×
Ad

ಇರಾನ್-ಅಮೆರಿಕ ಶಾಂತಿ ಒಪ್ಪಂದಕ್ಕೆ ಜಿನೀವಾ ಆತಿಥ್ಯ: ಅಲ್ಲಿ ಸಹಿಹಾಕಲಾದ ಇತರ ಪ್ರಮುಖ ಒಪ್ಪಂದಗಳು ಯಾವುವು?

Update: 2026-06-17 19:43 IST

Photo Credit : aljazeera.com

ಅಮೆರಿಕ ಮತ್ತು ಇರಾನ್ ದೇಶಗಳು ಶುಕ್ರವಾರ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ನಗರದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಿವೆ. ಇದು ವಾರಗಳ ಕಾಲ ನಡೆದ ಯುದ್ಧಕ್ಕೆ ಅಂತ್ಯ ಹಾಡಲಿದ್ದು, ಮುಂದಿನ 60 ದಿನಗಳ ಮಾತುಕತೆಗೆ ದಾರಿ ಮಾಡಿಕೊಡಲಿದೆ.

ಫೆಬ್ರುವರಿ 28ರಂದು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದಾಗಿನಿಂದ, ಈ ಎರಡು ರಾಷ್ಟ್ರಗಳ ನಡುವೆ ಸಂಧಾನ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಾಕಿಸ್ತಾನ ಈ ಕಾರ್ಯಕ್ರಮದ ಆತಿಥ್ಯ ವಹಿಸಲಿದೆ.

ಜಿನೀವಾದಲ್ಲಿ ನಡೆಯಲಿರುವ ಈ ಸಹಿ ಪ್ರಕ್ರಿಯೆಯ ಸಮಾರಂಭದಲ್ಲಿ ಯುದ್ಧನಿರತ ಎರಡೂ ದೇಶಗಳು ಮತ್ತು ಸಂಧಾನಕಾರರ ಪರವಾಗಿ ಯಾವ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿರುವ ಸ್ಥಳ ಮಾತ್ರ ಅತ್ಯಂತ ಮಹತ್ವದ್ದಾಗಿದೆ.

ಜಗತ್ತಿನ ‘ಶಾಂತಿ ರಾಜಧಾನಿ’ ಎಂದೇ ಕರೆಯಲ್ಪಡುವ ಜಿನೀವಾ ನಗರವು, ಅಂತರರಾಷ್ಟ್ರೀಯ ಮಟ್ಟದ ರಾಜತಾಂತ್ರಿಕ ಪ್ರಯತ್ನಗಳ ಪ್ರಮುಖ ಕೇಂದ್ರವಾಗಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಹಲವು ಐತಿಹಾಸಿಕ ಶಾಂತಿ ಒಪ್ಪಂದಗಳಿಗೆ ಸಾಕ್ಷಿಯಾಗಿದೆ.

Aljazeera ಜತೆ ಮಾತನಾಡಿದ ‘ಜರ್ಮನ್ ಮಾರ್ಷಲ್ ಫಂಡ್ ಆಫ್ ದಿ ಯುನೈಟೆಡ್ ಸ್ಟೇಟ್ಸ್‌’ನ ಗೌರವಾನ್ವಿತ ಸದಸ್ಯ ಇಯಾನ್ ಲೆಸ್ಸರ್, ಈ ನಿರ್ದಿಷ್ಟ ಒಪ್ಪಂದಕ್ಕೆ ಜಿನೀವಾ ನಗರವನ್ನೇ ಆಯ್ಕೆ ಮಾಡಿಕೊಳ್ಳಲು ಹಲವಾರು ಕಾರಣಗಳಿವೆ ಎಂದು ತಿಳಿಸಿದ್ದಾರೆ.

