×
Ad

ರೋಮಾಂಚಕ ಗೋಲಿನ ನಂತರ ಮೆಸ್ಸಿ ಭಾವುಕರಾಗಿದ್ದೇಕೆ?

Update: 2026-06-17 16:46 IST

ಲಿಯೊನೆಲ್ ಮೆಸ್ಸಿ |Photo Credit : PTI 

ನಾಲ್ಕು ವರ್ಷಗಳ ಹಿಂದೆ ಖತರ್ ನಲ್ಲಿ ವಿಶ್ವಕಪ್ ಟ್ರೋಫಿ ಎತ್ತಿದ ನಂತರ ಮೊದಲ ಬಾರಿಗೆ ಹಾಲಿ ವಿಶ್ವ ಚಾಂಪಿಯನ್ ಆಗಿ ವಿಶ್ವಕಪ್ ನಲ್ಲಿ ಆಡುತ್ತಿದ್ದ ಮೆಸ್ಸಿಗೆ ಹ್ಯಾಟ್ರಿಕ್ ಗೋಲು ವಿಶೇಷ ಸಂದರ್ಭವಾಗಿತ್ತು.

ಇಂದಿಗೂ ಆಟದಲ್ಲಿ ತಾನೇಕೆ ಅತ್ಯುತ್ತಮ ಎನ್ನುವುದನ್ನು ಲಿಯೊನೆಲ್ ಮೆಸ್ಸಿ ಮತ್ತೊಮ್ಮೆ ಫುಟ್ಬಾಲ್ ಜಗತ್ತಿಗೆ ನೆನಪಿಸಿದ್ದಾರೆ. ಅರ್ಜೆಂಟೀನಾ ನಾಯಕ ಮೆಸ್ಸಿ ಅಲ್ಜೀರಿಯ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದು, ತಮ್ಮ ವೃತ್ತಿ ಜೀವನದ ಮೊದಲ ವಿಶ್ವಕಪ್ ಹ್ಯಾಟ್ರಿಕ್ ಗಳಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಖತರ್ ನಲ್ಲಿ ವಿಶ್ವಕಪ್ ಟ್ರೋಫಿ ಎತ್ತಿದ ನಂತರ ಮೊದಲ ಬಾರಿಗೆ ಹಾಲಿ ವಿಶ್ವ ಚಾಂಪಿಯನ್ ಆಗಿ ವಿಶ್ವಕಪ್ ನಲ್ಲಿ ಆಡುತ್ತಿದ್ದ ಮೆಸ್ಸಿಗೆ ಹ್ಯಾಟ್ರಿಕ್ ಗೋಲು ವಿಶೇಷ ಸಂದರ್ಭವಾಗಿತ್ತು. ನಿರೀಕ್ಷೆಗಳ ಒತ್ತಡದಿಂದ ಬಗ್ಗುವ ಬದಲಾಗಿ ಆ ಕ್ಷಣವನ್ನು ಅಪ್ಪಿಕೊಂಡರು ಮತ್ತು ಸಂದರ್ಭಕ್ಕೆ ತಕ್ಕ ಅತ್ಯುತ್ತಮ ಪ್ರದರ್ಶನ ನೀಡಿದರು. ತೀಕ್ಷ್ಣ, ನಿರ್ಣಾಯಕ ಮತ್ತು ಪ್ರಭಾವಶಾಲಿಯಾಗಿದ್ದ ಮೆಸ್ಸಿ ಆರಂಭದಿಂದ ಅಂತ್ಯದವರೆಗೂ ಅರ್ಜೆಂಟಿನಾ ತಂಡದ ದಾಳಿಯನ್ನು ಮುನ್ನಡೆಸಿದರು. ಇದೀಗ ಮೆಸ್ಸಿಯ ಅದ್ಭುತ ಪ್ರದರ್ಶನ ಇತರ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ವಿಶ್ವಕಪ್ ಕಿರೀಟ ಉಳಿಸಿಕೊಳ್ಳುವಲ್ಲಿ ಮೆಸ್ಸಿ ಪ್ರಮುಖ ಪಾತ್ರ ವಹಿಸುವ ದೃಢನಿಶ್ಚಯವನ್ನು ಮೊದಲ ಪಂದ್ಯದಲ್ಲೇ ಪ್ರಕಟಿಸಿದ್ದಾರೆ.

ಅಲ್ಜೀರಿಯ ವಿರುದ್ಧ ಗೋಲು ಗಳಿಸಿದ ನಂತರ ಮೆಸ್ಸಿ ಕಣ್ಣೀರು ಸುರಿಸುತ್ತಾ ಸಂಭ್ರಮಿಸಿ ಭಾವುಕರಾದರು. ಪಂದ್ಯದ ನಂತರ ಅವರು ತನ್ನ ಹ್ಯಾಟ್ರಿಕ್ ಕ್ಷಣವನ್ನು ಫುಟ್ಬಾಲ್ ಗೆ ಸಂಬಂಧಿಸಿದ್ದಲ್ಲ, ವೈಯಕ್ತಿಕ ಹೋರಾಟಗಳಿಗೆ ಸಂಬಂಧಿಸಿದೆ ಎಂದು ಹೇಳಿದರು.

