ಖರೀದಿಸಿದ್ದೆವು. ಟ್ರಸ್ಟ್ ಆ ಭಾಗದಲ್ಲಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾರಂಭಿಸಿದಾಗ ನಮಗೆ ಆಫರ್ ನೀಡಿದರು. ಹೀಗಾಗಿ ಅದನ್ನು ಅವರಿಗೆ ಮಾರಾಟ ಮಾಡಲು ನಿರ್ಧರಿಸಿದೆವು" ಎಂದು ಹೇಳಿರುವುದಾಗಿ ಸ್ಕ್ರಾಲ್ ವರದಿ ಉಲ್ಲೇಖಿಸಲಾಗಿದೆ.
Nand Kumar Gupta with SP chief Akhilesh Yadav in a photo shared in December 2025. Photo from Facebook.
►ಮಾಜಿ BJP ಮೇಯರ್ ನಿಕಟವರ್ತಿಗಳಿಗೆ ಎರಡಕ್ಕೂ ಹೆಚ್ಚು ಪಟ್ಟು ಲಾಭ
2021ರ ಮಾರ್ಚ್ ನಲ್ಲಿ, ಹರೀಶ್ ಮತ್ತು ಕುಸುಮ್ ಪಾಠಕ್ ಅವರು ಬಾಗ್ ಬಿಜೈಸಿಯಲ್ಲಿದ್ದ 42.7 ಲಕ್ಷ ರೂಪಾಯಿ ಮೌಲ್ಯದ 890 ಚದರ ಮೀಟರ್ ಜಮೀನನ್ನು ರವೀಂದ್ರ ದುಬೆ ಎಂಬುವವರಿಗೆ ಉಡುಗೊರೆಯಾಗಿ ನೀಡಿದ್ದರು. ಉಡುಗೊರೆ ಪತ್ರವಾಗಿದ್ದರಿಂದ ದುಬೆ ಈ ಜಮೀನು ಪಡೆಯಲು ಯಾವುದೇ ಹಣ ಪಾವತಿಸಿರಲಿಲ್ಲ.
ಎರಡೂವರೆ ವರ್ಷಗಳ ನಂತರ, ಅಂದರೆ 2023ರ ಅಕ್ಟೋಬರ್ ನಲ್ಲಿ, ದುಬೆ ಈ ಆಸ್ತಿಯ ಪೈಕಿ 510 ಚದರ ಮೀಟರ್ ಭಾಗವನ್ನು ರಾಮಮಂದಿರ ಟ್ರಸ್ಟ್ಗೆ 54.9 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದು ಆ ಜಮೀನಿನ ಮಾರುಕಟ್ಟೆ ಮೌಲ್ಯವಾದ 24.5 ಲಕ್ಷ ರೂಪಾಯಿಗಿಂತ ಎರಡಕ್ಕೂ ಹೆಚ್ಚು ಪಟ್ಟು ಹೆಚ್ಚಾಗಿದೆ.
ದುಬೆ ಅವರು ರವಿ ಮೋಹನ್ ತಿವಾರಿ ಅವರ ಭಾವ. 2021ರಲ್ಲಿ ವರದಿಯಾದ ಅಯೋಧ್ಯೆಯ ಅತ್ಯಂತ ವಿವಾದಾಸ್ಪದ ಭೂ ವ್ಯವಹಾರದಲ್ಲಿ ಪಾಠಕ್ ಕುಟುಂಬದ ಜೊತೆ ಈ ರವಿ ಮೋಹನ್ ತಿವಾರಿ ಅವರ ಹೆಸರೂ ಇತ್ತು. ಆ ವರ್ಷದ ಮಾರ್ಚ್ ನಲ್ಲಿ ಪಾಠಕ್ ದಂಪತಿ ಬಾಗ್ ಬಿಜೈಸಿಯಲ್ಲಿದ್ದ ಜಮೀನನ್ನು ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಎಂಬುವವರಿಗೆ 2 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಅದಾಗಿ ಕೆಲವೇ ನಿಮಿಷಗಳಲ್ಲಿ, ತಿವಾರಿ ಮತ್ತು ಅನ್ಸಾರಿ ಅದೇ ಜಮೀನನ್ನು ಟ್ರಸ್ಟ್ ಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಅಂದರೆ ಮೂಲ ಬೆಲೆಗಿಂತ ಒಂಭತ್ತಕ್ಕೂ ಹೆಚ್ಚು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿತ್ತು.
Former BJP mayor Rishikesh Upadhyaya and Ravi Mohan Tiwari. Photo from Facebook.
ದುಬೆ ಆರಂಭದಲ್ಲಿ ತಾವು ರವಿ ಮೋಹನ್ ತಿವಾರಿ ಅವರ ಭಾವ ಎಂದು scroll.inಗೆ ದೃಢಪಡಿಸಿದ್ದರು. ಆದರೆ, ಭೂ ವ್ಯವಹಾರಗಳ ಬಗ್ಗೆ ಪ್ರಶ್ನಿಸಿದಾಗ, ಆ ಸಂಬಂಧವನ್ನು ನಿರಾಕರಿಸಿದರು.
"ಹೌದು, ನಾನು (ಈ ವ್ಯವಹಾರಗಳಲ್ಲಿ) ಹಣ ಗಳಿಸಿದ್ದೇನೆ, ಆದರೆ ಅದಕ್ಕೂ ರವಿ ಮೋಹನ್ ತಿವಾರಿಗೂ ಏನು ಸಂಬಂಧ? ನಾನು ಅವರ ಭಾವನಲ್ಲ" ಎಂದು ಅವರು ಹೇಳಿದರು.
