×
Ad

ನಕಲಿ ಪ್ರಶ್ನೆಪತ್ರಿಕೆ, ಟೆಲಿಗ್ರಾಂ ಮತ್ತು ಲಾಗಿನ್ ವಿವರಗಳ ಕಳ್ಳತನ : NEET ಆತಂಕವನ್ನೇ ಬಂಡವಾಳವಾಗಿಸಿಕೊಂಡು ವಂಚಕರು ಹಣ ಬಾಚುತ್ತಿರುವುದು ಹೇಗೆ?

Update: 2026-06-17 19:24 IST

Photo Credit ; ANI

ಸಂಘಟಿತ ಪರೀಕ್ಷಾ ಅಕ್ರಮ ಜಾಲಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ, ಜೂನ್ 21 ರಂದು ನಡೆಯಲಿರುವ ನೀಟ್-ಯುಜಿ (NEET-UG) ಮರುಪರೀಕ್ಷೆಗೆ ಮುನ್ನ ಟೆಲಿಗ್ರಾಂ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವು, ವಂಚಕರು ವಿದ್ಯಾರ್ಥಿಗಳನ್ನು ವಂಚಿಸಲು ಈ ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ.

2026ರ ಮುಖ್ಯ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ, ಮುಗ್ಧ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕವನ್ನೇ ಬಂಡವಾಳವಾಗಿಸಿಕೊಂಡು ಕೋಟಿಗಟ್ಟಲೆ ಹಣ ಲೂಟಿ ಮಾಡುತ್ತಿದ್ದ ಮೂರು ದೊಡ್ಡ ವಂಚನೆ ಜಾಲಗಳನ್ನು ಗುಜರಾತ್ ಮತ್ತು ಬಿಹಾರ ಪೊಲೀಸರು ಪತ್ತೆಹಚ್ಚಿದ್ದಾರೆ.

ಇದರಲ್ಲಿ ಎರಡು ವಂಚನೆಗಳು ಟೆಲಿಗ್ರಾಂ ಚಾನೆಲ್‌ಗಳಿಗೆ ಸಂಬಂಧಿಸಿದ್ದಾಗಿವೆ. ಇಲ್ಲದ ನಕಲಿ ಪ್ರಶ್ನೆಪತ್ರಿಕೆಗಳನ್ನು ಅಸಲಿ ಎಂದು ನಂಬಿಸಿ ಸಂತ್ರಸ್ತರಿಂದ ಭಾರೀ ಮೊತ್ತದ ಹಣವನ್ನು ಪೀಕಲಾಗಿತ್ತು. ಮೂರನೇ ಪ್ರಕರಣದಲ್ಲಿ 19 ವರ್ಷದ ಯುವಕನೊಬ್ಬ ನೀಟ್ ವೆಬ್‌ಸೈಟ್‌ ಪೋರ್ಟಲ್‌ನಿಂದ ಸುಮಾರು 150 ವಿದ್ಯಾರ್ಥಿಗಳ ರೀಫಂಡ್ ಹಣವನ್ನು ಕದ್ದು, ತನ್ನ ಸ್ವಂತ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ.

ಮೊದಲ ಪ್ರಕರಣದಲ್ಲಿ, ಮರು-ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಸುಳ್ಳು ಭರವಸೆಗಳನ್ನು ನೀಡಲು ಕೆಲವರು ಈ ಮೆಸೇಜಿಂಗ್ ಮತ್ತು ಆಡಿಯೋ ಕಾಲಿಂಗ್ ಆ್ಯಪ್ ಅನ್ನು ಬಳಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಅಹಮದಾಬಾದ್ ಪೊಲೀಸರ ಸೈಬರ್ ಕ್ರೈಂ ವಿಭಾಗಕ್ಕೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೆಡಿಕಲ್ ಸೀಟಿನ ಆಕಾಂಕ್ಷಿಗಳಿಗೆ ಬರೋಬ್ಬರಿ 1.5 ಕೋಟಿ ರೂಪಾಯಿಗೂ ಹೆಚ್ಚು ವಂಚಿಸಿದ್ದ ರಾಜಸ್ಥಾನ ಮೂಲದ ಇಬ್ಬರು ಶಂಕಿತರನ್ನು ಬಂಧಿಸುವ ಮೂಲಕ ಅಂತರ-ರಾಜ್ಯ ಸೈಬರ್ ವಂಚನೆ ಜಾಲವನ್ನು ಪತ್ತೆಹಚ್ಚಿದ್ದಾರೆ.

