ಶೂ ಒಳಗಿತ್ತು 900 ಕೋಟಿ ರೂ. ಮೌಲ್ಯದ ವಜ್ರ !
Photo credit: news18.com
184.75 ಕ್ಯಾರಟ್ ನ ಜಾಕಬ್ ಡೈಮಂಡ್ ಭಾರತದಲ್ಲಿ ಕೊಹಿನೂರ್ ವಜ್ರದ ನಂತರದ ಅತಿ ದೊಡ್ಡ ವಜ್ರವಾಗಿದೆ. ಈ ಜಾಕಬ್ ವಜ್ರದ ಕಥೆ ಮಾತ್ರ ಬಲು ವಿಚಿತ್ರ.
ದಕ್ಷಿಣ ಆಫ್ರಿಕಾದಲ್ಲಿದ್ದ ಅದು, ಅಲೆಕ್ಸಾಂಡರ್ ಮಾಲ್ಕಮ್ ಜಾಕಬ್ ಎಂಬ ಆಭರಣ ವ್ಯಾಪಾರಿಯ ಕೈಸೇರಿತ್ತು. ಆತ ಅದನ್ನು ಹೈದರಾಬಾದಿನ ನಿಜಾಮ ಮೆಹಬೂಬ್ ಅಲಿ ಖಾನ್ ಗೆ ಮಾರಲು ಪ್ರಯತ್ನಿಸಿದ್ದ. ಆದರೆ ವ್ಯವಹಾರದಲ್ಲಿ ಯಡವಟ್ಟಾಗಿ, ಕೇಸ್ ಕೋರ್ಟ್ ಮೆಟ್ಟಿಲೇರಿ, ನಿಜಾಮನ ಪಾಲಿಗೆ ಅದೊಂದು ಅವಮಾನಕರ ಕಥೆಯಾಗಿ ಉಳಿದುಬಿಟ್ಟಿತ್ತು.
ಅದು 1911ರ ಕಾಲ. ಹೈದರಾಬಾದ್ ನಿಜಾಮ ಮೆಹಬೂಬ್ ಅಲಿ ಖಾನ್ ನಿಧನರಾದ ಬಳಿಕ ಮೀರ್ ಉಸ್ಮಾನ್ ಅಲಿ ಖಾನ್ ಹೈದರಾಬಾದಿನ ನಿಜಾಮನಾದರು.
ಒಂದು ದಿನ ಆತ ತನ್ನ ತಂದೆ ಮೆಹಬೂಬ್ ಅಲಿ ಖಾನ್ ಅವರ ಹಳೇ ಸರಂಜಾಮುಗಳನ್ನು ಪರಿಶೀಲಿಸುತ್ತಿದ್ದಾಗ ಹಳೆಯ ಶೂ ಒಂದು ಸಿಕ್ಕಿತು. ಅದನ್ನು ಡ್ರಾವರ್ ನಲ್ಲಿ ಇಡಲಾಗಿತ್ತು. ಬಟ್ಟೆಯಲ್ಲಿ ಸುತ್ತಿ ಇಟ್ಟಿದ್ದ ಶೂ ಬಗ್ಗೆ ಅವರಿಗೆ ಕುತೂಹಲ ಮೂಡಿದೆ. ನಂತರ ಅದರ ಒಳಗೆ ನೋಡಿದಾಗ ಹೊಳೆಯುತ್ತಿದ್ದ ವಜ್ರದ ಹಾಗಿದ್ದ ವಸ್ತು ಕಂಡಿದೆ.
ಏನೆಂದು ನೋಡುವಾಗ ಅದರೊಳಗೆ ಏನೋ ಇದೆಯೆಂಬುದು ಗೊತ್ತಾಯಿತು. ಒಂದು ವೇಳೆ ಅಸಲಿಯಾಗಿದ್ದರೆ ಶೂನಲ್ಲಿ ಯಾಕೆ ಇಟ್ಟಿರುತ್ತಿದ್ದರು ಎಂದು ಯೋಚಿಸಿದ ಮೀರ್ ಉಸ್ಮಾನ್ ಅದನ್ನು ತನ್ನ ಮೇಜಿನ ಮೇಲೆ ಪೇಪರ್ ವೇಯ್ಟ್ ಆಗಿ ಬಳಸಲು ಶುರು ಮಾಡಿದರು. ಆದರೆ ಕೆಲವು ವರ್ಷಗಳ ಬಳಿಕ ಅದು ಅಸಲಿ ವಜ್ರ ಎಂದು ಗೊತ್ತಾಯಿತು. ಅದೂ ಸಾಧಾರಣ ವ್ರಜವಾಗಿರಲಿಲ್ಲ. 900 ಕೋಟಿ ರೂಪಾಯಿಯ ವಜ್ರವಾಗಿತ್ತು. ಜಗತ್ತಿನ ಅತಿ ದೊಡ್ಡ, ಅಮೂಲ್ಯ ವಜ್ರಗಳಲ್ಲಿ ಒಂದಾದ ಅದು ಇಂದು ಮುಂಬೈನ ರಿಸರ್ವ್ ಬ್ಯಾಂಕ್ ತಿಜೋರಿಯಲ್ಲಿ ಇದೆ.