“ಹೌದು, ನನ್ನ ಮೊದಲ ಗೋಲಿನ ನಂತರ ಕಣ್ಣೀರು ಸುರಿಸಿದ್ದೆ… ಅದು ಫುಟ್ಬಾಲ್ ಗೆ ಸಂಬಂಧಿಸಿದ ಭಾವುಕ ಕ್ಷಣವಾಗಿರಲಿಲ್ಲ. ನಾನು ಕೆಲವು ಕಷ್ಟಕರವಾದ ದಿನಗಳನ್ನು ಅನುಭವಿಸಿದ್ದೆ. ಆದರೆ ಸಂಪೂರ್ಣ ತಂಡ ಮತ್ತು ಸಹ ಆಟಗಾರರಿಗೆ ನಾನು ಚಿರಋಣಿಯಾಗಿದ್ದೇನೆ. ಅವರು ಸದಾ ನನ್ನ ಜೊತೆಗಿದ್ದರು. ನನಗೆ ಬಹಳ ಧೈರ್ಯ ತುಂಬಿದ್ದರು. ನನ್ನ ಕಷ್ಟದ ದಿನಗಳಲ್ಲಿ ಮುಂದೆ ಸಾಗಲು ಸಹಾಯ ಮಾಡಿದ್ದಾರೆ” ಎಂದು ಪಂದ್ಯದ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಮೆಸ್ಸಿ ಹೇಳಿದರು.

ಮೆಸ್ಸಿ ತಮಗೆ ಬೆಂಬಲ ನೀಡಿದ ಅಭಿಮಾನಿಗಳತ್ತಲೂ ಭಾವುಕರಾದರು. ಆರಂಭಿಕ ಪಂದ್ಯಕ್ಕಾಗಿ ಕ್ರೀಡಾಂಗಣವನ್ನು ತುಂಬಿದ್ದ ಸಾವಿರಾರು ಅಭಿಮಾನಿಗಳಿಗೆ ಗೌರವ ಸಲ್ಲಿಸಿದರು. “ಅರ್ಜೆಂಟಿನಾ ತಂಡ ಉಳಿದೆಲ್ಲ ತಂಡಕ್ಕಿಂತ ಭಿನ್ನ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಕ್ಕಾಗಿ ನಾನು ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತೇನೆ, ಅವರು ಮತ್ತೆ ಕ್ರೀಡಾಂಗಣ ತುಂಬಿದ್ದಾರೆ. 80,000 ಅಥವಾ ಅದಕ್ಕಿಂತ ಹೆಚ್ಚು ಪ್ರೇಕ್ಷಕರು ಇದ್ದಾರೋ ತಿಳಿದಿಲ್ಲ” ಎಂದು ಅವರು ಭಾವುಕರಾದರು.

ಆಟವನ್ನು ಇಷ್ಟಪಡುವ ಮೆಸ್ಸಿ:

ಅತ್ಯಾಕರ್ಷಕ ಹ್ಯಾಟ್ರಿಕ್ ಭಾರಿಸಿದ ಮೆಸ್ಸಿ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಜರ್ಮನ್ ದಂತಕತೆ ಮಿರೋಸ್ಲಾವ್ ಕ್ಲೋಸ್ ಅವರ ಸಾಧನೆಯನ್ನು ಸಮಬಲ ಮಾಡಿದ್ದಾರೆ. ತಮ್ಮ ವಿಶ್ವಕಪ್ ಗೋಲುಗಳ ಸಂಖ್ಯೆಯನ್ನು 16ಕ್ಕೆ ಏರಿಸಿದ್ದಾರೆ. ಅರ್ಜೆಂಟಿನಾದ ನಾಯಕ ಮೆಸ್ಸಿ 17ನೇ ನಿಮಿಷದಲ್ಲಿ ಅದ್ಭುತ ಸ್ಟ್ರೈಕ್ ಜೊತೆಗೆ ಲಯವನ್ನು ಸ್ಥಾಪಿಸಿದ್ದರು. ವಿರಾಮದ ನಂತರ ಇನ್ನೂ ಎರಡು ಗೋಲುಗಳನ್ನು ಗಳಿಸಿದರು. ಒಟ್ಟು ವಿಶ್ವಕಪ್ ಸ್ಪರ್ಧಾ ಕಣದಲ್ಲಿ ತಮ್ಮ ಪ್ರಭಾವ ಒತ್ತಿಹೇಳುವ ಕಮಾಂಡಿಂಗ್ ಪ್ರದರ್ಶನವನ್ನು ಮೊದಲ ಪಂದ್ಯದಲ್ಲೇ ನೀಡಿದ್ದಾರೆ.

ಕ್ರೀಡೆಗೆ ಸಂಬಂಧಿಸಿದ ಅತಿ ದೊಡ್ಡ ಸಾಧಕನೆಂಬ ಹಿರಿಮೆಯ ಹೊರತಾಗಿಯೂ ಮೆಸ್ಸಿ ಅವರ ಫುಟ್ಬಾಲ್ ಮೇಲಿನ ಪ್ರೀತಿ ಬದಲಾಗಿಲ್ಲ ಎಂದು ಅವರು ಹೇಳಿದ್ದಾರೆ. “ನನಗೆ ಫುಟ್ಬಾಲ್ ಆಡುವುದು ಬಹಳ ಇಷ್ಟ. ನಾನು ಚಿಕ್ಕವನಿದ್ದಾಗಿನಿಂದ ಅದು ನನ್ನ ಉತ್ಸಾಹ. ನಾನು ಉತ್ತಮ ಫಾರ್ಮ್ನಲ್ಲಿದ್ದಾಗ ಮೈದಾನಕ್ಕೆ ನನ್ನಲ್ಲಿರುವ ಎಲ್ಲವನ್ನೂ ನೀಡುತ್ತೇನೆ” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News