ಇದೇ ರೀತಿ, ಟೆಲಿಗ್ರಾಂ ಮೂಲಕ ನಕಲಿ ಪ್ರಶ್ನೆಪತ್ರಿಕೆಗಳನ್ನು ಹರಡಿ ನೀಟ್ ಆಕಾಂಕ್ಷಿಗಳನ್ನು ವಂಚಿಸುತ್ತಿದ್ದ ಗ್ಯಾಂಗ್ ಬಗ್ಗೆ ಮಾಹಿತಿ ಪಡೆದ ಬಿಹಾರ ಪೊಲೀಸರ ವಿಶೇಷ ತನಿಖಾ ತಂಡ ತಕ್ಷಣ ಕಾರ್ಯಪ್ರವೃತ್ತವಾಯಿತು. ಸಿಖಂದರ್‌ಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಜನರನ್ನು ಬಂಧಿಸಲಾಗಿದೆ.

ಅಹಮದಾಬಾದ್ ಸೈಬರ್ ಕ್ರೈಂ ವಿಭಾಗ ತನಿಖೆ ನಡೆಸುತ್ತಿರುವ ಮೂರನೇ ಪ್ರಕರಣವು ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಾಗಿದೆ. ಈ ಹದಿಹರೆಯದ ಯುವಕ ಇತರ ವಿದ್ಯಾರ್ಥಿಗಳ ನೀಟ್ ಲಾಗಿನ್ ವಿವರಗಳನ್ನು ಕದ್ದು, ಅವರ ಪರೀಕ್ಷಾ ಶುಲ್ಕದ ರೀಫಂಡ್ ಹಣವನ್ನು ಅಕ್ರಮವಾಗಿ ತನ್ನ ಖಾತೆಗೆ ವರ್ಗಾವಣೆ ಮಾಡುತ್ತಿದ್ದ.

ನೀಟ್ ಮರುಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಮಂಗಳವಾರ ಭಾರತದಲ್ಲಿ ಜೂನ್ 22 ರವರೆಗೆ ಟೆಲಿಗ್ರಾಂ ಬಳಕೆಯನ್ನು ನಿರ್ಬಂಧಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಈ ಆದೇಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸ್ವಾಗತಿಸಿದೆ. "ಇದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರವಾಗಿದೆ. 2026 ಜೂನ್ 21ರಂದು ಯಾವುದೇ ಅಕ್ರಮಗಳಿಲ್ಲದೆ ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಇದು ಎನ್‌ಟಿಎಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ" ಎಂದು ಸಂಸ್ಥೆ ಹೇಳಿದೆ.

