ಅಮರನಾಥ ಯಾತ್ರಾರ್ಥಿಗಳ ಭದ್ರತೆಗೆ 50 ಸಾವಿರ ಯೋಧರ ನಿಯೋಜನೆ
PC: x.com/JAMMULINKS
ಹೊಸದಿಲ್ಲಿ: ಕಣ್ಗಾವಲು ಡ್ರೋನ್‌ಗಳು, ಬಾಂಬ್ ನಿಷ್ಕ್ರಿಯ ಪಡೆ, ಶ್ವಾನಪಡೆಗಳನ್ನು ಅಮರನಾಥ ಯಾತ್ರೆಯ ಎರಡು ನಿಯೋಜಿತ ಮಾರ್ಗಗಳಲ್ಲಿ ಪಹರೆ ಹಾಕಲು ಸರ್ಕಾರ ನಿರ್ಧರಿಸಿದೆ. 38 ದಿನಗಳ ಯಾತ್ರೆಯ ಸಂದರ್ಭದಲ್ಲಿ ದಾಖಲೆ ಪ್ರಮಾಣದ ಸಿಆರ್‌ಪಿಎಫ್ ಯೋಧರನ್ನು ನಿಯೋಜಿಸಲು ಕೂಡಾ ನಿರ್ಧರಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜತೆಗೆ ಸುಮಾರು 50 ಸಾವಿರ ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಉಭಯ ಮಾರ್ಗಗಳಲ್ಲಿ ಯಾತ್ರಿಗಳಿಗೆ ಸರ್ಪಗಾವಲು ಒದಗಿಸಲಿದ್ದಾರೆ. ಇದರ ಜತೆಗೆ ಯಾತ್ರೆಯ ಮಾರ್ಗದಲ್ಲಿ ಐಇಡಿಗಳನ್ನು ನಿಷ್ಕ್ರಿಯಗೊಳಿಸುವ ಮತ್ತು ರಸ್ತೆಗಳನ್ನು ತೆರವುಗೊಳಿಸುವ ಹೊಣೆಯನ್ನು ನಿಭಾಯಿಸಲಿದ್ದಾರೆ. ಜತೆಗೆ ಅನುಕೂಲರ ಕೇಂದ್ರಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ನಿಯೋಜಿಸಲಾಗುತ್ತಿದೆ. ಯಾತ್ರೆ ತೆರಳುವ ಸಂದರ್ಭದಲ್ಲಿ ಹೆದ್ದಾರಿಯ ಎಲ್ಲ ಸಂಪರ್ಕ ರಸ್ತೆಗಳನ್ನು ಮುಚ್ಚಲಾಗುವುದು ಹಾಗೂ ಉಪಗ್ರಹ ಫೋನ್ ಸಜ್ಜಿತವಾದ ಸಿಆರ್‌ಪಿಎಫ್ ಯೋಧರ ತಂಡದ ಬೆಂಗಾವಲು ಇರುತ್ತದೆ. ಎಲ್ಲ ಪಡೆಗಳು ಜಾಮರ್‌ಗಳನ್ನೂ ಹೊಂದಿರುತ್ತವೆ.
ಕಳೆದ ವರ್ಷ 52 ದಿನಗಳ ಅವಧಿಗೆ ವಿಸ್ತರಿಸಿದ್ದ ಯಾತ್ರೆಯನ್ನು ಈ ಬಾರಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕಡಿತಗೊಳಿಸಲಾಗಿದೆ. ಆದರೆ ಕಳೆದ ವರ್ಷದಂತೆಯೇ ಯಾತ್ರಿಗಳ ಹಾಗೂ ಬೆಂಗಾವಲು ವಾಹನಗಳಿಗೆ ರೇಡಿಯೊ ಫ್ರೀಕ್ವೆನ್ಸಿ ಐಡಿಗಳನ್ನು ಅಳವಡಿಸಲಾಗುವುದು. ಇದು ರಕ್ಷಣಾ ಪಡೆಗಳು ಈ ವಾಹನಗಳನ್ನು ಟ್ರ್ಯಾಕ್ ಮಾಡಲು ಅನುಕೂಲವಾಗಲಿದೆ.