ಯಾದಗಿರಿ | ಅಜಲಾಪುರ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಉಮೇಶ್ ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ
ಗುರುಮಠಕಲ್ (ಯಾದಗಿರಿ): ಅಜಲಾಪುರ ಗ್ರಾಮದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಗ್ರಾಮಸ್ಥರು ಇಂದು ಪ್ರಮುಖ ರಸ್ತೆಯಲ್ಲಿ ಜಾಲಿಮುಳ್ಳು ಹಿಡಿದು ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಉಮೇಶ್ ಕೆ. ಮುದ್ನಾಳ ಅವರು, ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಅಜಲಾಪುರದಲ್ಲಿ ಸಿಸಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು ಇಲ್ಲ. ಗ್ರಾಮ ಅಭಿವೃದ್ಧಿಗೆ ಬಂದ ಅನುದಾನ ಅಧಿಕಾರಿಗಳ ಕಳ್ಳಾಟದಲ್ಲಿ ಮರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಪಂಚಾಯತ್ ಕಚೇರಿಗೆ ಜಾಲಿಮುಳ್ಳು ಹಾಕಿ, ಪತ್ರಿಕಾ ವರದಿಗಳ ಪ್ರತಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಭರವಸೆ ನೀಡಿದ್ದಾರೆ.
ಗ್ರಾಮಸ್ಥರು ಒಟ್ಟು 26 ಬೇಡಿಕೆಗಳನ್ನು ಮಂಡಿಸಿದ್ದು, ಬೇಡಿಕೆಗಳನ್ನು ಒಂದು ವಾರದೊಳಗೆ ಪೂರೈಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಬನ್ನಪ್ಪ, ವಿಶ್ವನಾಥ, ವೆಂಕಟೇಶ್, ಮಲ್ಲು, ಆನಂದ, ಶಿವು, ರಾಜಪ್ಪ, ಅಂಜಪ್ಪ, ಶಂಕ್ರಪ್ಪ, ಮಲ್ಲಮ್ಮ, ಸಾವಿತ್ರಮ್ಮ ಸೇರಿದಂತೆ ಅನೇಕ ಗ್ರಾಮಸ್ಥರು ಮತ್ತು ಮಹಿಳೆಯರು ಭಾಗವಹಿಸಿದ್ದರು.