ಪುನೀತ್ ಕೆರೆಹಳ್ಳಿ ನಾಯಿ ಮಾಂಸ ನಾಟಕ: ಹೊಸ ರಾಜಕೀಯ ಷಡ್ಯಂತ್ರ?
ಮೆಜೆಸ್ಟಿಕ್ ನ ಕ್ರಾಂತಿಕಾರಿ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರಿಯೊಬ್ಬರು ತೆಗೆದುಕೊಂಡು ಹೋಗುತ್ತಿದ್ದ ಕುರಿ ಮಾಂಸದ ಬಾಕ್ಸ್ ಗಳನ್ನು ತೆಗೆಸಿ ಈ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಸಾಕ್ಷ್ಯಾಧಾರ ರಹಿತ ಆರೋಪ ಮಾಡಿ ದಾಂಧಲೆ ನಡೆಸಿದ್ದು, ರಾಜ್ಯದ ಆ್ಯಂಟಿ ಕಮ್ಯುನಲ್ ವಿಂಗ್ ಏನು ಮಾಡುತ್ತಿದೆ ಜನರು ಪ್ರಶ್ನಿಸುತ್ತಿದ್ದಾರೆ.
ನಾಯಿ ಮಾಂಸದ ಹೆಸರಲ್ಲಿ ಹೊಸತೊಂದು ರಾಜ್ಯದಲ್ಲಿ ಕೋಮು ನರೇಟಿವ್ ಕಟ್ಟುವ ಪ್ರಯತ್ನ ನಡೀತಾ ಇದೆಯಾ ? ಇದು ಕೇವಲ ಒಬ್ಬ ಗೂಂಡಾನ ಕೆಲಸ ಮಾತ್ರ ಆಗಿರದೆ, ಇದರ ಹಿಂದೊಂದು ವ್ಯವಸ್ಥಿತ ರಾಜಕೀಯ ಷಡ್ಯಂತ್ರವಿದೆಯೇ ? ಹಿಜಾಬ್, ಹಲಾಲ್ - ಜಟ್ಕಾ, ಮುಸ್ಲಿಂ ವ್ಯಾಪಾರಿಗಳ ಬಹಿಷ್ಕಾರದ ಬಳಿಕ ಇಂತಹದೊಂದು ಹೊಸ ಪ್ರೊಪಗಂಡಾ ಶುರುವಾಗಿದೆಯೇ ? ಅದಕ್ಕೆ ತನ್ನ ನಿಷ್ಕ್ರಿಯತೆ ಮೂಲಕ ರಾಜ್ಯ ಸರಕಾರ ಕೂಡ ಧಾರಾಳ ಅವಕಾಶ ಮಾಡಿ ಕೊಟ್ಟಿದೆಯೇ ? ಎಂಬ ಪ್ರಶ್ನೆಗಳು ಎದ್ದಿವೆ.
ಜೈಪುರಕ್ಕೆ ಕುರಿ ಮಾಂಸ ಸಾಗಾಟ ನಡೆದಿದ್ದು, ತನ್ನ ಬಳಿ ಸರ್ಟಿಫಿಕೇಟ್ ಇದೆ ಎಂದು ವ್ಯಾಪಾರಿ ಹೇಳಿದರೂ ಅದು ಯಾರಿಗೂ ಬೇಕಿಲ್ಲ. ಪುನೀತ್ ಕೆರೆಹಳ್ಳಿ ಅದು ನಾಯಿ ಮಾಂಸ ಎಂದು ಹೇಳುವುದರಿಂದ, ಆತ ಹೇಳಿದ್ದೇ ನಮಗೆ ನಿಜವಾದ ಸರ್ಟಿಫಿಕೇಟ್ ಎಂದು ಮಿಡಿಯಾಗಳೂ ನಂಬುತ್ತವೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಪುನೀತ್ ಕೆರೆಹಳ್ಳಿ ರಂಪಾಟ ನಡೆಸುವ ಜಾಗಕ್ಕೆ ತೆರಳಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ವ್ಯಾಪಾರಿಯ ಬಳಿ ಇರುವ ಸರ್ಟಿಫಿಕೇಟ್ ಬಗ್ಗೆ ಏನು ತಲೆಕೆಡಿಸಿಕೊಳ್ಳದೆ ಮಾಂಸದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳಿಸುತ್ತಾರೆ.
