ಯಾದಗಿರಿ: ಪತಿಯಿಂದ ಪತ್ನಿಯ ಕೊಲೆ
ಯಾದಗಿರಿ: ಪತಿ-ಪತ್ನಿಯ ನಡುವಿನ ಜಗಳ ಪತ್ನಿಯ ಕೊಲೆಯೊಂದಿಗೆ ಪರ್ಯಾವಸನಗೊಂಡ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಡೋಣಿಗೇರಾ ಗ್ರಾಮದಲ್ಲಿ ರವಿವಾರ ಮಧ್ಯರಾತ್ರಿ ನಡೆದಿದೆ.
ಡೋಣಿಗೇರಾ ಗ್ರಾಮದ ಮರಿಯಮ್ಮ (35) ಕೊಲೆಯಾದವರು. ಅವರ ಪತಿ ಸುರಪುರ ತಾಲೂಕಿನ ಕಕ್ಕೇರಿ ಗ್ರಾಮದ ಸಂಗಪ್ಪ ಕೊಲೆ ಆರೋಪಿ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಪತಿ-ಪತ್ನಿ ನಡುವೆ ಹಲವು ದಿನಗಳಿಂದ ಹೊಂದಾಣಿಕೆ ಕೊರತೆಯುಂಟಾಗಿದ್ದು, ಮರಿಯಮ್ಮ ಡೋಣಿಗೇರಾದಲ್ಲಿರುವ ತವರು ಮನೆಗೆ ತೆರಳಿ ಅಲ್ಲೇ ವಾಸಿಸುತ್ತಿದ್ದರು. ಶನಿವಾರ ಬೆಳಗ್ಗೆ ಪತಿ ಸಂಗಪ್ಪ ಪತ್ನಿಯನ್ನು ಮನೆಗೆ ಕರೆದೊಯ್ಯಲು ಡೋಣಿಗೇರಾಕ್ಕೆ ತೆರಳಿದ್ದ. ಆದರೆ ಮರಿಯಮ್ಮ ಪತಿಯೊಂದಿಗೆ ಹೋಗಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಸಂಗಪ್ಪ ಮಚ್ಚಿನಿಂದ ಪತ್ನಿಯ ಮೇಲೆ ದಾಳಿ ನಡೆಸಿ ಕೊಲೆಗೈದಿದ್ದಾನೆ.
ಘಟನೆಯ ನಂತರ ಆರೋಪಿ ಸಂಗಪ್ಪ ತಾನೇ ಸುರಪುರ ಪೊಲೀಸ್ ಠಾಣೆಗೆ ಹಾಜರಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸುರಪುರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಮೃತದೇಹವನ್ನು ವಶಕ್ಕೆ ಪಡೆದು ಸ್ಥಳ ಮಹಜರು ನಡೆಸಿದ್ದಾರೆ.
ಈ ಬಗ್ಗೆ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.