ಸುರಪುರ | ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಗಮಕ ಕಲಾ ಪರಿಷತ್ತು ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.
ಯುವ ವಿಮರ್ಶಕ ಹಾಗೂ ಉಪನ್ಯಾಸಕ ವೆಂಕಟೇಶಗೌಡ ಪಾಟೀಲ ಮಾತನಾಡಿ, “ಕಾಲಕ್ಕೆ ತಕ್ಕಂತೆ ಕಾವ್ಯದ ಮಾರ್ಗ ಬದಲಾಗುತ್ತದೆ. ಆಧುನಿಕ ಕಾವ್ಯದ ಹೊಳಹುಗಳನ್ನು ಅರಿಯುವ ಮೂಲಕ ಉತ್ತಮ ಸಾಹಿತ್ಯ ಮೂಡಿ ಬರಲು ಸಾಧ್ಯ. 21ನೇ ಶತಮಾನದಲ್ಲಿ ಕಾವ್ಯ ರೂಪಾತ್ಮಕವಾಗಿ ಮಾತಾಡಬೇಕು. ಗಟ್ಟಿಯಾದ ಮಾನವೀಯ ಆಶಯವಿಲ್ಲದ ಕವಿತೆ ಯಶಸ್ಸು ಕಾಣಲಾರದು” ಎಂದು ಹೇಳಿದರು.
ಯಾದಗಿರಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, “ಇಂದಿನ ಕಾವ್ಯ ಗದ್ಯದ ರೂಪ ಪಡೆಯುತ್ತಿದ್ದು, ಅದರ ನೈಜತೆ ಮರೆಯಾಗುತ್ತಿದೆ. ಕಾವ್ಯದ ಅಸಲಿಯತ್ತನ್ನು ಓದುಗರಿಗೆ ತಲುಪಿಸುವುದು ಅಗತ್ಯ. ಕಾವ್ಯಕ್ಕೆ ಮನುಷ್ಯನ ಜಂಜಾಟದ ನೋವುಗಳನ್ನು ಮರೆಸುವ ಶಕ್ತಿಯಿದೆ” ಎಂದರು.
ಕಾರ್ಯಕ್ರಮದ ಅಂಗವಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು ಮಲ್ಲಣ್ಣ ಕೋಳೂರಗಿ, ಸಾಹೇಬರೆಡ್ಡಿ ಇಟಗಿ, ನೂತನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ನಾಮನಿರ್ದೇಶಿತ ಸದಸ್ಯ ಜಾವೇದ್ ಹವಾಲದಾರ, ನೂತನ ನಾಮ ನಿರ್ದೇಶಿತ ನಗರಸಭೆ ಸದಸ್ಯ ಪ್ರಕಾಶ ಅಲಬನೂರ ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಪತ್ರಕರ್ತ ರಾಜು ಕುಂಬಾರ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಸಾಹಿತಿ ಪ್ರಕಾಶಚಂದ ಜೈನ್, ವಕೀಲ ಯಲ್ಲಪ್ಪ ಹುಲಕಲ್, ಗೃಹರಕ್ಷಕ ಕಮಾಂಡೆಂಟ್ ವೆಂಕಟೇಶ ಸುರಪುರ, ಮಹೇಂದ್ರ ಅಂಗಡಿ, ಚಂದ್ರಕಾಂತ ಮಾರ್ಗೆಲ್, ಪ್ರಕಾಶ ಬಣಗಾರ, ಶರಣಬಸವ ಹೂಗಾರ, ಮಹೇಂದ್ರ ಕೋನಾಳ, ಬಾಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
📌 ಕವಿಗೋಷ್ಠಿ
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ನಬಿಲಾಲ ಮಕಾನದಾರ, ಶರಣಗೌಡ ಜೈನಾಪುರ, ಪತ್ರಕರ್ತ ರಾಜು ಕುಂಬಾರ, ಮಲ್ಲಿಕಾರ್ಜುನ ಉದ್ದಾರ, ಶರಣಬಸಪ್ಪ ಯಾಳವಾರ, ದೇವು ಹೆಬ್ಬಾಳ, ಎಚ್. ರಾಠೋಡ, ಶ್ರೀನಿವಾಸ ಜಾಲವಾದಿ, ಕನಕಪ್ಪ ವಾಗಣಗೇರಿ, ಜಾವೇದ್ ಹವಾಲದಾರ, ಪ್ರಕಾಶ ಅಲಬನೂರ ಸೇರಿದಂತೆ ಅನೇಕರು ಸ್ವರಚಿತ ಕವಿತೆಗಳನ್ನು ವಾಚಿಸಿದರು.