ಸ್ವಿಟ್ಜರ್‌ಲ್ಯಾಂಡ್ ಹೊಂದಿರುವ ತಟಸ್ಥ ನಿಲುವು (ಯಾವುದೇ ದೇಶದ ಪರ ವಹಿಸದಿರುವುದು), ವಿಶ್ವಸಂಸ್ಥೆ ಮತ್ತು ಇತರ ಬಹುರಾಷ್ಟ್ರೀಯ ಸಂಸ್ಥೆಗಳ ಉಪಸ್ಥಿತಿ ಹಾಗೂ ಜಿನೀವಾದಲ್ಲಿರುವ ಅತ್ಯಂತ ಸುರಕ್ಷಿತ ಮತ್ತು ಸೂಕ್ತವಾದ ರಹಸ್ಯ ಸ್ಥಳಗಳು ಇಂತಹ ಒಪ್ಪಂದಗಳಿಗೆ ಈ ನಗರವನ್ನು ಅತ್ಯುತ್ತಮ ತಾಣವನ್ನಾಗಿ ಮಾಡಿವೆ. ಸಾರಿಗೆ ಮತ್ತು ವ್ಯವಸ್ಥಾಪನಾ ದೃಷ್ಟಿಯಿಂದಲೂ ಇದು ಅತ್ಯಂತ ಅನುಕೂಲಕರವಾದ ಸ್ಥಳವಾಗಿದೆ ಎಂದು ಅವರು ಹೇಳಿದ್ದಾರೆ.

►ಜಿನೀವಾದಲ್ಲಿ ಸಹಿ ಹಾಕಲಾದ ಇತರ ಕೆಲವು ಪ್ರಮುಖ ಶಾಂತಿ ಒಪ್ಪಂದಗಳು

►ಜಿನೀವಾ ಒಪ್ಪಂದಗಳು

ಅನಾರೋಗ್ಯ ಪೀಡಿತ ಮತ್ತು ಗಾಯಗೊಂಡ ಸೈನಿಕರನ್ನು ನಡೆಸಿಕೊಳ್ಳುವ ಕುರಿತು ಅಂತರರಾಷ್ಟ್ರೀಯ ನಿಯಮಗಳನ್ನು ರೂಪಿಸಿದ ಮೊದಲ ಜಿನೀವಾ ಒಪ್ಪಂದವು 1864ರ ಆಗಸ್ಟ್ 22ರಂದು ಜಾರಿಯಾಯಿತು. ಸ್ವಿಟ್ಜರ್‌ಲ್ಯಾಂಡ್‌ನ ಉದ್ಯಮಿ ಹೆನ್ರಿ ಡುನಾಂಟ್ ಅವರ ಪ್ರಯತ್ನ ಮತ್ತು ಇಂಟರ್‌ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್ (ICRC) ಸಂಸ್ಥೆಯ ನೆರವಿನಿಂದ ಈ ಒಪ್ಪಂದ ರೂಪುಗೊಂಡಿತು. 1859ರ ಸೋಲ್ಫೆರಿನೊ ಕದನದ (ಎರಡನೇ ಇಟಾಲಿಯನ್ ಸ್ವಾತಂತ್ರ್ಯ ಯುದ್ಧ) ಭೀಕರತೆಯನ್ನು ಕಂಡ ಬಳಿಕ ಈ ನಿಯಮಗಳನ್ನು ಸಿದ್ಧಪಡಿಸಲಾಯಿತು.

ದ್ವಿತೀಯ ಮಹಾಯುದ್ಧ ಮುಗಿದ ಕೆಲವೇ ವರ್ಷಗಳ ಬಳಿಕ, 1949ರ ಆಗಸ್ಟ್ 12ರಂದು 63 ರಾಷ್ಟ್ರಗಳು ಯುದ್ಧದ ಭೀಕರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿಯಮಗಳನ್ನು ಮತ್ತಷ್ಟು ವಿಸ್ತರಿಸಿ ಹೊಸ ಜಿನೀವಾ ಒಪ್ಪಂದಗಳಿಗೆ ಸಹಿ ಹಾಕಿದವು. ಈ ಒಪ್ಪಂದಗಳು ನಾಲ್ಕು ಅಂತರರಾಷ್ಟ್ರೀಯ ಒಡಂಬಡಿಕೆಗಳನ್ನು ಒಳಗೊಂಡಿದ್ದು, ಹೆಚ್ಚುವರಿ ಪ್ರೋಟೋಕಾಲ್‌ಗಳೊಂದಿಗೆ ಇಂದಿನ ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಪ್ರಮುಖ ಆಧಾರವಾಗಿವೆ.

