'ತೊಂದರೆಗೊಳಗಾದ ಪ್ರದೇಶಗಳು' ಎಂದು ಗೊತ್ತುಪಡಿಸುವ ಕಾಯ್ದೆ ಅಂಗೀಕರಿಸಲು ರಾಜಸ್ಥಾನ ನಿರ್ಧಾರ: ಏನಿದು ಕಾಯ್ದೆ?
PC : indianexpress
ರಾಜಸ್ಥಾನ ಸರ್ಕಾರವು "ಜನಸಂಖ್ಯಾ ಅಸಮತೋಲನ" ಮತ್ತು "ಅನುಚಿತ ಸಮೂಹೀಕರಣ" ಎಂದು ಕರೆಯುವುದನ್ನು ತಡೆಯಲು ಕೆಲವು ವಲಯಗಳನ್ನು "ತೊಂದರೆಗೊಳಗಾದ ಪ್ರದೇಶಗಳು" ಎಂದು ಗೊತ್ತುಪಡಿಸುವ ಮಸೂದೆಯನ್ನು ಪರಿಚಯಿಸಲು ನಿರ್ಧರಿಸಿದೆ. ಮಸೂದೆ ಇನ್ನೂ ಸಾರ್ವಜನಿಕವಾಗದೇ ಇದ್ದರೂ, ಇದನ್ನು ಈಗಾಗಲೇ ಗುಜರಾತ್‌ನಲ್ಲಿ ಮೂರು ದಶಕಗಳಿಂದ ಜಾರಿಯಲ್ಲಿರುವ ಗುಜರಾತ್ ಸ್ಥಿರಾಸ್ತಿ ವರ್ಗಾವಣೆ ನಿಷೇಧ ಮತ್ತು ತೊಂದರೆಗೊಳಗಾದ ಪ್ರದೇಶಗಳಲ್ಲಿನ ಆವರಣದಿಂದ ಬಾಡಿಗೆದಾರರನ್ನು ಹೊರಹಾಕುವುದರಿಂದ ರಕ್ಷಣೆಗಾಗಿ ನಿಬಂಧನೆ ಕಾಯ್ದೆ, 1991 ರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.
ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳುವ ಕ್ರಮವಾಗಿ ರಾಜಸ್ಥಾನ ಕಾನೂನು ಸಚಿವರು ಪ್ರಸ್ತಾವಿತ ರಾಜಸ್ಥಾನ ಸ್ಥಿರಾಸ್ತಿ ವರ್ಗಾವಣೆ ನಿಷೇಧ ಮತ್ತು ತೊಂದರೆಗೊಳಗಾದ ಪ್ರದೇಶಗಳಲ್ಲಿನ ಆವರಣದಿಂದ ಬಾಡಿಗೆದಾರರ ರಕ್ಷಣೆಗಾಗಿ ನಿಬಂಧನೆ ಮಸೂದೆ, 2026 ಅನ್ನು ರೂಪಿಸಿದ್ದಾರೆ. ಆದಾಗ್ಯೂ, ಕಾನೂನು ತಜ್ಞರು ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತರು ಗುಜರಾತ್ ಶಾಸನದ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಬಹಳ ಹಿಂದಿನಿಂದಲೂ ಕಳವಳ ವ್ಯಕ್ತಪಡಿಸಿದ್ದಾರೆ. ಗುಜರಾತ್ ಹೈಕೋರ್ಟ್ ಕೂಡ ಕಾನೂನಿನಡಿಯಲ್ಲಿ ಕಾರ್ಯಾಂಗದ ಅತಿಕ್ರಮಣವನ್ನು ತಡೆಯಲು ಆಗಾಗ್ಗೆ ಮಧ್ಯಪ್ರವೇಶಿಸಿದ್ದು, ಖಾಸಗಿ ಆಸ್ತಿ ವಹಿವಾಟುಗಳಲ್ಲಿ ಹಸ್ತಕ್ಷೇಪ ಮಾಡುವ ರಾಜ್ಯದ ಅಧಿಕಾರದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿದೆ.
►ಗುಜರಾತ್ ತೊಂದರೆಗೊಳಗಾದ ಪ್ರದೇಶಗಳ ಕಾಯ್ದೆ ಎಂದರೇನು?
