ಅಂದು ಅಮೆರಿಕದ ರಾಯಭಾರ ಕಚೇರಿಯ ಬ್ಯಾರಿಕೇಡ್ ಕಿತ್ತೊಗೆದಿದ್ದ ಭಾರತ: 2013ರ ಆ ಘಟನೆ 2026ರಲ್ಲಿ ಮತ್ತೆ ನೆನಪಾಗುತ್ತಿರುವುದೇಕೆ?
Photo Credit : indiatoday.in
2013 ಡಿಸೆಂಬರ್ ನಲ್ಲಿ ಭಾರತ ಮತ್ತು ಅಮೆರಿಕ ನಡುವೆ ಅತ್ಯಂತ ದೊಡ್ಡ ರಾಜತಾಂತ್ರಿಕ ಸಂಘರ್ಷ ನಡೆದಿತ್ತು. ನ್ಯೂಯಾರ್ಕ್‌ನಲ್ಲಿ ಭಾರತದ ಡೆಪ್ಯುಟಿ ಕಾನ್ಸುಲ್ ಜನರಲ್ ಆಗಿದ್ದ ದೇವಯಾನಿ ಖೋಬ್ರಾಗಡೆ ಅವರನ್ನು ಅಮೆರಿಕದ ಫೆಡರಲ್ ಏಜೆಂಟರು ಬಂಧಿಸಿದ್ದು ಈ ವಿವಾದಕ್ಕೆ ಕಾರಣವಾಗಿತ್ತು. ತಮ್ಮ ಮನೆ ಕೆಲಸ ಸಹಾಯಕಿಗೆ ವೀಸಾ ಕೊಡಿಸುವಲ್ಲಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಆದರೆ, ಇದು ಕೇವಲ ಒಂದು ಕಾನೂನು ಜಗಳವಾಗಿ ಉಳಿಯದೆ ದೊಡ್ಡ ರಾಜತಾಂತ್ರಿಕ ಬಿಕ್ಕಟ್ಟಾಗಿ ಬದಲಾಗಲು ಕಾರಣ, ಅಮೆರಿಕ ಅಧಿಕಾರಿಗಳು ಅವರನ್ನು ಬಂಧಿಸಿದ ರೀತಿ.
ಖೋಬ್ರಾಗಡೆ ಅವರನ್ನು ಅವರ ಮಗಳ ಶಾಲೆಯ ಹೊರಗಡೆಯೇ ಕೈಕೋಳ ತೊಟ್ಟು ಬಂಧಿಸಲಾಗಿತ್ತು. ಅಷ್ಟೇ ಅಲ್ಲದೆ, ಯುಎಸ್ ಮಾರ್ಷಲ್ಸ್ ಸೇವೆಯ ಅಧಿಕಾರಿಗಳು ಅವರನ್ನು ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸಿದ್ದರು. ನಂತರ ಸಾಮಾನ್ಯ ಅಪರಾಧಿಗಳು ಮತ್ತು ಡ್ರಗ್ಸ್ ವ್ಯಸನಿಗಳಿರುವ ಸೆಲ್‌ನಲ್ಲಿ ಇರಿಸಿದ್ದರು. ಬಂಧಿತರನ್ನು ತಪಾಸಣೆ ನಡೆಸುವ ಸಾಮಾನ್ಯ ನಿಯಮದಂತೆಯೇ ಇವರನ್ನೂ ನಡೆಸಿಕೊಳ್ಳಲಾಗಿದೆ ಎಂದು ಅಮೆರಿಕ ಅಧಿಕಾರಿಗಳು ನಂತರ ಸಮರ್ಥಿಸಿಕೊಂಡರು. ಆದರೆ, ಈ ವಿವರಣೆಯಿಂದ ಭಾರತದ ಆಕ್ರೋಶ ಕಡಿಮೆಯಾಗಲಿಲ್ಲ. ಬದಲಿಗೆ ಇದು ತಮಗಾದ ದೊಡ್ಡ ಅವಮಾನ ಎಂದು ಭಾರತ ಭಾವಿಸಿತು.
