ಅಳಿವಿನಂಚಿನಲ್ಲಿರುವ ಟಿಮೋರ್ ಹಸಿರು ಪಾರಿವಾಳ
ನೂರರಷ್ಟಿರುವ ಪಕ್ಷಿ ಸಂಕುಲ ಜಗತ್ತಿನಿಂದ ದೂರವಾಗುತ್ತಿರುವುದೇಕೆ?
Photo Credit : ebird.org
ಸಂಶೋಧಕರು ಈ ಟಿಮೋರ್ ಪಾರಿವಾಳಗಳನ್ನು ಅಳಿವಿನಂಚಿನಿಂದ ಅತಿಯಾದ ಅಳಿವಿನಂಚಿನಲ್ಲಿರುವ ಪಕ್ಷಿಗಳು ಎಂದು ಮರುಮೌಲ್ಯಮಾಪನ ಮಾಡುವಂತೆ ಸಲಹೆ ನೀಡಿದ್ದಾರೆ.
ಇಂಡೋನೇಷ್ಯಾದ ಕೆಲವು ದ್ವೀಪಗಳು, ಟಿಮೋರ್ ದ್ವೀಪ ಮತ್ತು ಸಮೀಪದ ದ್ವೀಪಗಳಲ್ಲಿ ಕಂಡುಬರುವ ಟಿಮೋರ್ ಹಸಿರು ಪಾರಿವಾಳವು ಅಳಿವಿನಂಚಿನಲ್ಲಿದೆ. ಓರಿಕ್ಸ್ನಲ್ಲಿ ಪ್ರಕಟವಾದ ಹೊಸ ಅಧ್ಯಯನ ವರದಿಯ ಪ್ರಕಾರ ಜಾಗತಿಕವಾಗಿ ಕೇವಲ 100ರಿಂದ 500 ಟಿಮೋರ್ ಹಸಿರು ಪಾರಿವಾಳಗಳು ಮಾತ್ರ ಉಳಿಯಬಹುದು. ಆದರೆ ಈಗಿನ ಸಂಖ್ಯೆ ನೂರು ಪಾರಿವಾಳಗಳಿಗೆ ಸಮೀಪಿಸುತ್ತಿದೆ. ಸಂಶೋಧಕರು ಈ ಪಾರಿವಾಳಗಳನ್ನು ಅಳಿವಿನಂಚಿನಿಂದ ಅತಿಯಾದ ಅಳಿವಿನಂಚಿನಲ್ಲಿರುವ ಪಕ್ಷಿಗಳು ಎಂದು ಮರುಮೌಲ್ಯಮಾಪನ ಮಾಡುವಂತೆ ಸಲಹೆ ನೀಡಿದ್ದಾರೆ.
ಇಂಡೋನೇಷ್ಯಾದಲ್ಲಿ ಪಕ್ಷಿಗಳು ಮರೆಯಾಗಿರುವುದು ಖಚಿತವಾಗಿದೆ. ಇಂಡೋನೇಷ್ಯಾದಲ್ಲಿ ಈ ದಶಕದಲ್ಲಿ ಕೇವಲ 6 ಪಕ್ಷಿಗಳನ್ನು ಮಾತ್ರ ಗುರುತಿಸಿರುವ ದಾಖಲೆ ಇದೆ. ಉಳಿದ ಟಿಮೋರ್ ಪಾರಿವಾಳಗಳು ಟಿಮೋರ್-ಲೆಸ್ಟೆಯಲ್ಲಿ ಮತ್ತು ವಿಶೇಷವಾಗಿ ಲೌಟೆಮ್ ಜಿಲ್ಲೆ ಮತ್ತು ನಿನೊ ಕೊನಿಸ್ ಸಂತಾನ ರಾಷ್ಟ್ರೀಯ ಉದ್ಯಾನವನದಲ್ಲಿ ಕೇಂದ್ರೀಕೃತವಾಗಿವೆ.
ವನ್ಯಜೀವಿ ಕಾರ್ಯಕರ್ತರು ಟಿಮೋರ್ ಪಾರಿವಾಳಗಳನ್ನು ಮಾನವ ನಿರ್ಮಿತ ಕಾರಣಗಳಿಗಾಗಿ ಅಳಿವಿನಂಚಿನಲ್ಲಿರುವ ಮತ್ತೊಂದು ಪ್ರಭೇದ ಎಂದು ಹೇಳುತ್ತಿದ್ದಾರೆ.
ಟಿಮೋರ್ ಹಸಿರು ಪಾರಿವಾಳದ ವಿಶೇಷತೆ ಏನು?
