ಯಾದಗಿರಿ | ವೈಚಾರಿಕ ಚಿಂತನೆ ಬೆಳೆಸಿಕೊಳ್ಳಿ : ಡಾ.ಹುಲಿಕಲ್ ನಟರಾಜ್
ಯಾದಗಿರಿ: ಸಮಾಜದಲ್ಲಿ ಮೂಡನಂಬಿಕೆ ಮತ್ತು ಅಂಧಶ್ರದ್ಧೆ ಇನ್ನೂ ಜೀವಂತವಾಗಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೈಚಾರಿಕ ಚಿಂತನೆ ಮೈಗೂಡಿಸಿಕೊಂಡು ಬದಲಾವಣೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಕರೆ ನೀಡಿದರು.
ನಗರದ ಪಾಟೀಲ್ ಕನ್ವೆಂಷನ್ ಹಾಲ್‌ನಲ್ಲಿ ಜಿಲ್ಲಾ ಸಹಮತ ವೇದಿಕೆ ಹಾಗೂ ಬಸವ ಸಂಸ್ಕೃತಿ ಅಭಿಯಾನ ಸಮಿತಿ ವತಿಯಿಂದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಡಾ.ನಟರಾಜ್ ಅವರು “ದೇಶವು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯ ದಾರಿಗೆ ಸಾಗಿದರೂ ಸಮಾಜದಲ್ಲಿ ಮೂಡನಂಬಿಕೆಗಳ ನೆರಳು ಇನ್ನೂ ಗಾಢವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಧರ್ಮವು ಕೆಲವರ ಸ್ವತ್ತಾಗಬಾರದು, ಒಂದು ಜಾತಿಯ ಸೀಮೆಯೊಳಗೆ ಸೆರೆಯಾಗಬಾರದು. ವೈಚಾರಿಕತೆ ಎಂದರೆ ಹರಿಯುವ ನೀರಿನಂತೆ ಎಲ್ಲರಿಗೂ ತಲುಪಬೇಕು. ಮನೆಯ ವಾಸ್ತುಗಿಂತ ಮನಸ್ಸಿನ ವಾಸ್ತು ಶುದ್ಧವಾಗಿರಬೇಕು. ಇದರಿಂದಲೇ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದನ್ನು ಟೀಕಿಸಿದ ಅವರು, ಅದಕ್ಕೆ ಕಡಿವಾಣ ಹಾಕಿ ಹೊಸ ವಿಷಯಗಳ ಅಧ್ಯಯನ ಹಾಗೂ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. “ಪ್ರಶ್ನಿಸುವ ಮನಸ್ಸಿನಿಂದಲೇ ಜ್ಞಾನ ವಿಕಾಸವಾಗುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, “ಜಾತಿ ಸಮಾಜದಲ್ಲಿ ಕತ್ತರಿಯಂತೆ ವಿಭಜನೆ ಮಾಡುತ್ತದೆ, ಆದರೆ ಧರ್ಮ ಸೂಜಿಯಂತೆ ಎಲ್ಲರನ್ನು ಒಗ್ಗೂಡಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ನಿಜಗುಣಾನಂದ ಮಹಾಸ್ವಾಮಿಜಿ ಮಾತನಾಡಿ, ಬಸವಣ್ಣನವರು ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಟ್ಟರು. ವಿದ್ಯಾರ್ಥಿಗಳು ಅವರ ಸಂದೇಶ ಅರಿತು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಉದ್ಘಾಟಿಸಿದರು.
ವೇದಿಕೆ ಮೇಲೆ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯಮಹಾಸ್ವಾಮಿಜಿ, ಗುರುಮಿಠಕಲ್ ಖಾಸಾ ಮಠದ ಶಾಂತವೀರ ಮಹಾಸ್ವಾಮಿಜಿ, ಶಿವಾನಂದ ಮಹಾಸ್ವಾಮಿಜಿ ಹುಣಸಗಿ, ನಾಗನೂರಿನ ಅಲ್ಲಮಪ್ರಭು ಮಹಾಸ್ವಾಮಿಜಿ, ಅಥಣಿಯ ಪ್ರಭುಚನ್ನಬಸವ ಮಹಾಸ್ವಾಮಿಜಿ, ಉರಿಲಿಂಗ ಪೆದ್ದೀಶ್ವರ ಮಠದ ಜ್ಞಾನಪ್ರಕಾಶ ಸ್ವಾಮಿಜಿ, ಕೊಡೆಕಲ್‌ನ ಶಿವುಕುಮಾರ ಸ್ವಾಮಿಜಿ, ಚಿಗರಳ್ಳಿಯ ಕಭೀರಾನಂದ ಸ್ವಾಮಿಜಿ, ಸಹಮತ ವೇದಿಕೆ ಜಿಲ್ಲಾಧ್ಯಕ್ಷ ಡಾ. ಭೀಮಣ್ಣ ಮೇಟಿ, ಗುಂಡಪ್ಪ ಕಲಬುರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವರಾಜ ಕಲಕೇರಿ ಸುರಪುರ ಸ್ವಾಗತಿಸಿದರೇ, ಡಾ. ಎಸ್.ಎಸ್ ನಾಯಕ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸಹಸ್ರಾರು ಬಸವಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.