ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ : ಒಪ್ಪಿಕೊಂಡ ಆರೋಗ್ಯ ಸಚಿವರು
ಬೆಂಗಳೂರು : ರಾಜ್ಯದ 27 ಜಿಲ್ಲೆಗಳಲ್ಲಿ ಪ್ರಮುಖ ಔಷಧಿಗಳೇ ಇಲ್ಲ. ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿಯೇ ಔಷಧಿಗಳ ಕೊರತೆ ಕಾಣಿಸಿಕೊಂಡಿರುವುದನ್ನು ಸ್ವತಃ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಒಪ್ಪಿಕೊಂಡಿದ್ದಾರೆ.
ಬೈಲಹೊಂಗಲದ ಶಾಸಕ ಕೌಜಲಗಿ ಮಹಂತೇಶ್ ಶಿವಾನಂದ್ ಅವರು ಇಂದು ವಿಧಾನಸಭೆಯಲ್ಲಿ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಖಾದರ್ ಅವರು ಇತ್ತೀಚಿನ ದಿನಗಳಲ್ಲಿ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಅಲ್ಲದೇ 103 ಔಷಧಿ ಖರೀದಿಸಲು ಆಹ್ವಾನಿಸಿದ್ದ ಟೆಂಡರ್‌ಗಳಿಗೆ ಒಂದೇ ಒಂದ್ ಬಿಡ್ ಕೂಡ ಸ್ವೀಕೃತವಾಗಿಲ್ಲ. ಇನ್ನಿತರ ಔಷಧಿ ಸಾಮಗ್ರಿಗಳ ಖರೀದಿಗೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ 55 ಬಿಡ್‌ಗಳನ್ನು ತಿರಸ್ಕರಿಸಿದೆ. ಹಾಗೆಯೇ 15 ವಸ್ತುಗಳನ್ನು ಕೈಬಿಟ್ಟಿದೆ. 356 ವಸ್ತುಗಳನ್ನು ಸ್ಥಳೀಯ ಖರೀದಿಗೆ ಗುರುತಿಸಿತ್ತು. ಆದರೂ ಸಹ ಇಲಾಖೆಯು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಸಚಿವ ಯು.ಟಿ. ಖಾದರ್ ಅವರೇ ಇದೀಗ ಔಷಧಿಗಳ ಕೊರತೆ ಇರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ಅಧಿಕೃತವಾಗಿ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.
ಅಪೂರ್ಣಗೊಂಡಿರುವ ಟೆಂಡರ್‌ಗಳು ದೀರ್ಘ ಕಾಲದಿಂದಲೂ ಕುಂಟುತ್ತಾ ಸಾಗಿವೆ.
ಸಚಿವರು ನೀಡಿರುವ ಉತ್ತರದಲ್ಲೇನಿದೆ?
ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ ಇದೆ ಎಂದು ಸರಕಾರವು ಒಪ್ಪಿಕೊಂಡಿದೆ. ರಾಜ್ಯದ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕೆಲವು ಔಷಧಿಗಳ ದಾಸ್ತಾನು ಪ್ರಮಾಣ ಕಡಿಮೆಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ 2025-26ನೇ ಸಾಲಿನ ವಾರ್ಷಿಕ ಇಂಡೆಂಟ್ ಅನ್ವಯ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆ ಮತ್ತು ಇತರ ಸರಕಾರಿ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ ಔಷಧಿಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಮೂಲಕ ಕೈಗೊಳ್ಳುತ್ತಿದೆ ಎಂದು ಉತ್ತರದಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
2025ರ ಆಗಸ್ಟ್ 4ರ ಅನ್ವಯ ಒಟ್ಟು 890 ವಿಧದ ಔಷಧಿಗಳ ಖರೀದಿಗಾಗಿ 880.68 ಕೋಟಿ ರೂ. ಅನುದಾನಕ್ಕೆ ಮಂಜೂರಾತಿ ದೊರೆತಿದೆ. ಈ ಆದೇಶದ ಅನ್ವಯ ಕೆಎಸ್‌ಎಂಎಸ್‌ಸಿಎಲ್ ಮೂಲಕ 534 ಔಷಧಿಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಲು ನಿರ್ಧರಿಸಿದೆ. ಹಾಗೂ ಉಳಿದ 356 ಕಡಿಮೆ ಮೌಲ್ಯದ ಔಷಧಿಗಳನ್ನು ಪ್ರಚಲಿತ ನಿಯಮಾನುಸಾರ ಸ್ಥಳೀಯ ಖರೀದಿ ವಿಧಾನಗಳ ಮೂಲಕ ಖರೀದಿಸಲು ನಿರ್ಧರಿಸಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ‘ಕೆಎಸ್‌ಎಂಎಸ್‌ಸಿಎಲ್‌ನಿಂದ ಒಟ್ಟು 508 ಔಷಧಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಇದುವರೆಗೆ 234 ಔಷಧಿಗಳಿಗೆ ಟೆಂಡರ್ ಅವಾರ್ಡ್ ಮಾಡಲಾಗಿದೆ. ಈ ಪೈಕಿ 151 ಔಷಧಿಗಳಿಗೆ ಬಿಡ್‌ದಾರರು ಭಾಗವಹಿಸಿಲ್ಲ. ಅಥವಾ ಬಿಡ್‌ದಾರರು ಅನರ್ಹರಾಗಿದ್ದಾರೆ. ಹೀಗಾಗಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂದು ವಿವರಿಸಿರುವುದು ಗೊತ್ತಾಗಿದೆ.
