×
Ad

ಲೈವ್ ಸ್ಟ್ರೀಮ್ನಲ್ಲೇ ರಸ್ತೆ ವಿಭಜಕಕ್ಕೆ ಕಾರನ್ನು ಉದ್ದೇಶಪೂರ್ವಕ ಢಿಕ್ಕಿ ಹೊಡೆದ ಯುಟ್ಯೂಬರ್ ಅನುರಾಗ್ ಧೋಭಾಲ್; ICU ನಲ್ಲಿ ಚಿಕಿತ್ಸೆ

Update: 2026-03-08 15:24 IST

ಯುಟ್ಯೂಬರ್ ಅನುರಾಗ್ ಧೋಭಾಲ್ | screengrab : X 

‘ಕೊನೆಯ ಪಯಣ” ಎಂದು ಹೇಳುವ ಮೂಲಕ ಅನುರಾಗ್ ದೋಭಾಲ್ ಎಲ್ಲರಿಗೂ ಅಳುತ್ತಲೇ ವಿದಾಯ ಹೇಳಿ 150ರಿಂದ 180 ಕಿಮೀ ವೇಗದಲ್ಲಿ ಕಾರು ಓಡಿಸಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದಾರೆ.

ಬಿಗ್ಬಾಸ್ 17 ಸ್ಪರ್ಧಿ ಮತ್ತು ಯುಟ್ಯೂಬರ್ ಅನುರಾಗ್ ದೋಭಾಲ್ ಲೈವ್ ಸ್ಟ್ರೀಮ್ ಮಾಡುತ್ತಲೇ ಮಾರ್ಚ್ 7ರಂದು ಶನಿವಾರ ಕಾರನ್ನು ಉದ್ದೇಶಪೂರ್ವಕ ಅಪಘಾತ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಕೆಲವೇ ದಿನಗಳ ಅವಧಿಯಲ್ಲಿ ಅನುರಾಗ್ ಎರಡನೇ ಬಾರಿಗೆ ಇನ್ಸ್ಟಾಗ್ರಾಂ ಲೈವ್ನಲ್ಲಿ ತಮ್ಮ ಕಾರನ್ನು ಕ್ರ್ಯಾಷ್ ಮಾಡಿದ್ದಾರೆ. ‘ಕೊನೆಯ ಪಯಣ” ಎಂದು ಹೇಳುವ ಮೂಲಕ ಅನುರಾಗ್ ಎಲ್ಲರಿಗೂ ಅಳುತ್ತಲೇ ವಿದಾಯ ಹೇಳಿ 140-150 ಕಿಮೀ ವೇಗದಲ್ಲಿ ಕಾರು ಓಡಿಸುತ್ತಿದ್ದರು. ಕೊನೆಗೆ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದಾರೆ.

“ಇದು ನನಗೆ ಅಗತ್ಯವಾಗಿತ್ತು. ಯಾರಿಗೆ ಫೋನ್ ಮಾಡಲಿ ಎಂದು ತಿಳಿಯುತ್ತಿಲ್ಲ. ಮುಂದಿನ ಜನ್ಮವಿದ್ದರೆ ನನಗೆ ಪ್ರೀತಿ ಕೊಡಿ. ನನಗೆ ಪ್ರೀತಿಯ ಬಹಳ ಅಗತ್ಯವಿದೆ. ಫೈನಲ್ ಡ್ರೈವ್” ಎಂದು ಹೇಳುತ್ತಾ ಕಾರನ್ನು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಇದೀಗ ಅವರನ್ನು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಪಘಾತವಾದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Full View

ಅನುರಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಬಿಗ್ಬಾಸ್ 17ರಲ್ಲಿ ಕಾಣಿಸಿಕೊಂಡ ಬಳಿಕ ಅವರು ವ್ಯಾಪಕ ಜನಪ್ರಿಯತೆ ಗಳಿಸಿದ್ದರು. ಮಾಧ್ಯಮಗಳ ವರದಿಯ ಪ್ರಕಾರ ಅನುರಾಗ್ ದೆಹಲಿ-ಮೀರತ್ ಎಕ್ಸ್ಪ್ರೆಸ್ವೇನಲ್ಲಿ ಗಾಝಿಯಾಬಾದ್ನ ಮಸೂರಿ ಪ್ರದೇಶದಲ್ಲಿ ಟಯೋಟಾ ಫಾರ್ಚುನರ್ ಚಾಲನೆ ಮಾಡುತ್ತಾ ಅಪಘಾತ ಮಾಡಿದ್ದಾರೆ. ತಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ ಅವರು ಪ್ರೀತಿಯನ್ನು ಬೇಡಿದ್ದಾರೆ. ಯಾರಿಗೂ ಕರೆ ಮಾಡಲು ಸಾಧ್ಯವಿಲ್ಲದ ಕಾರಣ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಧೈರ್ಯದ ಅಗತ್ಯವಿತ್ತು ಮತ್ತು ಪ್ರೋತ್ಸಾಹದ ಅಗತ್ಯವಿದೆ ಎಂದೂ ಅವರು ಬೇಡಿಕೊಂಡಿದ್ದಾರೆ.

