ರಾಜಕೀಯ ಅಭಿಪ್ರಾಯಗಳಿಂದ ನಟ ಪ್ರಕಾಶ್ ರಾಜ್ ಕೆಲಸಗಳನ್ನು ಕಳೆದುಕೊಂಡಿದ್ದಾರೆ; ಭಯದಿಂದ ಬದುಕಲು ಸಿದ್ಧರಿಲ್ಲ: ಪತ್ನಿ ಪೋನಿ ವರ್ಮಾ
ಪ್ರಕಾಶ್ ರಾಜ್
ಬೆಂಗಳೂರು: ಸರಕಾರದ ವಿರುದ್ಧದ ಟೀಕೆ ಹಾಗೂ ರಾಜಕೀಯ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಕಾರಣ ನಟ ಪ್ರಕಾಶ್ ರಾಜ್ ಅವರು ಹಲವು ಚಲನಚಿತ್ರಗಳ ಅವಕಾಶಗಳು ಮತ್ತು ಜಾಹೀರಾತು ಪ್ರಾಜೆಕ್ಟ್ ಗಳನ್ನು ಕಳೆದುಕೊಂಡಿದ್ದಾರೆ ಎಂದು ಅವರ ಪತ್ನಿ ಪೋನಿ ವರ್ಮಾ ಬಹಿರಂಗಪಡಿಸಿದ್ದಾರೆ.
'ಪ್ರೇಮಾ ದಿ ಜರ್ನಲಿಸ್ಟ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಕಾಶ್ ರಾಜ್ ಅವರ ನಿರ್ಭೀತ ವ್ಯಕ್ತಿತ್ವ, ರಾಜಕೀಯ ನಿಲುವು, ವಿದ್ಯಾರ್ಥಿಗಳ ಹೋರಾಟಕ್ಕೆ ನೀಡಿದ ಬೆಂಬಲ ಹಾಗೂ ತಮ್ಮಿಬ್ಬರ ನಡುವಿನ ಧಾರ್ಮಿಕ ಭಿನ್ನಾಭಿಪ್ರಾಯಗಳ ಕುರಿತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರಕಾಶ್ ರಾಜ್ ಹಂಚಿಕೊಳ್ಳುವ 'ಜಸ್ಟ್ ಆಸ್ಕಿಂಗ್' ಪೋಸ್ಟ್ ಗಳು ಆಗಾಗ್ಗೆ ಸುದ್ದಿಯಾಗುತ್ತವೆ. ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸುವುದು ಹಾಗೂ ರಾಜಕೀಯ, ಸಾಮಾಜಿಕ ವಿಚಾರಗಳ ಕುರಿತು ಪ್ರಶ್ನೆಗಳನ್ನು ಎತ್ತುವುದು ಅವರ ಪೋಸ್ಟ್ ಗಳ ಪ್ರಮುಖ ಲಕ್ಷಣ. ಇತ್ತೀಚೆಗೆ ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು, ಸರ್ಕಾರವನ್ನು ಬಹಿರಂಗವಾಗಿಯೇ ಟೀಕಿಸಿದ್ದರು.
ಪತಿಯ ಈ ನಿರ್ಭೀತ ಧೋರಣೆಗೆ ಆರಂಭದಲ್ಲಿ ತಾವು ಹೊಂದಿಕೊಳ್ಳಲು ಕಷ್ಟಪಟ್ಟಿದ್ದಾಗಿ ಪೋನಿ ಹೇಳಿದ್ದಾರೆ. ಪ್ರಕಾಶ್ ರಾಜ್ ಅವರು ಪ್ರಬಲ ರಾಜಕೀಯ ಹೇಳಿಕೆಗಳನ್ನು ನೀಡಿದಾಗಲೆಲ್ಲ ಅವರ ಸುರಕ್ಷತೆಯ ಬಗ್ಗೆ ಆತಂಕವಾಗುತ್ತಿತ್ತು. ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಳಿಕ ಈ ಭಯ ಕ್ರಮೇಣ ಕಡಿಮೆಯಾಯಿತು ಎಂದು ಅವರು ನೆನಪಿಸಿಕೊಂಡಿದ್ದಾರೆ. "ಆರಂಭದಲ್ಲಿ ನನಗೆ ಭಯವಾಗುತ್ತಿತ್ತು. ಗೌರಿ ಅವರ ಸಾವಿನ ಸುದ್ದಿ ಕೇಳಿದಾಗ ಪ್ರಕಾಶ್ ಸಂಪೂರ್ಣವಾಗಿ ನೊಂದಿದ್ದರು. ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದರು" ಎಂದು ಹೇಳಿದ್ದಾರೆ.