ಏನಿದು ಈ ವಜ್ರದ ಕಥೆ? 900 ಕೋಟಿಯ ವಜ್ರ ಹೇಗೆ ಶೂನಲ್ಲಿ ಸೇರಿಕೊಂಡಿತು? ಹೈದರಾಬಾದ್ ನಿಜಾಮನಲ್ಲಿ ಕೆಲಸಕ್ಕಿದ್ದ ಅಬಿದ್ ಎಂಬವನು ಹೇಗೆ ಕೋಟ್ಯಧೀಶನಾದ ?
ʼದಿ ಡೇಸ್ ಆಫ್ ದಿ ಬಿಲೋವ್ಡ್ʼ ಎಂಬ ಪುಸ್ತಕದಲ್ಲಿ ಹೈದರಾಬಾದ್ ನಿಜಾಮನ ಬಗ್ಗೆಯೂ ಪ್ರಸ್ತಾಪ ಬರುತ್ತದೆ. ನಿಜಾಮ ಮೆಹಬೂಬ್ ಅಲಿಖಾನ್ ಗೆ ಎಂಥ ಶೋಕಿಯಿತ್ತೆಂದರೆ ಸಾಕ್ಸ್ ಅನ್ನು ಕೂಡ ಫ್ರಾನ್ಸ್ ನಿಂದ ತರಿಸುತ್ತಿದ್ದರು. ಹಾಗೆ ತರಿಸಿದ್ದನ್ನು ಒಮ್ಮೆಯಷ್ಟೇ ಹಾಕಿ ಬದಿಗಿಡುತ್ತಿದ್ದ.
ಒಮ್ಮೆ ಅದನ್ನು ನಿಜಾಮನ ನೌಕರ ಅಬಿದ್ ಸಂತೆಯಲ್ಲಿ ಮಾರುವುದಕ್ಕೆ ಹೋದಾಗ, ಅದು ಅತಿ ಚಿಕ್ಕದಾಗಿದ್ದುದರಿಂದ ಯಾರಿಗೂ ಸರಿಹೊಂದಿರಲಿಲ್ಲ. ಬಿಕರಿಯಾಗದ ಸಾಕ್ಸ್ ಅನ್ನು ಏನು ಮಾಡುವುದೆಂದು ಯೋಚಿಸಿದ ನೌಕರಿನಿಗೆ ಒಂದು ತಂತ್ರ ಹೊಳೆಯಿತು. ಅದಕ್ಕೆ ಹೊಸ ಚೀಟಿ ಅಂಟಿಸಿ ಫ್ರಾನ್ಸ್ ನಿಂದ ಬಂದಿರುವ ಹೊಸ ಸಾಕ್ಸ್ ಎಂದು ತೋರಿಸಿದ.
ಹೈದರಾಬಾದ್ ನಿಜಾಮನಿಗೆ ಮೊದಲೇ ವಿದೇಶಿ ಮಾಲೆಂದರೆ ಏನೋ ಖಯಾಲಿ. ತನ್ನದೇ ಹಳೆಯ ಸಾಕ್ಸ್ ಅನ್ನು ಆತ ಹಾಗೆ ಖರೀದಿಸಿದ್ದ. ಹೈದರಾಬಾದ್ ನಿಜಾಮ ಅವತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ.
1937ರಲ್ಲಿ ಟೈಮ್ಸ್ ಮ್ಯಾಗಝಿನ್ ನಲ್ಲಿನ ಮುಖಪುಟ ಬರಹ, ನಿಜಾಮ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದುದನ್ನು ಉಲ್ಲೇಖಿಸಿದೆ. ʼಗಾರ್ಡಿಯನ್ʼ ನ ಒಂದು ಬರಹದಲ್ಲಿ, ನಿಜಾಮನ ನೆಲಮಾಳಿಗೆಯಲ್ಲಿ ಚಿನ್ನದ ನಾಣ್ಯಗಳು ಮತ್ತು ವಜ್ರಗಳು ತುಂಬಿದ್ದ ಲಾರಿಗಳೇ ಇದ್ದಿದ್ದರ ಬಗ್ಗೆ ಉಲ್ಲೇಖ ಬರುತ್ತದೆ.