►ಮೊದಲ ಒಪ್ಪಂದ: ಯುದ್ಧಭೂಮಿಯಲ್ಲಿ ಗಾಯಗೊಂಡ ಮತ್ತು ಅನಾರೋಗ್ಯಕ್ಕೆ ಒಳಗಾದ ಸೈನಿಕರ ಪರಿಸ್ಥಿತಿಯನ್ನು ಸುಧಾರಿಸುವ ಕುರಿತಾಗಿದೆ. ICRC ಪ್ರಕಾರ, ಈ ಒಪ್ಪಂದವು ಗಾಯಗೊಂಡವರು ಮತ್ತು ಕಾಯಿಲೆಯಿಂದ ಬಳಲುತ್ತಿರುವವರಿಗೆ ಮಾತ್ರವಲ್ಲದೆ ವೈದ್ಯಕೀಯ ಮತ್ತು ಧಾರ್ಮಿಕ ಸಿಬ್ಬಂದಿ, ವೈದ್ಯಕೀಯ ಘಟಕಗಳು ಹಾಗೂ ವೈದ್ಯಕೀಯ ವಾಹನಗಳಿಗೂ ರಕ್ಷಣೆ ಒದಗಿಸುತ್ತದೆ. ಅಲ್ಲದೆ, ಆಕ್ರಮಿತ ಪ್ರದೇಶಗಳಲ್ಲಿನ ನಾಗರಿಕರ ಮಾನವ ಹಕ್ಕುಗಳ ರಕ್ಷಣೆಯನ್ನೂ ಒಳಗೊಂಡಿದೆ.

►ಎರಡನೇ ಒಪ್ಪಂದ: ಸಮುದ್ರದಲ್ಲಿ ಗಾಯಗೊಂಡ, ಅನಾರೋಗ್ಯಕ್ಕೆ ಒಳಗಾದ ಮತ್ತು ಹಡಗು ಮುಳುಗಿ ಸಂಕಷ್ಟಕ್ಕೆ ಸಿಲುಕಿದ ಸೈನಿಕರ ಪರಿಸ್ಥಿತಿಯನ್ನು ಸುಧಾರಿಸುವ ಕುರಿತಾಗಿದೆ. ಇದು ಸಮುದ್ರದಲ್ಲಿನ ಸೈನಿಕರ ರಕ್ಷಣೆಗೆ ಒತ್ತು ನೀಡುತ್ತದೆ. ಆಸ್ಪತ್ರೆ ಹಡಗುಗಳು, ಕರಾವಳಿ ರಕ್ಷಣಾ ದೋಣಿಗಳು, ವೈದ್ಯಕೀಯ ವಿಮಾನಗಳು ಮತ್ತು ಸಮುದ್ರದಲ್ಲಿನ ಇತರ ವೈದ್ಯಕೀಯ ವಾಹನಗಳು ಹಾಗೂ ನೌಕಾಪಡೆಯ ಧಾರ್ಮಿಕ ಮತ್ತು ವೈದ್ಯಕೀಯ ಸಿಬ್ಬಂದಿಗೆ ವಿಶೇಷ ರಕ್ಷಣೆ ಒದಗಿಸುತ್ತದೆ.

►ಮೂರನೇ ಒಪ್ಪಂದ: ಯುದ್ಧ ಕೈದಿಗಳನ್ನು ನಡೆಸಿಕೊಳ್ಳುವ ವಿಧಾನಕ್ಕೆ ಸಂಬಂಧಿಸಿದೆ. ಯುದ್ಧ ಮುಗಿದ ತಕ್ಷಣವೇ ಯಾವುದೇ ವಿಳಂಬವಿಲ್ಲದೆ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ಕಳುಹಿಸಬೇಕು ಎಂಬ ತತ್ವವನ್ನು ಪ್ರತಿಪಾದಿಸುತ್ತದೆ.

