ಪ್ರಿಯಾಂಕ್ ಖರ್ಗೆಗೆ ಆರೆಸ್ಸೆಸ್ ನಿಂದ ಬೆದರಿಕೆ, ಅವಹೇಳನ: ಗಂಟೆಗಳ ನಂತರ ಎಚ್ಚೆತ್ತ ಗೃಹ ಸಚಿವರು, ಉಳಿದ ಸಂಪುಟ ಸಹೋದ್ಯೋಗಿಗಳ ಮೌನವೇಕೆ?
ಪ್ರಿಯಾಂಕ್ ಖರ್ಗೆ (Photo: PTI)
ಪ್ರಿಯಾಂಕ್ ಖರ್ಗೆ. ಸಿದ್ದರಾಮಯ್ಯ ಸರಕಾರದ ಪ್ರಭಾವೀ ಸಚಿವರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ. ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರು.
ಇಂತಹ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಬಗ್ಗೆ ನೇರ, ನಿಷ್ಠುರವಾಗಿ ಮಾತಾಡಿದ ಕೂಡಲೇ ಅವರ ವಿರುದ್ಧ ಇಡೀ ಆರೆಸ್ಸೆಸ್ ಪಡೆ ತಿರುಗಿಬಿದ್ದಿದೆ. ಅವರಿಗೆ ಆನ್‌ಲೈನ್‌ನಲ್ಲಿ ಹಾಗೂ ನೇರವಾಗಿಯೂ ಬೆದರಿಕೆ, ಅವಹೇಳನಗಳ ಸುರಿಮಳೆಯೇ ಆಗುತ್ತಿದೆ. ಅದರ ಒಂದು ʼಸ್ಯಾಂಪಲ್ʼ ಅನ್ನೂ ಅವರು ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿದ್ದಾರೆ.
ತಾನು ಆರೆಸ್ಸೆಸ್‌ನವನು ಎಂದು ಹೇಳಿಕೊಂಡಿರುವ ವ್ಯಕ್ತಿಯೋರ್ವ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಅವರನ್ನು, ಅವರ ತಂದೆ ತಾಯಿಯನ್ನು, ಕುಟುಂಬದ ಸದಸ್ಯರನ್ನು ಅತ್ಯಂತ ಕೊಳಕು ಭಾಷೆಯಲ್ಲಿ ನಿಂದಿಸಿ, ಬೆದರಿಕೆ ಹಾಕಿದ್ದಾನೆ. ಇಲ್ಲಿ ಬಳಸಲಾಗದ ಅತ್ಯಂತ ಕೆಟ್ಟ ಪದಗಳನ್ನು ಆತ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬಕ್ಕೆ ಬಳಸಿದ್ದಾನೆ.
ಬೆಳಗ್ಗೆ 9:36 ಕ್ಕೆ ಪ್ರಿಯಾಂಕ್ ಖರ್ಗೆ ಈ ಆಘಾತಕಾರಿ ಆಡಿಯೋವನ್ನು ಬಿಡುಗಡೆ ಮಾಡಿದ್ದರು. ಇಡೀ ರಾಜ್ಯದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿ, ಆತಂಕ ವ್ಯಕ್ತವಾಗಿತ್ತು. ಆದರೆ, ಮಧ್ಯಾಹ್ನ ಕಳೆದರೂ ಅವರ ಸಂಪುಟದ ಯಾವೊಬ್ಬ ಸಹೋದ್ಯೋಗಿಯೂ ತುಟಿ ಬಿಚ್ಚಿರಲಿಲ್ಲ. ಈ ದೀರ್ಘ ಮೌನವು ಸರ್ಕಾರದ ಸಾಮೂಹಿಕ ಜವಾಬ್ದಾರಿಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಸಂಪೂರ್ಣ ಮೌನದ ನಂತರ, ಕೊನೆಗೂ ಸರ್ಕಾರದ ಕಡೆಯಿಂದ ಮೊದಲ ಪ್ರತಿಕ್ರಿಯೆ ಹೊರಬಿದ್ದಿದೆ. ಆದರೆ, ಇದು ಸ್ವಯಂಪ್ರೇರಿತ ಬೆಂಬಲದ ಹೇಳಿಕೆಯಾಗಿರಲಿಲ್ಲ, ಬದಲಾಗಿ ಮಾಧ್ಯಮದವರು ಪ್ರಶ್ನಿಸಿದಾಗ ಬಂದ ಅನಿವಾರ್ಯದ ಉತ್ತರವಾಗಿತ್ತು.