ನಿಜಾಮನಲ್ಲಿ ನೌಕರಿ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅಲ್ಬರ್ಟ್ ಆಬಿದ್ ಎಂಬವನು ನಿಜಾಮನ ಉಡುಪು, ಶೂ, ಕೈಗಡಿಯಾರ ಎಲ್ಲದರ ಉಸ್ತುವಾರಿ ನೋಡಿಕೊಳುತ್ತಿದ್ದ. ನಿಜಾಮನ ಉಡುಪುಗಳೆಲ್ಲವೂ ಲಕ್ಷಾಂತರ ಬೆಲೆ ಬಾಳುವಂಥವಾಗಿದ್ದವು. ಆದರ ಪೂರ್ತಿ ಹೊಣೆಗಾರಿಕೆ ಅಬಿದ್ ಗೆ ಸಿಕ್ಕಿತ್ತು. ಒಳ್ಳೆಯ ಸಂಬಳವೂ ಸಿಗುತ್ತಿತ್ತು.
ಆದರೂ ಅವನು ನಿಜಾಮ ಒಮ್ಮೆ ಬಳಸಿ ಎಸೆದುಬಿಡುತ್ತಿದ್ದ ಬೆಲೆಬಾಳುವ ವಿದೇಶಿ ಬಟ್ಟೆಗಳನ್ನು ಸಂತೆಯಲ್ಲಿ ಮಾರಿ ಹಣ ಗಳಿಸುವುದಕ್ಕೆ ಶುರು ಮಾಡಿದ.
ಹೈದರಾಬಾದಿನ ಆಬಿದ್ ಎಂಬ ಇವತ್ತಿನ ಅತಿ ದೊಡ್ಡ ಶಾಪಿಂಗ್ ಸೆಂಟರ್ ಆಗಿರುವ ಜಾಗದಲ್ಲಿಯೇ ಅವತ್ತು ಆಬಿದ್ ಹೊಸ ಅಂಗಡಿಯನ್ನೂ ತೆರೆದಿದ್ದ. ಅದರಲ್ಲಿ ನಿಜಾಮ ಒಮ್ಮೆ ಬಳಸಿ ಎಸೆಯುತ್ತಿದ್ದ ಬಟ್ಟೆಗಳ ಮಾರಾಟ ನಡೆಯುತ್ತಿತ್ತು. ಯಾವುದು ಮಾರಾಟವಾಗುತ್ತಿರಲಿಲ್ಲವೊ ಅದನ್ನು ಮತ್ತೆ ಹೊಸದೆಂಬಂತೆ ತೋರಿಸಿ ನಿಜಾಮನಿಗೇ ಮಾರಿ ಆ ನೌಕರ ಹಣ ಮಾಡಿಕೊಳ್ಳುತ್ತಿದ್ದ. ಹೀಗೆ ಆಬಿದ್ ಕೋಟಿಗಟ್ಟಲೆ ಗಳಿಸಿಬಿಟ್ಟಿದ್ದ.
ಇದಾದ ಬಳಿಕ ಅಲೆಕ್ಸಾಂಡರ್ ಮಾಲ್ಕಮ್ ಜಾಕಬ್ ಎಂಬ ಆಭರಣ ವ್ಯಾಪಾರಿಯೊಬ್ಬನ ಪರಿಚಯ ಅಬಿದ್ ಗೆ ಆಗುತ್ತದೆ. ಆತ ಜಾಕಬ್ ಗೆ ಆತನ ವಜ್ರವನ್ನು ನಿಜಾಮನಿಗೆ ಮಾರುವುದಾಗಿಯೂ ತನಗೆ 5 ಪರ್ಸೆಂಟ್ ಕಮಿಷನ್ ಕೊಡಬೇಕೆಂದೂ ಆಫರ್ ಇಟ್ಟಿದ್ದು, ಇದಕ್ಕೆ ಜಾಕಬ್ ಸಕರಾತ್ಮವಾಗಿ ಪ್ರತಿಕ್ರಿಯಿಸಿದ್ದ. ನಂತರ ಅಬಿದ್ ಆತನನ್ನು ನಿಜಾಮನ ಬಳಿಗೆ ಕರೆತಂದ. ತನ್ನ ಬಳಿ 184 ಕ್ಯಾರಟ್ ನ ವಜ್ರ ಇರುವುದಾಗಿಯೂ. ಆಫ್ರಿಕಾದಿಂದ ಅದನ್ನು ಖರೀದಿಸಿರುವುದಾಗಿಯೂ ನಿಜಾಮನಿಗೆ ಜಾಕಬ್ ಹೇಳಿದ.
