ಯಾದಗಿರಿ | ಮೈಲಾಪುರ ಜಾತ್ರೆಯಲ್ಲಿ ಕುರಿ ಹಾರಿಸುವುದು ನಿಷೇಧ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಆದೇಶ
ಯಾದಗಿರಿ: ತಾಲೂಕಿನ ಮೈಲಾಪುರ ಗ್ರಾಮದ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ದೇವರ ಪಲ್ಲಕ್ಕಿಗೆ ಕುರಿಗಳನ್ನು ಹಾರಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಆದೇಶ ಹೊರಡಿಸಿದ್ದಾರೆ. ಪ್ರಾಣಿ ಬಲಿ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮೈಲಾರಲಿಂಗೇಶ್ವರ ಜಾತ್ರೆಯು 2026ರ ಜನವರಿ 12 ರಿಂದ 18ರ ವರೆಗೆ ನಡೆಯಲಿದ್ದು, ಜನವರಿ 14ರಂದು ನಡೆಯುವ ಪಲ್ಲಕ್ಕಿ ಉತ್ಸವದ ವೇಳೆ ಭಕ್ತರು ಕುರಿಗಳನ್ನು ಹಾರಿಸುವ ವಾಡಿಕೆ ಇತ್ತು. ಆದರೆ, ಪ್ರಾಣಿ ಹಕ್ಕುಗಳ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕಟ್ಟುನಿಟ್ಟಿನ ನಿಷೇಧ :
ಜಾತ್ರೆಯಲ್ಲಿ ಪಲ್ಲಕ್ಕಿಗೆ ಕುರಿ ಅಥವಾ ಯಾವುದೇ ಪ್ರಾಣಿಗಳನ್ನು ಹಾರಿಸುವುದು, ಪ್ರಾಣಿಗಳ ಮಾರಾಟ, ಖರೀದಿ ಹಾಗೂ ಹರಾಜು ಪ್ರಕ್ರಿಯೆ ನಡೆಸುವುದನ್ನು ನಿಷೇಧಿಸಲಾಗಿದೆ.
ಚೆಕ್ ಪೋಸ್ಟ್ ಸ್ಥಾಪನೆ :
ಜನವರಿ 12ರ ಮಧ್ಯರಾತ್ರಿಯಿಂದ 18ರ ಮಧ್ಯರಾತ್ರಿಯವರೆಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ, ಜಾತ್ರೆಗೆ ಕುರಿಗಳು ಪ್ರವೇಶಿಸದಂತೆ ಕಾವಲು ಕಾಯಲಾಗುವುದು.
ಕಠಿಣ ಕ್ರಮದ ಎಚ್ಚರಿಕೆ :
ಒಂದು ವೇಳೆ ಕುರಿಗಳನ್ನು ಹಾರಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದಲ್ಲಿ, ಅಂತಹ ಸ್ಥಳದ ಜಮೀನು ಅಥವಾ ನಿವೇಶನವನ್ನು ಸರ್ಕಾರ ವಶಕ್ಕೆ ಪಡೆಯಲಿದೆ. ಕುರಿಗಳನ್ನು ಸಾಗಿಸುವ ವಾಹನಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಶಸ್ತ್ರಗಳ ನಿಷೇಧ :
ಜನವರಿ 14ರಂದು ಗಂಗಾ ಸ್ನಾನದ ಮೆರವಣಿಗೆಯ ಸಮಯದಲ್ಲಿ ಸಾಮೂಹಿಕವಾಗಿ ಬೆತ್ತದ ಬಡಿಗೆಗಳು, ಛತ್ರಿಗಳು ಹಾಗೂ ಯಾವುದೇ ರೀತಿಯ ಶಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಯಾವುದೇ ಕಾರಣಕ್ಕೂ ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸೂಚಿಸಿದ್ದಾರೆ.