ಮಧ್ಯಾಹ್ನ, ತಮ್ಮ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ. "ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬಂದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಯಾರು ಕರೆ ಮಾಡಿದ್ದಾರೆ, ಎಲ್ಲಿಂದ ಬಂದಿದೆ ಎಂಬುದನ್ನು ತನಿಖೆ ಮಾಡುತ್ತೇವೆ. ಆರೆಸ್ಸೆಸ್ ವಿಚಾರದಲ್ಲಿ ಸಚಿವರು ತಮ್ಮ ಅಭಿಪ್ರಾಯ ಹೇಳಿರಬಹುದು. ಅದಕ್ಕೆ ಅವರಿಗೆ ಬೆದರಿಕೆ ಹಾಕುವುದು ಸರಿಯಲ್ಲ. ಎಲ್ಲವನ್ನೂ ಪರಿಶೀಲನೆ ಮಾಡುವುದಕ್ಕೆ ಸೂಚಿಸಿದ್ದೇನೆ," ಎಂದು ಅವರು ಹೇಳಿದ್ದಾರೆ.
ಪರಮೇಶ್ವರ್ ಅವರ ಈ ಹೇಳಿಕೆ ಸ್ವಾಗತಾರ್ಹವೇ ಆದರೂ, ಇದು ತೀರಾ ತಡವಾಗಿ ಮತ್ತು ನಿರೀಕ್ಷಿತ ತೀವ್ರತೆಯಲ್ಲಿಲ್ಲ ಎಂಬುದು ಸ್ಪಷ್ಟ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತ ಗೃಹ ಸಚಿವರು, ತಮ್ಮದೇ ಸಂಪುಟದ ಸಹೋದ್ಯೋಗಿಗೆ ಜೀವ ಬೆದರಿಕೆ ಬಂದಾಗ, ತಕ್ಷಣವೇ ಖಂಡಿಸಿ, ಕಠಿಣ ಕ್ರಮದ ಭರವಸೆ ನೀಡಿ, ಸಚಿವರಿಗೆ ಧೈರ್ಯ ತುಂಬುವ ಕೆಲಸವನ್ನು ಸ್ವಯಂಪ್ರೇರಿತವಾಗಿ ಮಾಡಬೇಕಿತ್ತು. ಆದರೆ, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುವವರೆಗೆ ಕಾದಿದ್ದು, ಸರ್ಕಾರದ ನಿಷ್ಕ್ರಿಯತೆಯನ್ನು ಮತ್ತು ಸಮನ್ವಯದ ಕೊರತೆಯನ್ನು ಎತ್ತಿ ತೋರಿಸಿದೆ.
ಇನ್ನೂ ಜಾಗೃತರಾಗದ ಉಳಿದ ಸಚಿವರು: ಎಲ್ಲಿ ಹೋಯಿತು ಒಗ್ಗಟ್ಟು?
ಗೃಹ ಸಚಿವರು ತಡವಾಗಿಯಾದರೂ ಪ್ರತಿಕ್ರಿಯಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರ ಬೃಹತ್ ಸಂಪುಟದ ಉಳಿದ ಸಚಿವರ ಮೌನ ಇನ್ನೂ ಮುಂದುವರೆದಿದೆ. ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಮಧ್ಯಾಹ್ನ 3:30 ಗಂಟೆ ವರೆಗೆ ಯಾವುದೇ ಅಧಿಕೃತ ಖಂಡನೆ ಅಥವಾ ಬೆಂಬಲದ ಮಾತುಗಳು ಬಂದಿರುವುದಾಗಿ ಯಾವುದೇ ಮಾಧ್ಯಮದಲ್ಲಿ ವರದಿಗಿಯಾಲ್ಲ.
ಕೇವಲ ಇವರಿಬ್ಬರೇ ಅಲ್ಲ, ಸಂಪುಟದ ಇತರ ಹಿರಿಯ ಮತ್ತು ಪ್ರಭಾವಿ ಸಚಿವರುಗಳಾದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ, ಇಂಧನ ಸಚಿವ ಕೆ.ಜೆ. ಜಾರ್ಜ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೀಗೆ ಸಚಿವರ ದೀರ್ಘ ಪಟ್ಟಿಯೇ ಇದ್ದರೂ, ತಮ್ಮ ಸಹೋದ್ಯೋಗಿಯೊಬ್ಬರು ಸೈದ್ಧಾಂತಿಕ ಕಾರಣಕ್ಕಾಗಿ ನಿಂದನೆ ಮತ್ತು ಜೀವ ಬೆದರಿಕೆಯನ್ನು ಎದುರಿಸುತ್ತಿರುವಾಗ, ಅವರ್ಯಾರೂ ಒಂದು ಸಾಲಿನ ಹೇಳಿಕೆ ನೀಡುವ, ಟ್ವೀಟ್ ಮಾಡುವ ಅಥವಾ ಕನಿಷ್ಠ ನೈತಿಕ ಬೆಂಬಲ ಸೂಚಿಸುವ ಸೌಜನ್ಯವನ್ನೂ ತೋರಿಲ್ಲ.
ಸಚಿವರ ಈ ಮೌನಕ್ಕೆ ಕಾರಣವೇನು?
