×
Ad

ಯಾದಗಿರಿಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಉದ್ಘಾಟನೆ

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದು ಕೀರ್ತಿ ಹೆಚ್ಚಿಸಿ; ಸಚಿವ ಶರಣಬಸಪ್ಪ ದರ್ಶನಾಪುರ

Update: 2025-12-04 00:39 IST

ಯಾದಗಿರಿ: ಯುವ ಜನೋತ್ಸವದಲ್ಲಿ ಸ್ಪರ್ಧಾಳುಗಳು ತಮ್ಮ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಜೇತರಾಗುವ ಮೂಲಕ ಕೀರ್ತಿ ಹೆಚ್ಚಿಸುವಂತೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ರಾಜ್ಯಮಟ್ಟದ ಯುವಜನೋತ್ಸವವನ್ನು, ಮಡಿಕೆಗೆ ಸಿರಿಧಾನ್ಯ ತುಂಬಿ,ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದು ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯ್ಯಬೇಕು.ಪಾಲಕರು ಸಹ ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಇದೇ ಮೊದಲ ಬಾರಿಗೆ ಯಾದಗಿರಿಯಲ್ಲಿ ವಿಶೇಷವಾದ ರಾಜ್ಯ ಮಟ್ಟದ ಯುವಜನೋತ್ಸವ ಹಮ್ಮಿಕೊಂಡಿರುವುದು ಎಲ್ಲರಲ್ಲಿ ಉತ್ಸಾಹ,ಸಂತಸ ಮೂಡಿಸಿದೆ.

ರಾಜ್ಯದ ವಿವಿಧ ಭಾಗಗಳಿಂದ ಜಿಲ್ಲಾಮಟ್ಟದಲ್ಲಿ ಸಾಧನೆಗೈದು ರಾಜ್ಯ ಮಟ್ಟದ ಈ ಯುವಜನೋತ್ಸವದಲ್ಲಿ ಭಾಗವಹಿಸಿರುವುದಕ್ಕೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

ರಾಜ್ಯದ 31 ಜಿಲ್ಲೆಗಳಿಂದ 1050 ಸ್ಪರ್ಧಾಳುಗಳು ಭಾಗವಹಿಸಿರುವುದು ಸಂತಸದ ವಿಷಯ. ನಗರದ ವಿವಿಧ ಏಳು ವೇದಿಕೆಗಳಲ್ಲಿ ಜಾನಪದ ನೃತ್ಯ ,ಜಾನಪದ ಗೀತೆ,ಕವಿತೆ ಬರೆಯುವ ಸ್ಪರ್ಧೆ, ಘೋಷಣಾ ಸ್ಪರ್ಧೆ, ವಿಜ್ಞಾನ ಮೇಳ,ಕಥೆ ಬರೆಯುವ ಸ್ಪರ್ಧೆ ಹಾಗೂ ಚಿತ್ರಕಲೆ ಬರೆಯುವ ಸ್ಪರ್ಧೆಗಳು, ಮಲ್ಲಕಂಬ ಕ್ರೀಡೋತ್ಸವ ನಡೆಯುತ್ತಿವೆ.

ಸ್ಪರ್ದಾಳುಗಳು ಕೂಡ ಈ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ತಮ್ಮ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಿ ವಿಜೇತರಾಗಿ ಮುಂದೆ ನಡೆಯುವ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಅತಿಹೆಚ್ಚು ಪದಕ ಪಡೆದು‌ ಯಾದಗಿರಿ ಜಿಲ್ಲೆಯ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕೆಂದು ಶುಭಹಾರೈಸಿದರು.

ಯಾದವನಗರಿ ಎಂದೇ ಐತಿಹಾಸಿಕವಾಗಿ ಖ್ಯಾತಿ ಪಡೆದಿರುವ ಈ ನಗರದಲ್ಲಿ ಇಂದು ಯುವಜನೋತ್ಸವ ಆಚರಿಸಲು ನಾವೆಲ್ಲರೂ ಸೇರಿದ್ದೇವೆ.ಯುವ ಎಂದರೆ ಉತ್ಸಾಹ, ಸಾಹಸ,ಹುಮ್ಮಸ್ಸು ಚೈತನ್ಯ, ಮಹಾತ್ವಕಾಂಕ್ಷೆಯ ಪ್ರತೀಕ.ಈ ಕಾರ್ಯಕ್ರಮವು ಯುವಪ್ರತಿಭೆಗಳ ಯುವಶಕ್ತಿ ಗುರುತಿಸಿ, ಅವರಲ್ಲಿ ನ ಪ್ರತಿಭೆ ಪ್ರದರ್ಶಿಸಲು ಪ್ರೊತ್ಸಾಹದಾಯಕವಾದ, ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಭಾರತದ ಭವಿಷ್ಯ ನಿಮ್ಮಂತಹ ಯುವ ಜನರ ಕೈಯಲ್ಲಿದೆ ಇದು ಸರ್ವಕಾಲಿಕ ಸತ್ಯ. ಯುವ ವಯಸ್ಸಿನಲ್ಲೇ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್. ರಾಜಗುರುರಂತಹ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದರು.

