×
Ad

ಸುರಕ್ಷೆ ಉಲ್ಲಂಘನೆ: ಏರ್ ಇಂಡಿಯಾಗೆ ಆರು ತಿಂಗಳಲ್ಲಿ ಒಂಬತ್ತು ಶೋಕಾಸ್ ನೋಟಿಸ್

Update: 2025-07-22 07:59 IST

ಹೊಸದಿಲ್ಲಿ: ಏರ್ ಇಂಡಿಯಾದಲ್ಲಿ ಗುರುತಿಸಲಾದ ಐದು ಸುರಕ್ಷಾ ಉಲ್ಲಂಘನೆಗಳಿಗಾಗಿ ಕಳೆದ ಆರು ತಿಂಗಳಲ್ಲಿ ವಿಮಾನಯಾನ ಸಂಸ್ಥೆಗೆ ಒಂಬತ್ತು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮೊಹೊಲ್ ಬಹಿರಂಗಪಡಿಸಿದ್ದಾರೆ.

ಒಂದು ಉಲ್ಲಂಘನೆಗೆ ಸಂಬಂಧಿಸಿದಂತೆ ಕಾನೂನು ಜಾರಿ ಕ್ರಮ ಪೂರ್ಣಗೊಂಡಿದೆ ಎಂದು ಸೋಮವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಅಹ್ಮದಾಬಾದ್ ನಲ್ಲಿ ಜೂನ್ 12ಕ್ಕೆ ದುರಂತಕ್ಕೀಡಾದ ಎಐ ಡ್ರೀಮ್ಲೈನರ್ನ ವಿಶ್ವಾಸಾರ್ಹತೆ ವರದಿಯಲ್ಲಿ ಕಳೆದ ಆರು ತಿಂಗಳಲ್ಲಿ ಯಾವುದೇ ಪ್ರತಿಕೂಲ ಪ್ರವೃತ್ತಿ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಆದರೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊ (ಬಿಸಿಎಎಸ್), ವಾಯು ಸಂಚಾರ ಸೇವೆಗಳನ್ನು ಒದಗಿಸುವ ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ದಂಥ ವಿಮಾನಯಾನ ಏಜೆನ್ಸಿಗಳಲ್ಲಿ ಕೊರತೆ ಇದೆ ಎಂದು ಸರ್ಕಾರ ಸಂಸತ್ತಿನಲ್ಲಿ ಒಪ್ಪಿಕೊಂಡಿದೆ. ಡಿಜಿಸಿಎಯಲ್ಲಿ 823, ಬಿಸಿಎಎಸ್ ನಲ್ಲಿ 230 ಹಾಗೂ ಎಎಐನಲ್ಲಿ 3238 ಹುದ್ದೆಗಳು ಖಾಲಿ ಇದೆ ಎಂದು ಹೇಳಿದೆ.

ಕಳೆದ ಕೆಲ ವರ್ಷಗಳಲ್ಲಿ ಕೆಲ ಹುದ್ದೆಗಳನ್ನು ಸೃಷ್ಟಿಸಲಾಗಿದೆ; 426 ತಾಂತ್ರಿಕ ಹುದ್ದೆಗಳು ಸೇರಿದಂತೆ 441 ಹುದ್ದೆಗಳನ್ನು 2022ರಿಂದ 2024ರ ಅವಧಿಯಲ್ಲಿ ಸೃಷ್ಟಿಸಲಾಗಿದೆ. ಬಿಸಿಎಎಸ್ ಪುನರ್ ರಚನೆ ಮಾಡಿ 84 ಕಾರ್ಯಾಚರಣೆ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಹಾಗೂ ಇತ್ತೀಚೆಗೆ 840 ವಾಯು ಸಂಚಾರ ನಿಯಂತ್ರಕರ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಎಂದು ಮೊಹೊಲ್ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News