►ನಾಲ್ಕನೇ ಒಪ್ಪಂದ: ಯುದ್ಧದ ಸಮಯದಲ್ಲಿ ಸಾಮಾನ್ಯ ನಾಗರಿಕರ ರಕ್ಷಣೆಗೆ ಸಂಬಂಧಿಸಿದೆ. ಎರಡು ಅಥವಾ ಹೆಚ್ಚಿನ ದೇಶಗಳ ನಡುವಿನ ಸಶಸ್ತ್ರ ಸಂಘರ್ಷಗಳು ಹಾಗೂ ಆಕ್ರಮಿತ ಪ್ರದೇಶಗಳಲ್ಲಿನ ನಾಗರಿಕರ ರಕ್ಷಣೆಗೆ ಇದು ಅನ್ವಯಿಸುತ್ತದೆ. ಕೆಲವು ಸಂದರ್ಭಗಳಲ್ಲಿ ದೇಶದೊಳಗಿನ ಸಶಸ್ತ್ರ ಸಂಘರ್ಷಗಳಿಗೂ ಇದರ ತತ್ವಗಳು ಮಾರ್ಗದರ್ಶಕವಾಗಿವೆ.

►ಜಿನೀವಾ ಒಪ್ಪಂದಗಳು – 1954

ಇವು ಡಿಸೆಂಬರ್ 1946ರಿಂದ ಆಗಸ್ಟ್ 1954ರವರೆಗೆ ಫ್ರಾನ್ಸ್ ಮತ್ತು ವಿಯೆಟ್ನಾಂನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವಿಯೆಟ್ ಮಿನ್ಹ್ ಪಡೆಗಳ ನಡುವಿನ ಮೊದಲ ಇಂಡೋಚೈನಾ ಯುದ್ಧವನ್ನು ಕೊನೆಗೊಳಿಸಲು ರೂಪಿಸಲಾದ ಸರಣಿ ಒಪ್ಪಂದಗಳಾಗಿವೆ.

1954ರ ಜುಲೈ 20–21ರಂದು ಜಿನೀವಾದಲ್ಲಿ ಕಾಂಬೋಡಿಯಾ, ಲಾವೋಸ್, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಅಮೆರಿಕ, ಸೋವಿಯತ್ ಯೂನಿಯನ್, ಚೀನಾ ಹಾಗೂ ನಂತರ ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ ಎಂದು ಕರೆಯಲ್ಪಟ್ಟ ಪ್ರದೇಶಗಳ ಪ್ರತಿನಿಧಿಗಳು ಈ ಒಪ್ಪಂದಗಳಿಗೆ ಸಹಿ ಹಾಕಿದರು.

ಈ ಒಪ್ಪಂದಗಳು ಇಂಡೋಚೈನಾದಲ್ಲಿನ ಫ್ರೆಂಚ್ ವಸಾಹತುಶಾಹಿ ಆಡಳಿತವನ್ನು ಕೊನೆಗೊಳಿಸಲು ಮತ್ತು ವಿಯೆಟ್ನಾಂ, ಲಾವೋಸ್ ಹಾಗೂ ಕಾಂಬೋಡಿಯಾಗಳಿಗೆ ಸ್ವಾತಂತ್ರ್ಯ ದೊರಕಲು ನೆರವಾದವು. ಆದರೆ, ಇದೇ ವೇಳೆ ವಿಯೆಟ್ನಾಂ ಅನ್ನು 17ನೇ ಅಕ್ಷಾಂಶ ರೇಖೆಯ ಆಧಾರದ ಮೇಲೆ ತಾತ್ಕಾಲಿಕವಾಗಿ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಭಜಿಸಲಾಯಿತು. 1956ರಲ್ಲಿ ಮರುಏಕೀಕರಣಕ್ಕಾಗಿ ಚುನಾವಣೆ ನಡೆಸುವ ಪ್ರಸ್ತಾವವನ್ನೂ ಒಳಗೊಂಡಿದ್ದವು.

►ಇಸ್ರೇಲ್–ಸಿರಿಯಾ ಪಡೆಗಳ ವಾಪಸಾತಿ ಒಪ್ಪಂದ

1974ರ ಮೇ 31ರಂದು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು 1973ರ ಯೋಮ್ ಕಿಪ್ಪುರ್ ಯುದ್ಧದ ಬಳಿಕ ಇಸ್ರೇಲ್ ಮತ್ತು ಸಿರಿಯಾ ನಡುವಿನ ಸಂಘರ್ಷವನ್ನು ತಗ್ಗಿಸಲು ನೆರವಾಯಿತು.