ಈ ಬೆಳವಣಿಗೆಯು ಸರ್ಕಾರದೊಳಗಿನ ಹಲವು ಗಂಭೀರ ಸಮಸ್ಯೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಇದು ಪ್ರಿಯಾಂಕ್ ಖರ್ಗೆ ಅವರ ವೈಯಕ್ತಿಕ ಸೈದ್ಧಾಂತಿಕ ಹೋರಾಟ, ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬ ಧೋರಣೆ ಸಚಿವ ಸಂಪುಟದ ಸದಸ್ಯರಲ್ಲಿದೆಯೇ? ಸೈದ್ಧಾಂತಿಕವಾಗಿ ಕಾಂಗ್ರೆಸ್ ಪಕ್ಷವು ಆರೆಸ್ಸೆಸ್ ಅನ್ನು ವಿರೋಧಿಸುತ್ತದೆ. ಹೀಗಿರುವಾಗ, ಪಕ್ಷದ ಸಿದ್ಧಾಂತವನ್ನು ಎತ್ತಿಹಿಡಿದ ಸಚಿವರಿಗೆ ಬೆದರಿಕೆ ಬಂದರೆ, ಅದು ಇಡೀ ಸರ್ಕಾರ ಮತ್ತು ಪಕ್ಷಕ್ಕೆ ಬಂದ ಬೆದರಿಕೆ ಎಂದು ಭಾವಿಸಬೇಕಲ್ಲವೇ?
ಆರೆಸ್ಸೆಸ್ ನಂತಹ ಸಂಘಟನೆಯನ್ನು ನೇರವಾಗಿ ವಿರೋಧಿಸಿದರೆ, ತಮಗೂ ಇದೇ ಗತಿ ಬರಬಹುದು ಎಂಬ ಆತಂಕ ಸಚಿವರನ್ನು ಕಾಡುತ್ತಿದೆಯೇ? ಅಥವಾ, ಈ ವಿಷಯದಲ್ಲಿ ಮಾತನಾಡಿದರೆ ತಮ್ಮ ಕ್ಷೇತ್ರದ ಬಹುಸಂಖ್ಯಾತ ಮತದಾರರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ರಾಜಕೀಯ ಲೆಕ್ಕಾಚಾರವು ಅವರನ್ನು ಮೌನಕ್ಕೆ ಶರಣಾಗುವಂತೆ ಮಾಡಿದೆಯೇ?
ಇಂತಹ ಗಂಭೀರ ಸಂದರ್ಭದಲ್ಲಿ, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ತಮ್ಮ ಎಲ್ಲಾ ಸಚಿವರಿಗೆ "ನಾವೆಲ್ಲರೂ ಪ್ರಿಯಾಂಕ್ ಖರ್ಗೆ ಅವರ ಜೊತೆಗಿದ್ದೇವೆ" ಎಂಬ ಒಗ್ಗಟ್ಟಿನ ಸಂದೇಶವನ್ನು ನೀಡಲು ನಿರ್ದೇಶಿಸಬೇಕಿತ್ತು. ಅಂತಹ ಯಾವುದೇ ಪ್ರಯತ್ನ ನಡೆದಂತೆ ಕಾಣುತ್ತಿಲ್ಲ. ಇದು ಸರ್ಕಾರದೊಳಗಿನ ನಾಯಕತ್ವದ ಮತ್ತು ಸಮನ್ವಯದ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ತಮ್ಮದೇ ಸರ್ಕಾರದ ಸಚಿವರೊಬ್ಬರ ರಕ್ಷಣೆಗೆ ಧಾವಿಸದ ಈ ಸರ್ಕಾರ, ರಾಜ್ಯದ ಸಾಮಾನ್ಯ ಜನರ ರಕ್ಷಣೆಯನ್ನು ಹೇಗೆ ಮಾಡೀತು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಗೃಹ ಸಚಿವರ ತಡವಾದ ಹೇಳಿಕೆಯು ಹಾನಿ ನಿಯಂತ್ರಣದ (damage control) ಒಂದು ದುರ್ಬಲ ಪ್ರಯತ್ನದಂತೆ ಕಾಣುತ್ತಿದೆಯೇ ಹೊರತು, ಬೆದರಿಕೆ ಹಾಕುವ ಶಕ್ತಿಗಳಿಗೆ ನೀಡುವ ಬಲವಾದ ಸಂದೇಶದಂತಿಲ್ಲ. ಈ ಮೌನ ಮುರಿದು, ಸರ್ಕಾರವು ಸಾಮೂಹಿಕ ಜವಾಬ್ದಾರಿಯನ್ನು ಪ್ರದರ್ಶಿಸುತ್ತದೆಯೇ ಅಥವಾ ಇದು ಪ್ರಿಯಾಂಕ್ ಖರ್ಗೆ ಅವರ ಏಕಾಂಗಿ ಹೋರಾಟವಾಗಿಯೇ ಉಳಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.