ಹೋರಟೂರು ಗ್ರಾಮದಲ್ಲಿ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ-ಇಒ ಸಂಗ್ವಾರ ಚಾಲನೆ
ವಡಗೇರಾ: ಮಕ್ಕಳ ಸ್ನೇಹಿ ಶಾಲಾ ವಾತಾವರಣ ನಿರ್ಮಿಸಲು ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಮಗ್ರ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರಿಂದ ಚಾಲನೆ ನೀಡಿದರು.
ತಾಲ್ಲೂಕಿನ ಉಳ್ಳೆಸೂಗುರು ಗ್ರಾಪಂ ವ್ಯಾಪ್ತಿಯ ಹೊರಟರು ಗ್ರಾಮದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ "ನಮ್ಮ ಶಾಲೆ ನಮ್ಮ ಅಭಿಯಾನದಡಿ" ಶಾಲಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಅಭಿಯಾನದಡಿ ತಾಲೂಕಿನ ಉಳ್ಳೆಸೂಗುರು, ಐಕೂರು, ಹೈಯಾಳಿ (ಬಿ), ಟಿ ವಡಗೇರಾ, ಗುಂಡಗುರ್ತಿ ಗ್ರಾಮ ಪಂಚಾಯಿತಿ ಸೇರಿದಂತೆ ಇತರ 17 ಗ್ರಾಮ ಪಂಚಾಯತಿಗಳಲ್ಲಿ, 2025-26ನೇ ಸಾಲಿನ ಶಾಲಾ ಅಭಿವೃದ್ಧಿ ಕಾಮಗಾರಿಗಳಾದ ಶಾಲಾ ಕಟ್ಟಡ, ಕಾಂಪೌಂಡ್, ಅಡುಗೆ ಕೋಣೆ, ಶೌಚಾಲಯ, ಅಂಗನವಾಡಿ ಶೌಚಾಲ, ವಾಲಿಬಾಲ್ ಆಟದ ಮೈದಾನ, ಖೋ ಖೋ, ಕಬ್ಬಡಿ ಹಾಗೂ ಇತರ ಕಟ್ಟಡ ನಿರ್ಮಾಣಕ್ಕೆ ತಾಲ್ಲೂಕಿನಾದ್ಯಂತ ಚಾಲನೆ ನೀಡಲಾಗಿದೆ.
ಗ್ರಾಮೀಣ ಭಾಗದ ಮಕ್ಕಳಿಗೆ ಆಟ-ಪಾಠದ ಜೊತೆಗೆ ಉತ್ತಮ ಪರಿಸರ, ಸ್ವಚ್ಛತೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಲಾಗುತ್ತಿದ್ದು. ಹೀಗಾಗಿ ನರೇಗಾ ಯೋಜನೆಯಡಿ 2025-26ನೇ ಸಾಲಿನಲ್ಲಿ ಕ್ರಿಯೆ ಯೋಜನಾ ರೂಪಿಸಿ, ಮಕ್ಕಳಿಗೆ ಉತ್ತಮ ಶೌಚಾಲಯ, ಕ್ರೀಡೆಗಳಿಗೆ ಪ್ರೋತ್ಸಾಹಿಸಲು ಮಕ್ಕಳಿಗೆ ಗುಣಮಟ್ಟದ ಆಟದ ಮೈದಾನಗಳು, ಶಾಲಾ ಕಂಪೌಂಡ್ ಗೋಡೆ, ಅಡುಗೆ ಕೋಣೆಗಳು ಸೇರಿದಂತೆ ಇತರ ಕಟ್ಟಡಗಳನ್ನು ಮಾನ್ಯ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಡಿಯಾ ಅವರ ಆದೇಶದಂತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಸ್ಥಳೀಯವಾಗಿ ಟೆಂಡರ್ ಪಡೆದ ಗುತ್ತಿಗೆದಾರರು ಹಾಗೂ ನರೇಗಾ ಕೂಲಿ ಕಾರ್ಮಿಕರ ದಿನದ ಕೂಲಿ ಮೊತ್ತ 370 ರೂಪಾಯಿ ನಿಗದಿಯಂತೆ ಶಾಲಾ ಅಭಿವೃದ್ಧಿ ಕಾಮಗಾರಿಗಳ ನಡೆಯಲಿವೆ ಎಂದರು.
ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಿಎಮ್ ಎಸ್ ಬಿವೈ ಹಾಗೂ ಪಿಎಮ್ ಜೆಜೆಬಿವೈ ಇನ್ಸುರೇನ್ಸ್ ಬಗ್ಗೆ ಮಾಹಿತಿ ನೀಡಿ, ಇನ್ಸುರೇನ್ಸ್ ಅರ್ಜಿಗಳನ್ನು ಗ್ರಾಮಸ್ಥರಿಗೆ ವಿತರಿಸಿ, ಪ್ರತಿಯೊಬ್ಬರು ಇನ್ಸುರೇನ್ಸ್ ಫಲನುಭವಿಗಳಾಗಲು ಕರೆ ನೀಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷರು ಶರಣಪ್ಪ, ಎಸ್ ಡಿಎಮ್ ಸಿ ಅಧ್ಯಕ್ಷರು, ಪಿಡಿಓ ಬಿ.ಆರ್ ಪಾಟೀಲ್, ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್, ಟಿಎಇ ಮಂಜುನಾಥ, ಬಾಸ್ಕರ್ ರಾವ್, ಗ್ರಾಪಂ ಸದಸ್ಯರು ಹಣಮಂತ್ರಾಯ, ಬಸ್ಸಪ್ಪ ಕೌಲಿ, ರವಿ ಪಾಟೀಲ್, ನಂದಣ್ಣಗೌಡ, ಬಿಎಫ್ ಟಿ, ಜಿಕೆಎಮ್, ಶಾಲಾ ಶಿಕ್ಷಕರು, ಗ್ರಾಮಸ್ಥರು ಇದ್ದರು.