ಈಗಾಗಲೇ 201 ಔಷಧಿಗಳಿಗೆ ಖರೀದಿ ಆದೇಶಗಳನ್ನು ವಿತರಿಸಿದೆ. ಅವುಗಳಲ್ಲಿ 121 ಔಷಧಿಗಳು ಉಗ್ರಾಣಗಳಿಗೆ ಸರಬರಾಜಾಗಿವೆ. ಉಳಿದ 80 ಔಷಧಿಗಳ ಪೂರೈಕೆಯನ್ನು 30-45 ದಿನದೊಳಗಾಗಿ ಪೂರ್ಣಗೊಳಿಸಲಾಗುವುದು. ಇದಲ್ಲದೇ 37 ಔಷಧಿಗಳ ಟೆಂಡರ್ ಮೌಲ್ಯಮಾಪನ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು.
ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಲು ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆ ಮೂಲಕ 30 ಕೋಟಿ ರೂ. ಬಿಡುಗಡೆ ಮಾಡಲು ಹಾಗೂ ಈ ಅನುದಾನದಡಿಯಲ್ಲಿ ಆರೋಗ್ಯ ಸಂಸ್ಥೆಗಳು ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಿದೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
the-file.inಗೆ ಲಭ್ಯವಿರುವ ಮಾಹಿತಿ ಪ್ರಕಾರ 27 ಜಿಲ್ಲೆಗಳಲ್ಲಿ ಅರಿವಳಿಕೆ, ಶಸ್ತ್ರಚಿಕಿತ್ಸೆ, ತೀವ್ರ ನೋವು ಹಾಗೂ ತುರ್ತು ಮತ್ತು ಕ್ರಿಟಿಕಲ್ ಕೇರ್ ಸೇವೆಗಳಲ್ಲಿ ಬಳಸುವ ಪ್ರಮುಖ ಔಷಧಿಗಳು (Fentanyl Citrate Injection 50 mcg/ml) ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದು ತಿಳಿದು ಬಂದಿದೆ.
ಟೈಪ್-2 ಮಧುಮೇಹದ ಚಿಕಿತ್ಸೆಯಲ್ಲಿ ಬಳಸುವ ಬಾಯಿಯಿಂದ ಸೇವಿಸುವ ಔಷಧಿ (Sitagliptin 50 mg) ಫೈಲೇರಿಯಾ ಚಿಕಿತ್ಸೆಗೆ ಪ್ರಮುಖ ಔಷಧಿ (Diethylcarbamazine 100 mg 26) ಗಂಭೀರವಾಗಿ ಅಸ್ವಸ್ಥರಾಗಿರುವ ಅಥವಾ ಪೌಷ್ಟಿಕಾಂಶದ ಕೊರತೆಯಿರುವ ರೋಗಿಗಳಿಗೆ ಪೌಷ್ಟಿಕ ಬೆಂಬಲ ನೀಡಲು ಬಳಸುವ IV Amino Acid Infusion 200 ml, ರಕ್ತಸ್ರಾವ ಹಾಗೂ ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಕೆಲವು ಚಿಕಿತ್ಸಾ ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಿರುವ Vitamin K1 10 mg ಔಷಧಿ 19 ಜಿಲ್ಲೆಗಳಲ್ಲಿ ಇಲ್ಲ ಎಂದು ಗೊತ್ತಾಗಿದೆ.