ಕೋಮು ಗಲಭೆಗಳ ನಂತರ 1991 ರಲ್ಲಿ ಜಾರಿಗೆ ತರಲಾದ ಗುಜರಾತ್ ತೊಂದರೆಗೊಳಗಾದ ಪ್ರದೇಶಗಳ ಕಾಯ್ದೆಯನ್ನು ಮೂಲತಃ "ಸಂಕಷ್ಟದಲ್ಲಿನ ಮಾರಾಟ" ವನ್ನು ತಡೆಗಟ್ಟಲು ರೂಪಿಸಲಾಯಿತು. ಇದು ಸಾಮಾನ್ಯವಾಗಿ ಕೋಮು ಗಲಭೆಯ ಸಮಯದಲ್ಲಿ ಹಿಂಸಾಚಾರ ಅಥವಾ ಬೆದರಿಕೆಯ ಭಯದಿಂದಾಗಿ ಒಬ್ಬ ವ್ಯಕ್ತಿಯು ಮಾರುಕಟ್ಟೆ ದರಕ್ಕಿಂತ ಕಡಿಮೆ ಮೌಲ್ಯಕ್ಕೆ ತನ್ನ ಆಸ್ತಿಯನ್ನು ಮಾರಾಟ ಮಾಡಬೇಕಾಗಿ ಬಂದಾಗ ಸಂಭವಿಸುತ್ತದೆ.
ಕಾಯ್ದೆಯಡಿಯಲ್ಲಿ ಕೋಮು ಗಲಭೆ ಅಥವಾ ಗುಂಪು ಗಲಭೆಯ ಇತಿಹಾಸದಿಂದಾಗಿ ರಾಜ್ಯ ಸರ್ಕಾರವು ನಿರ್ದಿಷ್ಟ ಪ್ರದೇಶವನ್ನು "ತೊಂದರೆಗೊಳಗಾದ ಪ್ರದೇಶ" ಎಂದು ಘೋಷಿಸಬಹುದು. ಒಂದು ಪ್ರದೇಶಕ್ಕೆ ಅಧಿಸೂಚನೆ ಹೊರಡಿಸಿದ ನಂತರ, ಆ ವಲಯದಲ್ಲಿ ಸ್ಥಿರ ಆಸ್ತಿ - ಮನೆಗಳು, ಅಂಗಡಿಗಳು ಅಥವಾ ಭೂಮಿ ವರ್ಗಾವಣೆಗೆ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಅಗತ್ಯವಿರುತ್ತದೆ. ಜಿಲ್ಲಾಧಿಕಾರಿಯ ಅನುಮೋದನೆಯಿಲ್ಲದೆ, ಯಾವುದೇ ಮಾರಾಟ ಅಥವಾ ವರ್ಗಾವಣೆಯನ್ನು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ. ಮಾರಾಟವು ಒಪ್ಪಿಗೆಯಿಂದ ಕೂಡಿದೆ, ಬಲವಂತದಿಂದ ನಡೆಸಲಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಔಪಚಾರಿಕ ವಿಚಾರಣೆಯನ್ನು ನಡೆಸಬೇಕು.
ದುರ್ಬಲ ಜನರು ತಮ್ಮ ಮನೆಗಳನ್ನು ಮಾರಾಟ ಮಾಡುವಂತೆ ಒತ್ತಾಯಿಸುವುದನ್ನು ತಡೆಯುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ ಎಂದು ಹೇಳುತ್ತದೆ. ಆದಾಗ್ಯೂ, ತಜ್ಞರು ಇದು ವಾಸ್ತವವಾಗಿ ಸರ್ಕಾರಕ್ಕೆ ಅವರ ಹಿನ್ನೆಲೆಯ ಆಧಾರದ ಮೇಲೆ ಯಾರು ಎಲ್ಲಿ ವಾಸಿಸುತ್ತಾರೆ ಎಂಬುದನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ನಿರ್ದಿಷ್ಟ ಪ್ರದೇಶಗಳಲ್ಲಿ ಆಸ್ತಿಯನ್ನು ಖರೀದಿಸಲು ಯಾರಿಗೆ ಅವಕಾಶವಿದೆ ಎಂಬುದನ್ನು ನಿರ್ಧರಿಸುವ ಮೂಲಕ, ರಾಜ್ಯವು ವಿವಿಧ ಸಮುದಾಯಗಳು ಸ್ವಾಭಾವಿಕವಾಗಿ ಒಟ್ಟಿಗೆ ವಾಸಿಸುವುದನ್ನು ಮತ್ತು ಬೆರೆಯುವುದನ್ನು ತಡೆಯುತ್ತದೆ. ಇದು ಭಾರತದಲ್ಲಿ ಸಂವಿಧಾನದ ವಿಧಿ 19(1)(e)- ಪ್ರತಿಯೊಬ್ಬ ನಾಗರಿಕನು ದೇಶದಲ್ಲಿ ಎಲ್ಲಿಯಾದರೂ ವಾಸಿಸುವ ಮತ್ತು ನೆಲೆಸುವ ಹಕ್ಕು, ವಿಧಿ15- ಧರ್ಮ, ಜನಾಂಗ, ಜಾತಿ ಲಿಂಗ ಮತ್ತು ಹುಟ್ಟಿದ ಸ್ಥಳದ ಆಧಾರದ ಮೇಲೆ ರಾಜ್ಯವು ಜನರ ವಿರುದ್ಧ ತಾರತಮ್ಯ ಮಾಡುವಂತಿಲ್ಲ ಎಂಬ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ವಿಮರ್ಶಕರು ವಾದಿಸುತ್ತಾರೆ.
