ಯಾದಗಿರಿ | ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಮೃತದೇಹ ಕಾಲುವೆಯಲ್ಲಿ ಪತ್ತೆ; ಸಾವಿನ ಸುತ್ತ ಅನುಮಾನ
ಸಾಂದರ್ಭಿಕ ಚಿತ್ರ
ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್‌ನಲ್ಲಿ ದೀಪಾವಳಿ ಅಮಾವಾಸ್ಯೆ ದಿನ ಮನೆಯಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಶನಿವಾರ ಪತ್ತೆಯಾಗಿದೆ.
ಕೊಡೇಕಲ್ ಗ್ರಾಮದ ಸೌಜನ್ಯ (18) ಎಂಬ ಯುವತಿ ಕೆಲವು ದಿನಗಳಿಂದ ಕಾಣೆಯಾಗಿದ್ದಳು. ಗೋಗಿ ಬಳಿಯ ಕಾಲುವೆಯಲ್ಲಿ ಸೌಜನ್ಯಳ ಮೃತದೇಹ ಪತ್ತೆಯಾಗಿದೆ.
ʼಚಿರು, ಪಾಂಡಾ ಹಾಗೂ ರಾಜೇಶ್ ಎಂಬವರು ಕಾರಿನಲ್ಲಿ ಬಂದು ಯುವತಿಯನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಕಾಲುವೆಗೆ ಬಿಸಾಕಿದ್ದಾರೆʼ ಎಂದು ಮೃತ ಸೌಜನ್ಯಳ ತಂದೆ ಶರಣಪ್ಪ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂಬ ಆರೋಪ ಕುಟುಂಬ ಮತ್ತು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ. “ಎಲ್ಲಾ ಆಯಾಮಗಳಲ್ಲಿ ಮಾಹಿತಿ ಸಂಗ್ರಹಣೆ ನಡೆಯುತ್ತಿದೆ, ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುತ್ತದೆ” ಎಂದು ಕೊಡೇಕಲ್ ಪೊಲೀಸರು ತಿಳಿಸಿದ್ದಾರೆ.
ಸೌಜನ್ಯ ಕಾಣೆಯಾದ ವೇಳೆ ಕೂಡಲೇ ಕೇಸ್ ದಾಖಲಿಸದಿದ್ದಕ್ಕೆ ಗ್ರಾಮಸ್ಥರು ಕೊಡೇಕಲ್ ಠಾಣೆಯ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೃತಳ ಪೋಷಕರು ಹಾಗೂ ಗ್ರಾಮಸ್ಥರು ಪೋಲಿಸರ ವಾಹನ ತಡೆದು ಪ್ರತಿಭಟನೆ ನಡೆಸಿದ್ದರು.