ಈ ಒಪ್ಪಂದವು ಎರಡೂ ದೇಶಗಳ ನಡುವೆ ಪ್ರತ್ಯೇಕ ವಲಯವನ್ನು ಸೃಷ್ಟಿಸಿತು. ಪಡೆಗಳ ವಾಪಸಾತಿ ಮತ್ತು ಯುದ್ಧ ಕೈದಿಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿತು.

1973ರ ಅಕ್ಟೋಬರ್ 22ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 338 ಅನ್ನು ಜಾರಿಗೆ ತರುವ ಭಾಗವಾಗಿ, ಉಭಯ ದೇಶಗಳು ಭೂಮಿ, ಸಮುದ್ರ ಮತ್ತು ವಾಯುಮಾರ್ಗಗಳಲ್ಲಿ ಕದನ ವಿರಾಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಪರಸ್ಪರರ ವಿರುದ್ಧ ಮಿಲಿಟರಿ ಕ್ರಮಗಳಿಂದ ದೂರವಿರಲು ಒಪ್ಪಿಕೊಂಡವು.

ಈ ಒಪ್ಪಂದದ ಅನ್ವಯ ಬಫರ್ ವಲಯದಲ್ಲಿ ಶಾಂತಿ ಕಾಪಾಡಲು ವಿಶ್ವಸಂಸ್ಥೆಯ ವೀಕ್ಷಕ ಪಡೆಯನ್ನು ನಿಯೋಜಿಸಲಾಯಿತು.

►ಈಜಿಪ್ಟ್–ಇಸ್ರೇಲ್ ಒಪ್ಪಂದ

‘ಸಿನಾಯ್ II ಒಪ್ಪಂದ’ ಎಂದೂ ಕರೆಯಲ್ಪಡುವ ಈ ತಾತ್ಕಾಲಿಕ ಒಪ್ಪಂದಕ್ಕೆ 1975ರ ಸೆಪ್ಟೆಂಬರ್ 4ರಂದು ಜಿನೀವಾದಲ್ಲಿ ಈಜಿಪ್ಟ್ ಮತ್ತು ಇಸ್ರೇಲ್ ಸಹಿ ಹಾಕಿದವು. ಅಂದಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಮಧ್ಯಸ್ಥಿಕೆ ವಹಿಸಿದ್ದರು.

ಯೋಮ್ ಕಿಪ್ಪುರ್ ಯುದ್ಧದ ನಂತರ ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿ ಸ್ಥಾಪನೆಯತ್ತ ಇದು ಮೊದಲ ಹೆಜ್ಜೆಯೆಂದು ಪರಿಗಣಿಸಲಾಗಿದೆ.

ಒಪ್ಪಂದದ ಪ್ರಕಾರ, ಉಭಯ ರಾಷ್ಟ್ರಗಳು ಪರಸ್ಪರರ ವಿರುದ್ಧ ಬಲಪ್ರಯೋಗ, ಬೆದರಿಕೆ ಅಥವಾ ಮಿಲಿಟರಿ ದಿಗ್ಬಂಧನ ಬಳಸಬಾರದು ಎಂದು ಒಪ್ಪಿಕೊಂಡವು. ಕದನ ವಿರಾಮವನ್ನು ಮುಂದುವರಿಸಲು ಮತ್ತು ಯಾವುದೇ ಮಿಲಿಟರಿ ಅಥವಾ ಅರೆಸೇನಾ ಕ್ರಮಗಳನ್ನು ಕೈಗೊಳ್ಳದಿರಲು ಸಮ್ಮತಿಸಿದವು.

