ಕೃಷ್ಣಾ-ತುಂಗಭದ್ರಾ ನದಿಗೆ ನೀರು ಬಿಡುಗಡೆ
ರಾಯಚೂರು: ತುಂಗಭದ್ರಾ ಜಲಾಶಯ ಹಾಗೂ ನಾರಾಯಣಪುರ ಜಲಾಶಯದಿಂದ ನದಿ ಮೂಲಕ ಹೆಚ್ಚಿನ ನೀರು ಬಿಡಲಾಗುತ್ತಿದ್ದು, ನದಿ ಪಾತ್ರದ ಗ್ರಾಮಸ್ಥರಿಗೆ ಭೀತಿ ಎದುರಾಗಿದೆ.
ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಬುಧವಾರ 25 ಕ್ರಸ್ಟ್ ಗೇಟ್‌ಗಳಿಂದ 1.40 ಲಕ್ಷ ಕ್ಯೂಸೆಕ್ ನೀರನ್ನು ಹರಿಯಬಿಡಲಾಗಿದ್ದು, ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯ ಹಂತಕ್ಕೆ ತಲುಪಿದೆ. 1 ಲಕ್ಷ 65 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದರೆ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ನಡುಗಡ್ಡೆಯ ಜನರಿಗೆ ನೆರೆ ಹಾವಳಿಯ ಆತಂಕ ತಂದೊಡ್ಡುವ ಸಾಧ್ಯತೆಗಳಿವೆ.
ತುಂಗಭದ್ರಾ ಜಲಾಶಯದಿಂದ ನದಿಗೆ 24 ಗಂಟೆ 94 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದಾರೆ ಇದರಿಂದ ಮಾನ್ವಿ ತಾಲೂಕಿನ ಚಿಕ್ಕಕೋಟ್ನೆಕಲ್, ಸಾದಾಪೂರ, ಮದ್ಲಾಪೂರು, ಸುಂಕೇಶ್ವರ, ಅರೋಲಿ, ಗೋರ್ಕಲ್ ಗ್ರಾಪಂಗಳ ವ್ಯಾಪ್ತಿಯ 11 ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಈ ಗ್ರಾಮಗಳಲ್ಲಿ ತಾಲೂಕು ಆಡಳಿತದ ವತಿಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದ್ದು, ಜನ ಜಾನುವಾರುಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಜಲಾಶಯದಿಂದ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆ ತುಂಗಭದ್ರಾ ನದಿತೀರದಲ್ಲಿರುವ ರಾಯರ ಪರಮ ಭಕ್ತ ಅಪ್ಪಣ್ಣಾಚಾರ್ ನಿರ್ಮಿಸಿ ಪೂಜಿಸುತ್ತಿದ್ದ ಗುರುರಾಘವೇಂದ್ರ ಸ್ವಾಮಿ ಏಕಶಿಲಾ ವೃಂದಾವನ ಜಲಾವೃತಗೊಂಡಿದೆ. ಬಿಚ್ಚಾಲಮ್ಮ ದೇವಿ ದೇವಾಲಯ ಬಳಿ ನೀರು ನುಗಿದ್ದು, ಏಕಶಿಲಾ ವೃಂದಾವನ ದರ್ಶನ ಪಡೆಯಲು ಭಕ್ತರು ಪರದಾಡುತ್ತಿದ್ದಾರೆ.
ದಿಢೀರನೆ ಪ್ರವಾಹ ಪರಿಸ್ಥಿತಿ ಉದ್ಭವಿಸಿರುವುದರಿಂದ ನದಿದಡದಲ್ಲಿರುವ ಭತ್ತದ ಗದ್ದೆಗಳು ಜಲಾವೃತಗೊಂಡು ರೈತರು ಅಪಾರ ಪ್ರಮಾಣದ ಬೆಳೆಹಾನಿ ಅನುಭವಿಸುವಂತಾಗಿದೆ ರೈತರು ಅಳಲು ತೋಡಿಕೊಂಡಿದ್ದಾರೆ.
ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ನೀರು ಬಿಡುತ್ತಿರುವುದರಿಂದ ಶೀಲಹಳ್ಳಿ ಸೇತುವೆ ಮುಳುಗಡೆ ಹಂತಕ್ಕೆ ಬಂದಿದೆ. ಸೇತುವೆ ಮುಖುಗಡೆಯಾದರೆ ನದಿ ತೀರದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಜನರು ಜಲದುರ್ಗ ಮಾರ್ಗವಾಗಿ 45 ಕಿ.ಮೀ. ಸುತ್ತುವರಿದು ತಾಲೂಕು ಕೇಂದ್ರಕ್ಕೆ ಬರುವ ಅನಿರ್ವಾಯತೆ ಉಂಟಾಗುತ್ತದೆ.
ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ನದಿ ಪಾತ್ರದ ಹಾಗೂ ನಡುಗಡ್ಡೆಯ ಜನರು ತಮ್ಮ ಜಾನುವಾರುಗಳು, ಮೋಟರ್ ಪಂಪ್ ಸೆಟ್, ಮೀನುಗಾರರು, ನದಿಗೆ ಇಳಿಯದಂತೆ ಎಚ್ಚರಿಕೆಯಿಂದ ಇರುವಂತೆ ಡಂಗೂರ, ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ತಾಲೂಕು ಆಡಳಿತ ನಿರ್ದೇಶನದಲ್ಲಿ ಸ್ಥಳೀಯ ಆಡಳಿತ ಅಧಿಕಾರಿಗಳು ಮಾಡುತ್ತಿದ್ದಾರೆ.
ಪ್ರಸ್ತುತ ಮಳೆ ಪ್ರಮಾಣ ಕಡಿಮೆಯಾಗಿದ್ದು, ಒಂದು ವೇಳೆ ಹವಾಮಾನ ಬದಲಾವಣೆಯಿಂದ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದರೆ ಜಲಾಶಯದ ಸುರಕ್ಷತೆಯಿಂದ ಒಳಹರಿವಿನ ಪ್ರಮಾಣದ ಮೇಲೆ ಹೊರ ಹರಿವು ಹೆಚ್ಚಿಸಲಾಗುವುದು ಎಂದು ಜಲಾಶಯದ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ.
ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
-ಅಬ್ದುಲ್ ವಾಹಿದ್, ಗ್ರೇಡ್-2 ತಹಶೀಲ್ದಾರ್