ಯಾದಗಿರಿ| ಭೀಮಾ ಸೇತುವೆ ಕಾಮಗಾರಿ ಆಮೆಗತಿ: ಆಡಳಿತದ ನಿರ್ಲಕ್ಷ್ಯಕ್ಕೆ ಉಮೇಶ್ ಕೆ ಮುದ್ನಾಳ ಆಕ್ರೋಶ
ಯಾದಗಿರಿ: ಜಿಲ್ಲೆಯ ಜೀವನಾಡಿ ಎಂದೇ ಕರೆಯುವ ರಾಜ್ಯ ಹೆದ್ದಾರಿ, ಭೀಮಾ ನದಿಯ ಸೇತುವೆ ಮಾರ್ಗದಲ್ಲಿ ರಸ್ತೆ ಕಾಮಗಾರಿ ಸದ್ಯ ಆಮೆಗತಿಯಲ್ಲಿ ನಡೆಯುತ್ತಿದ್ದು ಹೊಸ ರೈಲು ಸೇತುವೆ ಮತ್ತು ಗುರುಸಣಗಿ ಬ್ರಿಜ್-ಬ್ಯಾರೇಜ್ ರಸ್ತೆ ಸಂಪೂರ್ಣವಾಗಿ ಹಾಳಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಉಮೇಶ್ ಕೆ. ಮುದ್ನಾಳ, ಹಳೆಯ ಸೇತುವೆ ದುರಸ್ತಿಯೇ ಗಂಟಲು ಹಿಡಿದಂತೆ ನಡೆದಿದೆ. ಕೃಷ್ಣ ಮೇಲ್ದಂಡೆ ಯೋಜನೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಭಾರವಾದ ವಾಹನಗಳು ಸಂಚಾರಕ್ಕೆ ನಿರ್ಬಂಧ ಹೇರುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.
ರಸ್ತೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದು, ಜಿಲ್ಲಾಡಳಿತ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರಿಗೆ ರಾತ್ರಿ-ಹಗಲು 24 ಗಂಟೆ ನಿರಂತರವಾಗಿ ಕಾಮಗಾರಿ ನಡೆಸಿ ಬೇಗನೆ ಪೂರ್ಣಗೊಳ್ಳುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು. ಕಾಮಗಾರಿ ತ್ವರಿತಗೊಳಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಾಗರೆಡ್ಡಿಗೌಡ ಹತ್ತಿಕುಣಿ, ದೇವಣ್ಣಗೌಡ ಪಾಟೀಲ್ ಮಲ್ಲಬಾದಿ, ಮಹಾಂತಪ್ಪ ಜಾಗಟೆ ದೋರನಹಳ್ಳಿ, ಈರಣ್ಣ ಗೌಡ ಪೋಲಿಸ್ ಪಾಟೀಲ್ ಹಳಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.