50 ಲಕ್ಷ ಬೆಲೆಗೆ ವ್ಯವಹಾರ ಕುದುರಿತು. ಅದರಲ್ಲಿ 5 ಲಕ್ಷ ಅಬಿದ್ ಗೆ ಹೋಗುತ್ತದೆ ಎಂಬುದು ನಿಜಾಮನಿಗೆ ಗೊತ್ತೇ ಇರಲಿಲ್ಲ.
ವಜ್ರ ಖರೀದಿಸಲು ತಯಾರಾದ ನಿಜಾಮ, ಅದಕ್ಕೂ ಮೊದಲು ಅದನ್ನೊಮ್ಮೆ ಪರಿಶೀಲಿಸಲು ಬಯಸಿದ್ದ. ಏನನ್ನೇ ಆದರೂ ಕೊಳ್ಳುವ ಮೊದಲು ನೋಡಿ, ಇಷ್ಟವಾದರೆ ಮಾತ್ರವೇ ಒಪ್ಪುತ್ತಿದ್ದುದು ಆತನ ರೂಢಿಯಾಗಿತ್ತು. ಹಾಗೆಯೇ, ಜಾಕಬ್ ಗೂ ಆತ ವಜ್ರ ಇಷ್ಟವಾಗದೇ ಇದ್ದರೆ ವ್ಯವಹಾರ ರದ್ದು ಮಾಡುವುದಾಗಿ ಹೇಳಿದ. ಅದಕ್ಕೆ ಜಾಕಬ್ ಒಪ್ಪಿಕೊಂಡಿದ್ದ. ಬಳಿಕ ನಿಜಾಮ ಜಾಕಬ್ ಖಾತೆಗೆ 21 ಲಕ್ಷ ರೂ. ವರ್ಗಾಯಿಸಿದ. ಈ ವಿಚಾರ ಬ್ರಿಟಿಷ್ ಅಧಿಕಾರಿಗಳಿಗೆ ಗೊತ್ತಾದಾಗ ಅವರು ದುಡ್ಡು ಹಾಳು ಮಾಡಿಕೊಳ್ಳದಿರುವಂತೆ ಸಲಹೆ ನೀಡಿದ್ದರು.
ಇದಾದ ಕೆಲ ಸಮಯದಲ್ಲಿಯೇ ಜಾಕಬ್ ವಜ್ರವನ್ನು ನಿಜಾಮನ ಮುಂದೆ ಪ್ರದರ್ಶಿಸಿದ. ಬೆಳ್ಳಿಯ ತಟ್ಟೆಯಲ್ಲಿ ಕೆಂಪು ವಸ್ತ್ರ ಹೊದಿಸಿ ಇಟ್ಟಿದ್ದ ವಜ್ರವನ್ನು ನೋಡಿ, ಕೈಯಲ್ಲಿ ತೆಗೆದುಕೊಂಡು ಪರಿಶೀಲಿಸಿ, ಆತ ಹೇಳಿದ್ದಕ್ಕೂ ಅದರ ಗಾತ್ರಕ್ಕೂ ವ್ಯತ್ಯಾಸವಿದ್ದುದನ್ನು ಗಮನಿಸಿ, ಇಷ್ಟವಿಲ್ಲ ಎಂದುಬಿಟ್ಟ.
21 ಲಕ್ಷ ಆಗಲೆ ಜಾಕಬ್ ಕೈಸೇರಿಯಾಗಿತ್ತು. ನಿಜಾಮ ಹಣ ವಾಪಸ್ ಕೇಳಿದ್ದಕ್ಕೆ ಏನೋ ಕಥೆ ಹೇಳಿ ಅಲ್ಲಿಂದ ಜಾಕಬ್ ಹೋಗಿಬಿಟ್ಟ. ಕೆಲ ದಿನಗಳ ಬಳಿಕ ನಿಜಾಮನಿಗೆ ಒಂದು ನೊಟೀಸ್ ಬಂದಿತ್ತು. ವಜ್ರ ಖರೀದಿಸಿದ್ದಕ್ಕೆ ಬಾಕಿ ಮೊತ್ತವನ್ನು ಇಂಗ್ಲೆಂಡ್ ಬ್ಯಾಂಕ್ ಗೆ ಪಾವತಿಸುವಂತೆ ಅದರಲ್ಲಿ ಹೇಳಲಾಗಿತ್ತು. ಆದರೆ ಈ ಸುಳ್ಳಿನ ವಿರುದ್ಧ ನಿಜಾಮ ಜಾಕಬ್ ನನ್ನು ಕೋರ್ಟ್ ಗೆ ಎಳೆದ.