►ಕಾನೂನು ಸವಾಲುಗಳು
ಗುಜರಾತ್ ಹೈಕೋರ್ಟ್‌ನಲ್ಲಿ ಜನರು ಈ ಕಾನೂನನ್ನು ಪ್ರಶ್ನಿಸಿದ್ದಾರೆ. ಕೆಲವು ವರ್ಷಗಳಿಂದ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿರುವ ಎರಡು ಪ್ರಮುಖ ಕಾನೂನು ಅರ್ಜಿಗಳು ಇವೆ. 2021 ರ ಆರಂಭದಲ್ಲಿ ಮತ್ತು 2022 ರ ಕೊನೆಯಲ್ಲಿ ಸಲ್ಲಿಸಿದ ಈ ಅರ್ಜಿಗಳನ್ನು ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ರಾಜ್ಯದ ಅತ್ಯುನ್ನತ ಶ್ರೇಣಿಯ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾರೆ.
ಸಾಮಾಜಿಕ-ಧಾರ್ಮಿಕ ಸಂಘಟನೆಯ ಗುಜರಾತ್ ವಿಭಾಗವಾದ ಜಮಿಯತ್ ಉಲಮಾ-ಎ-ಹಿಂದ್ ಗುಜರಾತ್, 2024 ರಲ್ಲಿ ಕಾಯ್ದೆಯ ಕಾರ್ಯಾಚರಣೆಗೆ ಮಧ್ಯಂತರ ತಡೆಯಾಜ್ಞೆ ಕೋರಿತು. ಈ ಕಾಯ್ದೆ ನಾಗರಿಕರಿಗೆ ಕಿರುಕುಳ ನೀಡಲು ಬಳಸಲಾಗುತ್ತಿದೆ ಎಂದು ಅದು ವಾದಿಸಿತು. ಆದಾಗ್ಯೂ, ಗುಜರಾತ್ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿತು. ಈ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು, ಇದು ಮಧ್ಯಂತರ ಹಂತದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಬದಲಿಗೆ ಅರ್ಜಿದಾರರು ಪ್ರಕರಣದ ಆರಂಭಿಕ ವಿಚಾರಣೆ ಮತ್ತು ಇತ್ಯರ್ಥಕ್ಕಾಗಿ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ನಿರ್ದೇಶಿಸಿತು.