ಟಿಮೋರ್ ಹಸಿರು ಪಾರಿವಾಳವು ಟಿಮೋರ್, ರೋಟ್ ಮತ್ತು ಪೂರ್ವ ಇಂಡೋನೇಷ್ಯಾದ ಸುತ್ತಲಿನ ದ್ವೀಪಗಳು ಮತ್ತು ಟಿಮೋರ್ ಲೆಸ್ಟೆಗೆ ಸ್ಥಳೀಯವಾಗಿರುವ ಅರಣ್ಯಗಳಲ್ಲಿ ವಾಸಿಸುವ ಪಕ್ಷಿಯಾಗಿದೆ. ತಗ್ಗು ಪ್ರದೇಶದ ಅರಣ್ಯ ಆವಾಸಸ್ಥಾನಗಳಲ್ಲಿ ಮತ್ತು ಮುಖ್ಯವಾಗಿ ಹಣ್ಣು ಬಿಡುವ ಮರಗಳು ಇರುವೆಡೆ ವಾಸಿಸುತ್ತವೆ.
ದಶಕಗಳಿಂದ ಈ ಪ್ರಭೇದವನ್ನು ಅಳಿವಿನಂಚಿನಲ್ಲಿರುವ ಪಕ್ಷಿ ಎಂದು ಗುರುತಿಸಲಾಗಿದೆ. ಆವಾಸಸ್ಥಾನದ ಕುಸಿತ ಮತ್ತು ವನ್ಯಜೀವಿಗಳ ಗಣತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಟಿಮೋರ್ ಪಾರಿವಾಳದ ಸಂತತಿ ಕುಸಿತವನ್ನು ಗಮನಿಸಬೇಕು ಎಂದು ವನ್ಯಜೀವಿ ಛಾಯಾಗ್ರಾಹಕ ಮತ್ತು ಪರಿಸರವಾದಿ ಇಂದ್ರಜಿತ್ ಘೋರ್ಪಡೆ ಅಭಿಪ್ರಾಯಪಟ್ಟಿದ್ದಾರೆ.
“ಟಿಮೋರ್ ಪಾರಿವಾಳಗಳ ಆವಾಸಸ್ಥಾನವು ಶೇ 80ಕ್ಕೂ ಮೀರಿ ನಾಶವಾಗಿರುವುದೇ ಈ ಜಾತಿಯನ್ನು ಆತಂಕಕಾರಿ ಮಟ್ಟದಲ್ಲಿ ಅಳಿವಿನಂಚಿಗೆ ದೂಡಿದೆ. ಅಲ್ಲದೆ, ಈ ಪಕ್ಷಿಯನ್ನು ಐತಿಹಾಸಿಕವಾಗಿ ಮೋಜಿಗಾಗಿ ಬೇಟೆಯಾಡಲಾಗುತ್ತಿತ್ತು. ಶತಮಾನಗಳ ಬೇಟೆಯಿಂದಾಗಿ ಇವುಗಳ ಸಂಖ್ಯೆ ಕಡಿಮೆಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟಿಮೋರ್ ಹಸಿರು ಪಾರಿವಾಳಗಳನ್ನು ಲೌಟೆಮ್ನಲ್ಲಿ ಬೇಟೆಗಾರರು ‘ಟ್ಯೂಲ್’ ಎಂದು ಕರೆಯುತ್ತಾರೆ. ಟ್ಯೂಲ್ ಎಂದರೆ ‘ಕಿವುಡ’ ಎಂದರ್ಥ. ಒಂದು ಹಕ್ಕಿಗೆ ಗುಂಡು ಹಾರಿಸಿದರೂ, ಇತರ ಪಕ್ಷಿಗಳು ಹಾರದೆ ಅಲ್ಲೇ ಉಳಿಯಬಹುದು. ಹೀಗಾಗಿ ಒಂದೇ ಬೇಟೆಯಲ್ಲಿ ಅನೇಕ ಪಕ್ಷಿಗಳನ್ನು ಕೊಲ್ಲಲು ಸಾಧ್ಯವಾಗಿಸುತ್ತದೆ. “ಗುಂಡು ಹಾರಿಸಿದಾಕ್ಷಣ ಸದ್ದಿಗೆ ಬೆದರಿ ಇವು ಹಾರುವುದಿಲ್ಲ. ಹೀಗಾಗಿ ಬೇಟೆಗೆ ಹೆಚ್ಚು ಬಲಿಯಾಗುತ್ತವೆ” ಎನ್ನುತ್ತಾರೆ ಇಂದ್ರಜಿತ್ ಘೋರ್ಪಡೆ.
