ಯಾದಗಿರಿ | ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ
ಸುರಪುರ : ಲೋಕಸಭೆಯಲ್ಲಿ ಅಂಗೀಕರಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೂಡಲೇ ರದ್ದುಪಡಿಸುವಂತೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಂಘಟನೆಗಳ ಒಕ್ಕೂಟದ ಹಲವು ಮುಖಂಡರು ಮಾತನಾಡಿ, ಲೋಕಸಭೆಯಲ್ಲಿ ಅಂಗೀಕರಿಸಿದ ವಕ್ಫ್ ತಿದ್ದುಪಡಿ ಕಾಯ್ದೆ ಅಸಂವಿಧಾನಿಕವಾಗಿದ್ದು ಈ ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಬೋರ್ಡ ವ್ಯವಸ್ಥೆಯನ್ನು ನಾಶ ಮಾಡುವ ಮೂಲಕ ಧಾರ್ಮಿಕ ವ್ಯವಹಾರಗಳ ಮೇಲೆ ಮುಸ್ಲಿಂಮರು ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಲೋಕಸಭೆಯಲ್ಲಿ ಅಂಗೀಕರಿಸಿದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಿ, ಈ ಹಿಂದೆ ಇದ್ದ ವಕ್ಫ್ ಕಾಯ್ದೆಗೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಬರೆದಿರುವ ಮನವಿಯನ್ನು ತಹಶೀಲ್ದಾರರ ಮೂಲಕ ಸಲ್ಲಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಅಬ್ದುಲ್ ಗಫಾರ್ ನಗನೂರಿ, ಪ್ರಮುಖರಾದ ಮುಹಮ್ಮದ್ ಬಾಬಾಖಾನ, ಹಾಫೀಜ್ ಶರೀಫ್, ಗುಲ್ಮಾ ರಬ್ಬಾನಿ ತಿಮ್ಮಾಪುರ, ಅಬ್ದುಲ್ ಅಲೀಂ ಗೋಗಿ, ಸೈಯದ್ ಮಜರ್ ಹುಸೇನ, ಸಿರಾಜುದ್ದಿನ್ ಸಾಬ, ಅಹ್ಮದ ಪಠಾಣ, ಮುಫ್ತಿ ಶೇಕ ಇಕ್ಬಾಲಸಾಬ ಒಂಟಿ, ರಿಯಾಜ್ ಉಲ್ ರಹೆಮಾನ್ ಅನ್ಸಾರಿ ಮೋಜಂಪುರ, ಎ.ಆರ್.ಪಾಶಾ, ಸೈಯದ್ ಅಹ್ಮದಪಾಶಾ ಖಾದ್ರಿ, ಉಸ್ತಾದ ಶೇಖ ಲಿಯಾಖತ್ ಹುಸೇನ, ಶೇಖ ಮಹಿಬೂಬ ಒಂಟಿ, ಅಬ್ದುಲ್ ಮಜೀದ ಖುರೇಷಿ, ಖಾಜಾ ಖಲೀಲ್ ಅಹ್ಮದ ಅರಕೇರಾ, ಖಾಲೀದ್ ಅಹ್ಮದ ತಾಳಿಕೋಟಿ, ಶಕೀಲ್ ಅಹ್ಮದ ಖುರೇಷಿ, ಹುಸೇನ ಸವಾರ, ಸೈಯದ್ ಇದ್ರಿಸ್ ದಖನಿ, ಸೈಯದ್ ಭಕ್ತಿಯಾರ್ ಅಹ್ಮದ್, ಆಬೀದ ಹುಸೇನ ಪಗಡಿ, ಲಿಯಾಖತ್ ಪಣಿಬಂದ್, ಆಬೀದ್ ಹುಸೇನ.ಡಿ.ಎಮ್, ದಾವೂದಸಾಬ ಕಕ್ಕೇರಾ, ಸದ್ದಾಂ ಹುಸೇನ ಹಾಗೂ ನಗರಸಭೆ ಸದಸ್ಯರಾದ ನಾಸೀರ ಅಹ್ಮದ ಕುಂಡಾಲೆ, ಮಹ್ಮದ ಗೌಸ್, ಖಮರುದ್ದಿನ್ ನಾರಾಯಣಪೇಟ, ಮಹ್ಮದ ಮಹಿಬೂಬ ಖುರೇಷಿ, ಅಹ್ಮದ ಶರೀಫ್ ಹಾಗೂ ಸೋಮನಾಥ ಡೊಣ್ಣಿಗೇರಾ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೃಹತ್ ಮೆರವಣಿಗೆ :
ನಗರಸ ಪೋಲಿಸ್ ಸ್ಟೇಷನ್ ಬಳಿ ಇರುವ ಟಿಪ್ಪು ಸುಲ್ತಾನ್ ಚೌಕ್ ದಿಂದ ಅಂಬೇಡ್ಕರ್ ವೃತ್ತದ ಮೂಲಕ ಮಹಾತ್ಮಾ ಗಾಂಧೀಜಿ ವೃತ್ತದವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ಜರುಗಿತು.
ಶ್ರದ್ಧಾಂಜಲಿ :
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮೌನಾಚರಣೆ ಕೈಗೊಳ್ಳಲಾಯಿತು.