ಯಾದಗಿರಿ |ಜಿಲ್ಲೆಯಲ್ಲಿ ಅಕ್ರಮ ಮರಳು ಮಾರಾಟ ದಂಧೆ ನಿರಂತರವಾಗಿ ನಡೆಯುತ್ತಿದೆ : ಮಾಜಿ ಸಚಿವ ರಾಜುಗೌಡ ಆರೋಪ
ಯಾದಗಿರಿ: ಜಿಲ್ಲೆಯಲ್ಲಿ ಅಕ್ರಮ ಮರಳು ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ವಿಶೇಷವಾಗಿ ಸುರಪುರ ತಾಲೂಕಿನಲ್ಲಿ ಮಿತಿಮೀರಿದೆ. ಒಂದೇ ರಾಯಲ್ಟಿ ಪಡೆದು ಹತ್ತಾರು ಲಾರಿಗಳಲ್ಲಿ ಮರಳು ಸಾಗಾಟ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ನರಸಿಂಹ ನಾಯಕ್( ರಾಜುಗೌಡ ) ಆರೋಪಿಸಿದರು.
ತಾಲೂಕಿನ ಕೃಷ್ಣ ನದಿಪಾತ್ರದಲ್ಲಿ ನಿತ್ಯ ನೂರಾರು ಟಿಪ್ಪರ್ ಗಳ ಮೂಲಕ ಅಕ್ರಮ ಮರಳು ಸಾಗಟ ಮಾಡಲಾಗುತ್ತಿದೆ. ಈ ಬಗ್ಗೆ ನಾನು ಹಲವು ಬಾರಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಒಂದು ವೇಳೆ ಇದು ಹೀಗೆ ಮುಂದುವರೆದರೆ ನಮ್ಮ ಕಾರ್ಯಕರ್ತರೇ ಲಾರಿಗಳ ಟೈಯರಿನ ಗಾಳಿ ತೆಗೆಯಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಸುರಪುರ ತಾಲೂಕಿನಲ್ಲಿ ಪೋಲಿಸರಿಗೆ ರಕ್ಷಣೆ ಇಲ್ಲದಂತಾಗಿದೆ. ಎಸ್.ಬಿ.ಕರ್ತವ್ಯದಲ್ಲಿದ್ದ ನಿಂಗಣ್ಣ ಎನ್ನುವ ಒಬ್ಬ ಪೊಲೀಸ್ ಪೇದೆಯನ್ನು ಸುರಪುರ ಶಾಸಕರ ಆಪ್ತರು ಕರೆದೊಯ್ದು ತೋಟದಲ್ಲಿ ಹಗ್ಗ ಬಿಗಿದು ಮನಬಂದಂತೆ ಥಳಿಸಿದ್ದಾರೆ. ಕೊನೆಗೆ ಪೊಲಿಸರೇ ಸ್ಥಳಕ್ಕೆ ತೆರಳಿ ಕಾರ್ಯಕರ್ತರಿಗೆ ಮನವಿ ಮಾಡಿ ಅವರನ್ನು ಬಿಡಿಸಿಕೊಂಡು ಬಂದಿದ್ದಾರೆ. ಇದು ದೊಡ್ಡ ದುರಂತ ಎಂದರು.
ನಾರಾಯಣಪುರ ಪಿಎಸ್ ಐ ರಾಜಶೇಖರ ರೌಡಿಶೀಟರ್ ನಾಗರಾಜ ಜತೆ ಕೈ ಜೋಡಿಸಿ ಕಾನೂನು ಸುವ್ಯವಸ್ಥೆ ಹದಗೆಡಿಸಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ರೌಡಿಶೀಟರ್ ಜತೆ ಸ್ನೇಹ ಬೆಳೆಸುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ವಿನಾಕಾರಣ ನಮ್ಮ ಕಾರ್ಯಕರ್ತರ ಮೇಲೆ, ಸಾರ್ವಜನಿಕರ ಮೇಲೆ ಪೊಲೀಸರು ಕೇಸ್ ಹಾಕಲು ಮುಂದಾದರೆ ನಾನಂತೂ ಸುಮ್ಮನಿರಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭೀಮಾ ಪ್ರವಾಹ ಹಾಗೂ ವ್ಯಾಪಕ ಮಳೆ ಕಾರಣದಿಂದ ಜಿಲ್ಲಾದ್ಯಂತ ಲಕ್ಷಾನುಗಟ್ಟಲೇ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಸರ್ಕಾರ ಕೂಡಲೇ ಬೆಳೆ ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವ ನರಸಿಂಹ ನಾಯಕ್ ( ರಾಜುಗೌಡ ) ಆಗ್ರಹಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾದ್ಯಕ್ಷ ಬಸವರಾಜ ವಿಭೂತಿಹಳ್ಳಿ, ಪ್ರಮುಖರಾದ ಮಹೇಶರಡ್ಡಿ ಮುದ್ನಾಳ್, ಅಮೀನರಡ್ಡಿ ಯಾಳಗಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ದೇವೀಂದ್ರನಾತ ನಾದ್, ಪರಶುರಾಮ ಕುರಕುಂದಿ ಇದ್ದರು.