ಪ್ರಕಾಶ್ ರಾಜ್ ಅವರ ಮುಕ್ತವಾಗಿ ಮಾತನಾಡುವ ಸ್ವಭಾವದ ಬಗ್ಗೆ ಗೌರಿ ಲಂಕೇಶ್ ಕೂಡ ಕಳವಳ ವ್ಯಕ್ತಪಡಿಸುತ್ತಿದ್ದರು. ಅವರೊಂದಿಗೆ ಪ್ರಕಾಶ್ ಎಲ್ಲ ವಿಷಯಗಳನ್ನೂ ಹಂಚಿಕೊಳ್ಳುತ್ತಿದ್ದರು. ಆದರೆ, ಗೌರಿ ಅವರ ಹತ್ಯೆ ಪ್ರಕಾಶ್ ಅವರನ್ನು ಆಳವಾಗಿ ಕಲಕಿತು. ಆ ಬಳಿಕ 'ನಾನು ಮಾತನಾಡೇ ಮಾತನಾಡುತ್ತೇನೆ' ಎಂದು ನಿರ್ಧರಿಸಿದರು ಎಂದು ಪೋನಿ ತಿಳಿಸಿದ್ದಾರೆ.
"ಗೌರಿ ಮಹಿಳೆಯಾಗಿದ್ದರೂ ಧೈರ್ಯದಿಂದ ನಿಂತು ಮಾತನಾಡಿದರು. 'ನಾವು ಇನ್ನೆಷ್ಟು ಕಾಲ ಭಯದಲ್ಲಿ ಬದುಕಬೇಕು?' ಎಂದು ಪ್ರಕಾಶ್ ಪ್ರಶ್ನಿಸಿದಾಗ ನನ್ನಲ್ಲಿದ್ದ ಭಯ ದೂರವಾಯಿತು" ಎಂದು ಹೇಳಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಹಲವು ಬಾರಿ ನಿಷೇಧಕ್ಕೆ ಒಳಗಾದರೂ ಪ್ರಕಾಶ್ ರಾಜ್ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ. ತಾವು ನಂಬಿದ ವಿಚಾರಗಳ ಪರವಾಗಿ ದೃಢವಾಗಿ ನಿಲ್ಲುವ ಅವರ ಗುಣವೇ ಅವರ ನಿರ್ಭೀತ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದು ಪೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪತಿಯ ಮುಕ್ತ ಅಭಿಪ್ರಾಯಗಳು ಚಿತ್ರರಂಗದಲ್ಲಿನ ವೈಯಕ್ತಿಕ ಸಂಬಂಧಗಳ ಮೇಲೂ ಪರಿಣಾಮ ಬೀರಿವೆ. ತಮ್ಮ ಅತ್ಯಂತ ಆಪ್ತ ಸ್ನೇಹಿತರಲ್ಲಿ ಕೆಲವರು ಪ್ರಕಾಶ್ ಅವರೊಂದಿಗೆ ಅಷ್ಟೊಂದು ಆಪ್ತರಾಗಿಲ್ಲ. ಆದರೆ, ಅವರನ್ನು ಇಷ್ಟಪಡಲೇಬೇಕು ಎಂದು ಯಾರನ್ನೂ ಒತ್ತಾಯಿಸುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ಹೊಂದುವ ಹಕ್ಕಿದೆ ಎಂದು ಹೇಳಿದ್ದಾರೆ.
ಪ್ರಕಾಶ್ ರಾಜ್ ಅವರ ನಟನೆಯಷ್ಟೇ ಅಲ್ಲ, ತಾವು ನಂಬಿದ ವಿಚಾರಗಳ ಪರವಾಗಿ ಧೈರ್ಯವಾಗಿ ನಿಲ್ಲುವ ಅವರ ಗುಣವನ್ನೂ ಜನರು ಮೆಚ್ಚುತ್ತಾರೆ ಎಂದು ಪೋನಿ ಹೇಳಿದ್ದಾರೆ. "ನಟನಾಗಿ ನಿಮ್ಮನ್ನು ಪ್ರೀತಿಸುತ್ತೇವೆ. ಜತೆಗೆ, ನಿಮ್ಮ ನಿಲುವಿಗೆ ದೃಢವಾಗಿ ಬದ್ಧರಾಗಿರುವುದನ್ನೂ ಮೆಚ್ಚುತ್ತೇವೆ ಎಂದು ಪ್ರಪಂಚದ ವಿವಿಧೆಡೆಯ ಜನರು ಬಂದು ಹೇಳುತ್ತಾರೆ" ಎಂದು ಅವರು ತಿಳಿಸಿದ್ದಾರೆ.