2020 ರಲ್ಲಿ, ಗುಜರಾತ್ ಸರ್ಕಾರವು ಜಿಲ್ಲಾಧಿಕಾರಿಗೆ ಆಸ್ತಿ ಮಾರಾಟವನ್ನು ನಿರ್ಬಂಧಿಸಲು ಹೆಚ್ಚಿನ ಅಧಿಕಾರವನ್ನು ನೀಡಲು ಕಾನೂನನ್ನು ನವೀಕರಿಸಿತು. ಇದರಲ್ಲಿ ಅವರು ಕಾನೂನುಬದ್ಧವಾಗಿ ವ್ಯಾಖ್ಯಾನಿಸಲು ಕೆಲವು ಗೊಂದಲದ ಪದಗಳನ್ನು ಬಳಸಿದರು. ಉದಾಹರಣೆಗೆ "proper clustering",ಅಂದರೆ, ಒಂದೇ ಸಮುದಾಯದ ಜನರು ಒಟ್ಟಿಗೆ ಇರುವುದನ್ನು ಖಚಿತಪಡಿಸಿಕೊಳ್ಳುವುದು. "ಜನಸಂಖ್ಯಾ ಸಮತೋಲನ"- ನೆರೆಹೊರೆಯಲ್ಲಿ ಧರ್ಮಗಳು ಅಥವಾ ಗುಂಪುಗಳ "ಸಮತೋಲನ"ವನ್ನು ಒಂದೇ ರೀತಿ ಇಟ್ಟುಕೊಳ್ಳುವುದು. "ಧ್ರುವೀಕರಣ"- ವಿಭಿನ್ನ ಗುಂಪುಗಳ ನಡುವೆ ಉದ್ವಿಗ್ನತೆಯನ್ನು ಉಂಟುಮಾಡಬಹುದಾದರೆ ಮಾರಾಟವನ್ನು ತಡೆಯುವುದು. ಅರ್ಜಿದಾರರು ಈ ಪದಗಳು ಸಮಸ್ಯಾತ್ಮಕವಾಗಿವೆ ಎಂದು ನ್ಯಾಯಾಲಯಕ್ಕೆ ಯಶಸ್ವಿಯಾಗಿ ಮನವರಿಕೆ ಮಾಡಿಕೊಟ್ಟರು. ಸರ್ಕಾರವು ಈ ನಿರ್ದಿಷ್ಟ ಹೊಸ ಅಧಿಕಾರಗಳನ್ನು ಬಳಸುವುದನ್ನು ತಡೆಯಲು ನ್ಯಾಯಾಲಯವು ಮಧ್ಯಪ್ರವೇಶಿಸಿತು.
ಜನವರಿ 2021 ರಲ್ಲಿ, ಗುಜರಾತ್ ಹೈಕೋರ್ಟ್ ಈ ನಿರ್ದಿಷ್ಟ ತಿದ್ದುಪಡಿಗಳ ಕಾರ್ಯಾಚರಣೆ ತಡೆಹಿಡಿದು, ಈ ಹೊಸ, ವಿಶಾಲ ಅಧಿಕಾರಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಅಧಿಸೂಚನೆಗಳನ್ನು ಹೊರಡಿಸುವುದನ್ನು ತಡೆಯಿತು. ಮಧ್ಯಂತರ ತಡೆಯಾಜ್ಞೆ ಇಂದಿಗೂ ಮುಂದುವರೆದಿದೆ.
►ಒಪ್ಪಿಗೆ ಮತ್ತು ನ್ಯಾಯಯುತ ಮಾರುಕಟ್ಟೆ ಮೌಲ್ಯ
ತೊಂದರೆಗೊಳಗಾದ ಪ್ರದೇಶಗಳ ಕಾಯ್ದೆಯ ಪ್ರಕಾರ, ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರದ ಮೇಲ್ಮನವಿಯಲ್ಲಿನ ನಿರ್ಧಾರವೇ ಅಂತಿಮ ಮತ್ತು ನಿರ್ಣಾಯಕವಾಗಿರುತ್ತದೆ. ಇದನ್ನು "ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ". ಆದಾಗ್ಯೂ, ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಹೈಕೋರ್ಟ್‌ಗಳು ಮೂಲಭೂತ ಹಕ್ಕುಗಳು ಅಥವಾ ನೈಸರ್ಗಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸುವ ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಲು ಅಧಿಕಾರವನ್ನು ಹೊಂದಿರುವುದರಿಂದ, ಕಾನೂನಿನ ವ್ಯಾಪ್ತಿಯನ್ನು ಮೀರಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶಗಳನ್ನು ಪರಿಶೀಲಿಸಲು ಗುಜರಾತ್ ಹೈಕೋರ್ಟ್‌ಗೆ ಪದೇ ಪದೇ ಅರ್ಜಿ ಸಲ್ಲಿಸಲಾಗಿದೆ.
