ಆ.6-7: ಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆ
ಮಂಗಳೂರು, ಜೂ.28: ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ ಸಮಿತಿ ವತಿಯಿಂದ ಆಗಸ್ಟ್ 6 ಮತ್ತು 7ರಂದು ‘ವರ್ತಮಾನದ ತಲ್ಲಣಗಳು’ ಎಂಬ ವಿಷಯದಲ್ಲಿ ಅಂತರ್ ಕಾಲೇಜು ಕಿರು ನಾಟಕ ಸ್ಪರ್ಧೆಯನು ಆಯೋಜಿಸಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ ಸಮಿತಿಯ ಸಂಯೋಜಕ ಕದ್ರಿ ನವನೀತ ಶೆಟ್ಟಿ, ಒಡಿಯೂರು ಸಂಸ್ಥಾನದ ರಾಜಾಂಗಣದಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದರು.
ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಪದವಿ ಪೂರ್ವ, ಡಿಪ್ಲೊಮಾ, ವೃತ್ತಿಪರ ಕೋರ್ಸ್, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು 10 ನಿಮಿಷದ, ಕನ್ನಡ ಅಥವಾ ತುಳು ಭಾಷೆಯ ಈ ಕಿರು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ವಿದ್ಯಾಸಂಸ್ಥೆಯ ಮೂಲಕ ಹೆಸರು ನೋಂದಣಿ ಮಾಡಬೇಕಾಗಿದ್ದು, ಸಂಸ್ಥೆಯ ಗರಿಷ್ಟ 2 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಧ್ವನಿ ಮುದ್ರಿತ ಸಂಭಾಷಣೆ ಸಂಗೀತ ಬಳಸಲು ಅವಕಾಶ ಇರುವುದಿಲ್ಲ. ಯಾವುದೇ ಜಾತಿ, ಪಂಗಡ, ಲಿಂಗ ನಿಂದನೆಗಳಿಗೆ ಅವಕಾಶ ಇರುವುದಿಲ್ಲ. ಸ್ಪರ್ಧೆಗೆ ನೋಂದಣಿ ಮಾಡಲು ಜುಲೈ 8 ಕೊನೆಯ ದಿನವಾಗಿರುತ್ತದೆ. ಆಯ್ಕೆ ಆದ ತಂಡಗಳ ಪ್ರತಿನಿಧಿಗಳ ಸಭೆಯನ್ನು ಜುಲೈ ಕೊನೆಯ ವಾರದಲ್ಲಿ ನಡೆಸಿ ಸ್ಪರ್ಧೆಯ ಮಾಹಿತಿ ನೀಡಲಾಗುತ್ತದೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ 30 ಸಾವಿರ ಹಾಗೂ ತೃತೀಯ 20 ಸಾವಿರ ನಗದು ಹಾಗೂ ಟ್ರೋಫಿ, ಪ್ರಸಂಶಾ ಪತ್ರ ನೀಡಲಾಗುವುದು ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಗಣಪತಿ ಭಟ್ ಸೇರಾಜೆ, ಕೃಷ್ಣ ಶೆಟ್ಟಿ ತಾರೆಮಾರ್, ರಾಘವ ಸೂರಿ, ಯಶವಂತ್, ಸುರೇಶ್ ರೈ, ಲೋಕನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.