ಚಿತ್ರರಂಗದ ಹಲವು ನಟರು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳಲು ಹಿಂಜರಿಯುತ್ತಾರೆ. ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದರೆ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಸಿಗುವುದಿಲ್ಲ ಎಂಬ ಭಯ ಅವರಿಗಿದೆಯೇ ಎಂದು ಪೋನಿ ಅವರನ್ನು ಕೇಳಲಾಯಿತು.
ಇದಕ್ಕೆ ಉತ್ತರಿಸಿದ ಅವರು, "ಎಲ್ಲ ನಟರಿಗೂ ಇಂತಹ ಭಯ ಇರುತ್ತದೆ ಎಂದಲ್ಲ. ಚಿತ್ರರಂಗದಲ್ಲಿ ಪ್ರಭಾವ ಹೊಂದಿರುವ ಮತ್ತು ಇತರರಿಗೆ ಕೆಲಸ ಕೊಡಿಸುವ ಸ್ಥಾನದಲ್ಲಿರುವ ನಟರ ಪರಿಸ್ಥಿತಿ ಬೇರೆ" ಎಂದು ಹೇಳಿದ್ದಾರೆ.
ಆದರೆ, ಪ್ರಕಾಶ್ ರಾಜ್ ತಮ್ಮ ರಾಜಕೀಯ ಅಭಿಪ್ರಾಯಗಳಿಗಾಗಿ ವೃತ್ತಿಜೀವನದಲ್ಲಿ ಬೆಲೆ ತೆತ್ತಿದ್ದಾರೆ. ಹಲವು ಚಲನಚಿತ್ರಗಳ ಅವಕಾಶಗಳು ಮತ್ತು ಜಾಹೀರಾತು ಪ್ರಾಜೆಕ್ಟ್ ಗಳು ಅವರ ಕೈತಪ್ಪಿವೆ. ಕೆಲವು ಚಿತ್ರಗಳ ವಿಚಾರದಲ್ಲಿ ಮುಂಗಡ ಹಣ ನೀಡಿದ ಬಳಿಕವೂ ನಿರ್ಮಾಪಕರು ಹಿಂದೆ ಸರಿದಿದ್ದಾರೆ ಎಂದು ಪೋನಿ ಬಹಿರಂಗಪಡಿಸಿದ್ದಾರೆ.
ಪ್ರಕಾಶ್ ರಾಜ್ ಅವರ ರಾಜಕೀಯ ನಿಲುವುಗಳ ಹಿಂದಿರುವ ಕಾಳಜಿ ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಅಗತ್ಯಗಳ ಬಗ್ಗೆ ಇದೆ ಎಂದು ಅವರು ಹೇಳಿದ್ದಾರೆ. "ಅವರಿಗೆ ಬೇಕಿರುವುದು ಆಸ್ಪತ್ರೆಗಳು ಮತ್ತು ಶಾಲೆಗಳು ಮಾತ್ರ. ಆದರೆ, ದೇಶದಲ್ಲಿ ಬೇರೆ ಹತ್ತು ವಿಷಯಗಳಿಗೆ ಆದ್ಯತೆ ನೀಡಿದ ಬಳಿಕವಷ್ಟೇ ಶಾಲೆ ಮತ್ತು ಶಿಕ್ಷಣದ ಬಗ್ಗೆ ಯೋಚಿಸಲಾಗುತ್ತದೆ. ದುರದೃಷ್ಟವಶಾತ್, ಇದೇ ನಮ್ಮ ದೇಶದ ವಾಸ್ತವ. ಅವರ ಈ ನಿಲುವನ್ನು ನಾನು ಅಲ್ಲಗಳೆಯಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
ಪ್ರಕಾಶ್ ರಾಜ್ ಅವರನ್ನು ಕೆಲವರು ನಿಂದಿಸಿದರೂ, ನೋವುಂಟುಮಾಡುವ ಮಾತುಗಳನ್ನು ಆಡಿದರೂ ಅವರು ಯಾರ ಮೇಲೂ ದ್ವೇಷ ಇಟ್ಟುಕೊಳ್ಳುವುದಿಲ್ಲ. ಬದಲಾಗಿ, ಯಾರಾದರೂ ಕಷ್ಟದಲ್ಲಿದ್ದರೆ ಅವರಿಗೆ ಸಹಾಯ ಮಾಡಲು ತಕ್ಷಣ ಮುಂದಾಗುತ್ತಾರೆ. ಅವರ ಈ ಗುಣದ ಬಗ್ಗೆ ತಾವು ಹಲವು ಬಾರಿ ಪ್ರಶ್ನಿಸಿದ್ದರೂ, ಯಾರ ಬಗ್ಗೆಯೂ ದ್ವೇಷ ಸಾಧಿಸುವುದು ಪ್ರಕಾಶ್ ಅವರಿಗೆ ಇಷ್ಟವಿಲ್ಲ ಎಂದು ಪೋನಿ ಹೇಳಿದ್ದಾರೆ.
