×
Ad

ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಲೈಸೆನ್ಸ್: ಅರ್ಜಿ ಆಹ್ವಾನ

Update: 2025-08-25 21:44 IST

ಮಂಗಳೂರು, ಆ.25 : ದೀಪಾವಳಿ ಹಬ್ಬ ಹಾಗೂ ತುಳಸಿ ಪೂಜೆ ಪ್ರಯುಕ್ತ ಮೈದಾನದಲ್ಲಿ ಅಥವಾ ತೆರೆದ ಪ್ರದೇಶ ದಲ್ಲಿ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆಯನ್ನು ಕೋರಿ (ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿಯನ್ನು ಜಿಲ್ಲಾಧಿಕಾರಿ ಯವರ ಕಚೇರಿಗೆ ಅಕ್ಟೋಬರ್ 10ರೊಳಗಾಗಿ ಸಲ್ಲಿಸಬಹುದು.

ಅರ್ಜಿಯನ್ನು ನಿಗದಿತ ನಮೂನೆ ಎಇ-5 ರಲ್ಲಿ ಸಲ್ಲಿಸಬೇಕಾಗಿದ್ದು, ಅರ್ಜಿಯೊಂದಿಗೆ ತಾತ್ಕಾಲಿಕ ಅಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ (ರಸ್ತೆ, ಕಟ್ಟಡ ಇತ್ಯಾದಿ ವಿವರ) ನೀಲಿ ನಕ್ಷೆ, ಅರ್ಜಿದಾರರ ಭಾವಚಿತ್ರ, ಪ್ರಸ್ತಾವಿತ ಜಮೀನಿನ ಪಹಣಿ, ಖಾಸಗಿ ಜಮೀನಾಗಿದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರ (100 ರೂ ಸ್ಟಾಂಪ್ ಪೇಪರ್ ), ಸರಕಾರಿ ಜಾಗವಾಗಿದ್ದಲ್ಲಿ ಜಮೀನು ಯಾವ ಇಲಾಖೆಯ ಸುಪರ್ದಿಯಲ್ಲಿದೆಯೋ ಆ ಇಲಾಖೆಯ ನಿರಾಕ್ಷೇಪಣಾ ಪತ್ರದೊಂದಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ರೂ.200ಪರಿಶೀಲನಾ ಶುಲ್ಕವನ್ನು ಹಾಗೂ ಪರವಾನಿಗೆ ಮಂಜೂರು ಮಾಡುವ ಸಂದರ್ಭದಲ್ಲಿ ರೂ 500 ಲೈಸೆನ್ಸ್ ಶುಲ್ಕವನ್ನು ಪಾವತಿಸಬೇಕು.

ಅರ್ಜಿದಾರರು ಈ ಕಚೇರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಇಲಾಖೆ ನಿರಾಕ್ಷೇಪಣಾ ಪತ್ರ, ಪೊಲೀಸ್ ಅಧೀಕ್ಷಕರ ನಿರಾಕ್ಷೇಪಣಾ ಪತ್ರ, ಸಂಬಂಧಪಟ್ಟ ತಹಶೀಲ್ದಾರರ ನಿರಾಕ್ಷೇಪಣಾ ಪತ್ರ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ನಿರಾಕ್ಷೇಪಣಾ ಪತ್ರಪಡೆದು ಸಲ್ಲಿಸಬೇಕು.

ಕಡ್ಡಾಯವಾಗಿ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶವಿರುತ್ತದೆ.ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಬಂದಲ್ಲಿ ಸ್ಫೋಟಕ ಕಾಯಿದೆ ಅಥವಾ ನಿಯಮಾವಳಿಗಳಿಗೆ ಒಳಪಟ್ಟು ಪರವಾನಿಗೆ ಮಂಜೂರು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News