Gujarat | ಬಾವಿಯಲ್ಲಿ ಸಮುದ್ರದ ರೀತಿ ಅಲೆ!; ನೋಡಲು ಮುಗಿಬಿದ್ದ ಜನರು
ತಜ್ಞರ ವಿವರಣೆ ಏನು?
Screengrab :X
ಮೊರ್ಬಿ ತಾಲೂಕಿನ ವೀರಪರ್ದಾ ಗ್ರಾಮದ ಪ್ರಾಂಜ್ಜೀವನ್ ಸದಾರಿಯಾ ಅವರ ಜಮೀನಿನಲ್ಲಿರುವ ಬಾವಿ ಕುತೂಹಲಕ್ಕೆ ಕಾರಣವಾಗಿದೆ.
ಗುಜರಾತ್ ನ ಮೊರ್ಬಿ ಜಿಲ್ಲೆಯ 18 ಅಡಿ ಆಳದ ಬಾವಿಯ ನೀರು ಕಳೆದ ಐದು ದಿನಗಳಿಂದ ನಿರಂತರ ಅಲೆಗಳನ್ನು ತೋರಿಸಿರುವುದು ಮತ್ತು ತರಂಗಗಳು ಅಲುಗಾಡುತ್ತಿರುವುದು ಜನರ ಕುತೂಹಲದ ಕೇಂದ್ರವಾಗಿದೆ. ನೂರಾರು ಗ್ರಾಮಸ್ಥರು ಮತ್ತು ಇತರರು ಈ ಅಸಾಮಾನ್ಯ ವಿದ್ಯಮಾನವನ್ನು ವೀಕ್ಷಿಸಲು ಉತ್ಸುಕರಾಗಿ ಆಗಮಿಸುತ್ತಿದ್ದಾರೆ.
ಮೊರ್ಬಿ ತಾಲೂಕಿನ ವೀರಪರ್ದಾ ಗ್ರಾಮದ ಪ್ರಾಂಜ್ಜೀವನ್ ಸದಾರಿಯಾ ಅವರ ಜಮೀನಿನಲ್ಲಿರುವ ಈ ಬಾವಿ ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿದೆ. ಆರಂಭದಲ್ಲಿ ಇದನ್ನು ಭೂಕಂಪನದ ಮುನ್ಸೂಚನೆ ಎಂದು ಭಾವಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಬಾವಿಯ ನೀರು ಕಂಪಿಸುತ್ತಿರುವುದಕ್ಕೆ ಭೂಕಂಪನದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಳ್ಳಿ ಹಾಕಿದ್ದಾರೆ. ಪ್ರಾಥಮಿಕ ಸಂಶೋಧನೆಗಳು ನೈಸರ್ಗಿಕ ಭೂವೈಜ್ಞಾನಿಕ ಪ್ರಕ್ರಿಯೆಯನ್ನು ಸೂಚಿಸುತ್ತವೆ ಎಂದು ಜಿಲ್ಲಾಡಳಿತ ಹೇಳಿದೆ.
ಬಾವಿಯ ಮಾಲಕ ಪ್ರಾಂಜ್ಜೀವನ್ ಸದಾರಿಯ ಪ್ರಕಾರ ಮೊದಲು ಆಗಸ್ಟ್ 2ರಂದು ಅವರು ಈ ಅಸಹಜ ಅಲುಗಾಡುವಿಕೆಯನ್ನು ಗಮನಿಸಿದ್ದರು. “ರವಿವಾರ ಜಮೀನಿಗೆ ಬಂದಾಗ ಬಾವಿಯಿಂದ ನೀರು ಅಂಚಿನಲ್ಲಿ ಹೊರಗೆ ಬರುತ್ತಿತ್ತು. ಅಂದಿನಿಂದ ಹೀಗೆ ಅಲೆ ಬರುವುದು ಮುಂದುವರಿದಿದೆ. ಬಾವಿಯನ್ನು ಮೂರು ತಿಂಗಳ ಹಿಂದೆ ನಿರ್ಮಿಸಲಾಗಿದೆ” ಎಂದು ಸದಾರಿಯ ಹೇಳಿದ್ದಾರೆ.
