Yadgiri | ಸುರಪುರದಲ್ಲಿ ಕಾರ್ಮಿಕರಿಗೆ ಸರಕಾರಿ ಸೌಲಭ್ಯಗಳ ಬಗ್ಗೆ ಜಾಗೃತಿ ಅಭಿಯಾನ
ಸುರಪುರ : ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ತಾಲೂಕು ಘಟಕದ ವತಿಯಿಂದ ನಗರದಲ್ಲಿ ಜಾಗೃತಿ ಅಭಿಯಾನ ನಡೆಯಿತು. ಈ ವೇಳೆ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರನ್ನು ಭೇಟಿಯಾಗಿ, ಕಾರ್ಮಿಕ ಇಲಾಖೆಯಿಂದ ಸರ್ಕಾರ ನೀಡುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಂಘಟನೆಯ ತಾಲೂಕು ಅಧ್ಯಕ್ಷ ಚಂದ್ರು ಎಲಿಗಾರ ಮಾತನಾಡಿ, ಕಾರ್ಮಿಕ ಇಲಾಖೆಯು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಅನೇಕ ಕಾರ್ಮಿಕರು ತಮ್ಮ ಹೆಸರು ಇಲಾಖೆಯಲ್ಲಿ ನೋಂದಾಯಿಸದೇ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಕಾರಣಕ್ಕಾಗಿ ನಮ್ಮ ಸಂಘಟನೆಯು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸರ್ಕಾರಿ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ಶ್ರಮಿಸುತ್ತಿದೆ ಎಂದು ಹೇಳಿದರು.
ಅಭಿಯಾನದ ಅಂಗವಾಗಿ ಸಂಘಟನೆಯ ಸದಸ್ಯರು ನಗರದಲ್ಲಿನ ವಿವಿಧ ಅಂಗಡಿಗಳು ಹಾಗೂ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿ ಕಾರ್ಮಿಕರಿಗೆ ಬಿತ್ತಿ ಪತ್ರಗಳನ್ನು ಹಂಚಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ರವಿ ಚೌಹಾಣ್, ಮುಹಮ್ಮದ್ ಖಾಲಿದ್, ರಾಜು ಕಲಾಲ್, ಮಹಬೂಬ್ ಪೇಂಟರ್ ಸೇರಿದಂತೆ ಅನೇಕ ಜನ ಕಟ್ಟಡ ಕಾರ್ಮಿಕರು ಕೂಡ ಭಾಗವಹಿಸಿದ್ದರು.