ಯಾದಗಿರಿ | ಪಿಯು ಪರೀಕ್ಷೆಗೆ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ : ಎಸ್ ಪಿ ಪೃಥ್ವಿಕ್ ಶಂಕರ್
"20 ಕಡೆ 132 ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜನೆ"
ಯಾದಗಿರಿ : ಜಿಲ್ಲೆಯಾದ್ಯಂತ ಫೆ.28ರಿಂದ ಆರಂಭಗೊಳ್ಳಲಿರುವ ಪಿಯು ದ್ವಿತೀಯ ವರ್ಷದ ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 20 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಕೇಂದ್ರಗಳಲ್ಲೂ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ ಒಟ್ಟು 132 ಜನರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಭದ್ರತೆಗೆ 13 ಪಿಎಸ್‌ಐ, 23 ಎಎಸ್‌ಐ, 69 ಪೊಲೀಸ್ ಪೇದೆಗಳು ಹಾಗೂ 23 ಮಹಿಳಾ ಪೇದೆಗಳನ್ನು ನೇಮಕ ಮಾಡಲಾಗಿದೆ.
ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಕೆಂಭಾವಿ ಹಾಗೂ ಹುಣಸಗಿ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಅತಿಸೂಕ್ಷ್ಮ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಅನ್ಯರು ಆ ಪ್ರದೇಶಕ್ಕೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗಿದೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಎಚ್ಚರಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವಿದ್ಯಾರ್ಥಿಗಳಿಗೆ ಸುಗಮ ಹಾಗೂ ಶಾಂತಿಯುತ ಪರೀಕ್ಷಾ ವಾತಾವರಣ ಕಲ್ಪಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.