×
Ad

ಗುರುಮಠಕಲ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಕರ ಸಂಕ್ರಾಂತಿ ಸಂಭ್ರಮ: ಆಕರ್ಷಕ ರಂಗೋಲಿ ಸ್ಪರ್ಧೆ

Update: 2026-01-13 19:53 IST

ಗುರುಮಠಕಲ್ : ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿತು.

ಹಬ್ಬದ ಸಂಪ್ರದಾಯಗಳನ್ನು ಉಳಿಸುವ ಹಾಗೂ ವಿದ್ಯಾರ್ಥಿನಿಯರಲ್ಲಿ ಅಡಗಿರುವ ಸೃಜನಶೀಲತೆಯನ್ನು ಹೊರಹಾಕುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಆವರಣವು ವಿದ್ಯಾರ್ಥಿನಿಯರು ಬಿಡಿಸಿದ ಬಣ್ಣಬಣ್ಣದ ವೈವಿಧ್ಯಮಯ ರಂಗೋಲಿಗಳಿಂದ ಕಂಗೊಳಿಸುತ್ತಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡ ವಿಜಯಕುಮಾರ್ ನಿರೆಟಿ ಅವರು, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಪ್ರಾಮುಖ್ಯತೆಯಿದೆ. ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ರಂಗೋಲಿ ಸ್ಪರ್ಧೆಯ ಮೂಲಕ ಕಲೆ ಮತ್ತು ಸಂಪ್ರದಾಯವನ್ನು ಪ್ರದರ್ಶಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ವಿದ್ಯಾರ್ಥಿನಿಯರು ತಮ್ಮ ರಂಗೋಲಿಗಳಲ್ಲಿ ಸಂಕ್ರಾಂತಿಯ ಸಂಕೇತಗಳಾದ ಎಳ್ಳು-ಬೆಲ್ಲ, ಕುಂಭ, ಸೂರ್ಯ ಹಾಗೂ ಗ್ರಾಮೀಣ ಸೊಗಡನ್ನು ಬಿಂಬಿಸುವ ಚಿತ್ರಗಳನ್ನು ಅದ್ಭುತವಾಗಿ ಮೂಡಿಸಿ ಎಲ್ಲರ ಗಮನ ಸೆಳೆದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಜಯಕುಮಾರ್ ನಿರೆಟಿ ಅವರ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಪ್ರಥಮ ಬಹುಮಾನ ರಾಧಿಕಾ , ದ್ವಿತೀಯ ಬಹುಮಾನ ಲಕ್ಷ್ಮಿ ರಾಠೋಡ್, ತೃತೀಯ ಬಹುಮಾನ ಉಮಾ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಸಿಪಿಐ ವೀರಣ್ಣ ದೊಡ್ಡಮನಿ, ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಹೊಸಮನಿ, ನಿತ್ಯಾನಂದ ಬೂದಿ, ಪಾಶಾಪ್ಯಾರೆ ಹಾಗೂ ಉಪನ್ಯಾಸಕರಾದ ವೆಂಕಟರೆಡ್ಡಿ, ಪದ್ಮಮ್ಮ, ನಂದಿಕಿಶೋರ್, ರಾಮುಲು, ಪರಶುರಾಮ, ರಮೇಶ್ ಹಡಪದ ಮತ್ತು ಕಾಶಪ್ಪ ಉಪಸ್ಥಿತರಿದ್ದು ವಿದ್ಯಾರ್ಥಿನಿಯರನ್ನು ಹುರಿದುಂಬಿಸಿದರು. ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿನಿಯರು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News