►ರಾಜಸ್ಥಾನದಲ್ಲಿ ಇಬ್ಬರ ಬಂಧನ

ಅಹಮದಾಬಾದ್ ಸಿಟಿ ಕ್ರೈಂ ಬ್ರಾಂಚ್ ಪ್ರಕಾರ, ಜೈಪುರದ ನಿವಾಸಿ ಸುಮೇರ್ ಸಿಂಗ್ ಮತ್ತು ಕೋಟಾ ನಿವಾಸಿ ಆಕಾಶ್ ಎಂಬಿಬ್ಬರು, "ಟೆಲಿಗ್ರಾಂ ಚಾನೆಲ್‌ಗಳು ಮತ್ತು ಐಡಿಗಳನ್ನು ಸೃಷ್ಟಿಸಿದ್ದರು. ತಮ್ಮ ಬಳಿ ನೀಟ್ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಇದೆ. ಅದನ್ನು ಒದಗಿಸಿಕೊಡುವುದಾಗಿ ಸುಳ್ಳು ಪೋಸ್ಟ್‌ಗಳು, ಸಂದೇಶಗಳು ಹಾಗೂ ಜಾಹೀರಾತುಗಳನ್ನು ಹರಡುತ್ತಿದ್ದರು.

ವಿವಿಧ ರಾಜ್ಯಗಳಿಂದ 12 ದೂರುಗಳು ಬಂದ ನಂತರ ಅಹಮದಾಬಾದ್ ಪೊಲೀಸರು ಕಾರ್ಯಪ್ರವೃತ್ತರಾದರು. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4), 319(2), 54 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.

ಜೂನ್ 14 ರಂದು ಸುಮೇರ್ ಮತ್ತು ಆಕಾಶ್ ಇಬ್ಬರನ್ನೂ ಬಂಧಿಸಲಾಯಿತು. ಆರೋಪಿಗಳಿಗೆ ಸೇರಿದ ಆರು ಬ್ಯಾಂಕ್ ಖಾತೆಗಳನ್ನು ಪೊಲೀಸರು ಇದುವರೆಗೆ ಪತ್ತೆಹಚ್ಚಿದ್ದಾರೆ.

ಆರೋಪಿಗಳು ಸುಳ್ಳು ಆಮಿಷಗಳನ್ನು ಒಡ್ಡಿ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ದಾರಿ ತಪ್ಪಿಸಿ, ಸೈಬರ್ ವಂಚನೆ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ದಿ ಪ್ರಿಂಟ್'ಗೆ ತಿಳಿಸಿದ್ದಾರೆ. ವಂಚನೆ ನಡೆಸಲು ಆರೋಪಿಗಳು ಟೆಲಿಗ್ರಾಂ ಚಾನೆಲ್‌ಗಳನ್ನೇ ಪ್ರಮುಖವಾಗಿ ಬಳಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

ತನಿಖೆಯ ಸಮಯದಲ್ಲಿ ವಿವಿಧ ಟೆಲಿಗ್ರಾಂ ಚಾನೆಲ್‌ಗಳು, ಐಡಿಗಳು, ಮೊಬೈಲ್ ಸಂಖ್ಯೆಗಳು, ಐಪಿ ವಿಳಾಸಗಳು ಮತ್ತು ಇತರ ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಲಾಯಿತು. ಆರೋಪಿಗಳು 'Raghav_singh_neet' ಸೇರಿದಂತೆ ಸುಮಾರು ಏಳು ಟೆಲಿಗ್ರಾಂ ಚಾನೆಲ್‌ಗಳನ್ನು ಸೃಷ್ಟಿಸಿ, ಪ್ರೈವೇಟ್ ಮಾಫಿಯಾ ಎಂಬ ಅನಾಮಧೇಯ ಹೆಸರಿನಲ್ಲಿ ಆ್ಯಪ್ ಬಳಸುತ್ತಿದ್ದ ವ್ಯಕ್ತಿಗೆ ನೀಡಿದ್ದರು ಎಂಬುದು ಬೆಳಕಿಗೆ ಬಂದಿದೆ.

ಹಣ ಕೊಡಲು ಸಿದ್ಧರಿರುವವರಿಗೆ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಲಭ್ಯವಿವೆ ಎಂಬ ವದಂತಿಯನ್ನು ಹರಡಲು ಈ ಎಂಟು ಟೆಲಿಗ್ರಾಂ ಚಾನೆಲ್‌ಗಳನ್ನು ಬಳಸಲಾಗುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಜೂನ್ 21 ರಂದು ಎನ್‌ಟಿಎ ನೀಟ್ ಮರುಪರೀಕ್ಷೆಯನ್ನು ನಡೆಸಲಿದೆ.

ಹಣದ ವ್ಯವಹಾರಕ್ಕಾಗಿ ಆರೋಪಿಗಳು ಕ್ಯೂಆರ್ ಕೋಡ್‌ಗಳು ಮತ್ತು ಬ್ಯಾಂಕ್ ಖಾತೆಗಳು ಸೇರಿದಂತೆ ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಹಣವನ್ನು ವಸೂಲಿ ಮಾಡುತ್ತಿದ್ದರು. ಟೆಲಿಗ್ರಾಂ ಚಾಟ್‌ಗಳನ್ನು ಪರಿಶೀಲಿಸಿದಾಗ, ಮುಗ್ಧ ಅಭ್ಯರ್ಥಿಗಳಿಂದ 'ಅಪಾಯಿಂಟ್‌ಮೆಂಟ್ ಬುಕ್' ಮಾಡಲು ತಲಾ 5,000 ರೂಪಾಯಿಗಳನ್ನು ಪಡೆದಿರುವುದು ತಿಳಿದುಬಂದಿದೆ.

ಇದರರ್ಥ, ಒಂದು ವೇಳೆ ರೀ-ನೀಟ್ ಪ್ರಶ್ನೆ ಪತ್ರಿಕೆ ಬರುವುದಿದ್ದರೆ, ಅದನ್ನು ಮುಂಚಿತವಾಗಿಯೇ ಬುಕ್ ಮಾಡಿಕೊಳ್ಳಬಹುದಿತ್ತು. ಹಣ ಪಾವತಿಸಿದವರಿಗೆ ಪಾಸ್‌ವರ್ಡ್ ಹೊಂದಿರುವ ಪಿಡಿಎಫ್‌ಗಳನ್ನು ಕಳುಹಿಸಲಾಗುತ್ತಿತ್ತು. ಆ ಪಾಸ್‌ವರ್ಡ್ ಪಡೆಯಲು ಅಭ್ಯರ್ಥಿಗಳು 12,500 ರಿಂದ 50,000 ರೂಪಾಯಿಗಳವರೆಗೆ ಹಣ ನೀಡುತ್ತಿದ್ದರು. ಇಲ್ಲಿ ಚೌಕಾಸಿಗೂ ಅವಕಾಶವಿತ್ತು ಎಂದು ಅಧಿಕಾರಿ ವಿವರಿಸಿದ್ದಾರೆ.

ಆದರೆ, ಹಣ ಪಡೆದು ಪಾಸ್‌ವರ್ಡ್ ನೀಡಿದಾಗ, ಆ ಪಿಡಿಎಫ್ ತೆರೆದರೆ ಖರೀದಿಸಿದವರಿಗೆ ಕಾಣಿಸುತ್ತಿದ್ದುದು ಕೇವಲ ಖಾಲಿ ಕಪ್ಪು ಪುಟ ಮಾತ್ರ. ಅಷ್ಟರಲ್ಲಿ ಆ ಟೆಲಿಗ್ರಾಂ ಖಾತೆಯನ್ನು ಬ್ಲಾಕ್ ಮಾಡಲಾಗಿರುತ್ತಿತ್ತು.