ಇಸ್ರೇಲ್, ಸಿನಾಯ್ ಪ್ರದೇಶದಲ್ಲಿನ ಕೆಲವು ಭಾಗಗಳಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿತು. ತೆರವುಗೊಳಿಸಲಾದ ಪ್ರದೇಶದಲ್ಲಿ ವಿಶ್ವಸಂಸ್ಥೆಯ ಮೇಲ್ವಿಚಾರಣೆಯ ಬಫರ್ ವಲಯ ರಚಿಸಲಾಯಿತು. ಜೊತೆಗೆ, ಸೂಯೆಜ್ ಕಾಲುವೆಯನ್ನು ಇಸ್ರೇಲ್‌ನ ವಾಣಿಜ್ಯ ಹಡಗುಗಳಿಗೆ ಮುಕ್ತಗೊಳಿಸುವುದು ಮತ್ತು ಕೆಲವು ಪ್ರದೇಶಗಳಲ್ಲಿ ಅಮೆರಿಕದ ಮುನ್ಸೂಚನಾ ಕೇಂದ್ರಗಳನ್ನು ಸ್ಥಾಪಿಸುವ ವಿಚಾರಗಳನ್ನೂ ಒಳಗೊಂಡಿತ್ತು.

►ಜಿನೀವಾ ಒಪ್ಪಂದಗಳು – 1988

ಅಫ್ಘಾನಿಸ್ತಾನದಲ್ಲಿನ ಸೋವಿಯತ್ ಯೂನಿಯನ್‌ನ ಯುದ್ಧವನ್ನು ಕೊನೆಗೊಳಿಸಲು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ರೂಪಿಸಲಾದ ಸರಣಿ ಒಪ್ಪಂದಗಳಿವು. 1988ರ ಏಪ್ರಿಲ್ 14ರಂದು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಈ ಒಪ್ಪಂದಗಳಿಗೆ ಸಹಿ ಹಾಕಿದರೆ, ಸೋವಿಯತ್ ಯೂನಿಯನ್ ಮತ್ತು ಅಮೆರಿಕ ಜಾಮೀನು ರಾಷ್ಟ್ರಗಳಾಗಿದ್ದವು.

ಈ ಒಪ್ಪಂದಗಳ ಪರಿಣಾಮವಾಗಿ ಸೋವಿಯತ್ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂತೆಗೆದವು. ಯುದ್ಧದ ವೇಳೆ ದೇಶ ತೊರೆದಿದ್ದ ಅಫ್ಘಾನ್ ನಿರಾಶ್ರಿತರು ಸ್ವದೇಶಕ್ಕೆ ಮರಳಲು ಸಹ ಅವಕಾಶ ದೊರಕಿತು.

►ಜಿನೀವಾ ಒಪ್ಪಂದ – 1991

1991ರ ನವೆಂಬರ್‌ನಲ್ಲಿ ಕ್ರೊಯೇಷಿಯಾ, ಸರ್ಬಿಯಾ ಮತ್ತು ಅಂದಿನ ಯುಗೊಸ್ಲಾವಿಯಾ ‘ವ್ಯಾನ್ಸ್ ಪ್ಲಾನ್’ ಎಂದು ಕರೆಯಲ್ಪಡುವ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದವು.

ಕ್ರೊಯೇಷಿಯಾದ ಸಶಸ್ತ್ರ ಪಡೆಗಳು, ಸರ್ಬಿಯಾ ನಿಯಂತ್ರಣದಲ್ಲಿದ್ದ ಯುಗೊಸ್ಲಾವ್ ಪೀಪಲ್ಸ್ ಆರ್ಮಿ (JNA) ಮತ್ತು ಸ್ಥಳೀಯ ಸರ್ಬ್ ಪಡೆಗಳ ನಡುವಿನ ಕ್ರೊಯೇಷಿಯಾ ಸ್ವಾತಂತ್ರ್ಯ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಸೈರಸ್ ವ್ಯಾನ್ಸ್ ಮಧ್ಯಸ್ಥಿಕೆ ವಹಿಸಿದ್ದರು.

ಈ ಒಪ್ಪಂದವು ತಕ್ಷಣವೇ ಕದನವನ್ನು ನಿಲ್ಲಿಸಲು, ಯುಗೊಸ್ಲಾವ್ ಸೇನಾ ಶಿಬಿರಗಳ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸಲು ಮತ್ತು ಜೆಎನ್‌ಎ ಪಡೆಗಳನ್ನು ಕ್ರೊಯೇಷಿಯಾದಿಂದ ಹಿಂತೆಗೆದುಕೊಳ್ಳಲು ಕರೆ ನೀಡಿತು.