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ದಿಲ್ಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಪ್ರಕಾಶ್ ರಾಜ್ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಮತ್ತು ಪೆಲೆಟ್ (ಸಣ್ಣ ಲೋಹದ ಗುಂಡು) ದಾಳಿಯನ್ನು ಕಂಡು ತಮಗೆ ತುಂಬಾ ಭಯವಾಗಿತ್ತು ಎಂದು ಪೋನಿ ನೆನಪಿಸಿಕೊಂಡಿದ್ದಾರೆ.
"ನಾನು ಲಾಠಿಚಾರ್ಜ್ ಮತ್ತು ಪೆಲೆಟ್ ದಾಳಿಯನ್ನು ಕಂಡು ಬೆಚ್ಚಿಬಿದ್ದಿದ್ದೆ. ಭಯದಿಂದ ಪ್ರಾರ್ಥಿಸುತ್ತಿದ್ದೆ. ಆಗ ಪ್ರಕಾಶ್, 'ಇಲ್ಲಿ ವಿದ್ಯಾರ್ಥಿಗಳು ಬೆಲೆ ತೆರುತ್ತಿದ್ದಾರೆ. ನನಗೆ 60 ವರ್ಷ ವಯಸ್ಸಾಗಿದೆ. ಆದರೆ, ಈ ಮಕ್ಕಳನ್ನು ನೋಡಿ. ಅವರ ತಾಯಂದಿರ ಪರಿಸ್ಥಿತಿ ಏನಾಗಿರಬಹುದು? ಕನಿಷ್ಠ ಪ್ರಕಾಶ್ ರಾಜ್ ತಮ್ಮ ಮಕ್ಕಳ ಜತೆಗೆ ಕುಳಿತಿದ್ದಾರೆ ಎಂಬ ಭಾವನೆಯಾದರೂ ಆ ತಾಯಂದಿರಿಗೆ ಸಿಗುತ್ತದೆ' ಎಂದು ಹೇಳಿದರು" ಎಂದು ನೆನಪಿಸಿಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ಧೈರ್ಯಯುತವಾದದ್ದು ಎಂದು ಹೇಳಿದ ಪೋನಿ, ರಾತ್ರಿ ಉಳಿದುಕೊಳ್ಳಲು ಕನಿಷ್ಠ ಒಂದು ಹೋಟೆಲ್ ಬುಕ್ ಮಾಡಿಕೊಳ್ಳುವಂತೆ ಪತಿಗೆ ಸಲಹೆ ನೀಡಿದ್ದರಂತೆ. ಆದರೆ, ಪ್ರಕಾಶ್ ಅದನ್ನು ನಿರಾಕರಿಸಿದ್ದರು. "ಅವರು ಅಲ್ಲಿಯೇ ವೇದಿಕೆಯ ಮೇಲೆ ಮಲಗಿದರು. ಅಲ್ಲಿ ಕುಡಿಯಲು ನೀರೂ ಇರಲಿಲ್ಲ. ಅಷ್ಟು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ಇವೆಲ್ಲವನ್ನೂ ಮಾಡುವ ಅಗತ್ಯವಿರಲಿಲ್ಲ. ಆದರೆ, ಇದು ದೇಶದ ಮತ್ತು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಎಂದು ಅವರು ಭಾವಿಸುತ್ತಾರೆ" ಎಂದು ಹೇಳಿದ್ದಾರೆ.
►ಒಂದೇ ಮನೆಯಲ್ಲಿ ಎರಡು ಧರ್ಮಗಳ ಆಚರಣೆ
ಪ್ರಕಾಶ್ ರಾಜ್ ಅವರಿಗಿಂತ 12 ವರ್ಷ ಚಿಕ್ಕವರಾದ ಪೋನಿ ವರ್ಮಾ, ತಮ್ಮಿಬ್ಬರ ನಡುವಿನ ಧಾರ್ಮಿಕ ಭಿನ್ನಾಭಿಪ್ರಾಯಗಳ ಬಗ್ಗೆಯೂ ಮಾತನಾಡಿದ್ದಾರೆ. ತಾವು ದೇವರಲ್ಲಿ ಭಕ್ತಿ ಹೊಂದಿದ್ದು, ದೇವಾಲಯಗಳಿಗೆ ಹೋಗುವುದು ಇಷ್ಟ. ಆದರೆ, ಪ್ರಕಾಶ್ ರಾಜ್ ನಾಸ್ತಿಕರಾಗಿಯೇ ಮುಂದುವರಿದಿದ್ದಾರೆ ಎಂದು ತಿಳಿಸಿದ್ದಾರೆ.