ರವಿವಾರ ಮತ್ತು ಸೋಮವಾರ ನೀರು ಮೊದಲು ಅಲುಗಾಡುತ್ತಿರುವುದು ಕಂಡುಬಂದಿದೆ. ನಂತರ ಮಂಗಳವಾರ ಚಲನೆ ನಿಂತು ಬುಧವಾರ ಮತ್ತು ಗುರುವಾರ ಮತ್ತೆ ಪ್ರಾರಂಭವಾಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹೀಗೆ ಬಾವಿಯ ನೀರಿನ ನಿಗೂಢ ಅಲುಗಾಡುವಿಕೆ ಹರಡುತ್ತಿದ್ದಂತೆ ವೀರಪರ್ದಾ ಮತ್ತು ನೆರೆಯ ಹಳ್ಳಿಗಳ ಜನರು ಸ್ಥಳದಲ್ಲಿ ಸೇರಲು ಪ್ರಾರಂಭಿಸಿದರು. ಹತ್ತಿರದ ಹೆದ್ದಾರಿಯಲ್ಲಿ ಹಾದು ಹೋಗುವ ಪ್ರಯಾಣಿಕರು ಸಹ ನಿರಂತರವಾಗಿ ಏರಿಳಿತಗೊಳ್ಳುತ್ತಿರುವ ನೀರನ್ನು ವೀಕ್ಷಿಸಲು ಬಂದು ಹೋಗಿದ್ದಾರೆ. ಈ ಅಸಾಮಾನ್ಯ ದೃಶ್ಯವು ಪ್ರದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಆದರೆ ನಿಖರ ಕಾರಣಗಳಿಗೆ ತಜ್ಞರ ಅಧ್ಯಯನಕ್ಕೆ ಕಾಯಲಾಗುತ್ತಿದೆ.
ಜಿಲ್ಲಾ ಭೂವಿಜ್ಞಾನಿ ಜೆಎಸ್ ವಾಧೇರ್ ಅವರು ಈ ವಿದ್ಯಮಾನದ ಹಿಂದೆ ಭೂಕಂಪನದ ಚಟುವಟಿಕೆಯ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. “ಭೂಕಂಪನದಿಂದ ಆಗುತ್ತಿರುವ ಚಟುವಟಿಕೆಯಲ್ಲ. ಪ್ರಾಥಮಿಕವಾಗಿ ಭಾರೀ ಮಳೆಯ ನಂತರ ಅಂತರ್ಜಲವು ಮರುಪೂರಣಗೊಳ್ಳುತ್ತಿದೆ ಮತ್ತು ಬಂಡೆಗಳ ರಂಧ್ರಗಳಲ್ಲಿ ಸಿಲುಕಿರುವ ಗಾಳಿಯು ಬಿಡುಗಡೆಯಾಗುತ್ತಿದೆ. ಇದು ಬಾವಿಯಲ್ಲಿ ಅಡಚಣೆಯನ್ನು ಉಂಟು ಮಾಡುತ್ತಿದೆ” ಎಂದು ವಾಧೇರ್ ಹೇಳಿದ್ದಾರೆ.
ಗಾಂಧಿನಗರದಲ್ಲಿರುವ ಭೂಕಂಪನದ ಸಂಶೋಧನಾ ಸಂಸ್ಥೆಯೊಂದಿಗೆ ಅಧಿಕಾರಿಗಳು ಸಮಾಲೋಚಿಸಿದ್ದಾರೆ. ಪ್ರದೇಶದಲ್ಲಿ ಯಾವುದೇ ಸಕ್ರಿಯ ದೋಷ ರೇಖೆಯಿಲ್ಲ ಎಂದು ದೃಢಪಡಿಸಲಾಗಿದೆ ಎಂದು ವರದಿಯಾಗಿದೆ.
ವಿವರವಾದ ವೈಜ್ಞಾನಿಕ ತನಿಖೆಗಾಗಿ ಗಾಂಧಿನಗರದಿಂದ ತಂಡವು ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಮೊರ್ಬಿ ಜಿಲ್ಲಾಧಿಕಾರಿ ಸ್ವಪ್ನಿಲ್ ಖರೆ ಹೇಳಿದ್ದಾರೆ.