ಜಿಲ್ಲಾಧಿಕಾರಿಯ ಅಧಿಕಾರವು ಮಾರಾಟಗಾರನು ತನ್ನ ಸ್ವಂತ ಇಚ್ಛೆಯಿಂದ ಮಾರಾಟ ಮಾಡುತ್ತಿದ್ದಾರೆಯೇ ಮತ್ತು ನ್ಯಾಯಯುತ ಬೆಲೆಯನ್ನು ಪಡೆಯುತ್ತಿದ್ದಾರೆಯೇ ಎಂದು ಪರಿಶೀಲಿಸುವುದಕ್ಕೆ ಕಟ್ಟುನಿಟ್ಟಾಗಿ ಸೀಮಿತವಾಗಿದೆ. ಅಂದರೆ ನೆರೆಹೊರೆಯವರು ಆಕ್ಷೇಪಿಸುತ್ತಾರೆ ಅಥವಾ ಸರ್ಕಾರವು ಸಂಭಾವ್ಯ "ಕಾನೂನು ಮತ್ತು ಸುವ್ಯವಸ್ಥೆ" ಸಮಸ್ಯೆಗಳ ಭಯದಿಂದ ಮಾರಾಟವನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ
ಉದಾಹರಣೆಗೆ, ಮಾರ್ಚ್ 2020 ರಲ್ಲಿ ನ್ಯಾಯಾಲಯವು ನಿರ್ಧರಿಸಿದ ಪ್ರಕರಣದಲ್ಲಿ, ಹಿಂದೂ ಮಾರಾಟಗಾರರು ವಡೋದರಾದಲ್ಲಿ ಮುಸ್ಲಿಂ ಖರೀದಿದಾರರಿಗೆ ಅಂಗಡಿಯನ್ನು ಮಾರಾಟ ಮಾಡಿದ್ದರು. ಸಂಭಾವ್ಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಲ್ಲೇಖಿಸುವ ಪೊಲೀಸ್ ವರದಿಯನ್ನು ಅವಲಂಬಿಸಿ ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿದರು. ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಪೊಲೀಸ್ ವಿಚಾರಣೆಯು "ತೊಂದರೆಗೊಳಗಾದ ಪ್ರದೇಶಗಳ ಕಾಯ್ದೆಯ ನಿಬಂಧನೆಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ" ಎಂದು ತೀರ್ಪು ನೀಡಿತು. ಆಸ್ತಿಯನ್ನು ನ್ಯಾಯಯುತ ಮೌಲ್ಯದಲ್ಲಿ ಮತ್ತು ಒಪ್ಪಿಗೆಯೊಂದಿಗೆ ಮಾರಾಟ ಮಾಡಲಾಗಿದೆ ಎಂಬುದು ನಿರ್ವಿವಾದ. ವಿಚಾರಣೆಯ ವ್ಯಾಪ್ತಿಯು ಮುಕ್ತ ಒಪ್ಪಿಗೆ ಮತ್ತು ನ್ಯಾಯಯುತ ಮೌಲ್ಯದ್ದಾಗಿರುವಾಗ, ಅಂತಹ ಮಾರಾಟದ ಸಂದರ್ಭದಲ್ಲಿ ನೆರೆಹೊರೆಯವರ ಪಾತ್ರವು ಅಪ್ರಸ್ತುತವಾಗುತ್ತದೆ ಎಂದು ಹೇಳಿದೆ.
ಆಗಸ್ಟ್ 2023 ರಲ್ಲಿ ಮತ್ತೊಂದು ಆದೇಶದಲ್ಲಿ ಇದನ್ನು ಪುನರುಚ್ಚರಿಸಲಾಯಿತು. ಅಂತರಧರ್ಮದ ಆಸ್ತಿ ಮಾರಾಟವನ್ನು ವಿರೋಧಿಸುವ ನೆರೆಹೊರೆಯವರು ಅದನ್ನು ಅನುಮತಿಸುವ ನ್ಯಾಯಾಧೀಶರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿ ನೆರೆಹೊರೆಯವರ ಮೇಲೆ 25,000 ರೂ.ಗಳ ದಂಡವನ್ನು ವಿಧಿಸಿತು. ಸಮುದಾಯದ ಬಲದ ಆಧಾರದ ಮೇಲೆ ಆಕ್ಷೇಪಣೆಗಳನ್ನು ಸ್ವೀಕರಿಸುವ ಮೂಲಕ ಡೆಪ್ಯುಟಿ ಕಲೆಕ್ಟರ್ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ. ಖರೀದಿದಾರ ಮತ್ತು ಮಾರಾಟಗಾರನ ನಡುವಿನ ಖಾಸಗಿ ಒಪ್ಪಂದವನ್ನು ತಡೆಯಲು ನೆರೆಹೊರೆಯವರಿಗೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಾಲಯ ದೃಢಪಡಿಸಿತು.