ಸುಳ್ಳು ಮಾಹಿತಿ ಹರಡುವ ಮೂಲಕ, ಸುಳ್ಳು ಭರವಸೆಗಳನ್ನು ನೀಡಿ ವಿದ್ಯಾರ್ಥಿಗಳು, ಪೋಷಕರು ಮತ್ತು ಇತರರಿಗೆ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಅಹಮದಾಬಾದ್ ಜಂಟಿ ಪೊಲೀಸ್ ಕಮಿಷನರ್ (ಕ್ರೈಂ ಬ್ರಾಂಚ್) ಶರದ್ ಸಿಂಘಾಲ್ 'ದಿ ಪ್ರಿಂಟ್'ಗೆ ತಿಳಿಸಿದ್ದಾರೆ. ಆದರೆ, ಅವರಿಂದ ನೀಟ್ ಅಥವಾ ಯಾವುದೇ ಇತರ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಅಸಲಿ ದಾಖಲೆಗಳು ಪತ್ತೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸದ್ಯಕ್ಕೆ, ಕಳೆದ ಒಂದು ತಿಂಗಳ ಅವಧಿಯಲ್ಲಿ ಆರೋಪಿಗಳು ಸಂಪರ್ಕದಲ್ಲಿದ್ದ ಸುಮಾರು 1,000 ಮೊಬೈಲ್ ಸಂಖ್ಯೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆದರೆ, 'ಪ್ರೈವೇಟ್ ಮಾಫಿಯಾ' ಎಂಬ ಟೆಲಿಗ್ರಾಂ ಬಳಕೆದಾರ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮೇರ್ ಮತ್ತು ಆಕಾಶ್ ಇಬ್ಬರೂ ಈ ವಂಚನೆಯ ಕರಾಳ ಜಗತ್ತಿಗೆ ಹೊಸಬರೇನಲ್ಲ ಎಂಬುದು ತನಿಖೆ ನಡೆಸುತ್ತಿರುವ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇವರಿಬ್ಬರು ಆನ್‌ಲೈನ್ ಗೇಮಿಂಗ್ ಬಳಕೆದಾರರ ಖಾತೆಗಳನ್ನು ದುರುಪಯೋಗಪಡಿಸಿಕೊಂಡು ಹಣ ಲೂಟಿ ಮಾಡುತ್ತಿದ್ದರು. ಗೇಮಿಂಗ್ ವೆಬ್‌ಸೈಟ್‌ಗಳಲ್ಲಿನ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿದ್ದ ಖಾತೆಗಳಿಂದ ವಂಚನೆಯ ಮೂಲಕ ಹಣವನ್ನು ಪಡೆಯುತ್ತಿದ್ದರು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

"ಹೀಗೆ ಬಂದ ಹಣವನ್ನು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿವಿಧ ವ್ಯಕ್ತಿಗಳ ಹತ್ತಾರು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿತ್ತು. ತಮ್ಮ ಸಹಚರರು ಮತ್ತು ಇತರರ ಬ್ಯಾಂಕ್ ಖಾತೆಗಳನ್ನು ಬಳಸಿ ಆರೋಪಿಗಳು ಹಣವನ್ನು ಹಿಂತೆಗೆದುಕೊಂಡು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಈ ಜಾಲದಲ್ಲಿ ಒಟ್ಟು 1.5 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆದಿದೆ" ಎಂದು ಈ ಅಧಿಕಾರಿ ತಿಳಿಸಿದ್ದಾರೆ. ಆದರೆ ಇದರಲ್ಲಿ ನೀಟ್ ಅಭ್ಯರ್ಥಿಗಳಿಂದ ಎಷ್ಟು ಹಣ ಲೂಟಿ ಮಾಡಲಾಗಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಆರೋಪಿಗಳು ತಮ್ಮ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಸದಸ್ಯರ ಮತ್ತು ಪ್ರೀಮಿಯಂ ಸದಸ್ಯರ ಸಂಖ್ಯೆಯನ್ನು "ಕೃತಕವಾಗಿ ಹೆಚ್ಚಿಸಲು" ಅಂದರೆ ಫೇಕ್ ಫಾಲೋವರ್ಸ್ ಸೃಷ್ಟಿಸಲು ವಿವಿಧ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಹೀಗೆ ದೊಡ್ಡ ಸಂಖ್ಯೆಯನ್ನು ತೋರಿಸಿ, ಸುಲಭವಾಗಿ ಹಣ ಗಳಿಸಲು 'ಪ್ರೈವೇಟ್ ಮಾಫಿಯಾ'ದಂತಹ ಗ್ರಾಹಕರಿಗೆ ಈ ಟೆಲಿಗ್ರಾಂ ಚಾನೆಲ್‌ಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಚಾನೆಲ್‌ಗಳನ್ನು ಖರೀದಿಸಲು 'ಪ್ರೈವೇಟ್ ಮಾಫಿಯಾ' ಅಮೆಜಾನ್ ಗಿಫ್ಟ್ ಕಾರ್ಡ್‌ಗಳನ್ನು ಬಳಸುತ್ತಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