ಕೇಸ್ ವರ್ಷಗಟ್ಟಲೆ ನಡೆಯಿತು. ಅದೆಷ್ಟು ದೊಡ್ಡ ವಿಚಾರವಾಯಿತೆರಂದರೆ, ಜಾಕಬ್ ಡೈಮಂಡ್ ಕೇಸ್ ಎಂದೇ ಜಗತ್ತಿನಾದ್ಯಂತ ಸುದ್ದಿಯಾಯಿತು. ಕಡೆಗೂ ಜಾಕಬ್ ಮೋಸ ಮಾಡಿರುವುದು ಸಾಬೀತಾಯಿತು.
ಆದರೂ ನಿಜಾಮನಿಗೆ ಆತನ ಹಣ ವಾಪಸ್ ಸಿಗಲಿಲ್ಲ. ಬೇಡದೇ ಹೋದರು ಆ ವಜ್ರವನ್ನು ನಿಜಾಮ ತನ್ನ ಬಳಿಯೇ ಇರಿಸಿಕೊಳ್ಳಬೇಕಾಯಿತು. ಆ ವಜ್ರದ ವಿಚಾರವಾಗಿ ನಿಜಾಮ ತೀರಾ ಅವಮಾನ ಅನುಭವಿಸಬೇಕಾಯಿತು. ಹಾಗಾಗಿಯೇ ಆತ ಅದನ್ನು ಒಂದು ಕೊಳಕು ಬಟ್ಟೆಯಲ್ಲಿ ಸುತ್ತಿ ಶೂ ಒಳಗೆ ಹಾಕಿ ಇಟ್ಟುಬಿಟ್ಟ. ಆತನ ತರುವಾಯ ಆತನ ಮಗನಿಗೆ ಅದು ಸಿಕ್ಕಿತು.
ಅದರೆ ಬೆಲೆಯೂ ಗೊತ್ತಿರದ ಆತ ಅದನ್ನು ಪೇಪರ್ ವೇಯ್ಟ್ ಆಗಿ ಬಳಸತೊಡಗಿದ್ದ. ದೇಶ ಸ್ವತಂತ್ರವಾದ ಮೇಲೆ ಈ ವಜ್ರ ಟ್ರಸ್ಟ್ ಒಂದರ ಪಾಲಾಯಿತು.
1995ರಲ್ಲಿ ಭಾರತ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಂಡಿತು. ಈಗ ಅದು ಆರ್ಬಿಐ ಖಜಾನೆಯಲ್ಲಿದ್ದು, ಜಗತ್ತಿನ ಅತಿ ದೊಡ್ಡ ಡೈಮಂಡ್ಗಳಲ್ಲಿ ಒಂದಾಗಿ ಉಳಿದಿದೆ.
ಎಲ್ಲ ದುಡ್ಡು ಖರ್ಚು ಮಾಡಿಕೊಂಡಿದ್ದ ಜಾಕಬ್ ಎಲ್ಲಿಂದ ಬಂದಿದ್ದನೊ ಅಲ್ಲಿಗೇ ಹೋಗಿಬಿಟ್ಟಿದ್ದ. ಇದರಲ್ಲಿ ಆಟವಾಡಿದ್ದ ನಿಜಾಮನ ನೌಕರ ಅಲ್ಬರ್ಟ್ ಅಬಿದ್ ನಿಜಾಮನನ್ನು ಲೂಟಿ ಮಾಡಿ ಕೋಟ್ಯಂತರ ಗಳಿಸಿ ಕುಟುಂಬದೊಂದಿಗೆ ಇಂಗ್ಲೆಂಡಿಗೆ ಹೋಗಿ ನೆಲೆಸಿದ್ದ. ಜಾಕಬ್ ವಜ್ರದ ಕಥೆ ಭಾರತದ ಇತಿಹಾಸದಲ್ಲಿ ಒಂದು ಆಕರ್ಷಕ, ಅಷ್ಟೇ ಅಧ್ಯಾಯವಂತೂ ಹೌದು.