ಇನ್ನೊಂದೆಡೆ, ತಿವಾರಿ ಅವರು ಅಯೋಧ್ಯೆಯ ಮಾಜಿ BJP ಮೇಯರ್ ಋಷಿಕೇಶ್ ಉಪಾಧ್ಯಾಯ ಅವರಿಗೆ ದೂರದ ಸಂಬಂಧಿಯಾಗಿದ್ದಾರೆ. ತಿವಾರಿ ಅವರ ಸೋದರಸಂಬಂಧಿಯು ಉಪಾಧ್ಯಾಯ ಅವರ ಸೊಸೆಯನ್ನು ಮದುವೆಯಾಗಿದ್ದಾರೆ.
ತಿವಾರಿ ಅವರೊಂದಿಗಿನ ತಮ್ಮ ಕೌಟುಂಬಿಕ ಸಂಬಂಧವನ್ನು ಸಣ್ಣ ವಿಷಯವೆಂದು ತಳ್ಳಿಹಾಕಿದ ಉಪಾಧ್ಯಾಯ, "ಅಷ್ಟು ದೂರದ ಸಂಬಂಧವನ್ನು ನೋಡುವುದಾದರೆ, ಇಡೀ ಅಯೋಧ್ಯೆಯೇ ನನಗೆ ಸಂಬಂಧಿಕರಾಗುತ್ತದೆ" ಎಂದಿದ್ದಾರೆ.
ತಿವಾರಿ ಅವರಿಗೆ ‘scroll.in’ ಮಾಡಿದ ಫೋನ್ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಹಾಗೂ ಅವರಿಗೆ ಕಳುಹಿಸಿದ SMSಗಳು ತಲುಪಲಿಲ್ಲ.
2022ರ ಮಾರ್ಚ್ 8ರಂದು ಆತ್ಮಾರಾಮ್ ಎಂಬುವವರು ಬಾಗ್ ಬಿಜೈಸಿ ಗ್ರಾಮದಲ್ಲಿದ್ದ 122.67 ಚದರ ಮೀಟರ್ ಜಮೀನನ್ನು ಪ್ರಭಾಕರ್ ತಿವಾರಿ ಎಂಬುವವರಿಗೆ 23.8 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಜೊತೆಗೆ 155.205 ಚದರ ಮೀಟರ್ ಜಮೀನನ್ನು ವಿಶ್ವ ಪ್ರತಾಪ್ ಉಪಾಧ್ಯಾಯ ಮತ್ತು ರಾಜೇಂದ್ರ ಪ್ರಸಾದ್ ಯಾದವ್ ಅವರಿಗೆ 7.45 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು.
From left to right: Vishwa Pratap Upadhyaya, Ravindra Dube and Ravi Mohan Tiwari in a photo shared in August 2023. Photo from Facebook.
2023ರ ನವೆಂಬರ್ನಲ್ಲಿ, ತಿವಾರಿ, ಉಪಾಧ್ಯಾಯ ಮತ್ತು ಯಾದವ್ ಸೇರಿ ಈ ಎಲ್ಲಾ ಜಮೀನನ್ನು ರಾಮಮಂದಿರ ಟ್ರಸ್ಟ್ ಗೆ ಒಟ್ಟು 37.8 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ವಿಶ್ವ ಪ್ರತಾಪ್ ಉಪಾಧ್ಯಾಯ ಅವರು ರವಿ ತಿವಾರಿ ಅವರ ಸಂಬಂಧಿಯಾಗಿದ್ದಾರೆ. ತಾವು ರಾಜೇಂದ್ರ ಪ್ರಸಾದ್ ಯಾದವ್ ಅವರೊಂದಿಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವುದಾಗಿ ‘scroll.in’ಗೆ ತಿಳಿಸಿದ ಅವರು, "ಟ್ರಸ್ಟ್ ನವರೇ ನಮ್ಮನ್ನು ಸಂಪರ್ಕಿಸಿದ್ದರಿಂದ ನಾವು ಅವರಿಗೆ ಜಮೀನು ಮಾರಾಟ ಮಾಡಿದೆವು" ಎಂದು ಹೇಳಿದ್ದಾರೆ.
ರಾಜೇಂದ್ರ ಪ್ರಸಾದ್ ಯಾದವ್ ಅವರು ತಾವು ರವಿ ತಿವಾರಿ ಅವರ ನೆರೆಹೊರೆಯವರಾಗಿದ್ದು, ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿದೆ ಎಂದು ತಿಳಿಸಿದ್ದಾರೆ. ಮನೆ ನಿರ್ಮಿಸುವ ಉದ್ದೇಶದಿಂದ ಉಪಾಧ್ಯಾಯ ಅವರೊಂದಿಗೆ ಸೇರಿ ಜಮೀನು ಖರೀದಿಸಿದ್ದಾಗಿ ಹೇಳಿದ ಅವರು, "ರಾಮಮಂದಿರ ಟ್ರಸ್ಟ್ ಸುತ್ತಮುತ್ತಲ ಆಸ್ತಿಗಳನ್ನು ಖರೀದಿಸಲು ಪ್ರಾರಂಭಿಸಿದ ನಂತರ ನಮ್ಮ ಜಮೀನಿಗೆ ಹೋಗಲು ದಾರಿಯೇ ಇಲ್ಲದಂತಾಯಿತು, ಹೀಗಾಗಿ ಅದನ್ನು ಮಾರಾಟ ಮಾಡಬೇಕಾಯಿತು" ಎಂದಿದ್ದಾರೆ.
ಸೌಜನ್ಯ: scroll.in