×
Ad

ಶೇಕಡ 59ರಷ್ಟು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿರುವುದು ರೋಗ ಉಲ್ಬಣದ ಬಳಿಕ: ವರದಿ

Update: 2023-11-11 07:47 IST

Photo: freepik

ಹೊಸದಿಲ್ಲಿ: ಮಹಿಳೆಯರನ್ನು ವ್ಯಾಪಕವಾಗಿ ಕಾಡುತ್ತಿರುವ ಸ್ತನ ಕ್ಯಾನ್ಸರ್ ಸಮಸ್ಯೆ, ವಿಳಂಬವಾಗಿ ಪತ್ತೆಯಾಗುತ್ತಿರುವ ಆತಂಕಕಾರಿ ಅಂಕಿ ಅಂಶ ಬಹಿರಂಗವಾಗಿದೆ. ಸ್ಥಳೀಯ ಭಾಗದಲ್ಲಿ ಅಂದರೆ ಸ್ತನಕ್ಕೆ ಮಾತ್ರ ಇದು ಹರಡಿರುವ ಹಂತದಲ್ಲಿ ಅಂದರೆ ಆರಂಭಿಕ ಹಂತದಲ್ಲಿ ಇದು ಪತ್ತೆಯಾಗುತ್ತಿರುವುದು ಶೇಕಡ 30ರಷ್ಟು ಮಹಿಳೆಯರಲ್ಲಿ ಮಾತ್ರ. ಶೇಕಡ 59ರಷ್ಟು ಮಹಿಳೆಯರಲ್ಲಿ ಸ್ತನದ ಸುತ್ತಮುತ್ತಲಿನ ಭಾಗಕ್ಕೆ ಕೂಡಾ ಹರಡಿದ ಮೇಲೆ ರೋಗ ಪತ್ತೆಯಾಗುತ್ತಿದೆ.

ಇನ್ನೂ ಕಳವಳಕಾರಿ ಅಂಶವೆಂದರೆ, ಶೇಕಡ 11ರಷ್ಟು ಮಹಿಳೆಯರಲ್ಲಿ ಕ್ಯಾನ್ಸರ್ ದೇಹದ ದೂರದ ಭಾಗಗಳಿಗೆ ಅಂದರೆ ಶ್ವಾಸಕೋಶ, ಲಿವರ್ ಅಥವಾ ಎಲುಬುಗಳಿಗೆ ಹರಡಿದ ಬಳಿಕವಷ್ಟೇ ಪತ್ತೆಯಾಗುತ್ತಿದೆ.

ಜಾಮಾ ಆಂಕಾಲಜಿ ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಈ ಅಂಕಿ ಅಂಶಗಳು ಬೆಳಕಿಗೆ ಬಂದಿವೆ. ಜಾಗತಿಕ ಮಟ್ಟದಲ್ಲಿ 81 ದೇಶಗಳಾದ್ಯಂತ ಮಹಿಳೆಯರ ಸ್ತನ ಕ್ಯಾನ್ಸರ್ ಬಗ್ಗೆ ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.

'ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್' ತಂಡದ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಪ್ರತಿ ವರ್ಷ 20 ಲಕ್ಷಕ್ಕೂ ಹೆಚ್ಚು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿರುವುದನ್ನು ಬಹಿರಂಗಪಡಿಸಲಾಗಿದೆ. 

"ಯುವ ಮತ್ತು ಮಧ್ಯವಯಸ್ಕ ಮಹಿಳೆಯರಿಗೆ ಹೋಲಿಸಿದರೆ ವಯಸ್ಸಾದ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಳಂಬವಾಗಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿರುವ ಪ್ರವೃತ್ತಿ ಕಂಡುಬಂದಿದೆ" ಎಂದು ಐಸಿಎಂಆರ್-ಎನ್ಸಿಡಿಐಆರ್ ನಿರ್ದೇಶಕ ಡಾ.ಪ್ರಶಾಂತ್ ಮಾಥುರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News