►ದೊಡ್ಡ ಮಟ್ಟದ ರೀಫಂಡ್ ವಂಚನೆ

ಎರಡನೇ ಪ್ರಕರಣದಲ್ಲಿ, ವ್ಯಕ್ತಿಯೊಬ್ಬರು ತಮ್ಮ ಮಗಳಿಗೆ ನೀಟ್ ವೆಬ್‌ಸೈಟ್‌ ಪೋರ್ಟಲ್‌ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಮತ್ತು ಯಾರೋ ಪಾಸ್‌ವರ್ಡ್ ಬದಲಾಯಿಸಿದ್ದಾರೆ ಎಂದು ದೂರು ನೀಡಿದ ನಂತರ ಅಹಮದಾಬಾದ್ ಪೊಲೀಸರು ತನಿಖೆ ನಡೆಸಿ ಬಿಹಾರದವರೆಗೆ ತಲುಪಿದರು.

ಈ ದೂರಿನ ಅನ್ವಯ, ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮತ್ತು ಐಟಿ ಕಾಯ್ದೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.

ಎನ್‌ಟಿಎ ಸಂಸ್ಥೆಯ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ನೀಡಿದ ಮಾಹಿತಿ, ಬ್ಯಾಂಕ್ ಖಾತೆ ವಿವರಗಳ ತಾಂತ್ರಿಕ ವಿಶ್ಲೇಷಣೆ ಮತ್ತು ಸ್ಥಳೀಯ ಸುಳಿವುಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಿಹಾರದಲ್ಲಿ ವಶಕ್ಕೆ ಪಡೆಯಲಾಯಿತು. ಬಂಧಿತ ಆರೋಪಿಯನ್ನು ಗಯಾ ನಿವಾಸಿ 19 ವರ್ಷದ ನವೀನ್‌ಕುಮಾರ್ ಶಂಕರ್ ಪ್ರಸಾದ್ ಯಾದವ್ ಎಂದು ಗುರುತಿಸಲಾಗಿದೆ.

ಎನ್‌ಟಿಎ ವೆಬ್‌ಸೈಟ್‌ ಪೋರ್ಟಲ್‌ನ ಭದ್ರತಾ ವ್ಯವಸ್ಥೆಯಲ್ಲಿ ದಾಖಲಾಗಿದ್ದ ಡಿಜಿಟಲ್ ಹೆಜ್ಜೆಗುರುತುಗಳು ತನಿಖಾಧಿಕಾರಿಗಳಿಗೆ ನವೀನ್‌ನನ್ನು ಗುರುತಿಸಲು ಮತ್ತು ಅವನ ಜಾಗವನ್ನು ಪತ್ತೆಹಚ್ಚಲು ಸಹಾಯ ಮಾಡಿದವು.