►ಜಿನೀವಾ ಒಪ್ಪಂದ – 2003

‘ಜಿನೀವಾ ಇನಿಶಿಯೇಟಿವ್’ ಎಂದು ಕರೆಯಲ್ಪಡುವ ಈ ಕರಡು ಒಪ್ಪಂದವು ಇಸ್ರೇಲ್–ಫೆಲೆಸ್ತೀನ್ ಸಂಘರ್ಷಕ್ಕೆ ‘ದ್ವಿ-ರಾಷ್ಟ್ರ ಪರಿಹಾರ’ದ ಆಧಾರದ ಮೇಲೆ ರೂಪಿಸಲಾದ ಶಾಂತಿ ಯೋಜನೆಯಾಗಿದೆ.

ಇಸ್ರೇಲ್ ಮತ್ತು ಫೆಲೆಸ್ತೀನ್‌ನ ಮಾಜಿ ಹಾಗೂ ಹಾಲಿ ರಾಜಕೀಯ ನಾಯಕರಿಂದ ಸಿದ್ಧಪಡಿಸಲಾದ ಈ ಪ್ರಸ್ತಾವನೆಗೆ 2003ರ ಅಕ್ಟೋಬರ್‌ ನಲ್ಲಿ ಸ್ವಿಟ್ಜರ್‌ಲ್ಯಾಂಡ್ ಸರ್ಕಾರ ಬೆಂಬಲ ನೀಡಿತು. ಅದನ್ನು ಡಿಸೆಂಬರ್‌ ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

ಈ ಯೋಜನೆಯ ಪ್ರಮುಖ ಅಂಶಗಳು:

• ಫೆಲೆಸ್ತೀನ್ ನಿರಾಶ್ರಿತರ ‘ಮರಳುವ ಹಕ್ಕು’ ಪ್ರಶ್ನೆಗೆ ನಿರ್ದಿಷ್ಟ ಪರಿಹಾರ ರೂಪಿಸುವುದು.

• ಜೆರುಸಲೆಮ್ ನಗರವನ್ನು ವಿಭಜಿಸಿ, ಅಲ್-ಅಕ್ಸಾ ಮಸೀದಿ ಆವರಣದ ನಿಯಂತ್ರಣವನ್ನು ಫೆಲೆಸ್ತೀನಿಯರಿಗೆ ನೀಡುವುದು.

• ಯಹೂದಿಗಳು ‘ವೆಸ್ಟರ್ನ್ ವಾಲ್’ ಎಂದು ಕರೆಯುವ ಅಲ್-ಬುರಾಕ್ ಗೋಡೆಯ ಮೇಲಿನ ನಿಯಂತ್ರಣವನ್ನು ಇಸ್ರೇಲ್‌ ಗೆ ನೀಡುವುದು.

• ಜೆರುಸಲೆಮ್ ಅನ್ನು ಇಸ್ರೇಲ್ ಮತ್ತು ಫೆಲೆಸ್ತೀನ್ ಎರಡೂ ರಾಷ್ಟ್ರಗಳ ರಾಜಧಾನಿಯನ್ನಾಗಿ ಪರಿಗಣಿಸುವುದು.

• ಕೆಲವು ಯಹೂದಿ ವಸಾಹತುಗಳನ್ನು ಇಸ್ರೇಲ್‌ ಗೆ ಸೇರಿಸುವುದು ಹಾಗೂ ಉಳಿದ ಬಹುತೇಕ ವಸಾಹತುಗಳನ್ನು ತೆರವುಗೊಳಿಸುವುದು.

ಆದರೂ, ಈ ಯೋಜನೆಯನ್ನು ಇಸ್ರೇಲ್ ಅಥವಾ ಫೆಲೆಸ್ತೀನ್ ಸರ್ಕಾರಗಳು ಅಧಿಕೃತವಾಗಿ ಅಂಗೀಕರಿಸಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News