ಸುರಪುರ | ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ : ಕಠಿಣ ಕ್ರಮಕ್ಕೆ ಮನವಿ
ಸುರಪುರ: ಶಹಾಪುರ ನಗರದ ವಸತಿ ನಿಲಯ ಒಂದರಲ್ಲಿನ 9ನೇ ತರಗತಿ ವಿದ್ಯಾರ್ಥಿನಿಗೆ ಶೌಚಾಲಯದಲ್ಲಿ ಹೆರಿಗೆಯಾಗಿರುವ ಘಟನೆ ಮಾನವ ಸಮಾಜ ತಲೆ ತಗ್ಗಿಸುವಂತದ್ದಾಗಿದೆ. ಕೂಡಲೇ ಈ ಘಟನೆಗೆ ಕಾರಣವಾದ ಆರೋಪಿಯ ಮೇಲೆ ಪೋಕ್ಸೋ ಹಾಗೂ ಅಟ್ರಾಸಿಟಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದಿಂದ ನಗರದ ಪೊಲೀಸ್ ಠಾಣೆ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಈ ಘಟನೆಯಿಂದ ಪೋಷಕರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ವಿದ್ಯಾರ್ಥಿನಿಯ ಶಾಲೆಯ ಪ್ರಾಂಶುಪಾಲರು ಹಾಗೂ ವಸತಿ ನಿಲಯದ ಮೇಲ್ವಿಚಾರಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಹಾಗೂ ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು.
ಅಲ್ಲದೆ ಮತ್ತೆ ಈ ರೀತಿಯ ಘಟನೆಗಳು ಎಲ್ಲಿಯೇ ನಡೆದರೂ, ಅದಕ್ಕೆ ಶಾಲೆಯ ಪ್ರಾಂಶುಪಾಲರು ಮತ್ತು ವಸತಿ ನಿಲಯದ ಮೇಲ್ವಿಚಾರಕರೇ ಜವಬ್ದಾರರು ಎಂದು ಕಾನೂನು ಜಾರಿ ಮಾಡಿ ಮತ್ತೊಮ್ಮೆ ಈ ರೀತಿಯ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ನಂತರ ಡಿವೈಎಸ್ಪಿಗೆ ಬರೆದ ಮನವಿ ಪಿಎಸ್‌ಐ ಶಿವರಾಜ ಪಾಟೀಲ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಭೀಮನಗೌಡ ವಿ.ಲಕ್ಷ್ಮಿ, ಉಪಾಧ್ಯಕ್ಷ ಭೀಮು ಹೆಚ್.ನಾಯಕ, ಪ್ರ.ಕಾರ್ಯದರ್ಶಿ ನಾಗರಾಜ ನಾಯಕ ಪ್ಯಾಪ್ಲಿ, ಮೌನೇಶ ನಾಯಕ ದೇವರಗೋನಾಲ, ಸಂಜೀವ ನಾಯಕ ತಿಂಥಣಿ, ವೆಂಕಟೇಶ ಬೈರಿಮರಡಿ, ಗೋಪಾಲ ನಾಯಕ ಸತ್ಯಂಪೇಟೆ, ರಂಗನಾಥ ನಾಯಕ ಲಕ್ಷ್ಮಿಪುರ, ಯಲ್ಲಪ್ಪ ನಾಯಕ, ಗಂಗಾಧರ ನಾಯಕ ಅರಳಹಳ್ಳಿ, ವಿಷ್ಣು ಗುತ್ತೇದಾರ, ತಿಮ್ಮಣ್ಣ ನಾಯಕ, ಮೌನೇಶ ನಾಯಕ ದಳಪತಿ, ದೇವರಾಜ ನಾಯಕ, ಭಾಗನಾಥ ಗುತ್ತೇದಾರ, ಶ್ರೀನಿವಾಸ ನಾಯಕ, ಡಿ.ಟಿ.ಮಕಾಶಿ ಸೇರಿದಂತೆ ಅನೇಕರಿದ್ದರು.