ಇಂತಹ ಯುವಜನಾಂಗ ದಿಂದ ಸದೃಡ ಭಾರತ ನಿರ್ಮಿಸಲು ಸಾಧ್ಯ ಎಂಬುದನ್ನು ಮನಗಂಡು ಸರ್ಕಾರ ಎಲ್ಲ ರಂಗದಲ್ಲಿ ಯುವಕ,ಯುವತಿಯರಿಗೆ ಪ್ರೋತ್ಸಾಹ ನೀಡುತ್ತಿದೆ. ಯುವಜನಾಂಗ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂಬ ಉದ್ದೇಶದಿಂದ ಇಂತಹ ಮಹತ್ತರವಾದ ಕಾರ್ಯಕ್ರಮ ವನ್ನು ನಾವಿಲ್ಲಿ ಆಯೋಜಿಸಿದ್ದೇವೆ ಎಂದು ಹೇಳಿದರು.

ಯುವಕರು ಕಲೆ, ಸಂಗೀತ, ನಾಟಕ, ಹಾಡು, ಕುಣಿತ, ಗಳಂತಹ ಸಾಂಸ್ಕೃತಿಕ ಸೊಗಡನ್ನು ಉಳಿಸಿ ಬೆಳೆಸುವ ಮುಂದಾಳುಗಳಾಗಬೇಕು. ನಮ್ಮ ಗ್ರಾಮೀಣ ಕಲೆಗಳು,ಜಾನಪದ,ಜೋಗುಳ ಪದ, ಬೀಸುಪದ ಮುಂತಾದವುಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ತಮ್ಮ ಮೊದಲ ಕರ್ತವ್ಯವೆಂದು ತಿಳಿಯಬೇಕು ಎಂದು ಸಲಹೆ ನೀಡಿದರು.

ಈ ಯುವಜನೋತ್ಸವದಲ್ಲಿ ತಾವೆಲ್ಲರೂ ಕೇವಲ ಮನೋರಂಜನೆ ಎಂದು ಭಾವಿಸದೆ ನಿಮ್ಮೊಳಗಿರುವ ಕಲಾತ್ಮಕ ಮತ್ತು ಸೃಜನಶೀಲತೆ, ಕಲೆ ಸಾಹಿತ್ಯ ಪ್ರತಿಭೆಯನ್ನು ಹೊರಹಾಕಲು ಬಂದಿದ್ದೀರಿ.ನಾಟಕ, ನೃತ್ಯ ಸಂಗೀತ ,ಚಿತ್ರ ಕಲೆ, ಕಥೆ ,ಕವನ ರಚನೆಯಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದು ಈ ಉತ್ಸವದ ಮೂಲ ಉದ್ದೇಶ ವಾಗಿದೆ ಎಂದು ಹೇಳಿದರು.

ಸ್ಪರ್ದಾಳುಗಳಿಗೆ ಸೋಲು-ಗೆಲುವು ಸಹಜ ಆದರೆ ಪ್ರದರ್ಶನಮುಖ್ಯ.ತೀರ್ಪುಗಾರರ ತೀರ್ಪುಗಳನ್ನು‌ ತಾವು ಗೌರವಿಸಬೇಕು. ಹಾಗೆಯೇ ತೀರ್ಪುಗಾರರು ಕೂಡ ನ್ಯಾಯಯುತ ತೀರ್ಮಾನ ನೀಢಿ ಯಾವುದೇ ಪಕ್ಷಪಾತ ಮಾಡದೇ ನಿಜವಾದ ಪ್ರತಿಭಾವಂತರನ್ನು ಆಯ್ಕೆಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು, ಯಾದಗಿರಿ ಹೊಸ ಜಿಲ್ಲೆ ಆದಾಗಿನಿಂದ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಯುವಜನೋತ್ಸವ ಹಮ್ಮಿಕೊಂಡಿದ್ದು ಅಭಿಮಾನದ ಸಂಗತಿಯಾಗಿದೆ. ರಾಕ್ ಕ್ಲೈಂಬಿಂಗ್, ಸ್ಕೂಬಾ ಡೈವಿಂಗ್,ಕರಾಟೆ ಪ್ರದರ್ಶನ, ಮಲ್ಲಕಂಬ ಪ್ರದರ್ಶನ, ಏಳು ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಯುವಜನೋತ್ಸವದ ವಿಶೇಷತೆಯಾಗಿದವೆ ಎಂದು ಹೇಳಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತರಾದ ಚೇತನ್ .ಆರ್. ಅವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಯುವಕ,ಯುವತಿಯರು ರಾಯಭಾರಿಗಳಿದ್ದಂತೆ. ತಮ್ಮ ಸುಪ್ತ ಪ್ರತಿಭೆ ಸಕಾರಾತ್ಮಕ ವಾಗಿ ಪ್ರದರ್ಶಿಸಲು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು, ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾಗಿ, ಒಳ್ಳೆಯ ಆಧ್ಯಾತ್ಮಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮೋಬೈಲ್ ಗೀಳಿನಿಂದ ದೂರ ಉಳಿದು ಜೀವನದಲ್ಲಿ ಸಾಧನೆ ಮಾಡುವ ಛಲ ಹೊಂದಬೇಕು. ಇಲ್ಲಿಯ ಜಿಲ್ಲಾ ಕ್ರೀಡಾಂಗಣದ ಸುಧಾರಣೆಗೆ 6 ಕೋ.ರೂ ಒದಗಿಸುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದು,ತಾವು 1 ಕೋ.ರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಹ ಅನುದಾನ ಒದಗಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೇಣುಗೋಪಾಲ್ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್, ಅಪರ್ ಜಿಲ್ಲಾಧಿಕಾರಿ ರಮೇಶ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೂ ಮುನ್ನ ವಿವಿಧ ಸರ್ಕಾರಿ ಇಲಾಖೆಗಳ ಹತ್ತು ವಸ್ತುಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News