ಕೇಂದ್ರೀಯ ವಿದ್ಯಾಲಯಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಕೂಡಲೇ ಭರ್ತಿಮಾಡಿ; ಭಾರತ ಸಂಜಯ್ ಕುಮಾರ್ ಅವರಿಗೆ ಸಂಸದ ಜಿ.ಕುಮಾರ ನಾಯಕ ಮನವಿ
ಯಾದಗಿರಿ: ಮಹತ್ವಾಕಾಂಕ್ಷೆಯ ಜಿಲ್ಲೆಗಳಾದ ರಾಯಚೂರು ಹಾಗೂ ಯಾದಗಿರಿ ಭಾಗಗಳಲ್ಲಿ ಶೈಕ್ಷಣಿಕ ಮಟ್ಟ ಕುಸಿದಿದ್ದು, ಈ ಭಾಗದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಭಾರತ ಸರಕಾರದ ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್ ಅವರಿಗೆ ಸಂಸದ ಜಿ.ಕುಮಾರ ನಾಯಕ ಮನವಿ ಮಾಡಿದರು.
ಹೊಸ ದಿಲ್ಲಿಯಲ್ಲಿನ ಕೇಂದ್ರ ಶಿಕ್ಷಣ ಸಚಿವಾಲಯದಲ್ಲಿ ಸೌಹಾರ್ತವಾಗಿ ಭೇಟಿ ಮಾಡಿದ ಅವರು, ಅರ್ಹ ಮತ್ತು ಶಾಶ್ವತ ಬೋಧಕ ಸಿಬ್ಬಂದಿಗಳನ್ನು ನೇಮಿಸಿ ಈ ಭಾಗದ ಶೈಕ್ಷಣಿಕ ಮಟ್ಟವನ್ನು ಸುಧಾರಿಸುವ ಬಗ್ಗೆ ಹಾಗೂ ವರ್ಗಾವಣೆಗೊಂಡ ಸಿಬ್ಬಂದಿಗಳ ಜಾಗಕ್ಕೆ ಕೂಡಲೇ ಸಿಬ್ಬಂದಿಗಳನ್ನು ನೇಮಿಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಚರ್ಚಿಸಿದರು.
ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದಲ್ಲಿ ಕೇಂದ್ರೀಯ ವಿದ್ಯಾಲಯ ಶಾಲೆಯನ್ನು ಕೂಡಲೇ ಪ್ರಾರಂಭಿಸುವ ಅಗತ್ಯ ಅನುಮತಿಗಳನ್ನು ನೀಡಬೇಕೆಂದು ಹಾಗೂ ಇನ್ನೂ ಹೆಚ್ಚಿನ ಕೇಂದ್ರೀಯ ವಿದ್ಯಾಲಯಗಳನ್ನು ಈ ಭಾಗಗಳಲ್ಲಿ ಸ್ಥಾಪನೆ ಮಾಡಬೇಕೆಂದು ಮನವಿ ಮಾಡಿದರು.