ಅವರ ಫೈನಲ್ ಡ್ರೈವ್ ವೀಡಿಯೋವನ್ನು ಸುಮಾರು 80,000 ಮಂದಿ ಲೈವ್ ಆಗಿ ನೋಡಿದ್ದಾರೆ. “ನಾವು ಫೈನಲ್ ಡ್ರೈವ್ಗೆ ಹೋಗೋಣ” ಎಂದು ಹೇಳುತ್ತಾ ಅವರು ಕ್ಯಾಮರಾ ತಿರುಗಿಸಿದ್ದರು. ಆತನ ವೇಗ ಗಂಟೆಗೆ 140-150 ಕಿಮೀಗಳಷ್ಟಿತ್ತು.

ಅನುರಾಗ್ನ ಮ್ಯಾನೇಜರ್ ಸಾಮಾಜಿಕ ಮಾಧ್ಯಮದ ಮೂಲಕ ಅವರ ಆರೋಗ್ಯದ ವಿವರ ನೀಡಿದ್ದಾರೆ. “ಅನುರಾಗ್ ಪ್ರಸ್ತುತ ವೈದ್ಯಕೀಯ ನಿಗಾದಲ್ಲಿ ಆಸ್ಪತ್ರೆಯಲ್ಲಿದ್ದಾರೆ ಎಂದು ಟೀಮ್ ಯುಕೆ ರೈಡರ್ ಪರವಾಗಿ ನಾನು ಅನುರಾಗ್ ದೋಬಲ್ರ ಮ್ಯಾನೇಜರ್ ದೃಢೀಕರಿಸುತ್ತೇನೆ. ದಯವಿಟ್ಟು ಇದನ್ನು ಅಧಿಕೃತ ಹೇಳಿಕೆಯಾಗಿ ಪರಿಗಣಿಸಿ ಮತ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ನಿರಂತರ ಕರೆಗಳನ್ನು ಮಾಡದಿರುವಂತೆ ಕೇಳಿಕೊಳ್ಳುತ್ತೇವೆ. ಏನಾದರೂ ಅಪ್ಡೇಟ್ಗಳಿದ್ದರೆ ಸೂಕ್ತ ಸಮಯದಲ್ಲಿ ಹಂಚಿಕೊಳ್ಳುತ್ತೇವೆ” ಎಂದು ವಿವರ ನೀಡಿದ್ದಾರೆ.

ಈ ಮಾಹಿತಿಯ ನಂತರ ಮತ್ತೊಂದು ಮಾಹಿತಿ ಬಿಡುಗಡೆ ಮಾಡಿದ ಮ್ಯಾನೇಜರ್, “ಅನುರಾಗ್ರನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ. ವೈದ್ಯರ ಜೊತೆಗೆ ನಾವು ಸಂಪರ್ಕದಲ್ಲಿದ್ದೇವೆ. ನಮಗೆ ಬೆಂಬಲ ನೀಡುತ್ತಿರುವವರಿಗೆ ಧನ್ಯವಾದಗಳು. ಮುಖ್ಯವಾಗಿ ಅನುರಾಗ್ ಇರುವ ಸ್ಥಳವನ್ನು ಗುರುತಿಸಲು ಅನುವು ಮಾಡಿಕೊಟ್ಟ ಅಭಿಮಾನಿಗಳಿಗೆ ಧನ್ಯವಾದಗಳು. ನೀವು ನಿಜವಾದ ದೇವರು” ಎಂದು ಕೇಳಿಕೊಂಡಿದ್ದಾರೆ.

ಅನುರಾಗ್ ಕೆಲವೇ ದಿನಗಳ ಹಿಂದೆ ತಾನು ಮಾನಸಿಕ ಕಿರುಕುಳ ಮತ್ತು ದೌರ್ಜನ್ಯ ಎದುರಿಸುತ್ತಿರುವುದಾಗಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ನಂತರ ‘ಕೊನೆಯ ವೀಡಿಯೊ’ ಎಂದು ಹೇಳುವ ಮೂಲಕ ವೀಡಿಯೊ ಒಂದನ್ನು ಬಿಡುಗಡೆ ಮಾಡಿ ಹೆತ್ತವರನ್ನು ಮತ್ತು ಸಹೋದರರನ್ನು ದೂಷಿಸಿದ್ದರು. ಹೆತ್ತವರು ಮತ್ತು ಸಹೋದರರು ತನಗೆ ದೌರ್ಜನ್ಯ ನೀಡುತ್ತಿರುವುದಾಗಿ ಹೇಳಿದ್ದರು. ತನ್ನ ಅಂತರ್ಜಾತೀಯ ವಿವಾಹಕ್ಕೆ ಹೆತ್ತವರು ಒಪ್ಪಿಕೊಳ್ಳುತ್ತಿಲ್ಲ. ತನ್ನ ಪತ್ನಿ ರಿತಿಕಾಳನ್ನು ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. ಹೀಗಾಗಿ ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಹೇಳಿದ್ದರು.

ಆದರೆ ಅನುರಾಗ್ ಸಹೋದರ ಕಲಾಂ ಇಂಕ್ ಈ ಆರೋಪವನ್ನು ತಳ್ಳಿ ಹಾಕಿದ್ದರು. ಅನುರಾಗ್ ಜನಪ್ರಿಯತೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆಗಳನ್ನು ಪಡೆಯಲು ಸಹೋದರರನ್ನು ದೂಷಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News