ಇದಕ್ಕೆ ಭಾರತ ಅತ್ಯಂತ ವೇಗವಾಗಿ ಮತ್ತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು. ಭಾರತದ ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ (NSA) ಶಿವಶಂಕರ್ ಮೆನನ್, ಅಮೆರಿಕದ ಈ ವರ್ತನೆಯನ್ನು "ಹೇಯ ಮತ್ತು ಅನಾಗರಿಕ" ಎಂದು ಬಹಿರಂಗವಾಗಿ ಖಂಡಿಸಿದರು.
ಕೂಡಲೇ ಭಾರತ ಸರ್ಕಾರವು ಅಮೆರಿಕದ ಕಾನ್ಸುಲರ್ ಸಿಬ್ಬಂದಿಗೆ ನೀಡಲಾಗಿದ್ದ ವಿಮಾನ ನಿಲ್ದಾಣದ ಪಾಸ್‌ಗಳು ಮತ್ತು ರಾಜತಾಂತ್ರಿಕ ಸವಲತ್ತುಗಳನ್ನು ರದ್ದುಗೊಳಿಸಿತು. ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ಕೋಲ್ಕತ್ತಾದಲ್ಲಿರುವ ಯುಎಸ್ ರಾಯಭಾರ ಕಚೇರಿಯ ಸಿಬ್ಬಂದಿಗೆ ನೀಡಲಾಗಿದ್ದ ಗುರುತಿನ ಚೀಟಿಗಳನ್ನು ಹಿಂಪಡೆಯಿತು. ಅಷ್ಟೇ ಅಲ್ಲದೆ, ಹೊಸದಿಲ್ಲಿಯ ಅಮೆರಿಕನ್ ಎಂಬಸಿ ಶಾಲೆಯ ನೌಕರರ ವೀಸಾ ವ್ಯವಸ್ಥೆಗಳ ಬಗ್ಗೆಯೂ ಕಠಿಣ ತನಿಖೆ ಆರಂಭಿಸಿತು.
ಈ ಎಲ್ಲಾ ಕ್ರಮಗಳ ನಡುವೆ ಅತ್ಯಂತ ಗಮನ ಸೆಳೆದ ಕ್ರಮವೆಂದರೆ ದಿಲ್ಲಿಯಲ್ಲಿದ್ದ ಅಮೆರಿಕ ರಾಯಭಾರ ಕಚೇರಿಯ ಮುಖ್ಯ ದ್ವಾರದ ಮುಂದಿದ್ದ ಕಾಂಕ್ರೀಟ್ ಭದ್ರತಾ ಬ್ಯಾರಿಕೇಡ್‌ಗಳನ್ನು ಭಾರತೀಯ ಅಧಿಕಾರಿಗಳು ಜೆಸಿಬಿಗಳ ಮೂಲಕ ತೆರವುಗೊಳಿಸಿದರು.
ಭಾರತದ ಈ ನಡೆಯು ರಾಜತಾಂತ್ರಿಕ ಸಂಬಂಧಗಳಲ್ಲಿ 'ಪರಸ್ಪರ ಗೌರವದ' ನೀತಿಯನ್ನು ಗಟ್ಟಿಯಾಗಿ ಪ್ರತಿಪಾದಿಸಿದಂತೆ ಇತ್ತು. ಸಾರ್ವಭೌಮ ರಾಷ್ಟ್ರಗಳ ನಡುವಿನ ಗೌರವ ಎಂಬುದು ಕೇವಲ ಒಂದು ಕಡೆಯಿಂದ ಮಾತ್ರ ಬರಲು ಸಾಧ್ಯವಿಲ್ಲ ಎಂಬುದನ್ನು ನೆನಪಿಸುವಂತಿತ್ತು.
ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅಂದು ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಸಂಸದರ ತಂಡವನ್ನು ಭೇಟಿಯಾಗಲು ನಿರಾಕರಿಸಿದವರಲ್ಲಿ, ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರೂ ಒಬ್ಬರಾಗಿದ್ದರು. 2013 ರಲ್ಲಿ ಭಾರತ ನೀಡಿದ ಸಂದೇಶ ಸ್ಪಷ್ಟವಾಗಿತ್ತು.
ದೇಶದ ಘನತೆ ಮತ್ತು ರಾಜತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿದರೆ, ಭಾರತವು ಅದಕ್ಕೆ ತಕ್ಕ ತಿರುಗೇಟು ನೀಡಲು ಸಿದ್ಧವಾಗಿದೆ ಎಂಬುದನ್ನು ಅದು ಸಾಬೀತುಪಡಿಸಿತ್ತು.
ಆದರೆ, ಇದೀಗ 12 ವರ್ಷಗಳಿಗಿಂತಲೂ ಹೆಚ್ಚು ಸಮಯದ ನಂತರ, ಎದುರಾಗಿರುವ ಮತ್ತೊಂದು ವಿಭಿನ್ನ ಬಿಕ್ಕಟ್ಟು ಅಂದಿನ ಅದೇ ಆಕ್ರಮಣಕಾರಿ ಮತ್ತು ದಿಟ್ಟ ನಿಲುವು ಭಾರತದಲ್ಲಿ ಇಂದಿಗೂ ಉಳಿದಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
2026 ಜೂನ್ ನಲ್ಲಿ, ಇರಾನ್‌ನ ತೈಲ ಸಾಗಣೆಯನ್ನು ತಡೆಯಲು ಅಮೆರಿಕ ವಿಧಿಸಿದ್ದ ನೌಕಾ ದಿಗ್ಬಂಧನದ ಭಾಗವಾಗಿ, ಒಮಾನ್ ಕೊಲ್ಲಿಯಲ್ಲಿ ಅಮೆರಿಕದ ಮಿಲಿಟರಿ ಪಡೆಗಳು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದವು. ಈ ದಾಳಿಯಲ್ಲಿ ಆದಿತ್ಯ ಶರ್ಮಾ, ಶಿವಾನಂದ್ ಚೌರಾಸಿಯಾ ಮತ್ತು ಪಟ್ನಾಲಾ ಸುರೇಶ್ ಎಂಬ ಮೂವರು ಭಾರತೀಯ ಮರ್ಚೆಂಟ್ ನೇವಿ ಸಿಬ್ಬಂದಿ ಸಾವಿಗೀಡಾಗಿದ್ದಾರೆ.
ಈ ಸಾವುಗಳು ಭಾರತದಲ್ಲಿ ತೀವ್ರ ದುಃಖ ಮತ್ತು ಆಕ್ರೋಶವನ್ನು ಉಂಟುಮಾಡಿದವು. ಘಟನೆ ನಡೆದ ನಂತರದ ದಿನಗಳಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಂಧ್ರಪ್ರದೇಶದ ವಿಶಾಖಪಟ್ಟಣಂನ ನಾವಿಕನೊಬ್ಬನ ಕುಟುಂಬ ಅವರ ಫೋಟೋ ಹಿಡಿದು ಕಣ್ಣೀರಿಟ್ಟರು.