ಧಾರ್ಮಿಕ ನಂಬಿಕೆಗಳ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದರೂ ಪತಿ ತಮ್ಮ ನಂಬಿಕೆಗಳಿಗೆ ಸದಾ ಗೌರವ ನೀಡುತ್ತಾರೆ. ಧರ್ಮ ವೈಯಕ್ತಿಕ ಆಯ್ಕೆಯಾಗಿರಬೇಕು; ಅದನ್ನು ಯಾರ ಮೇಲೂ ಹೇರಬಾರದು ಎಂಬುದು ಪ್ರಕಾಶ್ ಅವರ ನಿಲುವು. ದೇವಾಲಯಗಳಿಗೆ ಹೋದಾಗ ತಮಗೆ ಉತ್ತಮ ದರ್ಶನ ಸಿಗುವಂತೆಯೂ ಅವರು ಸಹಾಯ ಮಾಡುತ್ತಾರೆ ಎಂದು ಪೋನಿ ಹೇಳಿದ್ದಾರೆ.
ಪ್ರಕಾಶ್ ರಾಜ್ ಅವರ ರಾಜಕೀಯ ಮತ್ತು ಸೈದ್ಧಾಂತಿಕ ನಿಲುವುಗಳಿಗಾಗಿ ಅವರನ್ನು ಆಗಾಗ್ಗೆ 'ದೇಶವಿರೋಧಿ' ಅಥವಾ 'ಹಿಂದೂ ವಿರೋಧಿ' ಎಂದು ಟೀಕಿಸಲಾಗುತ್ತದೆ. ಆದರೆ, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಜನರು ವಿಭಜನೆಯಾಗದಿದ್ದರೆ ಸಮಾಜ ಉತ್ತಮವಾಗಿರುತ್ತದೆ ಎಂಬುದು ಅವರ ನಂಬಿಕೆ ಎಂದು ಪೋನಿ ವಿವರಿಸಿದ್ದಾರೆ. ತಮ್ಮಿಬ್ಬರ ಧಾರ್ಮಿಕ ಭಿನ್ನಾಭಿಪ್ರಾಯಗಳು ಎಂದಿಗೂ ಕುಟುಂಬದಲ್ಲಿ ಸಂಘರ್ಷಕ್ಕೆ ಕಾರಣವಾಗಿಲ್ಲ. ಮನೆಯಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
"ಪ್ರಕಾಶ್ ಅವರ ತಾಯಿ ಯೇಸುವನ್ನು ನಂಬುತ್ತಿದ್ದರು ಮತ್ತು ಪ್ರಾರ್ಥಿಸುತ್ತಿದ್ದರು. ಅದೇ ಮನೆಯ ಮತ್ತೊಂದು ಮೂಲೆಯಲ್ಲಿ ನಾನು ಗಣೇಶನನ್ನು ಪೂಜಿಸುತ್ತಿದ್ದೆ. ನಮ್ಮ ಮನೆಯಲ್ಲಿ ಈ ವಿಚಾರವಾಗಿ ಎಂದಿಗೂ ಯಾವುದೇ ಸಮಸ್ಯೆ ಉಂಟಾಗಿಲ್ಲ. ದೀಪಾವಳಿ ಮತ್ತು ಕ್ರಿಸ್ಮಸ್ ಎರಡನ್ನೂ ನಾವು ಒಂದೇ ರೀತಿಯ ಉತ್ಸಾಹದಿಂದ ಆಚರಿಸುತ್ತೇವೆ" ಎಂದು ತಿಳಿಸಿದ್ದಾರೆ.
ತಮ್ಮಿಬ್ಬರ ನಡುವಿನ ಧಾರ್ಮಿಕ ಭಿನ್ನತೆಗಳನ್ನು ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಯಾಗಿ ನೋಡುವುದಿಲ್ಲ. ಬದಲಾಗಿ, ಪರಸ್ಪರರ ನಂಬಿಕೆಗಳನ್ನು ಗೌರವಿಸುವುದನ್ನು ಕಲಿತಿದ್ದೇವೆ ಎಂದು ಪೋನಿ ಹೇಳಿದ್ದಾರೆ.
ಸೌಜನ್ಯ: indianexpress.com