ವಿವಿಧ ಇಲಾಖೆಗಳಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು: ಶಾಸಕ ಕಂದಕೂರ
ಯಾದಗಿರಿ: ಸರ್ಕಾರದಿಂದ ಕ್ಷೇತ್ರಕ್ಕೆ ಅನುದಾನ ತರಲು ಎಷ್ಟು ತೊಂದರೆಯಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾನು ವಿಧಾನಸಭೆ ಹೊರಗೆ ಹಾಗೂ ಒಳಗೆ ನಿಮ್ಮೇಲ್ಲರ ಧ್ವನಿಯಾಗಿ ಮಾತನಾಡಿ, ಅನುದಾನ ಬಿಡುಗಡೆಗೆ ಹಾಗೂ ಕ್ಷೇತ್ರದ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಗುರುಮಠಕಲ್ ಮತಕ್ಷೇತ್ರದ ಸೌದಾಗರ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಲೋಕೊಪಯೋಗಿ ಇಲಾಖೆಯಿಂದ ಹತ್ತಿಕುಣಿ ಗ್ರಾಮದಿಂದ-ಹತ್ತಿಕುಣಿ ಕ್ಯಾಂಪ್‌ವರೆಗೆ ರಾಜ್ಯ ಹೆದ್ದಾರಿ ರಸ್ತೆ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವುದು, 1 ಕೋಟಿ ರೂ. ವೆಚ್ಚದಲ್ಲಿ ಸೌದಾಗಾರ ಕ್ರಾಸ್ ತಿರುವಿನಲ್ಲಿ ಅಪಘಾತ ವಲಯ ರಸ್ತೆ ಸುಧಾರಣೆ ಹಾಗೂ ಸೌದಾಗಾರ ತಾಂಡಾದ ಶಾಲೆಯಲ್ಲಿ 58 ಲಕ್ಷ ರೂ. ವೆಚ್ಚದಲ್ಲಿ 4 ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಪ್ರಸಕ್ತ ದಿನಗಳಲ್ಲಿ ಗುರುಮಿಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು, ಅಂದಾಗ ಮಾತ್ರ ಜನರಿಗೆ ಬಹು ವರ್ಷ ಉಪಯೋಗಕ್ಕೆ ಅನುಕೂಲವಾಗುತ್ತದೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆವಹಿಸಬೇಕೆಂದು ಎಚ್ಚರಿಕೆ ನೀಡಿದರು.
ಉತ್ತಮ ರಸ್ತೆಗಳಿದ್ದರೆ ಮಾತ್ರ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಸಾಧ್ಯ. ಹಾಗಾಗಿ ವಿಶೇಷ ಅನುದಾನದ ಮೂಲಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ನನ್ನ ಏಳಿಗೆ ಸಹಿಸದ ವಿರೋಧ ಪಕ್ಷದ ಕೆಲ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ, ನಾನು ಅದಕ್ಕೆ ವಿಚಲಿತನಾಗದೇ ನಿರಂತರ ನಿಮ್ಮೇಲ್ಲರ ಕೆಲಸ ಮಾಡಲು ಆದ್ಯತೆ ನೀಡುತ್ತೇನೆ, ಬರುವ ದಿನಗಳಲ್ಲಿ ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಉತ್ತರ ನೀಡಲಿವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಬಳಿಚಕ್ರ, ಹಿರಿಯ ಮುಖಂಡರಾದ ಭೊಜಣ್ಣಗೌಡ ಯಡ್ಡಳ್ಳಿ, ಹತ್ತಿಕುಣಿ ಗ್ರಾಮ ಪಂಚಾಯತ ಅಧ್ಯಕ್ಷೆ ಅನ್ನಪೂರ್ಣ ಅಮೀನರಡ್ಡಿ ಬಿಳ್ಹಾರ ಮುಖಂಡರಾದ ಈಶ್ವರ ನಾಯಕ, ಮಲ್ಲರಡ್ಡಿಗೌಡ ಮಾಲಿ ಪಾಟೀಲ್ ಹತ್ತಿಕುಣಿ, ಸೋಮಣ್ಣಗೌಡ ಬೆಳಗೇರಾ, ಆನಂದರಡ್ಡಿ ವಡವಟ್, ಬಸ್ಸುಗೌಡ ಚಾಮನಳ್ಳಿ, ನರಸಪ್ಪ ಕಾವಡಿ, ಸಾಬಣ್ಣ ಹೋರುಂಚಾ, ಹೀರಾಸಿಂಗ್ ಪವಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಪಿ ಜಾನೇ, ಮಲ್ಲಿಕಾರ್ಜುನ ಪೂಜಾರಿ, ಲೋಕೋಪಯೊಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೈಲಾಸ್ ಅನವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಪಿಡಬ್ಲುಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಪರಶುರಾಮ ಮಾತನಾಡಿ, ಕಾಮಗಾರಿಗಳ ಮಾಹಿತಿ ತಿಳಿಸಿದರು. ಶರಣು ಗಡೇದ್ ಸ್ವಾಗತಿಸಿ, ವಂದಿಸಿದರು.