ಕೋಡಿಂಗ್ ಜಗತ್ತಿನಲ್ಲಿ ಸ್ಪೇಸ್ಎಕ್ಸ್: AI ಕೋಡಿಂಗ್ ಸ್ಟಾರ್ಟ್ಅಪ್ Cursor ಮೇಲೆ ಭಾರೀ ಹೂಡಿಕೆಗೆ ಕಾರಣವೇನು!
Photo Credit : X \ SpaceX
ಕರ್ಸರ್ AI ಕೋಡಿಂಗ್ ಸಾಧನವೂ ಸಾಫ್ಟ್ವೇರ್ ಡೆವಲಪರ್ಗಳಿಗೆ ಕೋಡ್ ಉತ್ಪಾದಿಸಲು, ಸಂಪಾದಿಸಲು ಮತ್ತು ವಿಶ್ಲೇಷಿಸಲು ನೆರವಾಗುತ್ತಿದೆ.
ಅಗರ್ಭ ಶ್ರೀಮಂತ ಎಲಾನ್ ಮಕ್ಸ್ ನೇತೃತ್ವದ SpaceX ಕಳೆದ ಎಪ್ರಿಲ್ ನಲ್ಲಿ ಅನೀಸ್ಪಿಯರ್ (Anysphere) ಕಂಪನಿ ಜೊತೆಗೆ ಘೋಷಿಸಿದ ಪಾಲುದಾರಿಕೆಯ ನಂತರ ಇದೀಗ ಅದರ AI ಕೋಡಿಂಗ್ ಸ್ಟಾರ್ಟ್ಅಪ್ ಕರ್ಸರ್ (Cursor) ಅನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಒಟ್ಟು 60 ಶತಕೋಟಿ ಡಾಲರ್ ಮೌಲ್ಯದ ಎಲ್ಲಾ ಷೇರುಗಳ ಸ್ವಾಧೀನ ಒಪ್ಪಂದದಲ್ಲಿ ಈ ವ್ಯವಹಾರ ಕುದುರಿಸಲಾಗಿದೆ. ಯಾವುದೇ ಕಾರಣದಿಂದ ಒಪ್ಪಂದ ವಿಫಲವಾದರೆ SpaceX ಕರ್ಸರ್ ಗೆ 1.5 ಶತಕೋಟಿ ಡಾಲರ್ ಟರ್ಮಿನೇಶನ್ ಶುಲ್ಕ ಮತ್ತು 8.5 ಶತಕೋಟಿ ಡಾಲರ್ ಕಂಪ್ಯೂಟಿಂಗ್ ಸಂಪನ್ಮೂಲದಲ್ಲಿ ನೀಡುವುದಾಗಿ ಹೇಳಿಕೊಂಡಿದೆ.
ಈ ಸ್ವಾಧೀನದ ಸುದ್ದಿಯ ನಂತರ ಮಂಗಳವಾರ SpaceX ಷೇರುಗಳು ಶೇ 16ರಷ್ಟು ಏರಿಕೆ ಕಂಡಿವೆ. ಆದರೆ ಈ AI ಕೋಡಿಂಗ್ ಸ್ಟಾರ್ಟಪ್ ಗಾಗಿ SpaceX 60 ಶತಕೋಟಿ ಡಾಲರ್ ಪಾವತಿಸುತ್ತಿರುವುದೇಕೆ? AI ಕೋಡಿಂಗ್ ಸಾಧನಗಳು ಪ್ರೋಗ್ರಾಮರ್ ಗಳು ಮತ್ತು ಡೆವಲಪರ್ ಗಳಿಗೆ ಪ್ರಾಂಪ್ಟ್ ಮಾಡುವ ಮೂಲಕ ಕೋಡ್ ರಚಿಸಲು ಸಹಾಯ ಮಾಡುತ್ತವೆ. Anthropic ಕಂಪನಿಯ ಯಶಸ್ವೀ ಕ್ಲೌಡೆ ಕೋಡ್ ಅಂತಹುದೇ ಕೆಲಸ ಮಾಡುತ್ತಿದ್ದು, AI ಸ್ಟಾರ್ಟಪ್ ಕಂಪನಿಯು ಕಳೆದ ವರ್ಷದ ಎಪ್ರಿಲ್ ನಲ್ಲಿ 9 ಶತಕೋಟಿ ಡಾಲರ್ ವಾರ್ಷಿಕ ಆದಾಯದಿಂದ ಈ 2026 ಮೇನಲ್ಲಿ 47 ಶತಕೋಟಿ ಡಾಲರ್ ಗೆ ವಾರ್ಷಿಕ ಆದಾಯಕ್ಕೆ ಏರುವಂತೆ ಮಾಡಿದೆ. 2026 ಜೂನ್ ನಲ್ಲಿ ಈ AI ಕೋಡಿಂಗ್ ಸಹಾಯಕವನ್ನು ಸಾಪ್ತಾಹಿಕ 5 ದಶಲಕ್ಷ ಸಕ್ರಿಯ ಬಳಕೆದಾರರು ಬಳಸುತ್ತಿದ್ದಾರೆ.