"ಅಭ್ಯರ್ಥಿಗಳ ಗಮನಕ್ಕೆ ಬಾರದೆ ಅಥವಾ ಅವರ ಅನುಮತಿಯಿಲ್ಲದೆ ಅವರ ಲಾಗಿನ್ ವಿವರಗಳನ್ನು ಅಕ್ರಮವಾಗಿ ಬಳಸಿಕೊಂಡ ಆರೋಪಿ, ನೀಟ್ ಪೋರ್ಟಲ್‌ಗೆ ಅನಧಿಕೃತವಾಗಿ ಲಾಗಿನ್ ಆಗುತ್ತಿದ್ದ. ನಂತರ ಅಲ್ಲಿ ತನ್ನ ಸ್ವಂತ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸುವ ಮೂಲಕ ವಿದ್ಯಾರ್ಥಿಗಳಿಗೆ ಸೇರಬೇಕಾಗಿದ್ದ ರೀಫಂಡ್ ಹಣವನ್ನು ವಂಚನೆಯಿಂದ ಪಡೆದುಕೊಳ್ಳುತ್ತಿದ್ದ" ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ತಿಳಿಸಿದ್ದಾರೆ.

ನೀಟ್-ಯುಜಿ ಪರೀಕ್ಷೆ ರದ್ದಾದ ನಂತರ ವೈದ್ಯಕೀಯ ಸೀಟಿನ ಆಕಾಂಕ್ಷಿಗಳಿಗೆ ಈ ರೀಫಂಡ್ ಹಣವನ್ನು ನೀಡಲಾಗುತ್ತಿತ್ತು. ಪ್ರತಿ ಯಶಸ್ವಿ ರೀಫಂಡ್‌ನಿಂದ ನವೀನ್ ಖಾತೆಗೆ 1,700 ರೂಪಾಯಿ ಜಮೆಯಾಗುತ್ತಿತ್ತು. ಸ್ವತಃ ನೀಟ್ ಆಕಾಂಕ್ಷಿಯಾಗಿದ್ದರಿಂದ ಅವನಿಗೆ ಈ ರೀಫಂಡ್ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ನವೀನ್ ನೀಟ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಸುಮಾರು 350 ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡಿದ್ದ. ಅವರಲ್ಲಿ, ಅತ್ಯಂತ ಸರಳ ಹಾಗೂ ದುರ್ಬಲ ಪಾಸ್‌ವರ್ಡ್‌ಗಳನ್ನು ಹೊಂದಿದ್ದ ಸುಮಾರು 150 ವಿದ್ಯಾರ್ಥಿಗಳ ಖಾತೆಗಳನ್ನು ದುರುಪಯೋಗಪಡಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

"ಖಾತೆಗಳಿಗೆ ಲಾಗಿನ್ ಆಗಲು ಅವನು 'ಸೀಕ್ರೆಟ್ ಸೆಕ್ಯೂರಿಟಿ ಕ್ವೆಶ್ಚನ್' ಆಯ್ಕೆಯನ್ನು ಬಳಸುತ್ತಿದ್ದ. ಏಕೆಂದರೆ ಅನೇಕ ಅಭ್ಯರ್ಥಿಗಳು (ನೀಟ್ ನೋಂದಣಿ ಸಮಯದಲ್ಲಿ) ಅತ್ಯಂತ ಸರಳವಾದ ಆಯ್ಕೆಗಳನ್ನು ಇಟ್ಟುಕೊಂಡಿರುತ್ತಾರೆ. ಉದಾಹರಣೆಗೆ, ನೆಚ್ಚಿನ ಆಟ ಅಥವಾ ನೆಚ್ಚಿನ ಬಣ್ಣದಂತಹ ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೆ. ಇವುಗಳಿಗೆ ಸುಲಭವಾಗಿ ಊಹಿಸಬಹುದಾದ ಉತ್ತರಗಳಿರುತ್ತವೆ. ಹೀಗೆ ಒಮ್ಮೆ ಖಾತೆಯೊಳಗೆ ಪ್ರವೇಶ ಪಡೆದ ನಂತರ, ಅವನು ವಿದ್ಯಾರ್ಥಿಗಳ ಬ್ಯಾಂಕ್ ವಿವರಗಳನ್ನು ಬದಲಾಯಿಸುತ್ತಿದ್ದ" ಎಂದು ಅಧಿಕಾರಿ ವಿವರಿಸಿದ್ದಾರೆ.

