ಯಾದಗಿರಿ | ವಡಗೇರಾ, ದೋರನಹಳ್ಳಿ ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ: ಸಚಿವ, ಶಾಸಕರಿಗೆ ಸನ್ಮಾನ
ಯಾದಗಿರಿ: ಜಿಲ್ಲೆಯ ವಡಗೇರಾ, ದೋರನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೆ ಏರಿಸಿದ್ದರ ಹಿಂದೆ ಸಚಿವರಾದ ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ ಖರ್ಗೆ, ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರ ಶ್ರಮ ಅಪಾರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮರೆಪ್ಪ ಬಿಳ್ಹಾರ್ ಹೇಳಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಮರೆಪ್ಪ ಬಿಳ್ಹಾರ್, ಕಳೆದ ವಿಧಾನಸಭಾ ಚುನಾವಣೆ ವೇಳೆ ಎರಡು ಕಡೆ ಪ್ರಚಾರಕ್ಕೆ ಹೋದ ವೇಳೆ ಈ ಬೇಡಿಕೆಗಳ ಬಗ್ಗೆ ಜನರು ಮನವಿ ಸಲ್ಲಿಸಿದ್ದರು. ಅದರಂತೆಯೇ ಶಾಸಕರಾದ ಪಾಟೀಲ್ ಅವರು ಸಚಿವರು, ಡಿಸಿಎಂ, ಸಿಎಂ ಅವರ ಸಹಕಾರದಿಂದ ಒಂದೇ ತಿಂಗಳಲ್ಲಿ ಮಹತ್ವದ ಕೆಲಸಗಳು ಮಾಡಿದ್ದಾರೆ. ಆದ್ದರಿಂದ ಸಚಿವರು, ಶಾಸಕರನ್ನು ಭೇಟಿ ಮಾಡಿ ದೋರನಹಳ್ಳಿ ಕಾಂಗ್ರೆಸ್ ಘಟಕಗಳಿಂದ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ಅವರನ್ನು ಸನ್ಮಾನಿಸಲಾಗುವುದು ಎಂದು ಮರೆಪ್ಪ ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಾರೆಡ್ಡಿ, ರಾಘವೇಂದ್ರ ಮನಸಗಲ್, ಶಿವರಾಜ್, ಶರಣು ಪಡಶೇಟ್ಟಿ ಸಹಿತ ಹಲವರು ಉಪಸ್ಥಿತರಿದ್ದರು.