ರಕ್ತದೊತ್ತಡ ಮತ್ತು ಇತರ ನಿರ್ದಿಷ್ಟ ಚಿಕಿತ್ಸಾ ಸಂದರ್ಭಗಳಲ್ಲಿ ಬಳಸುವ Prazosin 5 mg 17 ಜಿಲ್ಲೆಗಳಲ್ಲಿ ಕೊರತೆ ಕಂಡು ಬಂದಿದೆ. ಕೆಲವು ತುರ್ತು ಹಾಗೂ ಶಾಕ್ ಪರಿಸ್ಥಿತಿಗಳಲ್ಲಿ ಬಳಸುವ ಪ್ರಮುಖ ಕ್ರಿಟಿಕಲ್ ಕೇರ್ ಔಷಧಿಯಾಗಿರುವ Vasopressin Injection, ರಕ್ತಹೀನತೆ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಹಾಗೂ ತಾಯಂದಿರ ಆರೋಗ್ಯ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿರುವ Iron + Folic Acid, ಗಾಯದ ಆರೈಕೆ, ಡ್ರೆಸ್ಸಿಂಗ್ ಮತ್ತು ಸಾಮಾನ್ಯ ವೈದ್ಯಕೀಯ ಕ್ರಮಗಳಿಗೆ ಅಗತ್ಯವಾದ ಆಸ್ಪತ್ರೆ ವಸ್ತುವಾಗಿರುವ Absorbent Cotton Wool 11 ಜಿಲ್ಲೆಗಳಲ್ಲಿ ಕೊರತೆಯಾಗಿದೆ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಪೂರೈಕೆ ಹಾಗೂ ಕೊರತೆಯ ನಿರ್ವಹಣೆಗೆ ಬಳಸುವ calciam + Vitamin D3 Syrup 9 ಜಿಲ್ಲೆಗಳಲ್ಲಿಲ್ಲ. ಕಣ್ಣು ಒಣಗುವಿಕೆ ಮತ್ತು ಕಣ್ಣಿನ ಮೇಲ್ಮೈಯ ತೇವಾಂಶ ಕಾಪಾಡಲು ಬಳಸುವ Carboxymethylcellulose Eye Drops 8 ಜಿಲ್ಲೆಗಳಲ್ಲಿ ಕೊರತೆಯಾಗಿದೆ. ಆಯ್ದ ಆಸ್ಪತ್ರೆ ಹಾಗೂ ಕ್ರಿಟಿಕಲ್ ಕೇರ್ ಸಂದರ್ಭಗಳಲ್ಲಿ ಬಳಸುವ Human Albumin 5% 4 ಜಿಲ್ಲೆಗಳಲ್ಲಿ ಕೊರತೆ ಕಾಣಿಸಿಕೊಂಡಿದೆ. ಕೆಲವು ಗಂಭೀರ ಮತ್ತು ತುರ್ತು ಕ್ರಿಟಿಕಲ್ ಕೇರ್ ಪರಿಸ್ಥಿತಿಗಳಲ್ಲಿ ಬಳಸುವ ವಿಶೇಷ ದ್ರಾವಣವಾಗಿರುವ 3% Sodium Chloride 2 ಜಿಲ್ಲೆಗಳಲ್ಲಿ ಇಲ್ಲ ಎಂದು ಗೊತ್ತಾಗಿದೆ.
ವಿಶೇಷವೆಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಅವರ ತವರು ಜಿಲ್ಲೆ ದಕ್ಷಿಣ ಕನ್ನಡ/ಮಂಗಳೂರಿನಲ್ಲಿಯೂ ಸಹ ಇಂತಹ ಕೊರತೆ ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆಯಿಂದ ಲಭ್ಯವಿರುವ ಸ್ಟಾಕ್ ಮಾಹಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಔಷಧಿಗಳು ಮತ್ತು ಆರೋಗ್ಯ ವಸ್ತುಗಳು ಶೂನ್ಯ ಸ್ಟಾಕ್‌ನಲ್ಲಿರುವುದು ದಾಖಲಾಗಿದೆ.
ಗೋದಾಮುಗಳಲ್ಲಿಯೂ ದಾಸ್ತಾನು ಇಲ್ಲ
ಆತಂಕಕಾರಿ ಸಂಗತಿಯೆಂದರೆ ಕೆಎಸ್‌ಎಂಎಸ್ಸಿಎಲ್ ಗೋದಾಮುಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಔಷಧಿಗಳು ಮತ್ತು ಅಗತ್ಯ ಆರೋಗ್ಯ ವಸ್ತುಗಳು ದಾಸ್ತಾನಿಲ್ಲ. ನಿಗಮದ ಹಲವು ಗೋದಾಮುಗಳಲ್ಲಿ ಶೂನ್ಯ ಸ್ಟಾಕ್ ಇರುವುದು ದಾಖಲಾಗಿದೆ.
Noradrenaline Concentrate Injection 2 mg/ml, Metformin SR 1000 mg, Cefixime 200 mg Human Albumin 5%, Sodium Valproate 200 mg, Ondansetron Injection 2 mg/ml, Sanitary Napkins, Human Albumin 20%, Hyoscine Butyl Bromide 10 mg, Ceftriaxone + Sulbactam Injection, Iron + Folic Acid, Amlodipine 5 mg, Lorazepam 1 mg, Diclofenac Injection, Azithromycin 250 mg, Bisacodyl 5 mg, Ciprofloxacin 250 mg, Domperidone 10 mg, Fluconazole 200 mg, Paracetamol 500 mg ಔಷಧಿಗಳು ಹಲವು ಜಿಲ್ಲೆಗಳಲ್ಲಿ ಲಭ್ಯವಿಲ್ಲ.
ಮಂಗಳೂರಿನ ಗೋದಾಮಿನಲ್ಲಿಯೂ Cefixime, Azithromycin, Ciprofloxacin, Iron + Folic Acid, Metformin SR, Sodium Valproate, Ceftriaxone + Sulbactam, Diclofenac Injection, Ondansetron Injection, Noradrenaline, Human Albumin 20%, Human Albumin 5% ಮತ್ತು Sanitary Napkins ಸೇರಿದಂತೆ ಹಲವು ವಸ್ತುಗಳ ಕೊರತೆ ಕಾಣಿಸಿಕೊಂಡಿದೆ ಎಂದು ಗೊತ್ತಾಗಿದೆ.