ಮೊದಲು ಪುನೀತ್ ಕೆರೆಹಳ್ಳಿ ದಾಳಿ ಮಾಡುತ್ತಾನೆ. ಅಲ್ಲಿಗೆ ಮತ್ತೆ ಪೊಲೀಸರು, ಅಧಿಕಾರಿಗಳು ಹೋಗುತ್ತಾರೆ. ಆತನನ್ನು ವಶಕ್ಕೆ ಪಡೆದು ಕೇಸು ಜಡಿಯೋದು ಬಿಟ್ಟು ಆತ ದಾಳಿ ಮಾಡಿದವರನ್ನೇ ವಿಚಾರಣೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ಐಟಿ ಸೆಲ್, ಬಲಪಂಥೀಯರ ಸೋಷಿಯಲ್ ಮೀಡಿಯಾ ಪಡೆ ತನ್ನ ಎಂದಿನ ಕಾರ್ಯಾಚರಣೆ ಶುರು ಮಾಡುತ್ತದೆ. ವಾಟ್ಸ್ ಆಪ್, ಫೇಸ್ ಬುಕ್ ಗಳಲ್ಲಿ ಧಾರಾಳ ಸುಳ್ಳು ಹಾಗು ದ್ವೇಷ ಹರಡತೊಡಗುತ್ತದೆ. ತಿರುಚಿದ ವಿಡಿಯೋಗಳು, ಪ್ರಚೋದನಕಾರಿ ಪೋಸ್ಟರ್ ಗಳು, ಮೀಮ್ ಗಳು ಕೆಲವೇ ಗಂಟೆಗಳಲ್ಲಿ ರೆಡಿಯಾಗಿ ಇಡೀ ರಾಜ್ಯಕ್ಕೆ ತಲುಪುತ್ತವೆ. ಆದರೆ ಈತರಹದ ಘಟನೆಗಳನ್ನು ವಿಫಲಗೊಳಿಸಲು ಜಾತ್ಯತೀತ ಸರಕಾರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಸರಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಯಾಕೆ ಹೀಗಾಗುತ್ತಿದೆ? ಹಾದಿಬೀದಿಯಲ್ಲಿ ರಂಪ ಮಾಡುವ, ಅಮಾಯಕರಿಗೆ ಉಪದ್ರವ ಕೊಡುವ ಗೂಂಡಾನನ್ನು ಯಾಕೆ ರಾಜ್ಯ ಸರ್ಕಾರ ಹದ್ದುಬಸ್ತಿನಲ್ಲಿ ಇಡಲಾರದೆ ಹೋಗಿದೆ? ಈ ಸರಕಾರ ರಚಿಸಿದ ಆ್ಯಂಟಿ ಕಮ್ಯುನಲ್ ವಿಂಗ್ ಏನಾಯ್ತು ? ಪುನೀತ್ ಕೆರೆಹಳ್ಳಿಯ ದುಷ್ಟ ಚಟುವಟಿಕೆ ಅದರ ವ್ಯಾಪ್ತಿಗೆ ಬರೋದಿಲ್ವಾ ? ಪುನೀತ್ ಕೆರೆಹಳ್ಳಿ ರೋಲ್ಕಾಲ್ ಮಾಡಲು ಹೋಗಿದ್ದಿರಬಹುದೆ ಎಂಬ ಅಂಶವನ್ನು ಮುಖ್ಯವಾಗಿಟ್ಟುಕೊಂಡು ಆ ಆಯಾಮದಿಂದಲೂ ಯಾಕೆ ಮಾದ್ಯಮಗಳು ಅನುಮಾನಿಸುವುದಿಲ್ಲ? ಪುನೀತ್ ಕೆರೆಹಳ್ಳಿಯ ಕ್ರಿಮಿನಲ್ ಹಿನ್ನೆಲೆ, ಆತನ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಆತ ಹಾಗೆ ಮಾಡಬಹುದಾದ ಆಸಾಮಿ ಎಂದೇಕೆ ಮಾಧ್ಯಮಗಳಿಗೆ ಸಂಶಯ ಬರುವುದಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಇದು ಹೊಸದೊಂದು ಕೋಮು ನರೇಟಿವ್ಗೆ ನಡೆಸಿರುವ ವ್ಯವಸ್ಥಿತ ಪಿತೂರಿ ಇರಬಹುದೆ? ಮುಸ್ಲಿಮರ ವ್ಯಾಪಾರವನ್ನು , ಅವರ ಆರ್ಥಿಕ ಬಲವನ್ನು ಮುರಿಯೋದು, ಸಮಾಜದಲ್ಲಿ ಜನರ ನಡುವೆ ಇನ್ನಷ್ಟು ಅಂತರ ಸೃಷ್ಟಿಸೋದು, ರಾಜಕೀಯವಾಗಿ ಅದನ್ನು ಬಳಸಿಕೊಳ್ಳೋದು - ಇಂತಹದೊಂದು ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿದೆಯೇ ? ಸರ್ಕಾರ ಇವನ್ನೆಲ್ಲ ನೋಡಿಕೊಂಡು ಉದ್ದೇಶಪೂರ್ವಕವಾಗಿಯೇ ಸುಮ್ಮನಿದೆಯೆ? ಹಿಂದು ಮುಖಂಡ ಎಂದು ಕರೆಸಿಕೊಳ್ಳುವ ಗೂಂಡಾ ಪುನೀತ್ ಕೆರೆಹಳ್ಳಿ ವಿಚಾರದಲ್ಲಿ ಮೃದು ಧೋರಣೆ ತೋರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದೆಯೆ? ಇಂಥ ಅನುಮಾನಗಳು ಈಗ ವ್ಯಕ್ತವಾಗತೊಡಗಿವೆ. ಸಾಮಾಜಿಕ ವಿಭಜನೆ ಬಗ್ಗೆ ಕಳವಳ ಉಳ್ಳವರು, ಹೋರಾಟಗಾರರು ಇದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಪುನೀತ್ ಕೆರೆಹಳ್ಳಿ ಎಂಬ ನಟೋರಿಯಸ್ ಕ್ರಿಮಿನಲ್ ನನ್ನು ರಾಜ್ಯದ ಕಾಂಗ್ರೆಸ್ ಸರಕಾರ ಆಹಾರ ಸುರಕ್ಷತಾ ಸಮಿತಿ, ಅಥವಾ ಕಲಬೆರೆಕೆ ಮಾಂಸಗಳ ಪತ್ತೆ ಸಮಿತಿ ರಚಿಸಿ ಅದರ ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನವುಳ್ಳ ಅಧ್ಯಕ್ಷನನ್ನಾಗಿ ನೇಮಿಸಿದೆಯೆ? ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ವ್ಯಂಗ್ಯವಾಗಿ ಕೇಳಿದ್ದಾರೆ.
ರಸ್ತೆಯಲ್ಲಿ ಕ್ರಿಮಿನಲ್ ಗಳ ಗುಂಪುಗಟ್ಟಿ ಆತ ನಡೆಸುವ ಕಾರ್ಯಾಚರಣೆ ಎಂಬ ಪುಂಡಾಟಿಕೆ ನೋಡುವಾಗ ಹಾಗನಿಸುತ್ತದೆ. ಕಾಂಗ್ರೆಸ್ ಸರಕಾರ ಹಾಗೂ ಪಕ್ಷದ ಪ್ರಮುಖರು ಉತ್ತರಿಸಬೇಕು ಎಂದು ಕಾಟಿಪಳ್ಳ ಒತ್ತಾಯಿಸಿದ್ದಾರೆ.