ಅದೇ ರೀತಿ ಕರ್ಸರ್ AI ಕೋಡಿಂಗ್ ಸಾಧನವೂ ಸಾಫ್ಟ್ವೇರ್ ಡೆವಲಪರ್ಗಳಿಗೆ ಕೋಡ್ ಉತ್ಪಾದಿಸಲು, ಸಂಪಾದಿಸಲು ಮತ್ತು ವಿಶ್ಲೇಷಿಸಲು ನೆರವಾಗುತ್ತಿದೆ. ಭಾರತೀಯ ಮೂಲದ 25 ವರ್ಷದ ಅಮನ್ ಸಾಂಗರ್ ಮತ್ತು ಮಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪದವೀದರರು 2022ರಲ್ಲಿ ಇದನ್ನು ಸ್ಥಾಪಿಸಿದ್ದರು. ಅಂದಿನಿಂದ ಅತ್ಯುತ್ತಮ ಲಾಭ ಗಳಿಸಿರುವ ಕರ್ಸರ್ನ ಆದಾಯ 2026 ಫೆಬ್ರವರಿಯಲ್ಲಿ 2 ಶತಕೋಟಿ ಡಾಲರ್ ದಾಟಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
Google, Anthropic ಮತ್ತು OpenAI ಸಮಕ್ಕೆ ನಿಲ್ಲುವ ಶಕ್ತಿ ಪ್ರದರ್ಶಿಸಿದ ಕೆಲವೇ AI ಕೋಡಿಂಗ್ ಸ್ಟಾರ್ಟಪ್ಗಳಲ್ಲಿ ಕರ್ಸರ್ ಕೂಡ ಸೇರಿದೆ. ಆದರೆ 2025 ಜೂನ್ನಲ್ಲಿ ಶೇ 41ರಷ್ಟಿದ್ದ ಅದರ ಮಾರುಕಟ್ಟೆ ಈ ವರ್ಷ ಮೇನಲ್ಲಿ ಶೇ 26ಕ್ಕೆ ಕುಸಿದಿದೆ. Anthropic ಕ್ಷೇತ್ರದಲ್ಲಿ ಶೇ 50ರಷ್ಟು ಪಾಲನ್ನು ಪಡೆದು ಪ್ರಾಬಲ್ಯ ಪ್ರದರ್ಶಿಸಿದೆ.
360,000 ಪಾವತಿಸಿದ ಚಂದಾದಾರರಿರುವ ಜೊತೆಗೆ ಒಂದು ದಶಲಕ್ಷ ನಿತ್ಯದ ಗ್ರಾಹಕರು ಕರ್ಸರ್ ಬಳಸುತ್ತಿದ್ದಾರೆ. ಭಾರತ ಕರ್ಸರ್ ನ ಎರಡನೇ ಅಥವಾ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಅದರ ಗ್ರಾಹಕರ ಪಟ್ಟಿಯಲ್ಲಿ ಬ್ರಿಟಿಷ್ ಏರ್ವೇಸ್, ಬಿಪಿ, ನೋಕಿಯ ಮತ್ತು ಸನೋಫಿ ಮೊದಲಾದವರಿದ್ದಾರೆ.
