×
Ad

ಬೆಳೆಹಾನಿ : ಸಮೀಕ್ಷೆ ನಡೆಸಿದ ವಾರದಲ್ಲಿ ವರದಿ ಸಲ್ಲಿಸಲು ಸಿಎಂ ಸೂಚನೆ : ಸಚಿವ ದರ್ಶನಾಪುರ

Update: 2025-09-08 17:59 IST

ಯಾದಗಿರಿ: ಜಿಲ್ಲೆಯಲ್ಲಿ ಸುರಿದ ಹೆಚ್ಚಿನ‌ ಮಳೆಯಿಂದಾಗಿ ಹಾನಿಯಾದ ಬೆಳೆಗಳ ಕುರಿತು ಜಂಟಿ ಸಮೀಕ್ಷೆ ನಡೆಸಿದ ಒಂದು ವಾರದಲ್ಲಿಯೇ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

ಸೋಮವಾರ ಸಿಎಂ ಜೊತೆ ನಡೆಸಿದ ವಿಡಿಯೋ ಕಾನ್ಪೂರೆನ್ಸ್ ನಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ, ಮನೆಗಳ ಹಾನಿ ಮತ್ತು ಮೃತಪಟ್ಟ ಜಾನುವಾರುಗಳ ಬಗ್ಗೆಯೂ ಸಮೀಕ್ಷೆ ನಡೆಸಲು ಸೂಚಿಸಲಾಗಿದ್ದು, ವರದಿ ಬಂದ ನಂತರ ಪರಿಹಾರ ವಿತರಿಸಲಾಗುವುದೆಂದರು.

ಜಿಲ್ಲೆಯಲ್ಲಿ ಹಾಳಾದ ರಸ್ತೆಗಳ ಬಗ್ಗೆಯೂ ವರದಿ ಸಿದ್ದಪಡಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.‌ ಇದಕ್ಕಾಗಿ ಈಗಾಗಲೇ 9 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

241 ಕೋಟಿ ರೂ. ಬಿಡುಗಡೆ :

ಕೆಕೆಆರ್ ಡಿಬಿ ಮೈಕ್ರೊ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ 241 ಕೋಟಿ ರೂ. ಬಿಡುಗಡೆಯಾಗಿದೆ. ಅಲ್ಲದೇ ಸಿಎಂ ಅವರು, ವಿಶೇಷ ಅನುದಾನದಡಿ ಶಾಸಕರಿಗೆ 50 ಕೋಟಿ ರೂ. ಅನುದಾನವಿದೆ. ಹೀಗಾಗಿ ಜಿಲ್ಲೆಯಲ್ಲಿ ಅವಶ್ಯವಿರುವ ಕೆಲಸ ಮಾಡಿಸಲಾಗುವುದು ಎಂದರು.

ಜಿಲ್ಲಾ ಕ್ರೀಡಾಂಗಣ ಸೇರಿದಂತೆಯೇ ಜಿಲ್ಲೆಯಲ್ಲಿನ ಎಲ್ಲ ಕ್ರೀಡಾಂಗಣಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಸಚಿವರು ಹೇಳಿದರು.

4 ಸಾವಿರ ಕ್ವಿಂಟಾಲ್ ಅಕ್ಕಿ ಜಪ್ತಿ : 

ಗುರುಮಠಕಲ್ ತಾಲೂಕಿನ ವಿವಿಧಡೆ ಆಹಾರ ಇಲಾಖೆ ದಾಳಿ ನಡೆಸಿದ್ದು, ನಾಲ್ಕು ಸಾವಿರ ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾಗಿದೆ. ಈ ಅಕ್ಕಿ ಪಡಿತರದ್ದೇ ಇರಬೇಕೆಂಬ ಅನುಮಾನವಿದ್ದು, ಈ ಬಗ್ಗೆ ಅಕ್ಕಿಯನ್ನು ಪರೀಕ್ಷೆಗೆ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದ ಸಚಿವರು, ಇದರಲ್ಲಿ ಭಾಗಿಯಾದವರ ಮೇಲೆ ಕಾನೂನಿನ ಕ್ರಮ ಜರುಗಿಸಲಾಗಿದೆ ಎಂದರು.

ಜನರು ಕೂಡಾ ಪಡಿತರ ಅಕ್ಕಿ ಪಡೆದು ಉಪಯೋಗ ಮಾಡಬೇಕು. ಬದಲಿಗೆ ಮಾರಾಟ ಮಾಡುವುದು ಸಲ್ಲ ಎಂದರು.

ಜಿಲ್ಲೆಯ ನಾಯ್ಕಲ್ ಗ್ರಾಮದ ಜಲ ಜೀವನ ಮಿಷನ್ ಕಾಮಗಾರಿ ಅವ್ಯವಹಾರದಲ್ಲಿ ಭಾಗಿಯಾದ ಆರೋಪದ ಮೇಲೇ ಮೂವರು ಅಧಿಕಾರಿಗಳು, ಗುತ್ತಿಗೆದಾರ ಹಾಗೂ ಮೂರನೇ ತಂಡದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಈ ಬಗ್ಗೆ ವಿವರ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News