►ನೀಟ್ ನಕಲಿ ಪ್ರಶ್ನೆಪತ್ರಿಕೆ ಜಾಲ

ಜೂನ್ 14 ರಂದು ಬಿಹಾರ ಪೊಲೀಸರು ನೀಟ್ ಆಕಾಂಕ್ಷಿಗಳು ಮತ್ತು ಅವರ ಕುಟುಂಬಗಳಿಗೆ ನಕಲಿ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿ, ಅವುಗಳನ್ನು ಟೆಲಿಗ್ರಾಂ ಮೂಲಕ ವಿತರಿಸಿ ವಂಚಿಸುತ್ತಿದ್ದ ವಂಚಕರ ಜಾಲವನ್ನು ಭೇದಿಸಿದ್ದಾರೆ. ಮುಜಾಫರ್‌ಪುರದ ಸಿಕಂದರ್‌ಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಎನ್ನಲಾದ ಮನೀಶ್ ಝಾ ಸೇರಿದಂತೆ ಐವರು ಶಂಕಿತರನ್ನು ಬಂಧಿಸಲಾಗಿದೆ.

ಅಹಮದಾಬಾದ್ ಕ್ರೈಂ ಬ್ರಾಂಚ್ ಪತ್ತೆಹಚ್ಚಿದ ಪ್ರಕರಣದಂತೆಯೇ, ಈ ಗ್ಯಾಂಗ್ ಕೂಡ ಮುಗ್ಧ ಅಭ್ಯರ್ಥಿಗಳಿಗೆ ನಕಲಿ ನೀಟ್ ಪತ್ರಿಕೆಗಳನ್ನು ಹಂಚಲು ಟೆಲಿಗ್ರಾಂ ಅನ್ನು ಬಳಸುತ್ತಿತ್ತು. ಈ ಗ್ಯಾಂಗ್ ಬಾಲುಘಾಟ್ ಬಳಿಯ ಬಾಡಿಗೆ ಮನೆಯೊಂದರಿಂದ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ, ಜಜುಆರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ಮನೀಶ್ ಝಾನನ್ನು ಜೂನ್ 2 ರಂದು ಬಂಧಿಸಿದರು. ಉಳಿದ ಆರೋಪಿಗಳನ್ನು ಜೂನ್ 13 ರಂದು ಬಂಧಿಸಲಾಯಿತು.

ಬಂಧಿತ ಗ್ಯಾಂಗ್ ಸದಸ್ಯರಾದ ಹರ್ಷ್, ಅಮನ್ ಕುಮಾರ್, ಕನ್ಹಯ್ಯಾ ಕುಮಾರ್ ಮತ್ತು ಹರ್ಷ್ ಕನೋಡಿಯಾ, "ಟೆಲಿಗ್ರಾಂ ಮೂಲಕ ನೀಟ್ ಪ್ರಶ್ನೆಪತ್ರಿಕೆಗಳನ್ನು ನೀಡುವುದಾಗಿ ನಂಬಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆಮಿಷ ಒಡ್ಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ, ಒಂಬತ್ತು ವಿಭಿನ್ನ ಬ್ಯಾಂಕ್ ಖಾತೆಗಳ ಮೂಲಕ ಆನ್‌ಲೈನ್‌ನಲ್ಲಿ ಹಣವನ್ನು ವಸೂಲಿ ಮಾಡಲಾಗುತ್ತಿತ್ತು. ವಂಚನೆಯಿಂದ ಬಂದ ಈ ಹಣವನ್ನು ನಂತರ ಮನೀಶ್‌ಗೆ ತಲುಪಿಸಲಾಗುತ್ತಿತ್ತು. ಬಂಧಿತ ಆರೋಪಿಗಳಿಂದ ಪೊಲೀಸರು ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News