ಮೃತ ಆದಿತ್ಯ ಶರ್ಮಾ ಅವರ ತಾತ ಮಾತನಾಡಿ, "ಏನು ಸಂಭವಿಸಿದೆ ಎಂಬ ಸಂಪೂರ್ಣ ಸತ್ಯ ನಮಗೆ ತಿಳಿಯಬೇಕು, ನಮ್ಮ ಹೃದಯಗಳು ಒಡೆದು ಚೂರಾಗಿವೆ" ಎಂದು ದುಃಖ ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯವು, ಭಾರತದಲ್ಲಿರುವ ಅಮೆರಿಕದ ರಾಯಭಾರಿ ಜೇಸನ್ ಮೀಕ್ಸ್ ಅವರಿಗೆ ಸಮನ್ಸ್ ಜಾರಿಗೊಳಿಸಿತು. ನಾಗರಿಕ ಹಡಗುಗಳ ಮೇಲೆ ಇಂತಹ ಮಾರಣಾಂತಿಕ ಬಲಪ್ರಯೋಗ ಮಾಡಿರುವುದನ್ನು "ದುರದೃಷ್ಟಕರ ಮತ್ತು ತಪ್ಪಿಸಬಹುದಾಗಿದ್ದ ಘಟನೆ" ಎಂದು ಅಧಿಕೃತವಾಗಿ ಖಂಡಿಸಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡ ಜೂನ್ 12 ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರೊಂದಿಗೆ ನೇರವಾಗಿ ಮಾತನಾಡಿ, ಭಾರತದ "ತೀವ್ರ ಪ್ರತಿಭಟನೆ"ಯನ್ನು ದಾಖಲಿಸಿದರು. ವಾಣಿಜ್ಯ ಹಡಗುಗಳ ಮೇಲೆ ಇಂತಹ ಮಾರಣಾಂತಿಕ ದಾಳಿ ನಡೆಸಿರುವುದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಆದರೆ, ಅಮೆರಿಕದ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯು ಸಂಪೂರ್ಣವಾಗಿ ಭಿನ್ನವಾದ ಧ್ವನಿಯನ್ನು ಹೊಂದಿತ್ತು.
ಜೈಶಂಕರ್ ಅವರು ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಿದ 18 ಗಂಟೆಗಳ ನಂತರ ಅಮೆರಿಕ ಈ ಹೇಳಿಕೆಯನ್ನು ಬಿಡುಗಡೆ ಮಾಡಿತು. ವರದಿಗಳ ಪ್ರಕಾರ, ಆ ಹೇಳಿಕೆಯಲ್ಲಿ ಭಾರತದ ಪ್ರತಿಭಟನೆಯ ಬಗ್ಗೆಯಾಗಲಿ ಅಥವಾ ಮೂವರು ಭಾರತೀಯ ನಾವಿಕರ ಸಾವಿನ ಬಗ್ಗೆಯಾಗಲಿ ಯಾವುದೇ ಉಲ್ಲೇಖವಿರಲಿಲ್ಲ.
ಬದಲಿಗೆ, ಹಾರ್ಮುಝ್ ಜಲಸಂಧಿಯಲ್ಲಿ ಚಲಿಸುವ ವಾಣಿಜ್ಯ ಹಡಗುಗಳು ಅಮೆರಿಕ ಪಡೆಗಳು ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರೂಬಿಯೋ ಒತ್ತಿಹೇಳಿದರು. ಅಷ್ಟೇ ಅಲ್ಲದೆ, ದಿಗ್ಬಂಧನವನ್ನು ಉಲ್ಲಂಘಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಅಮೆರಿಕದ ಈ ಭಿನ್ನ ನಿಲುವು ಭಾರತದಲ್ಲಿ ತೀವ್ರ ಟೀಕೆಗೆ ಗುರಿಯಾಯಿತು. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಅಮೆರಿಕದ ಪ್ರಕಟಣೆಯನ್ನು "ಅತ್ಯಂತ ಆಘಾತಕಾರಿ" ಎಂದು ಕರೆದರಲ್ಲದೆ, ಭಾರತದ ಆಪ್ತ ಸ್ನೇಹಿತ ಮತ್ತು ತಂತ್ರಗಾರಿಕೆಯ ಪಾಲುದಾರ ಎಂದು ತನ್ನನ್ನು ತಾನು ಕರೆದುಕೊಳ್ಳುವ ದೇಶವೊಂದು ಇಷ್ಟೊಂದು ನಿರ್ದಯವಾಗಿ ವರ್ತಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಅಷ್ಟೇ ಅಲ್ಲದೆ, ಈ ಜಲಪ್ರದೇಶಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಲ್ಲಿ ಭಾರತೀಯ ಪ್ರಜೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೆನಪಿಸಿದ ಅವರು, ಈ ಕಠಿಣ ವಾಸ್ತವದ ಮುಂದಿನ ಪರಿಣಾಮಗಳೇನು ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಈ ಘಟನೆಯನ್ನು ಮತ್ತಷ್ಟು ವಿಶಾಲ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದರು. ಇಂದಿನ ಸಮಕಾಲೀನ ಅಂತರರಾಷ್ಟ್ರೀಯ ರಾಜಕೀಯವು ಹೆಚ್ಚಾಗಿ ದಿಗ್ಬಂಧನಗಳು, ಆರ್ಥಿಕ ನಿರ್ಬಂಧಗಳು, ಸುಂಕಗಳು ಮತ್ತು ಬಲಪ್ರಯೋಗದ ಭಾಷೆಯನ್ನೇ ಅವಲಂಬಿಸುತ್ತಿದೆ. ಇವೆಲ್ಲದರಿಂದ ಉಂಟಾಗುವ ಅನಾಹುತಗಳನ್ನು ನಿಭಾಯಿಸುವ ಕೆಲಸ ಮಾತ್ರ ರಾಜತಾಂತ್ರಿಕತೆಗೆ ಉಳಿದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಶೇಷವೆಂದರೆ, ಈ ಇಡೀ ಘಟನೆಯಲ್ಲಿ ಒಂದು ಐತಿಹಾಸಿಕ ಹೋಲಿಕೆಯೂ ಇದೆ. 2013 ರ ಖೋಬ್ರಾಗಡೆ ಬಿಕ್ಕಟ್ಟಿನ ಸಮಯದಲ್ಲಿ ಹಳಸಿದ್ದ ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಹಳಿಗೆ ತರಲು, ಅಂದು ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿ ಧಾವಿಸಿದ್ದವರು ಇದೇ ಎಸ್. ಜೈಶಂಕರ್.
ಅದಾಗಿ ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ, ಇಂದು ವಿದೇಶಾಂಗ ಸಚಿವರಾಗಿ ಅವರೇ ವಿದೇಶಿ ನೆಲದಲ್ಲಿ ಭಾರತೀಯ ನಾಗರಿಕರ ಸಾವಿಗೆ ಭಾರತದ ಪರವಾಗಿ ರಾಜತಾಂತ್ರಿಕ ಹೋರಾಟದ ನೇತೃತ್ವ ವಹಿಸಿದ್ದಾರೆ.
2013 ರಲ್ಲಿ ಭಾರತವು ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದಾಗ ಅಮೆರಿಕಕ್ಕೆ ಆ ತೀಕ್ಷ್ಣ ಸಂದೇಶ ಸ್ಪಷ್ಟವಾಗಿ ತಲುಪಿತ್ತು. ಆದರೆ, ಕೇವಲ ಅಧಿಕಾರ ಮತ್ತು ತಂತ್ರಗಾರಿಕೆ ಲೆಕ್ಕಾಚಾರಗಳೇ ಜಗತ್ತನ್ನು ನಿಯಂತ್ರಿಸುತ್ತಿರುವ ಈ ಹೊತ್ತಲ್ಲಿ, ಕೇವಲ ರಾಜತಾಂತ್ರಿಕ ಪ್ರತಿಭಟನೆಗಳು ಮಾತ್ರ ಅಷ್ಟೇ ಪ್ರಭಾವ ಬೀರಬಲ್ಲವೇ? ಎಂಬ ಪ್ರಶ್ನೆ ಈಗ ಎದ್ದಿದೆ.
ಕೃಪೆ: indiatoday.in