ಸಂತಾನೋತ್ಪತ್ತಿ ಶಕ್ತಿ ಕಳೆದುಕೊಳ್ಳುತ್ತಿರುವ ಟಿಮೋರ್
ಟಿಮೋರ್ ಪಾರಿವಾಳಗಳ ಆರೋಗ್ಯಕರ ಸಂತಾನೋತ್ಪತ್ತಿ ಕಡಿಮೆಯಾಗಿದೆ. ಪ್ರಭೇದಗಳ ಆವಾಸಸ್ಥಾನವು ವಿಭಜನೆಯಾದಾಗ ಅವುಗಳ ನಡುವಿನ ಆನುವಂಶಿಕ ವೈವಿಧ್ಯತೆಯ ಚಲನೆಯಲ್ಲಿ ಕುಸಿತ ಅಥವಾ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಅಂದರೆ, ಅರಣ್ಯನಾಶ, ನಗರೀಕರಣ ಅಥವಾ ರಸ್ತೆಗಳಂತಹ ಮಾನವ ಚಟುವಟಿಕೆಗಳು ಆವಾಸಸ್ಥಾನಕ್ಕೆ ಸಮಸ್ಯೆ ಒಡ್ಡುತ್ತವೆ. ಹೀಗಾಗಿ ಪ್ರಬೇಧಗಳ ನಡುವೆ ಜೀನ್ಗಳ ಚಲನೆ, ವಲಸೆ, ಪ್ರಸರಣ ಅಥವಾ ಸಂತಾನೋತ್ಪತ್ತಿ ಮೂಲಕ ವರ್ಗಾವಣೆಗೆ ಸಮಸ್ಯೆಯಾಗುತ್ತದೆ. ಪ್ರತಿ ಪೀಳಿಗೆ ದುರ್ಬಲವಾಗುತ್ತವೆ, ರೋಗಗಳಿಗೆ ಗುರಿಯಾಗುತ್ತವೆ ಮತ್ತು ಕಡಿಮೆ ಜೀವಿತಾವಧಿ ಹೊಂದುತ್ತವೆ. ಸಂತಾನೋತ್ಪತ್ತಿಗೆ ಜೋಡಿಗಳು ಇಲ್ಲವಾದಾಗ ಮುಂದಿನ ಪೀಳಿಗೆಯ ಜನಸಂಖ್ಯೆಗೆ ಸಮಸ್ಯೆಯಾಗಿಬಿಡುತ್ತದೆ.
ಟಿಮೋರ್ ಪಾರಿವಾಳದ ಆವಾಸಸ್ಥಾನವು ಅತಿಯಾಗಿ ವಿಭಜನೆಯಾಗಿದೆ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಪಾರಿವಾಳದ ಸಮಸ್ಯೆಗಳು ಅಳಿವಿನಂಚಿನಲ್ಲಿರುವ ಎಲ್ಲಾ ಪ್ರಭೇದಗಳಿಗೂ ಅನ್ವಯಿಸುತ್ತವೆ. ಮುಖ್ಯವಾಗಿ ಆವಾಸಸ್ಥಾನ ನಷ್ಟದ ಜೊತೆಗೆ ಬೇಟೆಯಾಡುವುದು. ನೈಸರ್ಗಿಕ ಜಗತ್ತನ್ನು ಸಂರಕ್ಷಿಸುವುದು ಮತ್ತು ರಕ್ಷಿಸುವ ಅಗತ್ಯದ ಅರಿವಿನ ಕೊರತೆಯನ್ನು ಇಂದ್ರಜಿತ್ ಘೋರ್ಪಡೆ ಗುರುತಿಸಿದ್ದಾರೆ.
ಅವರ ಪ್ರಕಾರ, ಹವಾಮಾನ ತಾಪಮಾನ ಏರಿಕೆ ಮತ್ತು ಕುಗ್ಗುತ್ತಿರುವ ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆಯಿಂದ ಪ್ರಭಾವಿತವಾಗಿರುವ ಹಿಮಕರಡಿಗಳಿಂದ ತೊಡಗಿ ಭಾರತದ ಹುಲ್ಲುಗಾವಲು ಪ್ರಭೇದಗಳು, ನದಿ ತೀರದ ಘರಿಯಾಲ್ಗಳು ಮತ್ತು ಜೇನುನೊಣಗಳು ಮತ್ತು ಹಮ್ಮಿಂಗ್ ಬರ್ಡ್ಗಳಂತಹ ಪರಾಗಸ್ಪರ್ಶಕಗಳವರೆಗೆ ವಿಭಿನ್ನ ಪರಿಸರ ವ್ಯವಸ್ಥೆಗಳಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪರಿಸ್ಥಿತಿಯನ್ನೂ ಟಿಮೋರ್ ಪಾರಿವಾಳಕ್ಕೆ ಹೋಲಿಕೆ ನೀಡಬಹುದು.
ಟಿಮೋರ್ ಪಾರಿವಾಳದ ರಕ್ಷಣೆ ಸಾಧ್ಯವೆ?
ಸಂರಕ್ಷಣೆಗೆ ಕೇವಲ ಸಂರಕ್ಷಿತ ಪ್ರದೇಶವೆಂದು ಘೋಷಿಸಿದರೆ ಸಾಲದು. ಮಾನವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗದ ವನ್ಯಜೀವಿಗಳ ಧ್ವನಿಗಳನ್ನು ಕೇಳಬೇಕು ಮತ್ತು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಇಂದ್ರಜಿತ್.
ಮಾಹಿತಿ ಕೃಪೆ: ಇಂಡಿಯನ್ ಎಕ್ಸ್ಪ್ರೆಸ್