ಒಪ್ಪಂದದ ಪರಿಣಾಮವೇನಾಗಲಿದೆ?
SpaceX ಸ್ವಾಧೀನದ ನಂತರ ಕರ್ಸರ್ ಟೆನ್ನೆಸ್ಸೀಯದ ಮೆಂಫಿಸ್ನಲ್ಲಿರುವ xAIನ ಕೊಲೊಸಸ್ ತರಬೇತಿ ಮೂಲಸೌಕರ್ಯದೊಂದಿಗೆ ತನ್ನ IDE ಮತ್ತು ಕಂಪೋಸರ್ ಮಾಡೆಲ್ಗಳನ್ನು ವಿಸ್ತರಿಸಲು ಅನುವು ಮಾಡಿಕೊಡಬಹುದು. ಕಂಪೋಸರ್ 2 ಬಿಡುಗಡೆ ನಂತರ ಕಂಪನಿ ಗುರುತಿಸಿದ ಕಂಪ್ಯೂಟ್ ಸಮಸ್ಯೆಯು ಪಾಲುದಾರಿಕೆಯ ನಂತರ ಪರಿಹಾರವಾಗಲಿದೆ ಎಂದು ಕರ್ಸರ್ ಹೇಳಿಕೊಂಡಿದೆ. “ಕಂಪೋಸರ್ ವಿಸ್ತರಣೆಗೆ SpaceX ಜೊತೆಗೆ ಪಾಲುದಾರಿಕೆ ಘೋಷಿಸಲು ಉತ್ಸಾಹವೆನಿಸುತ್ತಿದೆ” ಎಂದು ಕರ್ಸರ್ ಸಿಇಒ ಮೈಕೆಲ್ ಟ್ರುವೆಲ್ ಹೇಳಿದ್ದಾರೆ.
ಮುಖ್ಯವಾಗಿ Anthropic ಅಗ್ಗದ ಬೆಲೆಯೊಂದಿಗೆ ಕರ್ಸರ್ ಗೆ ಮಾರುಕಟ್ಟೆಯಲ್ಲಿ ಸವಾಲು ಒಡ್ಡುತ್ತಿತ್ತು. ಇದೀಗ ಸ್ವಾಧೀನದ ನಂತರ ಮಾರುಕಟ್ಟೆಯ ಅಡೆತಡೆ ಎದುರಿಸಲು ಕರ್ಸರ್ ಸಿದ್ಧವಾಗಿದೆ. ಕರ್ಸರ್ ನ ವಿಶಿಷ್ಟತೆ ಎಂದರೆ ಅದರ AI ಕೋಡಿಂಗ್ ಪ್ಲಾಟ್ಫಾರ್ಮ್ ಅಗ್ನೊಸ್ಟಿಕ್ ಆಗಿದೆ. ಅಂದರೆ ಗ್ರಾಹಕರಿಗೆ ವಿವಿಧ ಮಾಡೆಲ್ ಗಳಿಂದ ಆಯ್ಕೆಯನ್ನು ನೀಡುತ್ತದೆ. ಕರ್ಸರ್ ನ ಶೂನ್ಯ ಡಾಟಾ ಧಾರಣ ವ್ಯವಸ್ಥೆ ಮತ್ತು ಮಲ್ಟಿ-ಮಾಡೆಲ್ ತಟಸ್ಥತೆಯಿಂದಾಗಿ ಗ್ರಾಹಕರು ಕರ್ಸರ್ ನತ್ತ ಒಲವು ತೋರುತ್ತಿದ್ದಾರೆ.
SpaceX ತನ್ನ AI ವಿಭಾಗದಲ್ಲಿ ಪ್ರತಿಸ್ಪರ್ಧಿಗಳಿಂದ ಹಿಂದುಳಿದಿದೆ. ಇದೀಗ ಕರ್ಸರ್ ಸ್ವಾಧೀನದಿಂದ ಸಮಬಲದ ಸ್ಪರ್ಧೆ ನೀಡಲು ಸಾಧ್ಯವಾಗಲಿದೆ.